ತುಂಬೆ ಡ್ಯಾಂ ಬಳಿ ಮಣ್ಣು ಕುಸಿತಕ್ಕೆ ಶಾಶ್ವತ ಪರಿಹಾರ ?
ತಡೆಗೋಡೆ ನಿರ್ಮಾಣಕ್ಕಾಗಿ ಸ್ಮಾರ್ಟ್‌ಸಿಟಿ ಯೋಜನೆ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
Team Udayavani, Jan 4, 2023, 2:48 PM IST
ಬಂಟ್ವಾಳ: ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಂನ ಬಳಿ ನಾಲ್ಕು ವರ್ಷಗಳ ಹಿಂದೆ ತಡೆಗೋಡೆ ಕುಸಿದ ಪರಿಣಾಮ ಇಡೀ ಪಂಪ್‌ಹೌಸ್ ಅಪಾಯ ಸ್ಥಿತಿಗೆ ತಲುಪಿದ್ದು, ಇದೀಗ ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ ಅದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಲಾಗುತ್ತಿದ್ದು, ಗೇಬಿಯನ್ ವಾಲ್ ಮಾದರಿಯಲ್ಲಿ ತಡೆಗೋಡೆ ನಿರ್ಮಾಣಗೊಳ್ಳುತ್ತಿದೆ.
ಪ್ರಸ್ತುತ ಕಾಮಗಾರಿಯ ಹಿನ್ನೆಲೆಯಲ್ಲಿ ಡ್ಯಾಂನ ನೀರನ್ನು 6 ಮೀ. ನಿಂದ 4ಮೀ. ಗೆ ಇಳಿಕೆ ಮಾಡಿಕೊಡಲಾಗಿದೆ. ಡ್ಯಾಂನಲ್ಲಿ ನೀರು ತುಂಬಿರುವುದರಿಂದ ಕಬ್ಬಿಣದ ಮೆಸ್, ಕಪ್ಪು ಕಲ್ಲು, ದೊಡ್ಡ ಗಾತ್ರದ ಕಾಂಕ್ರೀಟ್ ತುಂಡುಗಳನ್ನು ಬಳಸಿಕೊಂಡು ಗೇಬಿಯನ್ ವಾಲ್ ಮಾದರಿಯಲ್ಲಿ ತಡೆ ಗೋಡೆ ನಿರ್ಮಾಣ ಮಾಡಲಾಗುತ್ತಿದೆ.
2018ರಲ್ಲಿ ಮಣ್ಣು ಕುಸಿತ
ತುಂಬೆ ಡ್ಯಾಂನ ಜಾಕ್‌ವೆಲ್ ಹಾಗೂ ಪಂಪ್‌ಹೌಸ್ ಇರುವ ಜಾಗದಿಂದ ಕೇವಲ 15-20 ಮೀಟರ್ ಅಂತರದಲ್ಲಿ 2018ರಲ್ಲಿ ತಡೆಗೋಡೆಯ ಮಣ್ಣು ಕುಸಿದು ಪಂಪ್ ಹೌಸ್ ಅಪಾಯಕ್ಕೆ ಸಿಲುಕಿತ್ತು. ಹೀಗಾಗಿ ಮರಳಿನ ಚೀಲಗಳನ್ನು ಜೋಡಣೆ ಮಾಡಿ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿತ್ತು.
ತಡೆಗೋಡೆ ಕುಸಿದ ಭಾಗಕ್ಕೆ ಹಲವು ಬಾರಿ ಸಚಿವರು, ಶಾಸಕರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದ್ದು, ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಂದು ಸರಕಾರಕ್ಕೆ 10 ಕೋ. ರೂ. ಗಳ ಪ್ರಸ್ತಾವ ಸಲ್ಲಿಸಿದ್ದರೂ ಅನುದಾನ ಬಿಡುಗಡೆಗೊಂಡಿರಲಿಲ್ಲ. ಜತೆಗೆ ಅಂದಿನ ಸರಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ತಡೆಗೋಡೆ ಮತ್ತೆ ಕುಸಿದರೆ ಇಡೀ ಪಂಪ್‌ಹೌಸ್ ನೀರು ಪಾಲಾಗುವ ಅಪಾಯವೂ ಎದುರಾಗಿತ್ತು. ಹೀಗಾಗಿ ಅನಿವಾರ್ಯವಾಗಿ ತಡೆಗೋಡೆ ನಿರ್ಮಾಣಕ್ಕಾಗಿ ಸ್ಮಾರ್ಟ್‌ಸಿಟಿ ಯೋಜನೆ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ನೀರು