Puttur: ಕೋತಿ ಕಾಟಕ್ಕೆ ಕೃಷಿಕರು ಸುಸ್ತು! ಏರ್‌ಗನ್‌ಗೆ ಕ್ಯಾರೇ ಇಲ್ಲ!
ಬೇಸಗೆ ಕಾಲ ಮಾತ್ರವಲ್ಲ, ಮಳೆಗಾಲದಲ್ಲೂ ಕಾಡುವ ಮಂಗಗಳು | ಈಗ ತೆಂಗಿನ ಮರವೇ ಪ್ರಮುಖ ಗುರಿ
Team Udayavani, Aug 22, 2024, 2:22 PM IST
ಪುತ್ತೂರು: ಮಳೆಗಾಲ, ಬೇಸಗೆ ಕಾಲ, ಚಳಿಗಾಲ ಎನ್ನದೇ ಕೃಷಿ ತೋಟಕ್ಕೆ ಹಿಂಡು-ಹಿಂಡಾಗಿ ನುಗ್ಗುವ ಮಂಗಗಳು ತೆಂಗಿನ ಮರವನ್ನೇ ಗುರಿಯಾಗಿಸಿಗೊಂಡು ಫಸಲು ನಷ್ಟ ಮಾಡುತ್ತಿದ್ದು ಬೆಳೆಗಾರರನ್ನು ಕಂಗೆಡಿಸಿದೆ. ರೈತನ ಯಾವುದೇ ತಂತ್ರಗಳಿಗೆ ವಾನರ ತಲೆ ಬಾಗದೇ ತೋಟವನ್ನು ಅತಿಕ್ರಮಿಸಿರುವ ಕಾರಣ ಇದರ ನಿಯಂತ್ರಣಕ್ಕೆ ಸರಕಾರವೇ ಮುಂದಾಗಬೇಕು ಅನ್ನುವ ಆಗ್ರಹ ಕೇಳಿ ಬಂದಿದೆ.
ಕಳೆದ ಕೆಲವು ದಶಕದಿಂದಲೂ ಕಂಡುಬಂದಿರುವ ಈ ಮಂಗಗಳ ಕಾಟ ಒಂದೆರೆಡು ವರ್ಷಗಳಿಂದ ಈಚೆಗೆ ಮಿತಿ ಮೀರಿದೆ. ಹಿಂಡು ಹಿಂಡಾಗಿ ತೋಟಗಳಿಗೆ ನುಗ್ಗಿ ತೆಂಗಿನ ಎಳೆ ಕಾಯಿಯನ್ನು ಸಿಗಿದು ಹಾಕುವುದಲ್ಲದೆ ಎಳನೀರನ್ನು ಕೆಳಕ್ಕೆ ಉರುಳಿಸಿ ಫಸಲು ನಷ್ಟ ಉಂಟು ಮಾಡುತ್ತಿದೆ. ಏರ್‌ಗನ್, ಪಟಾಕಿಗಳ ಸದ್ದಿಗೆ ಕ್ಯಾರೇ ಎನ್ನದ ಮಂಗಗಳನ್ನು ಓಡಿಸಲಾಗದೆ ರೈತ ಅಸಹಾಯಕ ಸ್ಥಿತಿಯಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇದರ ಪರಿಣಾಮ ಎಷ್ಟರ ಮಟ್ಟಿಗೆ ಬೀರಿದೆ ಎಂದರೆ, ಈ ಹಿಂದೆ ತೆಂಗಿನ ಕಾಯಿ ಮಾರಾಟ ಮಾಡಿ ಆದಾಯ ಗಳಿಸಿದ್ದ ಕೆಲವು ಕೃಷಿಕರಿಗೆ ದಿನ ನಿತ್ಯದ ಖರ್ಚಿಗೂ ತೆಂಗಿನ ಕಾಯಿ ಇಲ್ಲದ ಸ್ಥಿತಿ ಉಂಟಾಗಿದೆ ಅನ್ನುತ್ತಾರೆ ಬೆಳೆಗಾರ ಮಹೇಶ್ ಪುಚ್ಚಪ್ಪಾಡಿ.
ಪರಿಹಾರ ಇಲ್ಲ
ಮಂಗಗಳಿಂದ ಉಂಟಾಗುತ್ತಿರುವ ತೆಂಗಿನಕಾಯಿ, ಎಳೆನೀರು, ಅಡಿಕೆ ನಷ್ಟಕ್ಕೆ ಪರಿಹಾರ ನೀಡುವ ಅವಕಾಶ ಇಲ್ಲ. ಕಾಡು ಪ್ರಾಣಿಗಳಿಂದ ತೆಂಗಿನ ಮರಕ್ಕೆ ಹಾನಿ ಉಂಟಾದರೆ ಅದಕ್ಕೆ ಪರಿಹಾರ ಇದೆ.
