ಬಹುಮತವಿಲ್ಲದೆ ಕುತೂಹಲ ಸೃಷ್ಟಿಸಲಿದೆ ಚುನಾವಣೆ
ಬಂಟ್ವಾಳ ಪುರಸಭೆ: ನ. 7ಕ್ಕೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ
Team Udayavani, Nov 6, 2020, 4:05 AM IST
![Bantwal-2](https://www.udayavani.com/wp-content/uploads/2020/11/Bantwal-2-620x328.jpg)
![Bantwal-2](https://www.udayavani.com/wp-content/uploads/2020/11/Bantwal-2-620x328.jpg)
ಬಂಟ್ವಾಳ ಪುರಸಭಾ ಕಚೇರಿ.
ಬಂಟ್ವಾಳ: ಯಾವ ಪಕ್ಷಕ್ಕೂ ಬಹುಮತವಿಲ್ಲದೆ ಬಹಳ ಕುತೂಹಲ ಸೃಷ್ಟಿಸಿರುವ ಬಂಟ್ವಾಳ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಕಾಲ ಕೂಡಿ ಬಂದಿದ್ದು, ನ. 7ರಂದು ಚುನಾವಣೆ ನಡೆಯಲಿದೆ. ಹೀಗಾಗಿ ಈ ಚುನಾವಣೆಯಲ್ಲಿ ಯಾವ ಪಕ್ಷದವರು ಅಧಿಕಾರ ಹಿಡಿಯಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಬಂಟ್ವಾಳ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ಒಟ್ಟು 27 ಸದಸ್ಯ ಬಲದ ಪುರಸಭೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 12, ಬಿಜೆಪಿ 11 ಹಾಗೂ ಎಸ್‌ಡಿಪಿಐ 4 ಸ್ಥಾನಗಳನ್ನು ಪಡೆದಿದೆ. ಬಿಜೆಪಿಗೆ ಶಾಸಕರು ಹಾಗೂ ಸಂಸದರ ಮತಗಳು ಸೇರ್ಪಡೆಯಾಗಲಿವೆ.
ಅಧ್ಯಕ್ಷ ಸ್ಥಾನಕ್ಕೆ ಮೂರು ಪಕ್ಷಗಳ ಎಲ್ಲ ಸದಸ್ಯರು ಅರ್ಹರಾಗಿದ್ದು, ಬಿಜೆಪಿಯು ಈಗಾಗಲೇ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಅವರು ಅಭ್ಯರ್ಥಿ ಎಂದು ಘೋಷಿಸಿದೆ. ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಕುರಿತು ಘೋಷಣೆ ಮಾಡಿಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಜೆಸಿಂತಾ ಡಿ’ಸೋಜಾ ಹಾಗೂ ಬಿಜೆಪಿಯಿಂದ ಮೀನಾಕ್ಷಿ ಗೌಡ ಅವರು ಸ್ಪರ್ಧಿಸುವ ಕುರಿತು ಘೋಷಣೆ ಮಾಡಿದ್ದು, ಈ ಇಬ್ಬರು ಮಾತ್ರ ಉಪಾಧ್ಯಕ್ಷ ಸ್ಥಾನದ ಮೀಸಲಾತಿಗೆ ಅರ್ಹತೆಯನ್ನು ಪಡೆದಿದ್ದಾರೆ.
ಪ್ರಸ್ತುತ ಯಾರಿಗೂ ಕೂಡ ಬಹುಮತ ಇಲ್ಲದೆ ಇರುವುದರಿಂದ ಯಾರು-ಯಾರಿಗೆ ಬೆಂಬಲ ನೀಡುತ್ತಾರೆ, ತಟಸ್ಥರಾಗುತ್ತಾರೆಯೂ ಅಥವಾ ಚುನಾವಣೆಗೆ ಗೈರಾಗುತ್ತಾರೆಯೇ ಎಂಬೆಲ್ಲ ಕುತೂಹಲಗಳನ್ನು ಸೃಷ್ಟಿಸಿದೆ. ಮೂರು ಪಕ್ಷಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ತಿಳಿಸಿದ್ದು, ಹೀಗಾಗಿ ಅಧ್ಯಕ್ಷ ಸ್ಥಾನದ ಸ್ಪರ್ಧೆಯೇ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಕೊನೆಯ ಕ್ಷಣದಲ್ಲಿ ಯಾವ ರೀತಿಯ ರಾಜಕೀಯ ಹೈಡ್ರಾಮಾ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ
ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಎಸ್‌ಡಿಪಿಐ ಪಕ್ಷವು ಸ್ಪರ್ಧಿಸಲಿದ್ದು, ಯಾರು ಅಭ್ಯರ್ಥಿ ಎನ್ನುವುದು ಇನ್ನೂ ಅಂತಿಮಗೊಂಡಿಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಾರ ಪಕ್ಷದಲ್ಲಿ ಅಭ್ಯರ್ಥಿಗಳಿಲ್ಲ. ಚುನಾವಣೆಯಲ್ಲಿ ಬೇರೆ ಪಕ್ಷಕ್ಕೆ ಬೆಂಬಲ ನೀಡುವ ಕುರಿತು ಯಾವುದೇ ಚರ್ಚೆ ಮಾಡಿಲ್ಲ.
-ಮುನೀಶ್ ಆಲಿ, ಅಧ್ಯಕ್ಷರು, ಎಸ್‌ಡಿಪಿಐ ಪುರಸಭಾ ಸಮಿತಿ.
ಅಭ್ಯರ್ಥಿಗಳು ಅಂತಿಮ
ಬಂಟ್ವಾಳ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀನಾಕ್ಷಿ ಗೌಡ ಅಭ್ಯರ್ಥಿಗಳೆಂದು ಪಕ್ಷ ತೀರ್ಮಾನಿಸಿದ್ದು, ಸದಸ್ಯರ ಜತೆಗೆ ಶಾಸಕರು-ಸಂಸದರು ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾರ ಜತೆಗೂ ಹೊಂದಾಣಿಕೆಯ ಕುರಿತು ತೀರ್ಮಾನ ತೆಗೆದುಕೊಂಡಿಲ್ಲ. ಎರಡೂ ಸ್ಥಾನಗಳಿಗೂ ಬಿಜೆಪಿ ಪಕ್ಷ ಸ್ಪರ್ಧಿಸಲಿದೆ.
-ದೇವಪ್ಪ ಪೂಜಾರಿ, ಅಧ್ಯಕ್ಷರು, ಬಂಟ್ವಾಳ ಕ್ಷೇತ್ರ ಬಿಜೆಪಿ.
ಹೈಕಮಾಂಡ್ ತೀರ್ಮಾನ
ಪುರಸಭೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸೀಟು ನೀಡಿದ್ದು, ಹೀಗಾಗಿ ಯಾರ ಜತೆಯೂ ಹೊಂದಾಣಿಕೆ ಇಲ್ಲದೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲಿದ್ದೇವೆ. ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಜೆಸಿಂತಾ ಡಿ’ಸೋಜಾ ಅವರು ಸ್ಪರ್ಧಿಸಲಿದ್ದಾರೆ. ಅಧಿಕಾರ ಸಿಕ್ಕರೆ ಉತ್ತಮ. ಆಡಳಿತ ಇಲ್ಲದೇ ಇದ್ದರೆ ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಲಿದ್ದೇವೆ.
-ಬೇಬಿ ಕುಂದರ್, ಅಧ್ಯಕ್ಷ ಬಂಟ್ವಾಳ ಬ್ಲಾಕ್ ಕಾಂಗ್ರೆಸ್.