Puttur: ಅನುಮತಿ ಇಲ್ಲದ ಕಡೆ ಏರಿಯಾ ಸ್ಕೀಂನಲ್ಲಿ ಬಸ್
ಜನರ ಬೇಡಿಕೆ ಈಡೇರಿಸಲು ಕೆಎಸ್‌ಆರ್‌ಟಿಸಿ ಹೊಸ ಮಾರ್ಗ; ಗ್ರಾಮೀಣ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಅನುಕೂಲ
Team Udayavani, Jun 29, 2024, 12:07 PM IST
ಪುತ್ತೂರು: ಪುತ್ತೂರು ವಿಭಾಗದ ನಾಲ್ಕು ಡಿಪೋ ವ್ಯಾಪ್ತಿಯ ಕೆಲವು ಸೆಕ್ಟರ್‌ಗಳಲ್ಲಿ ಸರಕಾರಿ ಬಸ್ ಓಡಾಟಕ್ಕೆ ಅವಕಾಶ ಇಲ್ಲ. ಹಾಗಂತ ಅಲ್ಲಿ ಸರಕಾರಿ ಬಸ್ ಗೆ ಬೇಡಿಕೆ ಇದೆ. ಇದನ್ನು ಸಮದೂಗಿಸಲು ಏರಿಯಾ ಸ್ಕೀಂನಲ್ಲಿ ಅವಕಾಶ ಕೇಳಲಾಗುವುದು ಎಂದು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಲನಾಧಿಕಾರಿ ಮುರಳೀಧರ ಆಚಾರ್ಯ ತಿಳಿಸಿದ್ದಾರೆ.
ಉದಯವಾಣಿ ನಡೆಸಿದ ಬಸ್ ಅಭಿಯಾನದ ಭಾಗವಾಗಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸುಳ್ಯ ತಾಲೂಕಿನ ತೊಡಿಕಾನ ಮಾರ್ಗದಲ್ಲಿ ಸರಕಾರಿ ಬಸ್ ಓಡಾಟಕ್ಕೆ ಅವಕಾಶ ಇಲ್ಲ. ಅಲ್ಲಿ ಖಾಸಗಿ ಬಸ್ ಓಡಾಟ ಇದೆ. ಅಲ್ಲಿ ಪರ್ಮಿಟ್ ಪಡೆದು ಓಡಾಟ ಮಾಡಬೇಕಾದ ಕಾನೂನು ಇತ್ತು. ಇನ್ನು ಮುಂದೆ ಏರಿಯಾ ಸ್ಕೀಂನಲ್ಲಿ ಅರ್ಜಿ ಸಲ್ಲಿಸಿ ಸಂಚಾರಕ್ಕೆ ಅನುಮತಿ ಪಡೆಯಬಹುದು. ನಾವು ಆರ್‌ಟಿಎಗೆ ಅರ್ಜಿ ಕೊಟ್ಟಿದ್ದೇವೆ. ಅಲ್ಲಿ ಅನುಮತಿಗೆ ಅನುಮೋದನೆ ಆದ ತತ್‌ಕ್ಷಣ ಬಸ್ ಓಡಾಟಕ್ಕೆ ಅವಕಾಶ ಸಿಗಲಿದೆ. ಮುಡಿಪು, ಸಿದ್ಧಕಟ್ಟೆ, ವೇಣೂರು ಸೆಕ್ಟರ್ ಗಳಲ್ಲಿಯು ಅನುಮತಿ ಕೇಳಿದ್ದೇವೆ ಎಂದು ಹೇಳಿದರು.
