ಕೊಳೆರೋಗಕ್ಕೆ ಶೀಘ್ರ ಪರಿಹಾರ ಕೊಡಿಸಿ
ಬೆಟ್ಟಂಪಾಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ
Team Udayavani, Sep 15, 2019, 5:33 AM IST
ಬೆಟ್ಟಂಪಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯು ಬೇಬಿ ಜಯರಾಮ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಟ್ಟಂಪಾಡಿ: ಇಲ್ಲಿನ ಗ್ರಾ.ಪಂ.ನ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷೆ ಬೇಬಿ ಜಯರಾಮ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಬೇಸಗೆಯಲ್ಲಿ ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಮಳೆಗಾಲದಲ್ಲಿ ವಿಪರೀತ ಕೊಳೆರೋಗದಿಂದ ಅಡಿಕೆ ಕೃಷಿ ನಾಶವಾಗಿದೆ. ಕೊಳೆರೋಗದಿಂದ ಅಡಿಕೆ ಧರೆಗೆ ಬಿದ್ದಿದೆ. ಇದರಿಂದ ಜಿಲ್ಲೆ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದಾರೆ. ಎಕರೆಗೆ 15,000 ರೂ. ಪರಿಹಾರ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಕಳೆದ ಬಾರಿಯ ಕೊಳೆರೋಗ ಪರಿಹಾರವೇ ಬಂದಿಲ್ಲ. ಈ ಬಾರಿ ಅರ್ಜಿ ಹಾಕಿದರೆ ಸಿಗಬಹುದೇ ಎಂದು ಕೆಲವು ಸದಸ್ಯರು ಅನುಮಾನ ವ್ಯಕ್ತಪಡಿಸಿದರು. ಕಳೆದ ವರ್ಷ ಕೊಳೆರೋಗಕ್ಕೆ ಅರ್ಜಿ ಕೊಟ್ಟವರ ಕೆಲವು ದಾಖಲೆಗಳು ಸರಿಯಾಗಿ ಸಲ್ಲಿಕೆ ಆಗದಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಸದಸ್ಯರು ಹೇಳಿದರು. ಚರ್ಚೆ ನಡೆದು, ಅಡಿಕೆ ಕೊಳೆ ರೋಗಕ್ಕೆ ಶೀಘ್ರ ಪರಿಹಾರ ಸಿಗುವಂತೆ ಸರಕಾರ ಕ್ರಮ ಕೈಗೊಳ್ಳುವಂತೆ ನಿರ್ಣಯ ಕೈಗೊಳ್ಳಲಾಯಿತು.
ಗ್ರಂಥಾಲಯಕ್ಕೆ ಕಟ್ಟಡ ಬೇಕು
ಪಂಚಾಯತ್ ಬಳಿಯಲ್ಲಿರುವ ಗ್ರಂಥಾಲಯ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ಮಳೆಯಿಂದ ನೀರು ಒಳಗೆ ಬಂದು ಪುಸ್ತಕಗಳು ಒದ್ದೆಯಾಗುತ್ತಿವೆ. ಕೂಡಲೇ ಇದರ ಬಗ್ಗೆ ಗಮನ ಹರಿಸುವಂತೆ ಸದಸ್ಯ ಪ್ರಕಾಶ್ ರೈ ಒತ್ತಾಯಿಸಿದರು. ತಾತ್ಕಾಲಿಕ ದುರಸ್ತಿ ಅಸಾಧ್ಯವಾಗಿದೆ. ನೂತನ ಕಟ್ಟಡದ ಅಗತ್ಯ ಇದೆ ಎಂದು ಸಭೆಯಲ್ಲಿ ಅಭಿಪ್ರಾಯ ಬಂದು, ಸಂಬಂಧಪಟ್ಟ ಇಲಾಖೆ ಮತ್ತು ಶಾಸಕರಿಗೆ ಬರೆಯುವುದಾಗಿ ತೀರ್ಮಾನಿಸಲಾಯಿತು.
