ಲಿಂಕ್ ರಸ್ತೆಯಾದರೆ ಊರು ಅಭಿವೃದ್ಧಿ
ನಗರಸಭೆ ವ್ಯಾಪ್ತಿಗೆ ಮುಕ್ಕಾಲು ಭಾಗ, ಕಾಲು ಭಾಗ ಗ್ರಾ.ಪಂ. ತೆಕ್ಕೆಯಲ್ಲಿರುವ ಬನ್ನೂರು
Team Udayavani, Jul 25, 2022, 9:44 AM IST
ಪುತ್ತೂರು: ನಗರಸಭೆ ವ್ಯಾಪ್ತಿಗೆ ಮುಕ್ಕಾಲು ಭಾಗ ಸೇರಿ ಉಳಿದ ಕಾಲು ಭಾಗವಷ್ಟೇ ಗ್ರಾ.ಪಂ. ತೆಕ್ಕೆಯಲ್ಲಿರುವ ಗ್ರಾಮ ಬನ್ನೂರು.
ಈ ಊರಿಗೆ ಬನ್ನೂರು ಹೆಸರು ಬಂದ ಹಿನ್ನೆಲೆಯೇ ವಿಶಿಷ್ಟವಾದದು. ಅನಾದಿ ಕಾಲದಲ್ಲಿ ಮೈಸೂರು ಭಾಗದಿಂದ ಈ ಗ್ರಾಮಕ್ಕೆ ಬಂದ ಕುಟುಂಬದ ಮನೆಗೆ ಬನ್ನೂರು ಎಂಬ ಹೆಸರು ಇತ್ತಂತೆ. ಅನಂತರ ಇದೇ ಹೆಸರು ಇಡೀ ಗ್ರಾಮಕ್ಕೆ ವಿಸ್ತಾರವಾಯಿತು ಅನ್ನುತ್ತಿದೆ ಇಲ್ಲಿನ ಇತಿಹಾಸ.ಲಿಂಕ್ ರಸ್ತೆ, ಶ್ಮಶಾನ ಇಲ್ಲದಿರುವುದು, ಹೋಬಳಿ ಕೇಂದ್ರದ ಸಂಚಾರ ಸಂಕಟ ಈ ಗ್ರಾಮದ ಪ್ರಮುಖ ಸಮಸ್ಯೆ. ಇವು ಬಗೆಹರಿದರೆ ಮಾತ್ರ ಗ್ರಾಮದ ಅಭಿವೃದ್ಧಿಯ ಬಾಗಿಲು ತೆರೆದು ಕೊಳ್ಳ ಬಹುದು ಅನ್ನುವುದು ಗ್ರಾಮಸ್ಥರ ಅಭಿಪ್ರಾಯ.
10 ಕಿ.ಮೀ. ಸುತ್ತಾಟ!
ನಗರದ ಸನಿಹದಲ್ಲಿರುವ ಈ ಗ್ರಾಮಕ್ಕೆ ಪೇಟೆ ಸಂಪರ್ಕಿಸುವ ಲಿಂಕ್ ರಸ್ತೆ ಇದ್ದರೂ ಅಪೂರ್ಣ ಸ್ಥಿತಿಯಲ್ಲೇ ಇದೆ.
ಬನ್ನೂರು ಗ್ರಾಮದ ಕಜೆ-ಅಡೆಂಚಿಲಡ್ಕ ಕುಂಟ್ಯಾನ ದೇವಸ್ಥಾನದಿಂದ ಬನ್ನೂರು ಕಟ್ಟೆಯನ್ನು ಸಂಪರ್ಕಿಸುವ ರಸ್ತೆಯ ಕುಂಟ್ಯಾನ ದೇವಸ್ಥಾನದ ತನಕ ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿ ಆಗಿದೆ. ಆದರೆ ಕುಂಟ್ಯಾನದಿಂದ ಅನಂತರ 600 ಮೀಟರ್ ರಸ್ತೆ ಖಾಸಗಿ ಜಾಗದಲ್ಲಿ ಹೋಗುತಿದ್ದು ಅದರ ಅಭಿವೃದ್ಧಿಗೆ ಅಡ್ಡಿಯಾಗಿದೆ. ಈ ರಸ್ತೆ ನಿರ್ಮಾಣವಾದಲ್ಲಿ ಆರುವಾರ, ಸೇಡಿಯಾಪು, ಕುಂಬಾಡಿ, ಕಜೆ, ಅಡೇಂಚಿಲಡ್ಕ, ಕುಂಟ್ಯಾನದ ನಿವಾಸಿಗಳು ಮೂರು ಕಿ.ಮೀ. ದೂರದಲ್ಲಿರುವ ಪುತ್ತೂರು ಪೇಟೆಯನ್ನು ಸುಲಭವಾಗಿ ಸಂಪರ್ಕಿಸಬಹುದಾಗಿದೆ. ಪ್ರಸ್ತುತ ಈ ಭಾಗದ ಜನರು ಸೇಡಿಯಾಪು ಜಂಕ್ಷನ್ ಗೆ ಬಂದು 8ರಿಂದ 10 ಕಿ.