ಕಾಯಕಲ್ಪಕ್ಕೆ ಕಾದಿದೆ ಬೆಳ್ಳಾರೆಯ ಮುಕ್ತಿಧಾಮ
84 ಸೆಂಟ್ಸ್ ಜಾಗವಿದೆ; ಕಟ್ಟಡ, ಕಟ್ಟಿಗೆ ಸಂಗ್ರಹ ಸ್ಥಳ, ನೀರು, ವಿದ್ಯುತ್ ಸೌಲಭ್ಯವಿಲ್ಲ
Team Udayavani, Jul 26, 2019, 5:00 AM IST
ಬೆಳ್ಳಾರೆ: ಬೆಳೆಯುತ್ತಿರುವ ಬೆಳ್ಳಾರೆ ಗ್ರಾಮದ ಜನಸಂಖ್ಯೆಯೂ ದಿನೇ ದಿನೇ ಏರುತ್ತಿದೆ. ಆದರೆ ಈ ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಾಕಷ್ಟು ಸೌಲಭ್ಯಗಳಿರುವ ಮುಕ್ತಿಧಾಮವಿಲ್ಲ. ಬೆಳ್ಳಾರೆಯ ಗೌರಿಹೊಳೆಯ ಸಮೀಪದಲ್ಲಿರುವ ಶ್ಮಶಾನ ಮೂಲ ಸೌಕರ್ಯದ ಕೊರತೆಯಿಂದಾಗಿ ಸಾಮಾನ್ಯ ಸುಡುಗಾಡಾಗಿದೆ.
ಬೆಳ್ಳಾರೆ ಗ್ರಾ.ಪಂ.ಗೆ ಒಳಪಟ್ಟ ಹಿಂದೂ ರುದ್ರಭೂಮಿ ಗೌರಿಹೊಳೆಯ ಸಮೀಪ 84 ಸೆಂಟ್ಸ್ ಜಾಗದಲ್ಲಿದೆ. ಇಲ್ಲಿ ಶ್ಮಶಾನಕ್ಕೆ ಜಾಗ ಕಾದಿರಿಸಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ಇಲ್ಲಿ ಅಂತ್ಯ ಸಂಸ್ಕಾರಕ್ಕೆ ಬೇಕಾದ ಮೂಲ ಸೌಕರ್ಯಗಳಿಲ್ಲ. ಮಳೆಗಾಲದಲ್ಲಿ ಅಂತ್ಯ ಸಂಸ್ಕಾರಕ್ಕೆ ಇನ್ನಷ್ಟು ತೊಂದರೆಗಳು ಎದುರಾಗುತ್ತಿವೆ. ಇದರಿಂದ ಬೆಳ್ಳಾರೆ ಗ್ರಾಮದ ಕಾಲನಿ ನಿವಾಸಿಗಳು ಹಾಗೂ ಅಂತ್ಯ ಸಂಸ್ಕಾರಕ್ಕೆ ಜಾಗದ ಕೊರತೆ ಇರುವವರು ಪಕ್ಕದ ಗ್ರಾಮದ ಮುಕ್ತಿಧಾಮಕ್ಕೆ ಹೋಗಬೇಕಿದೆ.
ಮೂಲಸೌಲಭ್ಯಗಳೇ ಇಲ್ಲ
ಬೆಳ್ಳಾರೆಯ ಮುಕ್ತಿಧಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಬಂದವರಿಗೆ ನಿಲ್ಲಲು ಬೇಕಾದ ಕಟ್ಟಡ, ಕಟ್ಟಿಗೆ ಸಂಗ್ರಹಿಸಿಡುವ ಸ್ಥಳ, ನೀರು, ವಿದ್ಯುತ್ ಹೀಗೆ ಯಾವುದೇ ಸೌಲಭ್ಯಗಳಿಲ್ಲ. ಅಂತ್ಯ ಸಂಸ್ಕಾರ ನಡೆಸುವವರು ಕಟ್ಟಿಗೆ ತಂದಲ್ಲಿ ಸುಡಲು ಬೇಕಾದ ಜಾಗ ಮಾತ್ರ ಇದೆ. ಶ್ಮಶಾನ ಜಾಗದ ತಡೆಗೋಡೆಯೂ ಕುಸಿದು ಹೋಗಿದೆ. ಹೀಗಾಗಿ, ಈ ಭಾಗದ ಜನ ಅಂತ್ಯ ಸಂಸ್ಕಾರಕ್ಕೆ ಪಕ್ಕದ ಗ್ರಾಮದ ಹಿಂದೂ ರುದ್ರಭೂಮಿಗೆ ಹೋಗುತ್ತಿದ್ದಾರೆ.