ಇತ್ತೀಚೆಗೆ ಕೌಡಿಚ್ಚಾರು ಮಡ್ಡಂಗಳದಲ್ಲಿ ರಸ್ತೆ ಬದಿಯ ಕೆರೆಗೆ ಕಾರು ಬಿದ್ದು ನಾಲ್ಕು ಜೀವ ಹಾನಿಯಾದ ಪ್ರಕರಣವನ್ನು ಪ್ರಸ್ತಾವಿಸಿದ ಸದಸ್ಯರು, ರಸ್ತೆಯ ಬದಿ ಅಪಾಯಕಾರಿ ಕೆರೆ, ಬಾವಿ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿವೆ. ಏನಾದರೂ ಅನಾಹುತ ಆದರೆ ಪಂಚಾಯತ್‌ಗೆ ಹೆಸರು ಬರುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯ ಮೊಯಿದ್ ಕುಂಞಿ ಹೇಳಿದರು. ಇದರ ಬಗ್ಗೆ ತಹಶೀಲ್ದಾರರು ಸೂಕ್ತ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಯಿತು.
ಪಡಿತರ ಚೀಟಿ ಹೊಂದಿದ ಬಿಪಿಎಲ್ ಕುಟುಂಬಗಳಿಗೆ ನಾಲ್ಕು ತಿಂಗಳಿನಿಂದ ಸೀಮೆಎಣ್ಣೆ ಸಿಗುತ್ತಿಲ್ಲ. ಸಮಯಕ್ಕೆ ಸರಿಯಾಗಿ ಸೀಮೆ ಎಣ್ಣೆ ಸಿಗುವಂತೆ ಆಗಬೇಕು. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಇದೇ ಆಧಾರವಾಗಿದೆ. ಕೂಡಲೇ ಸೀಮೆಎಣ್ಣೆ ಸಿಗುವಂತೆ ಕ್ರಮ ಕೈಗೊಳ್ಳುವಂತೆ ಸದಸ್ಯ ಮೊಯಿದ್ ಕುಂಞಿ ಆಗ್ರಹಿಸಿದರು.
ಹೆಚ್ಚುವರಿ ಬಸ್ ಓಡಿಸಿ
ಪುತ್ತೂರು – ಸಂಟ್ಯಾರು – ಬೆಟ್ಟಂಪಾಡಿ ಮಾರ್ಗವಾಗಿ ಬೆಳಗ್ಗೆ ಸರಕಾರಿ ಬಸ್ಸು ಸಂಚಾರ ಆರಂಭಿಸುವಂತೆ ಸದಸ್ಯರು ಆಗ್ರಹಿಸಿದರು. ಬೆಳಗ್ಗೆ ಸಮಯದಲ್ಲಿ ಪಾಣಾಜೆಯಿಂದ ಬರುವ ಸರಕಾರಿ ಬಸ್ಸು ಸಾರ್ವಜನಿಕರು, ವಿದ್ಯಾರ್ಥಿಗಳಿಂದ ತುಂಬಿರುತ್ತದೆ. ಬೆಟ್ಟಂಪಾಡಿಯಿಂದ ಹೋಗುವವರಿಗೆ ತುಂಬಾ ತೊಂದರೆಯಾಗುತ್ತದೆ. ಈ ಕೂಡಲೇ ಹೆಚ್ಚುವರಿ ಬಸ್ಸು ಓಡಿಸುವಂತೆ ಸದಸ್ಯರು ಆಗ್ರಹಿಸಿದರು. ಇದರ ಬಗ್ಗೆ ಶಾಸಕರು ಮತ್ತು ಪುತ್ತೂರು ಡಿಪೋಗೆ ಮನವಿ ಮಾಡಲು ತೀರ್ಮಾನಿಸಲಾಯಿತು.
