Puttur: ಸಜ್ಜಾಗುತ್ತಿದೆ ಆನೆಮಜಲು ಕೋರ್ಟ್ ಸಂಕೀರ್ಣ
ಪುತ್ತೂರು ನಗರದಿಂದ 6 ಕಿ.ಮೀ. ದೂರದಲ್ಲಿ 51 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ; 2019ರಲ್ಲಿ ಆರಂಭವಾದ ಕಾಮಗಾರಿ ಡಿಸೆಂಬರ್‌ಗೆ ಪೂರ್ಣ; ಜನವರಿಯಿಂದ ಕಲಾಪ?
Team Udayavani, Nov 19, 2024, 12:56 PM IST
ಪುತ್ತೂರು: ಎಲ್ಲವೂ ಅಂದುಕೊಂಡಂತೆ ಸಾಗಿದರೆ ಹೊಸ ವರ್ಷದ ಆರಂಭದಲ್ಲಿ ಕೋರ್ಟ್ ಕಲಾಪಗಳೆಲ್ಲವೂ ಪುತ್ತೂರು ನಗರದ ಕೇಂದ್ರ ಸ್ಥಾನದಿಂದ ಆರು ಕಿ.ಮೀ. ದೂರದಲ್ಲಿರುವ ಆನೆಮಜಲಿನಲ್ಲಿ ನಡೆಯಲಿದೆ.
ಐವತ್ತೂಂದು ಕೋ.ರೂ.ವೆಚ್ಚದಲ್ಲಿ ಆನೆಮಜಲಿನಲ್ಲಿ ನಿರ್ಮಾಣ ಗೊಳ್ಳುತ್ತಿರುವ ನಾಲ್ಕು ಮಹಡಿಯ ನ್ಯಾಯಾಲಯ ಸಂಕೀರ್ಣದ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಎರಡು ಹಂತದಲ್ಲಿ ನಡೆದ ಕಾಮಗಾರಿಯ ಪೈಕಿ ಕೊನೆಯ ಹಂತದ ಕಾಮಗಾರಿ ಲೋಕೋ ಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಪ್ರಗತಿಯಲ್ಲಿದೆ. ಶೇ.95 ರಷ್ಟು ಪೂರ್ಣಗೊಂಡಿದ್ದು ಅಂತಿಮ ಹಂತದ ಕೆಲಸ ಸಾಗುತ್ತಿದೆ.
ಮೊದಲ ಹಂತ ಮುಕ್ತಾಯ
ಪುತ್ತೂರು-ಉಪ್ಪಿನಂಗಡಿ ಸಂಪರ್ಕ ರಸ್ತೆಯಿಂದ ಕವಲೊಡೆದಿರುವ ಆನೆಮಜಲಿನಲ್ಲಿ ಈ ಕಟ್ಟಡ ನಿರ್ಮಾಣ ಹಂತದಲ್ಲಿದೆ. ರಸ್ತೆಯಿಂದ ಸುಮಾರು 300 ಮೀ.ನಷ್ಟು ದೂರದಲ್ಲಿದೆ. ಒಟ್ಟು 51 ಕೋ.ರೂ.ವೆಚ್ಚದ ಕಾಮಗಾರಿಯನ್ನು ಎರಡು ಹಂತದಲ್ಲಿ ಕೈಗೆತ್ತಿಕೊಂಡು 2018 ನ. 10 ರಂದು ಮೊದಲ ಹಂತದ 25 ಕೋ. ರೂ. ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಟೆಂಡರ್ ವಿಳಂಬವಾದ ಕಾರಣ ಕಾಮಗಾರಿ ಪ್ರಾರಂಭ ಪ್ರಕ್ರಿಯೆ ತಡವಾಗಿ ಕರಾರಿನ ಪ್ರಕಾರ 2019 ಮೇ 11 ರಂದು ಕಾಮಗಾರಿ ಪ್ರಾರಂಭಗೊಂಡಿತ್ತು. ಎರಡು ವರ್ಷ ಕಾಮಗಾರಿ ನಡೆದು 2021 ರಲ್ಲಿ ಪೂರ್ಣಗೊಂಡಿತ್ತು. ಮೊದಲ ಹಂತದಲ್ಲಿ ನ್ಯಾಯಾಲಯ ಕಟ್ಟಡದ ಮೊದಲ ಎರಡು ಅಂತಸ್ತು ಹಾಗೂ ವಕೀಲರ ಸಂಘ, ಜಿಲ್ಲಾ ನ್ಯಾಯಾಂಗ ಇಲಾಖೆಯ ಸಹಭಾಗಿತ್ವದಲ್ಲಿ 3 ಕೋ.ರೂ.ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡದ ಪಕ್ಕದಲ್ಲೇ ನಾಲ್ಕು ಅಂತಸ್ತಿನ ವಕೀಲರ ಸಂಘದ ಕಚೇರಿ ಕಟ್ಟಡ ನಿರ್ಮಿಸಲಾಯಿತು. 2021 ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಅಬ್ದುಲ್ ನಜೀರ್ ಅವರು ಪ್ರಥಮ ಹಂತದ ಕಾಮಗಾರಿ, ವಕೀಲರ ಭವನ ಉದ್ಘಾಟನೆ ಹಾಗೂ 2 ನೇ ಹಂತದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಎರಡನೆ ಹಂತ
