ಸಿದ್ದಕಟ್ಟೆ: ನೀರು ಹರಿಯಲು ವ್ಯವಸ್ಥೆ ಇಲ್ಲ
ಮುಚ್ಚಿದ ಚರಂಡಿಯಿಂದ ತೊಂದರೆ
Team Udayavani, Jul 30, 2022, 10:48 AM IST
ಪುಂಜಾಲಕಟ್ಟೆ: ಕುಕ್ಕಿಪಾಡಿ ಗ್ರಾ.ಪಂ. ವ್ಯಾಪ್ತಿಯ ಸಿದ್ದಕಟ್ಟೆ ಪೇಟೆಯಲ್ಲಿ ಬಂಟ್ವಾಳ-ಮೂಡುಬಿದಿರೆ ರಸ್ತೆಯಲ್ಲಿ ರಸ್ತೆ ಚರಂಡಿಯನ್ನು ಮುಚ್ಚಿದ್ದು, ನೀರು ಸರಾಗವಾಗಿ ಹರಿಯದೆ ಅಂಗಡಿ ಮುಂಗಟ್ಟುಗಳ ವರ್ತಕರು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಸಿದ್ದಕಟ್ಟೆ ಪೇಟೆ ಜಂಕ್ಷನ್ ಭಾಗ ಸಂಗಬೆಟ್ಟು ಗ್ರಾಮಕ್ಕೊಳಪಟ್ಟರೆ ಪೇಟೆಯಿಂದ ಬಂಟ್ವಾಳಕ್ಕೆ ಸಾಗುವ ರಸ್ತೆ ಭಾಗ ಕುಕ್ಕಿಪಾಡಿ ಗ್ರಾಮ ಪಂಚಾಯತ್‌ಗೆ ಸೇರುತ್ತದೆ. ಇಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಕಟ್ಟಡ ಮತ್ತಿತರ ವಾಣಿಜ್ಯ ಸಂಕೀರ್ಣವಿದ್ದು, ಇದರ ಮುಂಭಾಗದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಸುವರ್ಣ ಗ್ರಾಮ ಯೋಜನೆಯಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಿಸಿದ್ದರು. ಇಲ್ಲಿಂದ ಮುಂದಕ್ಕೆ ಚರಂಡಿ ನಿರ್ಮಿಸದೆ ನೀರು ಹರಿಯಲು ವ್ಯವಸ್ಥೆ ಇಲ್ಲ. ಬ್ಯಾಂಕ್ ವರೆಗಿದ್ದ ಚರಂಡಿಯೂ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ಮಣ್ಣು, ಕಸ ಕಡ್ಡಿ ತುಂಬಿ ಮುಚ್ಚಿ ಹೋಗಿತ್ತು. ಇದರಿಂದ ಮಳೆ ನೀರು ಸಮರ್ಪಕವಾಗಿ ಹರಿದು ಹೋಗದೆ ರಸ್ತೆಯಲ್ಲಿ ಹರಿದು ಹೋಗುತ್ತಿತ್ತು. ಈ ಬಗ್ಗೆ ವಾಣಿಜ್ಯ ಸಂಕೀರ್ಣದ ವರ್ತಕರು ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದ್ದು, ಗ್ರಾಮ ಪಂಚಾಯತ್ ಲೋಕೋಪಯೋಗಿ ಇಲಾಖೆಯ ಗಮನ ಸೆಳೆದಿತ್ತು. ಸಿದ್ದಕಟ್ಟೆ ಬ್ರಹ್ಮ ಶ್ರೀ ಗುರು ನಾರಾಯಣ ಮಂದಿರದಿಂದ ಸಿದ್ದಕಟ್ಟೆ ಚರ್ಚ್‌ವರೆಗೆ ರಸ್ತೆ ಚರಂಡಿ ನಿರ್ಮಿಸಲು ಗ್ರಾಮ ಸಭೆಯಲ್ಲಿ ನಿರ್ಣಯಿಸಿ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿತ್ತು. ಆದರೆ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಪ್ರಸ್ತುತ ಲೋಕೊಪಯೋಗಿ ಇಲಾಖೆಯಿಂದ 13 ಕೋ.ರೂ. ವೆಚ್ಚದಲ್ಲಿ ಪುಚ್ಚೆಮೊಗರುವಿನಿಂದ ಸೊರ್ನಾಡು ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಸಮರ್ಪಕ ರಸ್ತೆ ಚರಂಡಿ ನಿರ್ಮಿಸುವ ಹೊಣೆಗಾರಿಕೆ ಗುತ್ತಿಗೆದಾರರಿಗೆ ವಹಿಸಲಾಗಿದೆ. ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದು, ಮಳೆಗಾಲ ಆಗಮಿಸಿದ್ದರಿಂದ ನೀರು ಹರಿಯಲು ಚರಂಡಿ ಇಲ್ಲದೆ ರಸ್ತೆಯಲ್ಲಿ ಹಾಗೂ ವಾಣಿಜ್ಯ ಸಂಕೀರ್ಣದ ಒಳಭಾಗಕ್ಕೆ ಹರಿಯುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.