ಬೆಂದ್ರ ತೀರ್ಥ ಬಳಿ ಮತ್ತು ಚೆಲ್ಯಡ್ಕ ಬಳಿ ಕಿಂಡಿ ಅಣೆಕಟ್ಟು ನಿರ್ಮಿಸುವ ಬಗ್ಗೆ ಕಳೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕಳಿಸಲಾಗಿತ್ತು. ನರೇಗಾ ಯೋಜನೆಯಲ್ಲಿ ಅಣೆಕಟ್ಟನ್ನು ನಿರ್ಮಿಸುವಂತೆ ಜಿ.ಪಂ. ಪತ್ರ ಕಳಿಸಿದೆ ಎಂದು ಪಿಡಿಒ ಸಭೆಯಲ್ಲಿ ಹೇಳಿದರು. ನರೇಗಾ ಯೋಜನೆಯ ಮೊತ್ತ ಸಾಕಾಗುವುದಿಲ್ಲ, ಎರಡು ಕಿಂಡಿ ಅಣೆಕಟ್ಟುಗಳಿಗೆ ಅಂದಾಜು 1 ಕೋಟಿ ರೂ. ಬೇಕಾಗಬಹುದು. ಆದ್ದರಿಂದ ಅಂದಾಜು ಮೊತ್ತವನ್ನು ನಮೂದಿಸಿ ಪುನಃ ಜಿ.ಪಂ.ಗೆ ಕಳಿಸುವ ಎಂದು ಸದಸ್ಯರು ಆಗ್ರಹಿಸಿ,ನಿರ್ಣಯ ಕೈಗೊಳ್ಳಲಾಯಿತು.
ಪಂಚಾಯತ್‌ನಲ್ಲಿ ಆಧಾರ್ ತಿದ್ದುಪಡಿ ವ್ಯವಸ್ಥೆಗೆ ಜಾರಿಗೆ ಬರುವಂತೆ ಸದಸ್ಯ ಪ್ರಕಾಶ್ ರೈ ಆಗ್ರಹಿಸಿದರು. ಜಿಲ್ಲಾಧಿಕಾರಿಗಳಿಗೆ ಬರೆಯುವುದಾಗಿ ನಿರ್ಣಯಿಸಲಾಯಿತು.
ಉಪಾಧ್ಯಕ್ಷೆ ಭವಾನಿ ಕೆ., ಸದಸ್ಯರಾದ ಪ್ರಕಾಶ್ ರೈ, ದಿನೇಶ್ ಜಿ., ಭವಾನಿ, ರಕ್ಷಣ್ ರೈ ಕೆ., ಪದ್ಮಾವತಿ, ಪಾರ್ವತಿ ಎಂ., ಮೊಯಿದು ಕುಂಞಿ, ದಿವ್ಯಾ, ರಮೇಶ್ ಶೆಟ್ಟಿ, ಜಗನ್ನಾಥ ರೈ, ಐತ್ತಪ್ಪ ವೈ.ಜಿ., ಶಾಲಿನಿ, ಪುಷ್ಪಲತಾ ಉಪಸ್ಥಿತರಿದ್ದರು. ಪಿಡಿಒ ಶಾಂತಾ ರಾಮ ಎನ್. ಸ್ವಾಗತಿಸಿದರು. ಕಾರ್ಯದರ್ಶಿ ಬಾಬು ನಾಯ್ಕ ವಂದಿಸಿದರು. ಸಿಬಂದಿ ಸಂದೀಪ್ ಸಹಕರಿಸಿದರು.
ಪ್ರವಾಸಿ ತಾಣ ಬೆಂದ್ರ್ ತೀರ್ಥ ಅಭಿವೃದ್ಧಿಯಾಗಲಿ
ಬೆಂದ್ರ್ ತೀರ್ಥ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲಿರುವ ಕಟ್ಟಡದ ಉದ್ಘಾಟನೆ ಕಾರ್ಯ ನಡೆದಿಲ್ಲ. ಹಲವಾರು ಸಂದರ್ಶಕರು ದಿನಂಪ್ರತಿ ಬಂದು ಹೋಗುತ್ತಿದ್ದಾರೆ. ಇದರ ಬಗ್ಗೆ ಪ್ರವಾಸೋದ್ಯಮ ಇಲಾಖೆ ಗಮನಹರಿಸಿ ಅಭಿವೃದ್ಧಿಗೊಳಿಸುವಂತೆ ಸದಸ್ಯರಾದ ರಕ್ಷಣ್ ರೈ, ರಮೇಶ್ ಶೆಟ್ಟಿ, ಪ್ರಕಾಶ್ ರೈ, ಜಗನ್ನಾಥ ರೈ ಆಗ್ರಹಿಸಿದರು. ಅನಂತರ ಚರ್ಚೆ ನಡೆದು, ಈ ಬಗ್ಗೆ ಶಾಸಕರಿಗೆ, ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯುವುದಾಗಿ ತೀರ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.