ಪುಂಜಾಲಕಟ್ಟೆ: ಬ್ರಹ್ಮಕಲಶೋತ್ಸವ ಸಂಭ್ರಮ
Team Udayavani, May 16, 2019, 5:45 AM IST
ಪುಂಜಾಲಕಟ್ಟೆ: ತುಳುನಾಡಿನ ಗರೋಡಿಗಳಲ್ಲಿ ಅತ್ಯಂತ ಕಾರಣಿಕಗಳಲ್ಲೊಂದಾಗಿ, ಭಕ್ತರ ಇಷ್ಟಾರ್ಥ ಸಿದ್ಧಿಸುತ್ತಿರುವ ಪುಣ್ಯಕ್ಷೇತ್ರವೆಂದು ಪ್ರಸಿದ್ಧಿ ಪಡೆದಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮ ಬೈದರ್ಕಳ ಗರೋಡಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿದ್ದು, ಮೇ 17ರಿಂದ ಬ್ರಹ್ಮಕಲಶೋತ್ಸವ ಜರಗಲಿದೆ
ಐತಿಹಾಸಿಕ ಹಿನ್ನೆಲೆ
ಕಕ್ಯಪದವು ಗರೋಡಿ ವಿಶೇಷ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಅಸಮಾನತೆ, ಅನ್ಯಾಯಗಳ ವಿರುದ್ಧ ಹೋರಾಡಿ ದೈವತ್ವವನ್ನು ಏರಿದ ಅವಳಿ ವೀರ ಪುರುಷ ರಾದ ಕೋಟಿ ಚೆನ್ನಯರು ಬಾಳಿ ಬದುಕುತ್ತಿದ್ದ ಕಾಲಘಟ್ಟದಲ್ಲಿ ಅವರಿಂದಲೇ ಸ್ಥಾಪಿಸಲ್ಪಟ್ಟಿತು ಎನ್ನ ಲಾದ ತುಳುನಾಡಿನ 66 ಮೂಲ ಗರೋಡಿಗಳಲ್ಲಿ ಕಕ್ಯಪದವು ಗರೋಡಿಯೂ ಒಂದು ಎನ್ನುವುದು ಇಲ್ಲಿನ ವಿಶೇಷತೆ. ಕ್ರೀಡಾಪ್ರೇಮಿಗಳಾಗಿದ್ದ ಅವರಿಂದ ಸ್ಥಾಪಿತವಾದ ಕ್ರೀಡಾ ಮೈದಾನದ ಸ್ವರೂಪದಲ್ಲಿರುವ ಏಕೈಕ ಗರೋಡಿ ಎನ್ನುವುದು ಇಲ್ಲಿನ ಹೆಗ್ಗಳಿಕೆ.
ಉಳಿ, ಮಣಿನಾಲ್ಕೂರು, ಸರಪಾಡಿ, ಕಾವಳ ಮೂಡೂರು, ದೇವಸ್ಯಪಡೂರು, ತೆಂಕಕಜೆಕಾರು, ಪುತ್ತಿಲ, ಬಾರ್ಯ, ತೆಕ್ಕಾರು ಗ್ರಾಮಗಳ ವ್ಯಾಪ್ತಿಯ ಭಕ್ತರ ಸಹಿತ ಊರಪರವೂರ ಅಪಾರ ಭಕ್ತರ ಆರಾಧನಾಲಯವಾಗಿ ಕಕ್ಯಪದವು ಗರೋಡಿ ಪ್ರಸಿದ್ಧಿ ಪಡೆದಿದೆ. ಸುತ್ತಮುತ್ತಲಿನ ಊರಿನ ಜನತೆಗೆ ಭಕ್ತಿಭಾವೈಕ್ಯದ, ಕಾರಣಿಕದ ಪವಿತ್ರ ತಾಣ. ಇಲ್ಲಿನ ಉತ್ಸವಗಳೆಂದರೆ ಊರಿಗೆ ಊರೇ ಹಬ್ಬದ ವಾತಾವರಣ. ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸಿ, ಪ್ರಾರ್ಥಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಿರುವುದು ಅನಾದಿ ಕಾಲದಿಂದ ನಡೆದುಕೊಂಡ ಪದ್ಧತಿ. ಕ್ಷೇತ್ರದಲ್ಲಿ ಬೆರ್ಮೆರ್, ಕೋಟಿ ಚೆನ್ನಯರ ಜತೆಯಲ್ಲಿ ಗ್ರಾಮದೈವ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ದೈವೊಂಕುಲು, ಮಾಯಂದಾಲ್ ಪ್ರಧಾನ ಶಕ್ತಿಗಳಾಗಿ ಭಕ್ತರಿಂದ ಆರಾಧಿಸಲ್ಪಡುತ್ತಿದ್ದಾರೆ.
ಕ್ಷೇತ್ರದ ಆಸ್ರಣ್ಣ ರಾಜೇಂದ್ರ ಅರ್ಮುಡ್ತಾಯರ ಮುಂದಾಳತ್ವದಲ್ಲಿ, ಶ್ರೀನಿವಾಸ ಅರ್ಮುಡ್ತಾಯರ ಮಾರ್ಗದರ್ಶನದಲ್ಲಿ, ತಾಂತ್ರಿಕ ತಜ್ಞ ಪ್ರಮಲ್ ಕುಮಾರ್ ಕಾರ್ಕಳ ಮತ್ತು ವಾಸ್ತುಶಿಲ್ಪಿ ಸದಾಶಿವ ಗುಡಿಗಾರ್ ಅವರ ಮಾರ್ಗದರ್ಶನದಲ್ಲಿ ವಿಶಿಷ್ಠ ವಿನ್ಯಾಸದ ಅತ್ಯಂತ ಅಪರೂಪದ ಕಲಾತ್ಮಕ ತೌಳವ ದ್ರಾವಿಡ ಶೈಲಿಯ ಗರೋಡಿ ನಿರ್ಮಾಣಗೊಂಡಿದ್ದು, ಪ್ರತಿಷ್ಠೆ, ಬ್ರಹ್ಮಕಲಶಾದಿಗಳನ್ನು ಅರ್ಥಪೂರ್ಣವಾಗಿ, ವೈಭವಪೂರ್ಣವಾಗಿ ನಡೆಸಲು ಸಮಿತಿ ತೀರ್ಮಾನಿಸಿದೆ.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪುನರ್ ನಿರ್ಮಾಣ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ, ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ, ಚಿತ್ತರಂಜನ್ ಕಂಕನಾಡಿ, ರೋಹಿನಾಥ ಪಾದೆ ಸಂಚಾಲಕರಾಗಿ, ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್ ಕಾರ್ಯಾಧ್ಯಕ್ಷರಾಗಿ, ಕೆ. ಮಾಯಿಲಪ್ಪ ಸಾಲ್ಯಾನ್ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದು, ಜತೆಗೆ ವಿವಿಧ ಸಮಿತಿ ಸದಸ್ಯರು ಬ್ರಹ್ಮಕಲಶೋತ್ಸವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.