ಮೀ.ಸುತ್ತಾಟ ನಡೆಸಿ ಪೇಟೆ ಸೇರುತ್ತಿದ್ದಾರೆ. ಈ ರಸ್ತೆ ಸಂಪೂರ್ಣಗೊಂಡಲ್ಲಿ ಬನ್ನೂರು ಗ್ರಾಮಕ್ಕೆ ಪುತ್ತೂರು ನಗರದಿಂದ ಸಂಪರ್ಕ ರಸ್ತೆ ಆಗಲಿದೆ. ಪುತ್ತೂರಿನಿಂದ ಬನ್ನೂರುಕಟ್ಟೆ- ಕುಂಟ್ಯಾನ-ಕಜೆ-ಸೇಡಿಯಾಪು ಆಗಿ ಉಪ್ಪಿನಂಗಡಿ ಸಂಪರ್ಕಿಸಬಹುದು. ಅದೇ ರೀತಿ ಬನ್ನೂರು ಕಟ್ಟೆ, ಕುಂಟ್ಯಾನ, ಕಜೆ, ಹನುಮಾಜೆಯಾಗಿ ಕಡಂಬು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75 ಅನ್ನು ಸಂಪರ್ಕಿಸಬಹುದು. ಈ ರಸ್ತೆಯಿಂದ ನಾಲ್ಕು ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಬನ್ನೂರು ಗ್ರಾಮಕ್ಕೆ ಮುಕುಟ ಪ್ರಾಯವಾಗಿ ಸುಮಾರು 70 ಸೆಂಟ್ಸ್ ವಿಸ್ತೀರ್ಣದ ಕೆರೆ ಇದೆ. ಸದಾಶಿವ ತೀರ್ಥ ಎಂಬ ಹೆಸರಿನ ಈ ಕೆರೆಯನ್ನು ಕಳೆದ ವರ್ಷ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ 5 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತಿ ಅಭಿವೃದ್ಧಿ ಪಡಿಸಲಾಗಿತ್ತು. ಭವಿಷ್ಯದಲ್ಲಿ ನರೇಗಾ ಹಾಗೂ ಇನ್ನಿತರ ಯೋಜನೆಗಳ ಮೂಲಕ ಇದನ್ನು ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸುವ ಪ್ರಯತ್ನ ಸ್ಥಳೀಯಾಡಳಿತದ್ದಾಗಿದೆ.
ಹೋಬಳಿ ಕೇಂದ್ರದ ಬೇಡಿಕೆ
ಪಟ್ನೂರು, ಚಿಕ್ಕಮುಟ್ನೂರು ಗ್ರಾಮದ ಹಾಗೆ ಬನ್ನೂರು ಗ್ರಾಮವು ಹೋಬಳಿ ಕೇಂದ್ರಕ್ಕೆ ಉಪ್ಪಿನಂಗಡಿಯನ್ನು ಆಶ್ರಯಿಸಬೇಕಿದೆ. ಕಸಬಾ ಹೋಬಳಿಯಿಂದ ಮೂರು ಕಿ.ಮೀ.ದೂರದಲ್ಲಿ ಇರುವ ಈ ಗ್ರಾಮದ ಜನರು 10 ಕಿ.ಮೀ.ದೂರದ ಉಪ್ಪಿನಂಗಡಿಗೆ ಹೋಗಬೇಕು. ಸಮುದಾಯ ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರಕ್ಕೂ ಉಪ್ಪಿನಂಗಡಿಗೆ ಸಂಚರಿಸಬೇಕು. ಹೀಗಾಗಿ ಉಳಿದ ಎರಡು ಗ್ರಾಮಗಳ ಬೇಡಿಕೆಯಂತೆ ಬನ್ನೂರು ಗ್ರಾಮವನ್ನು ಪುತ್ತೂರು ಕಸಬಾ ಹೋಬಳಿಗೆ ಸೇರಿಸಬೇಕು ಎಂಬ ಆಗ್ರಹ ಇಲ್ಲಿನವರದ್ದು.