ಅಂತಾರಾಜ್ಯ ಬಸ್ ಓಡಾಟಕ್ಕೆ ಅನುಮತಿ ಬೇಕು
ಪುತ್ತೂರು, ವಿಟ್ಲ, ಸುಳ್ಯ ಭಾಗಕ್ಕೆ ಕೇರಳ ರಾಜ್ಯಕ್ಕೆ ಒಳಪಟ್ಟ ಕಾಸರಗೋಡು ಗಡಿಭಾಗದಿಂದ ವಿದ್ಯಾರ್ಥಿಗಳು ಬರುತ್ತಾರೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬಸ್ ಓಡಾಟ ನಡೆಸಲು ಅನುಮತಿ ಬೇಕಿದೆ. ಪರ್ಮಿಟ್ ಸಿಕ್ಕರೆ ಮಾತ್ರ ಓಡಾಟ. ಅದಕ್ಕಾಗಿ ಎನ್‌ಕ್ಲೇವ್ ಅಡಿಯಲ್ಲಿ ಅನುಮತಿ ಪಡೆಯುವುದು. ಇದರಲ್ಲಿ ಹದಿನೈದು ಕಿ.ಮೀ. ವ್ಯಾಪ್ತಿಯೊಳಗೆ ಮಾತ್ರ ಅವಕಾಶ ಸಿಗುತ್ತದೆ.
ಕರ್ನಾಟಕ ಭಾಗದಿಂದ ಸ್ವಲ್ಪ ಭಾಗ ಕೇರಳ ಪ್ರವೇಶಿಸಿ ಅನಂತರ ಕರ್ನಾಟಕಕ್ಕೆ ಸಂಚಾರ ಇರುತ್ತದೆ. ಉದಾಹರಣೆಗೆ ಸಾಲೆತ್ತೂರು-ಮುಡಿಪು-ಮಂಗಳೂರು ನಡುವಿನ ಸಂಚಾರದಲ್ಲಿ 2 ಕಿ.ಮೀ. ಭಾಗ ಕೇರಳ ಬರುತ್ತದೆ. ಇದಕ್ಕೆ ಎನ್‌ಕ್ಲೇವ್ ಪರ್ಮಿಟ್ ಸಾಕು. 15 ಕಿ.ಮೀ.ಗಿಂತ ಹೆಚ್ಚಾಗಿ ಬೇರೆ ರಾಜ್ಯದಲ್ಲಿ ಸಂಚಾರ ಇದ್ದರೆ ಆಗ ಅಂತಾರಾಜ್ಯ ನಡುವೆ ಒಪ್ಪಂದ ಬರುತ್ತದೆ.
ಎನ್‌ಕ್ಲೇವ್ ಮೂಲಕ ಸಲ್ಲಿಸಿದ ಬೇಡಿಕೆಗೆ ಎಸ್‌ಟಿಎ ಅನುಮತಿ ನೀಡಬೇಕು. ಅಲ್ಲಿ ಪರ್ಮಿಟ್ ಕೊಟ್ಟ ಅನಂತರ ಟೈಮಿಂಗ್ಸ್‌ಗೆ ಸಭೆ ಕರೆಯುತ್ತಾರೆ. ಆಗ ಖಾಸಗಿ ಬಸ್‌ನವರು ಟೈಮಿಂಗ್ಸ್ ಆಕ್ಷೇಪ ಸಲ್ಲಿಸಿದರೆ ಮಾತ್ರ ಸ್ವಲ್ಪ ಸಮಸ್ಯೆ ಆಗುತ್ತದೆ. ಕರ್ನಾಟಕ-ಕೇರಳ ಭಾಗದಲ್ಲಿ ಆ ಸಮಸ್ಯೆ ಇಲ್ಲ ಎಂದು ವಿವರಿಸಿದರು.
ನೇತಾಡುವುದನ್ನು ತಪ್ಪಿಸಲು ಬಾಗಿಲು
ಗ್ರಾಮಾಂತರ ಪ್ರದೇಶದಲ್ಲಿ ವಿದ್ಯಾರ್ಥಿಗಳು ಮೆಟ್ಟಿಲಿನಲ್ಲಿ ನಿಂತು ನೇತಾಡಿಕೊಂಡು ಹೋಗುತ್ತಿರುವ ಬಗ್ಗೆ ಉದಯವಾಣಿ ಅಭಿಯಾನದಲ್ಲಿ ಗಮನಕ್ಕೆ ಬಂದಿದೆ. ಈ ಹಿಂದೆ ಬಸ್‌ನಲ್ಲಿ ಡೋರ್ ಇಲ್ಲದ ಸಮಸ್ಯೆ ಇತ್ತು. ಈಗ ಪ್ರತೀ ಬಸ್‌ಗೂ ಡೋರ್ ಅಳವಡಿಸಲಾಗುತ್ತಿದೆ. ಕೆಲವು ದಿನಗಳಲ್ಲಿ ಎಲ್ಲ ಬಸ್‌ಗಳಲ್ಲಿ ಅಟೋಮೆಟಿಕ್ ಡೋರ್ ವ್ಯವಸ್ಥೆ ಮಾಡುತ್ತೇವೆ.
