ಅಂಗನವಾಡಿ ಕಾರ್ಯಕರ್ತೆ ವಿರುದ್ಧದ ಪ್ರತಿಭಟನೆ ಹಿಂದಕ್ಕೆ
Team Udayavani, Sep 29, 2018, 12:46 PM IST
ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಕೊಲ್ಲಿ ಅಂಗನವಾಡಿ ಕೇಂದ್ರದಿಂದ ಬೇರೆಡೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕಾರ್ಯಕರ್ತೆಯನ್ನು ಮರಳಿ ಅದೇ ಕೇಂದ್ರಕ್ಕೆ ನಿಯೋಜಿಸಿರುವುದನ್ನು ವಿರೋಧಿಸಿ ಅಂಗನವಾಡಿಯ ಪುಟಾಣಿಗಳನ್ನು ಸೇರಿಸಿಕೊಂಡು ಹೆತ್ತವರು ಸೆ. 27ರ ರಾತ್ರಿವರೆಗೂ ಪ್ರತಿಭಟನೆ ನಡೆಸಿದ ಘಟನೆ ಸಂಭವಿಸಿದೆ. ಬಳಿಕ ತಹಶೀಲ್ದಾರ್ ಮದನ್ ಮೋಹನ್ ಅವರು ಮಧ್ಯ ಪ್ರವೇಶಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಕಾರ್ಯಕರ್ತೆ ವಿಜಯಲಕ್ಷ್ಮಿಯನ್ನು ಬದಲಿಸುವಂತೆ ಹೆತ್ತವರಿಂದ ಒತ್ತಾಯ ಬಂದ ಹಿನ್ನೆಲೆಯಲ್ಲಿ ಅವರನ್ನು ಬೇರೆಡೆಗೆ ನಿಯೋಜಿಸಲಾಗಿತ್ತು.ಆದರೆ ಗುರುವಾರ ಅವರು ಮತ್ತೆ ಅದೇ ಅಂಗನವಾಡಿಗೆ ಬಂದ ಹಿನ್ನೆಲೆಯಲ್ಲಿ ಹೆತ್ತವರು ಪ್ರತಿಭಟನೆ ಆರಂಭಿಸಿದ್ದರು. ಜತೆಗೆ ಕೆಲವು ಗ್ರಾಮಸ್ಥರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಿಯಾ ಆ್ಯಗ್ನೇಸ್ ಅವರು ಸ್ಥಳಕ್ಕೆ ಭೇಟಿ ನೀಡಿ, ಹೆತ್ತವರೊಂದಿಗೆ ಮಾತುಕತೆ ನಡೆಸಿದರು. ಆದರೆ ಮಕ್ಕಳಿಗೆ ತೊಂದರೆ ನೀಡುವ ಶಿಕ್ಷಕಿ ನಮಗೆ ಬೇಡ ಎಂದು ಹೆತ್ತವರು ಪಟ್ಟು ಹಿಡಿದಿದ್ದರು. ಈ ನಡುವೆ ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮೀ ಅವರು ತಮ್ಮ ಮೇಲೆ ಮಹಿಳೆಯರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಅಂಗನವಾಡಿ ಕೇಂದ್ರಕ್ಕೆ ಸಿಡಿಪಿಒ ಪ್ರಿಯಾ ಅವರು ಭೇಟಿ ನೀಡಿದ್ದು, ಅಂಗನವಾಡಿ ಕಾರ್ಯಾಚರಣೆಗೆ ಕ್ರಮ ಕೈಗೊಂಡಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ ಭೇಟಿ ಕೊಟ್ಟು ಮಕ್ಕಳಿಗೆ ಆಹಾರ ನೀಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಘಟನೆಯ ಕುರಿತು ಮೇಲಧಿಕಾರಿಗಳಿಗೆ ತಿಳಿಸಲಾಗಿದ್ದು, ಅವರ ನಿರ್ದೇಶನದಂತೆ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗೆ ಮಾಹಿತಿ
ಹೆತ್ತವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪ್ರತಿಭಟನೆ ಹಿಂಪಡೆಯುವಂತೆ ತಿಳಿಸಲಾಗಿದೆ. ಈ ಹಿಂದೆಯೂ ಇಂತಹ ಸಮಸ್ಯೆ ಯಾದಾಗ ಶಿಕ್ಷಕಿಯನ್ನು ಬದಲಿಸುವಂತೆ ತಿಳಿಸಲಾಗಿತ್ತು. ಪ್ರಸ್ತುತ ಘಟನೆಯ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಪದೇ ಪದೇ ಈ ರೀತಿ ತೊಂದರೆ ಮರುಕಳಿಸುವ ಕುರಿತು ಸಿಡಿಪಿಒ ಅವರಿಗೂ ಸೂಚನೆ ನೀಡಲಾಗಿದೆ.
– ಮದನ್‌ಮೋಹನ್ ತಹಶೀಲ್ದಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.