ಮುಕ್ತಿಧಾಮಕ್ಕೆ ಬೇಡಿಕೆ
ಬೆಳ್ಳಾರೆ ಪಟ್ಟಣ ಬೆಳೆಯುತ್ತಿರುವಂತೆಯೇ ಇಲ್ಲಿನ ನಿವಾಸಿಗಳಿಗೆ ವ್ಯವಸ್ಥಿತ ಮುಕ್ತಿಧಾಮದ ಅಗತ್ಯ ಪ್ರಮುಖವಾಗಿದೆ. ಬೆಳ್ಳಾರೆ ಗ್ರಾಮಕ್ಕೆ ಹೊಂದಿಕೊಂಡಿರುವ ಪಕ್ಕದ ಗ್ರಾಮದಲ್ಲೂ ಶ್ಮಶಾನಕ್ಕೆ ಜಾಗ ಇದೆಯಾದರೂ ಸೂಕ್ತ ವ್ಯವಸ್ಥೆಗಳಿಲ್ಲ. ಆದ್ದರಿಂದ ಬೆಳ್ಳಾರೆಯ ಗ್ರಾಮಸ್ಥರು ವ್ಯವಸ್ಥಿತ ಮುಕ್ತಿಧಾಮಕ್ಕೆ ಜನಪ್ರತಿನಿಧಿಗಳಲ್ಲಿ ಬೇಡಿಕೆ ಇಡುತ್ತಲೇ ಇದ್ದಾರೆ. ಈಗ ಇರುವ ಶ್ಮಶಾನ ಜಾಗದಲ್ಲಿಯೇ ವ್ಯವಸ್ಥಿತವಾದ ಮುಕ್ತಿಧಾಮ ನಿರ್ಮಾಣವಾದಲ್ಲಿ ಜನರು ತಮಗೆ ಬೇಕಾದಲ್ಲಿ ಅಂತ್ಯ ಸಂಸ್ಕಾರ ನಡೆಸಿ ಹೋಗುವುದು ತಪ್ಪಲಿದೆ ಮಾತ್ರವಲ್ಲದೆ ಗ್ರಾಮಸ್ಥರಿಗೂ ಅನುಕೂಲವಾಗಲಿದೆ.
ತಹಶೀಲ್ದಾರ್ ಭೇಟಿ
ಸುಳ್ಯ ತಹಶೀಲ್ದಾರ್ ಕುಂಞಿ ಅಹಮ್ಮದ್ 15 ದಿನಗಳ ಹಿಂದೆ ಬೆಳ್ಳಾರೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಶ್ಮಶಾನ ಸಮಸ್ಯೆಯ ಬಗ್ಗೆ ಸ್ಥಳೀಯರು ಗಮನ ಸೆಳೆದಿದ್ದರು. ತತ್‌ಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಅವರು, ಜಾಗದ ದಾಖಲೆಗಳನ್ನು ಸರಿಪಡಿಸಿ ಮುಕ್ತಿಧಾಮದ ಕಾಮಗಾರಿಗೆ ಸೂಕ್ತ ಕ್ರಮ ವಹಿಸುವಂತೆ ಪಂಚಾಯತ್ ಆಡಳಿತಕ್ಕೆ ನಿರ್ದೇಶನವನ್ನೂ ನೀಡಿದ್ದಾರೆ.
ಶೀಘ್ರ ಅಭಿವೃದ್ಧಿಪಡಿಸಿ
ಮುಕ್ತಿಧಾಮ ಬೆಳ್ಳಾರೆ ಗ್ರಾಮದ ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿದ್ದು, 5 ವರ್ಷಗಳಿಂದ ಇದರ ಅಭಿವೃದ್ಧಿಗೆ ಹೋರಾಟ ನಡೆಸುತ್ತಿದ್ದೇವೆ. ಗ್ರಾ.ಪಂ.ನಿಂದ ಹಿಡಿದು ಜಿ.ಪಂ., ಸಂಸದರ ವರೆಗೆ ಮನವಿ ಮಾಡಿದ್ದೇವೆ. ಸಂಬಂಧಪಟ್ಟವರು ಹಾಗೂ ಜನಪ್ರತಿನಿಧಿಗಳು ಆದಷ್ಟು ಶೀಘ್ರದಲ್ಲಿ ಮುಕ್ತಿಧಾಮದ ಅಭಿವೃದ್ಧಿಗೆ ಮುಂದಾಗಬೇಕು. ಬೆಳೆಯುತ್ತಿರುವ ಬೆಳ್ಳಾರೆ ಪಟ್ಟಣದ ನಾಗರಿಕರಿಗೆ ಸೂಕ್ತವಾದ ಮುಕ್ತಿಧಾಮ ಅಗತ್ಯವಾಗಿ ಆಗಬೇಕಿದೆ.
– ಜಯರಾಮ ಉಮಿಕ್ಕಳ, ಗ್ರಾಮಸ್ಥ
ಖಾತರಿ ಯೋಜನೆಯಲ್ಲಿ ಕಾಮಗಾರಿ
ಉದ್ಯೋಗ ಖಾತರಿ ಯೋಜನೆಯಲ್ಲಿ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಅವಕಾಶವಿದೆ. ಇದಕ್ಕಾಗಿ ನರೇಗಾ ಅಧಿಕಾರಿಯೊಂದಿಗೆ ಸ್ಥಳ ಪರಿಶೀಲನೆ ಮಾಡಿದ್ದು, ಮಳೆ ಕಡಿಮೆಯಾದ ತತ್‌ಕ್ಷಣ ಕಾಮಗಾರಿ ಆರಂಭಿಸುತ್ತೇವೆ. 1.5 ಲಕ್ಷ ರೂ. ಪಂಚಾಯತ್ ಅನುದಾನವನ್ನೂ ಶ್ಮಶಾನ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ. ಸಂಘ ಸಂಸ್ಥೆಗಳ ಸಹಕಾರ ಪಡೆದು ಶ್ಮಶಾನವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.
– ಧನಂಜಯ ಕೆ.ಆರ್., ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬೆಳ್ಳಾರೆ
– ಉಮೇಶ್ ಮಣಿಕ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.