ಎಕ್ಸ್‌ಪ್ರೆಸ್‌ಗಳಲ್ಲೂ ಹೋಗಬಹುದು..!
ಕೆಲವು ಗ್ರಾಮಾಂತರ ರೂಟ್‌ಗಳಲ್ಲೂ ಎಕ್ಸ್ ಪ್ರಸ್ ಬಸ್ ಓಡಾಟ ಇದೆ. ಅವುಗಳಿಗೆ ಕೆಲವೆಡೆ ನಿಲುಗಡೆ ಇದೆ. ಅದರಲ್ಲಿಯು ವಿದ್ಯಾರ್ಥಿಗಳು ಸಂಚರಿಸಬಹುದು. ಆದರೆ ವಿದ್ಯಾರ್ಥಿಗಳು ಅದನ್ನು ಬಳಸುತ್ತಿಲ್ಲ. ಲೋಕಲ್ ಬಸ್ ಅನ್ನೇ ಕಾಯುತ್ತಾರೆ. ಇದರಿಂದ ಲೋಕಲ್ ಬಸ್ ಗಳಲ್ಲಿ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ಎಕ್ಸ್‌ಪ್ರೆಸ್‌ಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು.
ಮಂಗಳೂರು-ಸುಬ್ರಹ್ಮಣ್ಯ ಮಾರ್ಗದಲ್ಲಿ ಒತ್ತಡ
ಸುಬ್ರಹ್ಮಣ್ಯ-ಪುತ್ತೂರು ನಡುವಿನ ಒತ್ತಡಕ್ಕಿಂತಲೂ ಮಂಗಳೂರು-ಸುಬ್ರಹ್ಮಣ್ಯ ನಡುವಿನ ಒತ್ತಡ ಹೆಚ್ಚಾಗಿದೆ. ಪುತ್ತೂರು-ಸುಬ್ರಹ್ಮಣ್ಯ ನಡುವೆ ಎರಡು ರೂಟ್ ಇದೆ. ಒಂದು ಕಾಣಿಯೂರು-ಪಂಜ ಮಾರ್ಗವಾಗಿ ಸುಬ್ರಹ್ಮಣ್ಯ, ಇನ್ನೊಂದು ಕುಂಬ್ರ -ಬೆಳ್ಳಾರೆ -ಪಂಜ-ಸುಬ್ರಹ್ಮಣ್ಯ. ಈ ರೂಟ್‌ಗಳಲ್ಲಿ ಹೆಚ್ಚುವರಿ ಬಸ್ ಓಡಾಟದ ಬಗ್ಗೆ ಚಿಂತನೆ ನಡೆಸುತ್ತೇವೆ. ಸುಬ್ರಹ್ಮಣ್ಯದಲ್ಲಿ ಡಿಪೋ ನಿರ್ಮಾಣವಾದರೆ ಸಹಜವಾಗಿ ಪುತ್ತೂರಿನ ಒತ್ತಡ ತಗ್ಗಿ ಸಂಚಾರಕ್ಕೆ ಅನುಕೂಲವಾಗಲಿದೆ.
ಶಾಲಾ ಸಮಯಗಳು ಬೇರೆ ಬೇರೆ!
