ಪಾಣೆಮಂಗಳೂರು ದ.ಕ. ಜಿ.ಪಂ. ಹಿ.ಪ್ರಾ. ಶಾಲೆ
ಮಿಷನ್ ಸಂಸ್ಥೆ ಆರಂಭಿಸಿದ "ಹೆಣ್ಮಕ್ಕಳ ಬೋರ್ಡ್ ಶಾಲೆ'
Team Udayavani, Nov 15, 2019, 5:31 AM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
ಬಂಟ್ವಾಳ: ಬ್ರಿಟಿಷರ ಮಿಷನ್ ಸಂಸ್ಥೆಯು ಸ್ವಾತಂತ್ರ್ಯ ಪೂರ್ವದಲ್ಲಿ ಪಾಣೆಮಂಗಳೂರಿನಲ್ಲಿ ಪ್ರಾರಂಭಿಸಿದ “ಹೆಣ್ಮಕ್ಕಳ ಬೋರ್ಡ್ ಶಾಲೆ’ ಪ್ರಸ್ತುತ ಪಾಣೆಮಂಗಳೂರು ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯಾಗಿ ಬೆಳೆದು ನಿಂತಿದೆ. ಶಾಲೆಯ ಪ್ರಾರಂಭದಲ್ಲಿ 1ರಿಂದ 4ನೇ ತರಗತಿ ಮಾತ್ರ ಇದ್ದು, ಪ್ರಸ್ತುತ 7ನೇ ತರಗತಿಯವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
1916ರಲ್ಲಿ ಪ್ರಾರಂಭಗೊಂಡ ಹೆಣ್ಮಕ್ಕಳ ಬೋರ್ಡ್ ಶಾಲೆಯು ಶತ ವರ್ಷಗಳನ್ನು ಪೂರೈಸಿದ್ದು, ಪ್ರಾರಂಭದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದರು. ಬಳಿಕ ಪರಿಸರದಲ್ಲಿ ಅನುದಾನಿತ, ಅನುದಾನರಹಿತ ಶಾಲೆಗಳು ಪ್ರಾರಂಭವಾಗಿ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತಗೊಂಡಿತ್ತು.
ಮೇಲ್ದರ್ಜೆಗೆ
2001ರಲ್ಲಿ ಸರ್ವ ಶಿಕ್ಷಾ ಅಭಿಯಾನ ಜಾರಿಗೆ ಬಂದ ಬಳಿಕ ಶಾಲೆಯು 4ನೇ ತರಗತಿಯಿಂದ 7ನೇ ತರಗತಿಗೆ ಮೇಲ್ದರ್ಜೆಗೇರಿದ್ದು, ಈ ವೇಳೆ ವಿದ್ಯಾರ್ಥಿಗಳ ಸಂಖ್ಯೆ 150ರ ಗಡಿ ದಾಟಿತ್ತು. ಪಾಣೆಮಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಶಾಲೆಗಳು ಇಲ್ಲದ ಹಿನ್ನೆಲೆಯಲ್ಲಿ ಮೊಗರ್ನಾಡು, ಶಂಭೂರು, ನರಿಕೊಂಬು, ಗೂಡಿನಬಳಿ, ಮೆಲ್ಕಾರ್, ನಂದಾವರ ಮೊದಲಾದ ಪ್ರದೇಶಗಳಿಂದ ವಿದ್ಯಾರ್ಥಿಗಳು ಈ ಶಾಲೆಗೆ ಆಗಮಿಸುತ್ತಿದ್ದರು.
15 ವಿದ್ಯಾರ್ಥಿಗಳಿದ್ದರು!