ರಸ್ತೆ ಕಾಂಕ್ರೀಟ್ ಬೇಡಿಕೆ
ಅಡೆಂಚಿಲಡ್ಕ-ಗೋಳ್ತಿಲ ಕುಂಟ್ಯಾನ- ಒಳ್ತ, ಆಳುವಾರು-ಕಜೆ, ನಿರ್ಪಾಜೆ- ನಿಡ್ಪಾಲಗುಡ್ಡೆ, ಕಂಜೂರು ದೈವಸ್ಥಾನ- ಕುಂಟ್ಲಾಬೈಲು ರಸ್ತೆ, ಅಮಿಲಕೋಡಿ-ಕಂಜೂರು ರಸ್ತೆ, ಅನಿಲಕೋಡಿ-ಪಳ್ಳಿಜಾಲು ರಸ್ತೆಯು ಕಾಂಕ್ರೀಟ್ ಕಾಮಗಾರಿಗಾಗಿ ಕಾಯುತ್ತಿದೆ. ಕಂಜೂರಿನಿಂದ ಕುಂಟ್ಯಾನ ದೇವಸ್ಥಾನಕ್ಕೆ ಗ್ರಾಮ ದೈವದ ಭಂಡಾರ ಹೋಗುವ ಕಾಲು ದಾರಿಯ ತೋಡಿನ ಬದಿ ಜರಿದಿದ್ದು ಇದರ ದುರಸ್ತಿಯ ಬೇಡಿಕೆ ಬಹು ಕಾಲದ್ದಾಗಿದೆ.
ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ 1.28 ಕೋ.ರೂ. ವೆಚ್ಚದಲ್ಲಿ ಮನೆ-ಮನೆಗೆ ನಳ್ಳಿ ನೀರು ಒದಗಿಸುವ ಯೋಜನೆ ಕಾರ್ಯಗತದಲ್ಲಿ ಇದೆ. 25 ಸಾವಿರ ಲೀಟರ್ ಸಾಮರ್ಥ್ಯದ ಮೂರು ಟ್ಯಾಂಕಿ, 50 ಸಾವಿರ ಲೀಟರ್ ಸಾಮರ್ಥ್ಯದ 1 ಟ್ಯಾಂಕಿ, ಮೂರು ಕೊಳವೆಬಾವಿ ನಿರ್ಮಾಣ ಹಂತದಲ್ಲಿ ಇದೆ.
ಶ್ಮಶಾನದ ಬೇಡಿಕೆ
ಬನ್ನೂರು ಗ್ರಾಮದ ಮುಕ್ಕಾಲು ಭಾಗ ನಗರಸಭೆಗೆ ಸೇರಿದೆ. ಈಗ ಉಳಿದಿರುವುದು ಕಾಲು ಭಾಗ ಮಾತ್ರ. ಇಡೀ ಗ್ರಾಮದಲ್ಲಿ ಶ್ಮಶಾನ ಇಲ್ಲ. ನಗರದ ಮಡಿವಾಳಕಟ್ಟೆ ಶ್ಮಶಾನವನ್ನೇ ಆಶ್ರಯಿಸಬೇಕಾದ ಸ್ಥಿತಿ ಈ ಭಾಗದ್ದು. ಅಡೆಂಚಿಲಡ್ಕ ಎಂಬಲ್ಲಿ ಹಿಂದೂ ರುದ್ರಭೂಮಿಗೆ ಜಾಗ ಕಾದಿರಿಸಲಾಗಿದ್ದು ಆರ್‌ಟಿಸಿ ಆಗಿದೆ. ಆದರೆ ಅಲ್ಲಿ ರುದ್ರಭೂಮಿ ನಿರ್ಮಾಣ ಆಗಿಲ್ಲ. ಘನತ್ಯಾಜ್ಯ ವಿಲೇಗೆ ಸಂಬಂಧಿಸಿ ನಗರಸಭೆ ಡಂಪಿಂಗ್ ಯಾರ್ಡ್ ಕೂಡ ಹಿಂದೆ ಬನ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಇತ್ತು. ಈಗ ಅದು ನಗರಸಭೆಗೆ ಸೇರಿದ ಕಾರಣ ಗ್ರಾಮಕ್ಕೆ ಹೊಸ ಘನತ್ಯಾಜ ಘಟಕ ನಿರ್ಮಾಣ ಆಗಬೇಕಿದೆ. ಉಳಿದಂತೆ ಸಾರ್ವಜನಿಕ ಕ್ರೀಡಾಂಗಣ, ಆರೋಗ್ಯ ಉಪ ಕೇಂದ್ರ ಸ್ಥಾಪನೆಯ ಬೇಡಿಕೆ ಇದೆ.
ಗ್ರಾಮ ನೋಟ
ಬನ್ನೂರು ಗ್ರಾ.ಪಂ. ಹಾಗೂ ನಗರಸಭೆಗೆ ಒಳಪಟ್ಟ ಬನ್ನೂರು ಗ್ರಾಮವು 1,328 ಹೆಕ್ಟೇರು ವಿಸ್ತೀರ್ಣ ಹೊಂದಿದೆ. 285 ಮನೆಗಳು ಇಲ್ಲಿದೆ. ಸರಕಾರಿ ಪ್ರಾಥಮಿಕ ಶಾಲೆ, ಕಜೆ, ಗುಂಡಿಜಾಲಿನಲ್ಲಿ ಅಂಗನವಾಡಿ, ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ ಇಲ್ಲಿದೆ. ಕೃಷಿ ಆಧಾರಿತ ಗ್ರಾಮ ಇದಾಗಿದೆ.
