Poshan Abhiyaan ಅನುಷ್ಠಾನ ಸಿಬಂದಿಗಿಲ್ಲ ಪೋಷಣೆ!
5 ತಿಂಗಳುಗಳಿಂದ ವೇತನವಿಲ್ಲದೆ ಪರದಾಟ ; ಅನುದಾನವಿಲ್ಲದೆ ಸಂಬಳವೇ ಸ್ಥಗಿತ
Team Udayavani, Aug 8, 2023, 6:55 AM IST
ಬಂಟ್ವಾಳ:ಮಕ್ಕಳು -ಮಹಿಳೆಯರ ಅಪೌಷ್ಟಿಕತೆಯನ್ನು ದೂರ ಮಾಡುವ ಉದ್ದೇಶದ “ಪೋಷಣ ಅಭಿಯಾನ’ವನ್ನು ಅನುಷ್ಠಾನ ಮಾಡುತ್ತಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬಂದಿಗೆ ಐದು ತಿಂಗಳುಗಳಿಂದ ವೇತನ ಸಿಕ್ಕಿಲ್ಲ. ಹೀಗಾಗಿ ಪೋಷಣ ಅಭಿಯಾನದ ಸಿಬಂದಿ ತಮಗೇ ಪೋಷಣೆ ಇಲ್ಲದಂತಹ ಸ್ಥಿತಿಯಲ್ಲಿದ್ದಾರೆ.
ಪೋಷಣ ಅಭಿಯಾನವು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ. ಇದರ ಅನುಷ್ಠಾನಕ್ಕಾಗಿ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಜಿಲ್ಲಾ ಸಂಯೋಜಕರು ಹಾಗೂ ಪ್ರತೀ ಶಿಶು ಅಭಿವೃದ್ಧಿ ಯೋಜನಾ ಕಚೇರಿ ವ್ಯಾಪ್ತಿ
ಯಲ್ಲಿ ಸಂಯೋಜಕರ ಸಹಿತ 300ಕ್ಕೂ ಅಧಿಕ ಸಿಬಂದಿ ಕಾರ್ಯನಿರ್ವ ಹಿಸುತ್ತಿದ್ದು, ರಾಜ್ಯಾದ್ಯಂತ ಯಾರಿಗೂ ವೇತನ ಲಭಿಸಿಲ್ಲ.
ಮುಗಿಯದ ಗೋಳು
2018ರಲ್ಲಿ ಪೋಷಣ ಅಭಿಯಾನ ಆರಂಭವಾದಂದಿನಿಂದಲೂ ಇದೇ ರೀತಿ ವೇತನ ಸಮಸ್ಯೆ ಎದುರಿಸುತ್ತಿದ್ದು, 5-6 ತಿಂಗಳಿಗೊಮ್ಮೆ ವೇತನ ಪಡೆಯುವ ಸ್ಥಿತಿ ಇದೆ. ಪ್ರಸ್ತುತ 2023ರ ಮಾರ್ಚ್‌ನಿಂದ ಬಿಡಿಗಾಸು ವೇತನವಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ.
ಇವರು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಅನುದಾನ ಬಂದಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ವೇತನ ಪಾವತಿಯಾಗುತ್ತದೆ. ಆದರೆ ಪ್ರಸ್ತುತ ಅನುದಾನ ಬಾರದೆ ವೇತನವೂ ಇಲ್ಲವಾಗಿದೆ. ಅಭಿಯಾನದ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಇವರು ಹಲವೆಡೆ ಓಡಾಟ ನಡೆಸಬೇಕಾಗುತ್ತದೆ. ಹೀಗಾಗಿ ಅವರಿಗೆ ಪ್ರಯಾಣ ಭತ್ತೆ ಪಡೆಯುವ ಅವಕಾಶವಿದೆ. ಆದರೆ 2 ವರ್ಷಗಳಿಂದ ಅದೂ ಸಿಗುತ್ತಿಲ್ಲ.
ಅಭಿಯಾನದ ಯಶಸ್ಸಿಗೆ ದುಡಿಮೆ
ಅಪೌಷ್ಟಿಕತೆ ತಡೆಗಟ್ಟಲು ಅಂಗನವಾಡಿ ಮಟ್ಟದಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಣಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡುವುದು, ಅಭಿಯಾನದ ಕಾರ್ಯ ಚಟುವಟಿಕೆಗಳನ್ನು ಕ್ರೋಡೀಕರಿಸಿ ಪ್ರತೀದಿನ ನಿರ್ವಹಣೆ ಮಾಡುವುದು, ಫಲಾನುಭವಿಗಳ ಆಧಾರ್ ನೋಂದಣಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿ ಯರ ಬ್ಯಾಂಕ್ ಖಾತೆಗೆ ಅಳವಡಿಕೆ ಈ ಸಿಬಂದಿಯ ಕರ್ತವ್ಯಗಳಾಗಿವೆ.