2021 ರಲ್ಲಿ ಒಟ್ಟು 4 ಮಹಡಿಯ ನ್ಯಾಯಾಲಯ ಸಂಕೀರ್ಣದ ಉಳಿದ ಎರಡು ಅಂತಸ್ತು ಹಾಗೂ ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣದ 26 ಕೋ.ರೂ.ವೆಚ್ಚದ ಕಾಮಗಾರಿ ಪ್ರಾರಂಭಿಸಲಾಯಿತು. ಸುಸಜ್ಜಿತ ಸಂಪರ್ಕ ರಸ್ತೆ ನಿರ್ಮಾಣಕ್ಕೂ ಚಾಲನೆ ನೀಡಲಾಯಿತು. ಮೂರು ವರ್ಷದಿಂದ ನಡೆಯುತ್ತಿರುವ ಈ ಕಾಮಗಾರಿ ಇದೀಗ ಅಂತಿಮ ಹಂತಕ್ಕೆ ಬಂದಿದ್ದು ರಸ್ತೆ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಕಟ್ಟಡಕ್ಕೆ ಬಣ್ಣ ಬಳಿಯುವ ಕಾರ್ಯ, ಚರಂಡಿ ನಿರ್ಮಾಣ ಸೇರಿದಂತೆ ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಕ್ಕೆ 2024 ಡಿಸೆಂಬರ್ ತಿಂಗಳ ತನಕ ಕಾಲಾವಕಾಶ ಇದೆ.
ಬ್ರಿಟಿಷ್ ಕಾಲದ ಕಟ್ಟಡ
ಕೋರ್ಟ್ ರಸ್ತೆ ಪುತ್ತೂರಿನ ಹೆಗ್ಗುರುತು. ಈ ಹೆಸರು ಹತ್ತೂರಿನಲ್ಲಿಯು ಜನಜನಿತ. ಮಿನಿ ವಿಧಾನಸೌಧ ಸಮೀಪ ಬ್ರಿಟಿಷ್ ಕಾಲದ ನ್ಯಾಯಾಲಯ ಕಟ್ಟಡದಲ್ಲಿ ಕೆಲವು ಕೋರ್ಟ್ ಕಲಾಪಗಳು ಇಂದಿಗೂ ನಡೆಯುತ್ತಿದೆ. ಅದು ಬ್ರಿಟಿಷರ ಕಾಲದ ಪ್ರವಾಸಿ ಮಂದಿರವಾಗಿತ್ತು ಅನ್ನುತ್ತಿದೆ ಇತಿಹಾಸ. ಇನ್ನೊಂದೆಡೆ ನಗರಸಭೆಗೆ ತಾಗಿಕೊಂಡಿರುವ ನ್ಯಾಯಾಲಯದ ಕಟ್ಟಡ ಅನಂತರ ನಿರ್ಮಾಣ ಆದದ್ದು. ಬಹುತೇಕ ಕೋರ್ಟ್ ಕಲಾಪಗಳು ಇಲ್ಲಿಯೇ ನಡೆಯುತ್ತಿದೆ. ಆನೆಮಜಲಿನಲ್ಲಿ ಕಟ್ಟಡ ಲೋಕಾರ್ಪಣೆ ಆದ ಬಳಿಕ ಈ ಎರಡು ಕಟ್ಟದಲ್ಲಿ ನಡೆಯುವ ಕಲಾಪಗಳು ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ.
ಮಾದರಿ ಕೋರ್ಟ್ ಕಟ್ಟಡ
ನಾನು ಶಾಸಕನಾಗಿದ್ದ ಅವಧಿಯಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಅನುದಾನ ಮಂಜೂರಾಗಿತ್ತು. ಆ ಅವಧಿಯಲ್ಲಿಯೇ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ಎರಡನೆ ಹಂತದ ಕಾಮಗಾರಿಗೂ ಚಾಲನೆ ನೀಡಲಾಗಿತ್ತು. ಜಿಲ್ಲೆಯಲ್ಲಿ ಮಾದರಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಅಂದಿನ ಸರಕಾರ ಅನುದಾನ ನೀಡಿತ್ತು.
-ಸಂಜೀವ ಮಠಂದೂರು, ಮಾಜಿ ಶಾಸಕ, ಪುತ್ತೂರು
ಇದೀಗ ಎರಡನೆ ಹಂತದ ಕಾಮಗಾರಿ ಶೇ.95 ರಷ್ಟು ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ಪೂರ್ಣಕ್ಕೆ ಡಿಸೆಂಬರ್ ಕೊನೆ ತನಕ ಕಾಲಾವಕಾಶ ಇದೆ.
– ಕಾನಿಷ್ಕಚಂದ್ರ, ಸಹಾಯಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.