![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, May 17, 2023, 3:18 PM IST
ಸುಬ್ರಹ್ಮಣ್ಯ: ಅಂಗನವಾಡಿ ಕೇಂದ್ರ ಎಂದರೆ ಅಲ್ಲಿ ಪುಟಾಣಿ ಮಕ್ಕಳ ಕಲರವ, ಆಟೋಟ, ಕಲಿಕೆ ಇತ್ಯಾದಿಗಳನ್ನು ಕಾಣಬಹುದಾಗಿದೆ. ಆದರೆ ಇಲ್ಲೊಂದು ಅಂಗನವಾಡಿ ಕೇಂದ್ರದ ವಠಾರದಲ್ಲಿ ಇದರ ಜತೆಗೆ ಸುಂದರ ಹಣ್ಣಿನ ತೋಟ ನಿರ್ಮಾಣಗೊಂಡು ಅಂಗನವಾಡಿ ಕೇಂದ್ರವನ್ನೇ ಕಂಗೊಳಿಸುತ್ತಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರ ಈ ವಿಭಿನ್ನ ಕಾರ್ಯ ಯೋಜನೆಯಿಂದ ಗುರುತಿಸಿಕೊಂಡಿದೆ. ಅಂಗನವಾಡಿ ಕೇಂದ್ರ ಎಂದರೆ ಬರೀ ಮಕ್ಕಳ ಲಾಲನೆ-ಪಾಲನೆ, ಸರಕಾರದ ಕೆಲಸ ಎಂಬಂತೆ ಎನ್ನುವ ದಿನದಲ್ಲಿ ವಿಶೇಷ ಚಿಂತನೆ ಮೂಲಕ ಅಂಗನವಾಡಿ ವಠಾರದಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡಿ ಫಸಲು ಬಂದಿದ್ದು, ಇದೀಗ ಅಂಗನವಾಡಿ ವಠಾರ ಹಣ್ಣಿನ ಗಿಡಗಳು ಹಾಗೂ ಅದರಲ್ಲಿ ಫಸಲು ನೀಡಿರುವ ಹಣ್ಣುಗಳಿಂದ ಕಂಗೊಳಿಸುತ್ತಿದೆ.
ಇಲ್ಲಿ ಅಂಗನವಾಡಿ ಕಾರ್ಯಕರ್ತೆ ಯಾಗಿರುವ ಅಮೀನಾ ಕೆ. ಅವರ ಪತಿ ಖಾದರ್ ಸಾಹೇಬ್ ಅವರ ವಿಶೇಷ ಮುತುವರ್ಜಿ ಹಾಗೂ ಅವರ ಕಲ್ಪನೆಯಂತೆ ಇಲ್ಲಿ ಹಣ್ಣಿನ ತೋಟ ನಿರ್ಮಾಣಗೊಂಡಿದೆ. ನೂಜಿಬಾಳ್ತಿಲ ಗ್ರಾಮ ಪಂಚಾಯತ್‌ನ ಉದ್ಯೋಗ ಖಾತರಿ ಹಾಗೂ ಊರವರ ಸಹಕಾರದಲ್ಲಿ ಹಣ್ಣಿನ ತೋಟ ನಿರ್ಮಾಣವಾಗಿದೆ. ಖಾಸಗಿ ನರ್ಸರಿಯಿಂದ ಹಣ್ಣಿನ ಗಿಡಗಳನ್ನು ತಂದು ಮಣ್ಣನ್ನು ಅಗೆದು ನಾಟಿ ಮಾಡಲಾಗಿತ್ತು. ಬಳಿಕದ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಅವರು ಹಣ್ಣಿನ ಗಿಡಗಳ ಪೋಷಣೆ ಮಾಡಿದ್ದಾರೆ. ವಿಶೇಷ ಎಂದರೆ ನಾಟಿ ಮಾಡಿದ ಎಲ್ಲ ಗಿಡಗಳು ಬೆಳೆದು ಇಂದು ಫಲ ನೀಡುತ್ತಿದೆ.
ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ 36 ಮಕ್ಕಳು ದಾಖಲಾಗಿದ್ದಾರೆ. ಇಲ್ಲಿ ಬೆಳೆದ ಹಣ್ಣಿನ ಗಿಡದಲ್ಲಿ ಫಸಲು ನೀಡಿದ ಹಣ್ಣುಗಳನ್ನು ಅಂಗನವಾಡಿಯ ಪುಟಾಣಿಗಳಿಗೆ ತಿನ್ನಲು ನೀಡಲಾಗುತ್ತದೆ. ಮಕ್ಕಳಿಗೆ ಪ್ರತೀ ದಿನ ವಿವಿಧ ಬಗೆಯ ಹಣ್ಣುಗಳನ್ನು ನೀಡಲು ಸಿಗುತ್ತಿದೆ. ಇದು ಮಕ್ಕಳ ಪೌಷ್ಟಿಕ ಆಹಾರ-ಆರೋಗ್ಯಕ್ಕೂ ಪೂರಕವಾಗಿದೆ.
34 ಹಣ್ಣಿನ ಗಿಡಗಳು
ಅಂಗನವಾಡಿಯು ಕಲ್ಲುಗುಡ್ಡೆ ಪೇಟೆಯಲ್ಲಿದ್ದು, ಅಂಗನವಾಡಿ ಸಮೀಪವಿದ್ದ ಖಾಲಿ ಜಾಗದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಗಿತ್ತು. ಅದು ಇದೀಗ ಫಲ ನೀಡಿದೆ. ಇಲ್ಲಿ ಸುಮಾರು 10ಕ್ಕೂ ಅಧಿಕ ವಿಧದ 34 ಹಣ್ಣಿನ ಗಿಡಗಳಿವೆ. 10 ರಂಬುಟಾನ್, 4 ಪೇರಳೆ, 5 ಮಾವು, 6 ಚಿಕ್ಕು, 5 ರಾಮಫಲ, 2 ಸೀತಾಫಲ, 2 ಹಲಸು, ಬಾಳೆಗಿಡಗಳು ಬೆಳೆದು ನಿಂತಿದ್ದು, ಫಲ ನೀಡಿದೆ.
ಶ್ರಮಕ್ಕೆ ಫಲ
ಎರಡು ವರ್ಷಗಳ ಹಿಂದೆ ನಾಟಿ ಮಾಡಿದ ಹಣ್ಣಿನ ಗಿಡಗಳು ಇಂದು ಬೆಳೆದು ಫಲ ನೀಡಿದೆ. ಇಲ್ಲಿನ ಬೆಳೆದಿರುವ ಹಣ್ಣನ್ನು ಮಕ್ಕಳಿಗೆ ನೀಡುತ್ತಿದ್ದೇವೆ. ನಮ್ಮ ಶ್ರಮಕ್ಕೆ ಇಂದು ಫಲ ಸಿಕ್ಕಿದೆ.
– ಅಮೀನಾ ಕೆ., ಅಂಗನವಾಡಿ ಕಾರ್ಯಕರ್ತೆ, ಕಲ್ಲುಗುಡ್ಡೆ
You seem to have an Ad Blocker on.
To continue reading, please turn it off or whitelist Udayavani.