ಜತೆಗೆ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ವಿತರಿಸಲಾದ ಸ್ಮಾರ್ಟ್ ಫೋನ್ ನಿರ್ವಹಣೆ, ಕೇಂದ್ರ-ರಾಜ್ಯ ಸರಕಾರದ ವಿವಿಧ ವರದಿಗಳ ಮಾಹಿತಿ ಕ್ರೋಡೀಕರಣ- ಈ ಎಲ್ಲ ಕರ್ತವ್ಯಗಳ ಮೂಲಕ ಪೋಷಣ ಅಭಿಯಾನದ ಯಶಸ್ಸಿಯಾಗಿ ದುಡಿಯುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಈ ಸಿಬಂದಿ ಆರೋಗ್ಯ ಇಲಾಖೆಯ ಜತೆ ಸೇರಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ವೇತನ ಸಮಸ್ಯೆಯನ್ನು ಪ್ರತೀ ಬಾರಿ ಸರಕಾರದ ಗಮನಕ್ಕೆ ತಂದರೂ ಪರಿಹಾರ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕರಾವಳಿಯಲ್ಲಿ ಎಷ್ಟು
ಮಂದಿ ಬಾಧಿತರು?
ಪೋಷಣ ಅಭಿಯಾನಕ್ಕೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಯೋಜನಾ ಸಂಯೋಜಕ ಹಾಗೂ ಯೋಜನಾ ಸಹಾಯಕ ಎಂಬ 2 ಹುದ್ದೆಗಳು, ಜಿಲ್ಲೆಯ 7 ಯೋಜನಾ (ಸಿಡಿಪಿಒ ಕಚೇರಿ) ಕಚೇರಿಗಳಲ್ಲಿ ತಲಾ ಒಬ್ಬೊಬ್ಬರು ಸಂಯೋಜಕರು (ಬ್ಲಾಕ್ ಕೋಆರ್ಡಿನೇಟರ್) ಸೇರಿ ಒಟ್ಟು 9 ಮಂದಿ ಇದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಯೋಜನಾ ಸಂಯೋಜಕ ಹಾಗೂ ಯೋಜನಾ ಸಹಾಯಕ ಎಂಬ 2 ಹುದ್ದೆಗಳು, ಜಿಲ್ಲೆಯ 4 ಯೋಜನಾ (ಸಿಡಿಪಿಒ ಕಚೇರಿ) ಕಚೇರಿಗಳಲ್ಲಿ ತಲಾ ಒಬ್ಬೊಬ್ಬರು ಸಂಯೋಜಕರು (ಬ್ಲಾಕ್ ಕೋಆರ್ಡಿನೇಟರ್) ಸೇರಿ ಒಟ್ಟು 6 ಮಂದಿ ಇದ್ದಾರೆ.
ಹಿಂದೆ ಸಿಡಿಪಿಒ ಕಚೇರಿ ವ್ಯಾಪ್ತಿ ಯಲ್ಲೂ ಸಹಾಯಕರಿದ್ದು, ಆದರೆ ಕಳೆದ ವರ್ಷದಿಂದ ಆ ಹುದ್ದೆಯನ್ನು ತೆಗೆದುಹಾಕಲಾಗಿದೆ. ಕಳೆದ ವರ್ಷ ಇದೇ ಸಿಬಂದಿಗೆ 9 ತಿಂಗಳವರೆಗೂ ವೇತನ ಆಗದೆ, ಬಳಿಕ ಅನುದಾನ ಬಿಡುಗಡೆಗೊಂಡು ವೇತನ ನೀಡಲಾಗಿತ್ತು.
ಕೇಂದ್ರದಿಂದ ಬಜೆಟ್ ವಿಳಂಬವಾಗಿರುವ ಕಾರಣ ಪೋಷಣ ಅಭಿಯಾನ ಸಿಬಂದಿಯ ವೇತನ ಸಮಸ್ಯೆ ಇದೆ. ಕೇಂದ್ರದಿಂದ ಅನುದಾನವು ನಿರಂತರ ಪ್ರಕ್ರಿಯೆಯಾಗಿರುವುದಿಂದ ವಿಳಂಬವಾದರೂ ಬಂದೇ ಬರುತ್ತದೆ. ವೇತನ ಸಮಸ್ಯೆಯ ಕುರಿತು ಈಗಾಗಲೇ ಜಿ.ಪಂ. ಸಿಇಒ ಅವರ ಮೂಲಕ ಪತ್ರ ಬರೆಯಲಾಗಿದೆ.
– ಪಾಪ ಭೋವಿ ಟಿ., ಬಿ.ಎಚ್. ಕೃಷ್ಣಪ್ಪ
ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದ.ಕ., ಉಡುಪಿ
-ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.