ಇಳಿಕೆ: ರೈತರಿಗೆ ತೊಂದರೆ ನದಿಪಾತ್ರದ ಕೃಷಿಕರು ಬಹಳ ವರ್ಷಗಳಿಂದಲೂ ತಮ್ಮ ಬೆಳೆಗಳಿಗೆ ನದಿಯಿಂದಲೇ ನೀರನ್ನು ಬಳಸುತ್ತಿದ್ದು, ನದಿಯಲ್ಲಿ ನೀರಿನ ಮಟ್ಟದ ಆಧಾರದಲ್ಲಿ ಪಂಪ್ ಹಾಗೂ ಪೈಪ್‌ಲೈನ್ ಜೋಡಣೆ ಮಾಡಿಕೊಂಡು ನೀರು ತೆಗೆಯುತ್ತಿದ್ದಾರೆ. ತುಂಬೆ ಡ್ಯಾಂನಲ್ಲಿ ನೀರನ್ನು 6 ಮೀ.ಗೆ ಏರಿಕೆ ಮಾಡಿದ ಬಳಿಕ ಅದಕ್ಕೆ ಅನುಗುಣವಾಗಿ ಜೋಡಣೆ ಮಾಡಿದ್ದರು. ಆದರೆ ಇದೀಗ ನೀರು ತೀರಾ ಇಳಿಕೆಯಾದ ಪರಿಣಾಮ ರೈತರ ಪಂಪ್‌ಗ್ಳಿಗೆ ನೀರು ಸಿಗದೇ ಇದ್ದು, ಹೀಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಪಂಪ್ ಹಾಗೂ ಪೈಪ್‌ಲೈನ್ ಕೆಳಗೆ ಇಳಿಸಬೇಕಾದ ಸ್ಥಿತಿ ಇದೆ. ಹೀಗೆ ಇಳಿಸಿ ಸ್ವಲ್ಪ ದಿನಗಳಲ್ಲೇ ಮತ್ತೆ ನೀರಿನ ಮಟ್ಟ 6 ಮೀ.ಗೆ ಏರಿಕೆಯಾದರೆ ನಾವು ಮತ್ತೆ ತೊಂದರೆ ಎದುರಿಸಬೇಕಾಗುತ್ತದೆ ಎಂದು ಸ್ಥಳೀಯ ರೈತರು ಆರೋಪಿಸುತ್ತಿದ್ದಾರೆ.
ನೀರು ಏರಿಸಲು ಸೂಚನೆ
ತುಂಬೆ ಡ್ಯಾಂ ಬಳಿ ತಡೆಗೋಡೆ ಕುಸಿದಿದ್ದು, ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ಜಲ್ಲಿಕಲ್ಲು ಸಮಸ್ಯೆಯಿಂದ ತೊಂದರೆಯಾಗಿದೆ. ನೀರು ಇಳಿಕೆಯಿಂದ ರೈತರಿಗೆ ತೊಂದರೆಯಾಗುವ ಕುರಿತು ಈಗಾಗಲೇ ಪಾಲಿಕೆ ಆಯುಕ್ತರ ಜತೆ ಚರ್ಚೆ ನಡೆಸಿ 6 ಮೀ.ಗೆ ನೀರು ಏರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
–ಜಯಾನಂದ ಅಂಚನ್, ಮೇಯರ್, ಮನಪಾ ಮಂಗಳೂರು
ನದಿ ಪಾತ್ರದ ರೈತರಿಗೆ ನಷ್ಟ ತುಂಬೆ ಡ್ಯಾಂನಲ್ಲಿ ಪ್ರಸ್ತುತ ನೀರು ಕಡಿಮೆ ಮಾಡಿರುವ ಪರಿಣಾಮ ನದಿಪಾತ್ರದ ರೈತರಿಗೆ ಸಾಕಷ್ಟು ತೊಂದರೆಯಾಗಿದ್ದು, ರೈತರು ತಮ್ಮ ಪಂಪ್‌ಸೆಟ್ ಗಳನ್ನು 6 ಮೀ. ನೀರು ಸಾಮರ್ಥ್ಯಕ್ಕೆ ಜೋಡಿಸಿದ್ದು, ಆದರೆ ಈಗ ಏಕಾಏಕಿ ನೀರು ಕಡಿಮೆ ಮಾಡಿರುವುದರಿಂದ ರೈತರ ಪಂಪುಗಳಿಗೆ ನೀರು ಸಿಗುತ್ತಿಲ್ಲ. ಮತ್ತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಜೋಡಣೆಯಲ್ಲಿ ವ್ಯತ್ಯಾಸ ಮಾಡಬೇಕಿದ್ದು, ಆಗ ಮತ್ತೆ 6 ಮೀ.ಗೆ ಏರಿಸಿದರೆ ರೈತರು ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.
-ಎಂ. ಸುಬ್ರಹ್ಮಣ್ಯ ಭಟ್, ಅಧ್ಯಕ್ಷರು, ತುಂಬೆ ಡ್ಯಾಂ ಸಂತ್ರಸ್ಥರ ಹೋರಾಟ ಸಮಿತಿ
*ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.