“ಪ್ರವೀಣ್’ ಗೃಹ ಪ್ರವೇಶ, ಪುತ್ಥಳಿ ಅನಾವರಣ
ಬಿಜೆಪಿ ವತಿಯಿಂದ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
Team Udayavani, Apr 28, 2023, 6:30 AM IST
ಸುಳ್ಯ: ಕಳೆದ ಜುಲೈಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿಯ ಯುವ ನಾಯಕ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರ ಮನೆಯವರಿಗೆ ಭಾರತೀಯ ಜನತಾ ಪಾರ್ಟಿ ವತಿಯಿಂದ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಡಲಾದ ನೂತನ ಮನೆಯ ಗೃಹಪ್ರವೇಶ ಗುರುವಾರ ನಡೆಯಿತು.
ಅರ್ಚಕ ಶ್ರೀಧರ ಭಟ್ ಕಬಕ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
2,700 ಚದರ ಅಡಿಯ ಮನೆ ನಿರ್ಮಾಣಕ್ಕೆ ಮುಗರೋಡಿ ಸಂಸ್ಥೆಗೆ ಜವಾಬ್ದಾರಿ ನೀಡಿತ್ತು. ನವೆಂಬರ್ 2ರಂದು ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಶಂಕುಸ್ಥಾಪನೆ ನೆರವೇರಿತ್ತು. “ಪ್ರವೀಣ್’ ಎಂದು ಹೆಸ ರಿಡಲಾಗಿದೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ನಾಮಫಲಕ ಅನಾವರಣ ಮಾಡಿದರು.
ಧರ್ಮಕ್ಕಾಗಿ ಒಂದಾಗೋಣ
ಮಾಣಿಲ ಶ್ರೀಗಳು ಮಾತನಾಡಿ, ಹಿಂದೂ ಧರ್ಮಕ್ಕಾಗಿ ದುಡಿದ ಯುವಕನ ಮನೆಯವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮನೆ ನಿರ್ಮಿಸಿ ಕೊಡುವ ಮೂಲಕ ಮಾಡಲಾಗಿದೆ. ಯುವಕರಲ್ಲಿ ತಣ್ತೀ, ಸಿದ್ಧಾಂತಗಳು ಮುಖ್ಯ. ಚುನಾವಣೆ ಈ ಸಂದರ್ಭದಲ್ಲಿ ಬದ್ಧತೆ, ಭದ್ರತೆ ನೀಡುವ ಸರಕಾರಕ್ಕೆ ನಾವೂ ಶಕ್ತಿ ನೀಡೋಣ; ಹಿಂದೂ ಧರ್ಮಕ್ಕಾಗಿ ನಾವೆಲ್ಲ ಒಂದಾಗೋಣ ಎಂದರು.
ಸದೃಢ ಸಮಾಜ
ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜದ ಮೇಲೆ ನಡೆಯುವ ದಾಳಿಯ ಬಗ್ಗೆ ಸುಮ್ಮನಿದ್ದರೆ ಇನ್ನಷ್ಟು ಪ್ರವೀಣರನ್ನು ಕಳಕೊಳ್ಳಬೇಕಾದೀತು. ದುರುಳರನ್ನು ಮಟ್ಟ ಹಾಕಲು ಹಿಂದೂ ಸಮಾಜ ಸದೃಢವಾಗಬೇಕು ಎಂದರು.
ಹಿಂದೂ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ, ಕಣಿಯೂರು ಮಠದ ಶ್ರೀ ಮಹಾಬಲನಾಥ ಸ್ವಾಮೀಜಿ ಮಾತನಾಡಿದರು. ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಶ್ರೀ ರೇಣುಕಾಪೀಠ ಶ್ರೀ ನಾರಾಯಣ ಗುರುಮಠದ ಶ್ರೀ ವಿಖ್ಯಾತನಂದ ಸ್ವಾಮೀಜಿ ಉಪಸ್ಥಿತರಿದ್ದರು.