ಪುತ್ತೂರು ನಗರಕ್ಕೆ ಸಮೀಪದಲ್ಲಿರುವ ಬನ್ನೂರು ಗ್ರಾಮಸ್ಥರು ಹೋಬಳಿ ಕೇಂದ್ರದ ವ್ಯವಹಾರಕ್ಕೆ ಉಪ್ಪಿನಂಗಡಿಗೆ ತೆರಳಬೇಕು. ಇಲ್ಲಿನ ಪ್ರಮುಖ ಬೇಡಿಕೆ ಲಿಂಕ್ ರಸ್ತೆ ಪೂರ್ಣಗೊಂಡಾಗ ಅಭಿವೃದ್ಧಿಗೂ ವೇಗ ದೊರೆಯಲು ಅನುಕೂಲ.
ಮೆಡಿಕಲ್ ಕಾಲೇಜಿಗೆ 40 ಎಕ್ರೆ
ದ.ಕ. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆಂದು 40 ಎಕ್ರೆ ಕಾದಿರಿಸಿದ ಗ್ರಾಮ ಬನ್ನೂರು. ಭವಿಷ್ಯದಲ್ಲಿ ತಾಲೂಕಿಗೆ ಮೆಡಿಕಲ್ ಕಾಲೇಜು ಮಂಜೂರಾದಲ್ಲಿ ಜಾಗದ ಕೊರತೆ ಉಂಟಾಗದ ಹಾಗೆ ಇಲ್ಲಿ ಅಗತ್ಯ ಜಮೀನು ಕಾದಿರಿಸಿ ಮೆಡಿಕಲ್ ಕಾಲೇಜಿನ ಹೆಸರಿನಲ್ಲಿ ಪಹಣಿ ಪತ್ರ ಮಾಡಲಾಗಿದೆ.
ಗಮನಕ್ಕೆ ತರಲಾಗಿದೆ: ಬನ್ನೂರು ಗ್ರಾಮವು ಬನ್ನೂರು ಗ್ರಾ.ಪಂ.ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ ಒಂದಾಗಿದೆ. ಇಲ್ಲಿನ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿ ಗ್ರಾ.ಪಂ. ಸಭೆಗಳಲ್ಲಿ ಪ್ರಸ್ತಾವಿಸಲಾಗಿದೆ. ಸಂಬಂಧಪಟ್ಟವರು ಗಮನಕ್ಕೆ ತರಲಾಗಿದೆ. -ಜಯಾ ಎ., ಅಧ್ಯಕ್ಷರು, ಬನ್ನೂರು ಗ್ರಾ.ಪಂ.
ಬಸ್ ಸೌಕರ್ಯ ಬೇಕು: ಬನ್ನೂರು ಗ್ರಾಮದ ಕಜೆ-ಅಡೆಂಚಿಲಡ್ಕ ಕುಂಟ್ಯಾನ ದೇವಸ್ಥಾನದಿಂದ ಬನ್ನೂರುಕಟ್ಟೆ ಸಂಪರ್ಕಿಸುವ ರಸ್ತೆಯಲ್ಲಿ 600 ಮೀಟರ್‌ನಷ್ಟು ದೂರ ಅಭಿವೃದ್ಧಿಯಾದಲ್ಲಿ ಲಿಂಕ್ ರಸ್ತೆಯಾಗಿ ಪೇಟೆ ಸಂಪರ್ಕಕ್ಕೆ ಅನುಕೂಲವಾಗಲಿದೆ. ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಜಾಗಕ್ಕೆ ಸಂಬಂಧಿಸಿ ವ್ಯಕ್ತಿ ನ್ಯಾಯಾಲದಿಂದ ಸ್ಟೇ ತಂದಿರುವ ಕಾರಣ ಅಭಿವೃದ್ಧಿ ಬಾಕಿ ಆಗಿದೆ. ಈ ರಸ್ತೆ ಸಂಪೂರ್ಣಗೊಂಡಲ್ಲಿ ಹತ್ತಾರು ಕಿ.ಮೀ. ಸುತ್ತಾಟ ತಪ್ಪಿ ಮೂರು ಕಿ.ಮೀ.ಒಳಗೆ ಪೇಟೆ ಸಂಪರ್ಕಿಸಬಹುದು. -ಶೀನಪ್ಪ ಕೆ., ಗ್ರಾಮಸ್ಥರು
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.