Puttur: ಬಲ್ನಾಡು ಉಳ್ಳಾಲ್ತಿ ಸನ್ನಿಧಿಗೆ ಭಜನೆಯ ನಡಿಗೆಗೆ 100 ವರ್ಷದ ಸಂಭ್ರಮ!
Team Udayavani, Jan 14, 2025, 12:58 PM IST
ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನ ಮಂದಿರದಿಂದ ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಮಣದ ಪರ್ವದಿನ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನ ಸನ್ನಿಧಿಗೆ ಭಜನೆಯೊಂದಿಗೆ ನಡಿಗೆ ನಡೆಯುತ್ತಿದೆ. ಈ ಸಂಪ್ರದಾಯಕ್ಕೆ ಈ ಬಾರಿ ನೂರನೇ ವರ್ಷದ ಸಂಭ್ರಮ.
ನೂರು ವರ್ಷದ ಹಿಂದೆ ಪುತ್ತೂರು ನಗರ ಪರಿಸರದಲ್ಲಿ ‘ಅಮ್ಮ’ ಎಂಬ ಸಾಂಕ್ರಾಮಿಕ ಕಾಯಿಲೆ ಆಕ್ರಮಿಸಿ ಹಲವರನ್ನು ಬಲಿ ತೆಗೆದುಕೊಂಡಿತ್ತು. ಮಹಾಮಾರಿ ರೋಗದಿಂದ ಪುರವಾಸಿಗಳು ಭಯಭೀತರಾಗಿದ್ದರು. ಇದೇ ಸಂದರ್ಭದಲ್ಲಿ ಬಲ್ನಾಡಿನಲ್ಲಿ ಶ್ರೀ ದಂಡನಾಯಕ ಉಳ್ಳಾಲ್ತಿ ದೈವದ ವಾರ್ಷಿಕ ನೇಮದ ದಿನ ಬಂದಿತ್ತು. ಊರ ಹಿರಿಯರು ನೇಮದ ವೇಳೆ ಬಲ್ನಾಡಿಗೆ ತೆರಳಿ ಊರಿಗೆ ಬಂದ ರೋಗದಿಂದ ಸಾವು ನೋವುಗಳ ಬಗ್ಗೆ ಅರಿಕೆ ಮಾಡಿ ಅಮ್ಮನಲ್ಲಿ ಕಾಪಾಡುವಂತೆ ಭಿನ್ನವಿಸಿಕೊಂಡರು. ಉಳ್ಳಾಲ್ತಿಯಮ್ಮ ತನ್ನ ನುಡಿಕಟ್ಟಿನಲ್ಲಿ ನಿತ್ಯ ಮುಸ್ಸಂಜೆಯಲ್ಲಿ ಭಜನೆಯನ್ನು ಆರಂಭಿಸಿ, ರೋಗ ಪೀಡಿತರ ಮನೆಯ ತುಳಸೀಕಟ್ಟೆಗೆ ಭಜನೆಯೊಂದಿಗೆ ಸುತ್ತು ಬನ್ನಿ ಮಕರ ಸಂಕ್ರಮಣದಂದು ಭಜನೆಯೊಂದಿಗೆ ಬಲಾ°ಡಿಗೆ ಬನ್ನಿ ಎಂಬ ಅಭಯವಾಣಿಯಾಯಿತು.
ಅಂದಿನಿಂದಲೇ ಎಲ್ಲರೂ ಸೇರಿ ಮುಸ್ಸಂಜೆಯಲಿ ಭಜನೆ ಆರಂಭಿಸಿದರು. ದಿನಕ್ಕೊಂದು ಭಾಗದ ಮನೆ ಮನೆಗಳಿಗೆ ನಗರ ಭಜನೆ ತೆರಳಿತು. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಇಳಿಮುಖವಾಗಿ ಅಮ್ಮ ಕಾಯಿಲೆಯೇ ಮಾಯವಾಯಿತು. ಜನರು ನಿಟ್ಟುಸಿರು ಬಿಟ್ಟರು.
ಅನಂತರ ಭಜನ ತಂಡದವರೆಲ್ಲಾ ಸೇರಿ ಮಹಾಲಿಂಗೇಶ್ವರ ದೇಗುಲದ ರಥದ ಕೊಟ್ಟಿಗೆ ಬಳಿ ಇರುವ ಕಟ್ಟಡದಲ್ಲಿ ಶಾರದಾ ಭಜನ ಮಂದಿರವನ್ನು ಆರಂಭಿಸಿದರು. ಅನಂತರ ನಡೆಯ ಸನಿಹ ಹೊಸ ಮಂದಿರ ನಿರ್ಮಿಸಲಾಯಿತು. ಪ್ರತೀ ವರ್ಷ ನಗರ ಭಜನೆಯೂ ನಡೆದು, ಬಲ್ನಾಡಿಗೆ ಮಕರ ಸಂಕ್ರಮಣದಂದು ಶೃಂಗೇರಿ ಶಾರದೆಯ ಭಾವಚಿತ್ರ ಸಹಿತ ಭಜನೆಯೊಂದಿಗೆ ತೆರಳುವ ಕ್ರಮ ಇಂದಿಗೂ ನಡೆಯುತ್ತಿದೆ.
ಪ್ರತಿವರ್ಷ ಭಂಡಾರ ಬರುವ ದಿನ ಉಳ್ಳಾಲ್ತಿ ಅಮ್ಮನಿಗೆ ಅಂಗಣದಲ್ಲಿ ಮಲ್ಲಿಗೆ ಕುಂಕುಮ ಕಾಣಿಕೆ ಸಲ್ಲಿಸಲಾಗುತ್ತದೆ. ಅಂದು ರಾತ್ರಿ ಮಹಾಲಿಂಗೈಶ್ವರ ದೇವರ ಬಲಿ ಸುತ್ತಿನಲ್ಲಿ ಭಜನ ಸುತ್ತು ನೆರವೇರಿಸಲಾಗುತ್ತದೆ.
ಸತ್ಯ ಘಟನೆ
ಸೀಮೆಯ ದೈವ ಎಂದೇ ಭಕ್ತರ ನಂಬಿಕೆಯ ಬಲ್ನಾಡಿನ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಇತಿಹಾಸದ ಅನೇಕ ಅಧ್ಯಯನ ಕತೆಗಳಲ್ಲಿ ಶ್ರೀಉಳ್ಳಾಲ್ತಿ ಅಮ್ಮನ ಕಾರಣಿಕ ಪ್ರಕಟಗೊಂಡ ಸತ್ಯ ಘಟನೆಯಿದು ಎಂದು ಧಾರ್ಮಿಕ ಅಧ್ಯಯನಕಾರ ಪಿ. ಜಿ. ಚಂದ್ರಶೇಖರ್‌ರಾವ್ ಹೇಳುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.