ಪ್ರವೀಣ್ ಪುತ್ಥಳಿ ಅನಾವರಣ
ಪ್ರವೀಣ್ ಸಮಾಧಿ ಬಳಿಯಲ್ಲಿ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಯಿತು. ಜಯಂತ ನಡುಬೈಲು ಉದ್ಘಾಟಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ಕಟೀಲು ಮಾತನಾಡಿ, ಕಾರ್ಯಕರ್ತ ಪ್ರವೀಣ್ ಬಲಿಯಾದ ಸಂದರ್ಭ ಪಾರ್ಟಿ ಅವರ ಜತೆಗೆ ನಿಂತಿದೆ. ಆತನ ಕನಸಾಗಿದ್ದ ಮನೆಯನ್ನು ನಿರ್ಮಿಸಿ ಕೊಡುವ ಸಂಕಲ್ಪವನ್ನು ಬಿಜೆಪಿ ಮಾಡಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಮನೆಗೆ ಭೇಟಿ ನೀಡಿ 25 ಲಕ್ಷ ನೀಡಿದ್ದರು, ಬಿಜೆಪಿ ವತಿಯಿಂದ 25 ಲಕ್ಷ, ಬಿಜೆಪಿ ಯುವ ಮೋರ್ಚಾ ವತಿಯಿಂದ 15 ಲಕ್ಷ ರೂ. ನೀಡಿ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡಲಾಗಿದೆ. ಪ್ರವೀಣ್ ಪತ್ನಿಗೆ ಉದ್ಯೋಗವನ್ನೂ ನೀಡಿದ್ದೇವೆ. ಪ್ರವೀಣ್ ಹತ್ಯೆಗೈದ ಹಂತಕರಿಗೆ ಸೂಕ್ತ ಉತ್ತರ ನೀಡಲು ಪ್ರಕರಣ ಎನ್‌ಐಎಗೆ ವಹಿಸಲಾಗಿತ್ತು. ಇದರ ಹಿಂದಿನ ಆರೋಪಿಗಳನ್ನು ಬಂಧಿಸಲಾಗಿದೆ. ಪಿಎಫ್‌ಐಯ 400ಕ್ಕೂ ಅಧಿಕ ಮಂದಿಯನ್ನು ಬಂದಿಸಲಾಗಿದೆ. ಪಿಎಫ್‌ಐ ನಿಷೇಧವನ್ನೂ ಮಾಡಲಾಗಿದೆ ಎಂದರು.
ಮನೆಗೆ ಆಗಮಿಸಿದ ಸರ್ವರನ್ನು ಪ್ರವೀಣ್ ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ, ಪತ್ನಿ ನೂತನ ಹಾಗೂ ಮನೆಯವರು ಬರಮಾಡಿಕೊಂಡರು. ಮನೆ ನಿರ್ಮಿಸಿದ ಸುಧಾಕರ ಶೆಟ್ಟಿ ಅವರನ್ನು, ರಾಮಕೃಷ್ಣ ಭಟ್ ಅವರನ್ನು ಗೌರವಿಸಲಾಯಿತು.
ಶಾಸಕ ಸಂಜೀವ ಮಠಂದೂರು, ಎಂ.ಎಲ್.ಸಿ. ಪ್ರತಾಪಸಿಂಹ ನಾಯಕ್, ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಶಕುಂತಳಾ ಶೆಟ್ಟಿ, ಸುದರ್ಶನ ಮೂಡುಬಿದಿರೆ, ಜಗದೀಶ್ ಅಧಿಕಾರಿ, ರಘು ಸಕಲೇಶಪುರ, ರಮೇಶ್ ಹುಬ್ಬಳ್ಳಿ, ಕುಂಟಾರು ರವೀಶ್ ತಂತ್ರಿ, ಭರತ್ ಶೆಟ್ಟಿ ಕುಂಪಲ, ಚಂದ್ರಶೇಖರ ಪನ್ನೆ, ಚನಿಯ ಕಲ್ತಡ್ಕ, ಹರೀಶ್ ಕಂಜಿಪಿಲಿ, ಎ.ವಿ. ತೀರ್ಥರಾಮ, ನಾ. ಸೀತಾರಾಮ, ಎಸ್.ಎನ್. ಮನ್ಮಥ, ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಕಸ್ತೂರಿ ಪಂಜ, ಮುರಳೀಕೃಷ್ಣ ಹಸಂತಡ್ಕ, ರಾಕೇಶ್ ರೈ ಕೆಡೆಂಜಿ, ಪ್ರಮೀಳಾ ಜನಾರ್ದನ್, ಆರ್. ಪದ್ಮರಾಜ್, ಕೆ. ವೆಂಕಪ್ಪ ಗೌಡ, ಸೇರಿದಂತೆ ಸಾವಿರಾರು ಮಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.