ಶಾಲೆ, ಕಾಲೇಜು ಆರಂಭಕ್ಕೆ ಸರಿಯಾಗಿ ಬಸ್ ಓಡಾಟ ಇಲ್ಲ ಅನ್ನುವ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯ ಗಮನಿಸಿದ್ದೇವೆ. ಕೆಲವು ವರ್ಷಗಳ ಹಿಂದೆ ಶಾಲಾ, ಕಾಲೇಜು ಟೈಮ್ ಆಧಾರದಲ್ಲೇ ಬಸ್ ಓಡಾಟಕ್ಕೆ ಸಮಯ ನಿಗದಿಪಡಿಸಲಾಗಿತ್ತು. ಆದರೆ ಇತ್ತೀಚೆಗೆ ಶಾಲಾ, ಕಾಲೇಜಿನ ಬೆಳಗ್ಗೆ ಪ್ರಾರಂಭದ ಟೈಮ್ ಬದಲಾವಣೆ ಆಗಿದೆ. ಇದರಿಂದ ಸಮಯ ಹೊಂದಾಣಿಕೆ ಆಗುತ್ತಿಲ್ಲ. ಕೆಲವು ರೂಟ್‌ಗಳಲ್ಲಿ ಹೊಸ ಶಾಲೆಗಳು ಪ್ರಾರಂಭಗೊಂಡಿದೆ. ಒಂದು ಶಾಲೆಗೆ ಬೇಕಾಗಿ ಟೈಮ್ ಚೇಂಜ್ ಮಾಡಿದರೆ ಇನ್ನೊಂದು ಶಾಲೆಗೆ ಸಮಸ್ಯೆ ಆಗುತ್ತದೆ. ಹೆಚ್ಚುವರಿ ಬಸ್ ಓಡಾಟದ ಮೂಲಕವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕಾಗಿ ಸೆಪ್ಟಂಬರ್ ತನಕ ಕಾಯಬೇಕು.
ಕಡಬ ಡಿಪೋ ಸ್ಥಾಪನೆಗೆ ಪ್ರಯತ್ನ
ಕಡಬ ತಾಲೂಕು ಕೇಂದ್ರವಾಗಿದ್ದು ಕಡಬ, ಸುಬ್ರಹ್ಮಣ್ಯ ಜನದಟ್ಟಣೆಯ ಪ್ರದೇಶವಾಗಿದೆ. ಸುಳ್ಯ-ಪಂಜ-ಕಡಬ ನಡುವೆ ಬಸ್ ಓಡಾಟದ ಬೇಡಿಕೆ ಇರುವುದು ನಿಜ. ಆ ರೂಟ್‌ಗಳಲ್ಲಿ ಕೋವಿಡ್ ಪೂರ್ವದಲ್ಲಿ ಸಂಚರಿಸುತ್ತಿದ್ದ ಎಲ್ಲ ಬಸ್‌ಗಳು ಈಗ ಓಡಾಟ ನಡೆಸುತ್ತಿವೆ. ಕಡಬವೂ ಪುತ್ತೂರು ಡಿಪೋ ವ್ಯಾಪ್ತಿಯೊಳಗಿದೆ. ಕಡಬ ತಾಲೂಕಿಗೆ ಹೊಸ ಡಿಪೋದ ಅಗತ್ಯ ಇದ್ದು ಕಡಬ, ಸುಬ್ರಹ್ಮಣ್ಯದಲ್ಲಿ ಜಾಗ ಹುಡುಕಾಟ ನಡೆಯುತ್ತಿದೆ. ಅಲ್ಲಿ ಡಿಪೋ ನಿರ್ಮಾಣವಾದರೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ.
ಬೆಟ್ಟಂಪಾಡಿ ಕಾಲೇಜಿಗೆ ಬಸ್
ಸುಳ್ಯಪದವಿನಿಂದ ಬಸ್ ಓಡಾಟ ಬೇಕು ಎಂದು ಬೆಟ್ಟಂಪಾಡಿ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಬೇಡಿಕೆ ಇತ್ತು. ಮುಂದಿನ ತಿಂಗಳಿನಿಂದ ನೂತನ ಶೈಕ್ಷಣಿಕ ತರಗತಿ ಆರಂಭವಾಗುವ ಸಾಧ್ಯತೆ ಇದೆ. ತರಗತಿ ಆರಂಭಗೊಂಡ ತತ್‌ಕ್ಷಣವೇ ಆ ರೂಟ್‌ನಲ್ಲಿ ಹೆಚ್ಚುವರಿ ಬಸ್ ಓಡಾಟ ಪ್ರಾರಂಭಿಸಲಾಗುವುದು. ಅದಕ್ಕೆ ವ್ಯವಸ್ಥೆ ಪೂರ್ಣಗೊಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.