ಪ್ರಸ್ತುತ ಪಾಣೆಮಂಗಳೂರು ಪ್ರದೇಶದಲ್ಲಿ ಒಟ್ಟು 5 ಶಾಲೆಗಳು ಕಾರ್ಯಾಚರಿಸುತ್ತಿವೆ. 2016ಕ್ಕೆ ಮೊದಲು ಶಾಲೆಯಲ್ಲಿ ಕೇವಲ 15 ವಿದ್ಯಾರ್ಥಿಗಳಿದ್ದು, ಮುಚ್ಚುವ ಹಂತಕ್ಕೆ ತಲುಪಿತ್ತು. ಶತಮಾನೋತ್ಸವದ ಬಳಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 50 ದಾಟಿದೆ. ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಆಗಮಿಸಿದ ಶಾಲಿನಿ ಅವರು ಶಾಲೆಯ ಅಭಿವೃದ್ಧಿಗೆ ವಿಶೇಷ ಶ್ರಮ ವಹಿಸಿದ್ದು, ಅವರಿಗೆ ಶಿಕ್ಷಕರಾದ ವಿಮಲಾ, ಜಿ. ಸವಿತಾಕುಮಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಹಕೀಂ ಸಹಕರಿಸಿದ್ದಾರೆ. ಎಲ್‌ಕೆಜಿ- ಯುಕೆಜಿ ಪ್ರಾರಂಭಿಸಲಾಗಿದೆ. ಶಾಲೆಯು 65 ಸೆಂಟ್ಸ್ ಜಾಗವನ್ನು ಹೊಂದಿದೆ. ಆವರಣ ಗೋಡೆಯ ಕೊರತೆಯಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸಲು ಹಿನ್ನಡೆಯಾಗಿದೆ. ಕೊಠಡಿಗಳ ಕೊರತೆಯಿಂದ ಒಂದನೇ ತರಗತಿಯಿಂದ ಆಂಗ್ಲ ಶಿಕ್ಷಣ ಆರಂಭಿಸಲು ಅಸಾಧ್ಯವಾಗಿದೆ. ಶಾಲೆಯು ಸ್ವತ್ಛ ಪರಿಸರವನ್ನು ಹೊಂದಿದ್ದು, ಹೂದೋಟ, ತೆಂಗಿನ ಮರಗಳು ಸಹಿತ ಕೆಲವು ಹಣ್ಣಿನ ಗಿಡಗಳಿವೆ.
ಹಿರಿಯ ವಿದ್ಯಾರ್ಥಿಗಳು
ಪಾಣೆಮಂಗಳೂರಿನಲ್ಲಿ ವೈದ್ಯರಾಗಿರುವ ಡಾ| ವಿಶ್ವನಾಥ್ ನಾಯಕ್, ಸ್ಕಾಲರ್‌ಶಿಪ್‌ಗ್ಳ ಕುರಿತು ಕೆಲಸ ಮಾಡುತ್ತಿರುವ ಮಹಮ್ಮದ್ ಪಾಣೆಮಂಗಳೂರು, ಕೆಎಸ್‌ಆರ್‌ಟಿಸಿ ಉದ್ಯೋಗಿಯಾಗಿದ್ದ ವಿಶ್ವನಾಥ ಪುರುಷ, ಶಿಕ್ಷಕಿಯಾಗಿರುವ ಭವಾನಿ ಮೊದಲಾದ ಗಣ್ಯರು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.
ಶತಮಾನ ಕಂಡಿರುವ ಪಾಣೆಮಂಗಳೂರು ಶಾಲೆಯಲ್ಲಿ ಪ್ರಸ್ತುತ ಸುಮಾರು 50 ಮಕ್ಕಳಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ. ಮೂಲ ಸೌಕರ್ಯಕ್ಕೂ ಆದ್ಯತೆ ನೀಡಬೇಕಿದೆ. ಸ್ವತ್ಛ ಸುಂದರ ಪರಿಸರದಲ್ಲಿರುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
-ವಿಮಲಾ, ಪ್ರಭಾರ ಮುಖ್ಯ ಶಿಕ್ಷಕಿ.
ನಮ್ಮ ಶಿಕ್ಷಣಕ್ಕೆ ಅಡಿಪಾಯ ಹಾಕಿಕೊಟ್ಟ ಶಾಲೆ ಎಂಬ ಹೆಮ್ಮೆ ಇದೆ. ಆಗಿನ ಪಾರ್ವತಿ ಟೀಚರ್, ಅನಂತರಾಜ ಇಂದ್ರ ಅವರ ಪಾಠ ನೆನಪಿದೆ. ಉತ್ತಮ ಶಾಲೆಯಾಗಿ ಗುಣಮಟ್ಟದ ಶಿಕ್ಷಣ ಲಭಿಸಿತ್ತು. ಆಗಿನ ದಿನಗಳಲ್ಲಿ ಪ್ರತಿ ಬಾರಿ ನಡೆಯುತ್ತಿದ್ದ ತಿಂಗಳ ಹಬ್ಬ, ಅಲ್ಲಿ ಎಲ್ಲರ ಸಂಭ್ರಮದ ಭಾಗವಹಿಸುವಿಕೆ ಈಗಲೂ ನೆನಪಿದೆ.
-ಡಾ| ಪಿ. ವಿಶ್ವನಾಥ ನಾಯಕ್, ಆಯುರ್ವೇದ ವೈದ್ಯರು, ಹಳೆ ವಿದ್ಯಾರ್ಥಿ.
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್ ಪ್ರೌಢಶಾಲೆಗೆ 121ರ ಸಂಭ್ರಮ
ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ
ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ
112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.