-ಕಿರಣ್, ವಲಯ ಅರಣ್ಯಾಧಿಕಾರಿ ಪುತ್ತೂರು
ತಂತ್ರಗಳಿಗೆ ಬಗ್ಗುತ್ತಿಲ್ಲ
ಈ ಹಿಂದೆ ತೆಂಗಿನ ಕಾಯಿ ಮಾರಾಟ ಮಾಡುವಷ್ಟು ದೊರೆಯುತ್ತಿತ್ತು. ಆದರೆ ಮಂಗಗಳ ಹಾವಳಿ ಬಳಿಕ ಶೇ.70 ಕ್ಕೂ ಅಧಿಕ ಫಸಲು ನಷ್ಟವಾಗಿದೆ. ಗುಂಪು ಗುಂಪಾಗಿ ಬಂದು ತೆಂಗಿನ ಮರದಲ್ಲೇ ಬೀಡು ಬಿಟ್ಟಿರುವ ಮಂಗಗಳು ಯಾವುದೇ ತಂತ್ರಗಳಿಗೂ ಬಗ್ಗುತ್ತಿಲ್ಲ. ಸರಕಾರವು ಮಂಕಿ ಪಾರ್ಕ್ ಸ್ಥಾಪಿಸಿ ಮಂಗನ ಕಾಟದಿಂದ ಕೃಷಿ ತೋಟಗಳಿಗೆ ರಕ್ಷಣೆ ನೀಡಬೇಕು.
-ನಾಗರಾಜ ಭಟ್ ಕಜೆ, ಕೃಷಿಕರು
ಕೋಟ್ಯಂತರ ರೂ. ನಷ್ಟ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35 ಲಕ್ಷಕ್ಕೂ ಅಧಿಕ ಫಸಲು ನೀಡುವ ತೆಂಗಿನ ಮರಗಳಿವೆ ಎಂಬ ಲೆಕ್ಕ ಇದೆ. ವಾರ್ಷಿಕವಾಗಿ 17 ಕೋಟಿ ಅಧಿಕ ತೆಂಗಿನ ಕಾಯಿ ದೊರೆಯುತ್ತದೆ. ತೆಂಗಿನ ಮರಕ್ಕೆ ಮಂಗವೊಂದು ದಾಳಿ ಮಾಡಿದರೆ ಆ ಮರದ ಶೇ.85ರಿಂದ 90 ರಷ್ಟು ಫಸಲು ನಷ್ಟ ಆಗುವುದಲ್ಲೇ ತೋಟದ ಮಧ್ಯೆ ಇರುವ ಉಪ ಬೆಳೆಗಳಿಗೂ ಹಾನಿ ಮಾಡುತ್ತಿದೆ ಅನ್ನುತ್ತಾರೆ ತೆಂಗು ಬೆಳೆಗಾರರು.
ಮಂಗನಿಂದ ಆದ ಹಾನಿಗೆ ಪರಿಹಾರವಿಲ್ಲ..!
ಕಾಡುಕೋಣ, ಆನೆ ಮೊದಲಾದ ವನ್ಯಜೀವಿಗಳ ಉಪಟಳದಿಂದ ಬೆಳೆಹಾನಿ ಸಂಭವಿಸಿದಲ್ಲಿ ಸರಕಾರದಿಂದ ಪರಿಹಾರ ಪಡೆಯಬಹುದು. ಆದರೆ ಮಂಗಗಳಿಂದ ಉಂಟಾಗುವ ಹಾನಿಗೆ ಪರಿಹಾರ ಇಲ್ಲ. ಮಂಗನಿಂದ ಕೃಷಿ ಫಸಲು ನಷ್ಟಕ್ಕೆ ಪರಿಹಾರ ನೀಡಲು ಸರಕಾರ ಹತ್ತು ವರ್ಷದ ಹಿಂದೆ ಸುತ್ತೋಲೆ ಹೊರಡಿಸಿತ್ತು. ಆದರೆ ಫಸಲಿಗೆ ಇಂತಿಷ್ಟು ದರ ಎಂದು ನಿಗದಿಪಡಿಸದ ಕಾರಣ ನಷ್ಟಕ್ಕೆ ಈಡಾದ ಬೆಳೆಗಾರರಿಗೆ ಇದರಿಂದ ಪ್ರಯೋಜನ ಸಿಗಲಿಲ್ಲ. ಸರಕಾರಿ ಆದೇಶ ಪತ್ರದಲ್ಲಿ ಪರಿಹಾರ ನೀಡಿ ಎಂದಿತ್ತೂ ಹೊರತು ನಷ್ಟಕ್ಕೆ ಈಡಾಗುವ ವಿವಿಧ ಬೆಳೆ ಫಸಲಿಗೆ ಇಂತಿಷ್ಟು ಪರಿಹಾರ ನೀಡಬೇಕು ಎಂದು ದರಪಟ್ಟಿ ನಿಗದಿಪಡಿಸಿರಲಿಲ್ಲ. ಆ ಸಮಸ್ಯೆ ಈ ತನಕವೂ ಇತ್ಯರ್ಥ ಆಗದ ಕಾರಣ ನಷ್ಟಕ್ಕೆ ನಯಾಪೈಸೆ ಪರಿಹಾರ ಸಿಗದ ಸ್ಥಿತಿ ಇದೆ.
ಮಂಕಿ ಪಾರ್ಕ್ ಸ್ಥಾಪನೆ ಕೂಗು
ಮಂಗನನ್ನು ಹಿಡಿದು ಕಾಡಿಗೆ ಅಟ್ಟಲು ಅವಕಾಶ ಇಲ್ಲದಿದ್ದರೂ ಕೆಲವೆಡೆ ಹಿಡಿದು ಬೇರೆ ಊರಿನ ಕಾಡಿಗೆ ತಂದು ಬಿಡುತ್ತಾರೆ. ಹಾಗಂತ ಅದು ಸುಮ್ಮ ನಿರುವುದಿಲ್ಲ. ತಾನಿರುವ ಕಾಡಿನ ಸುತ್ತಲಿನ ಕೃಷಿ ತೋಟಗಳಿಗೆ ನುಗ್ಗುತ್ತವೆ. ಅರಣ್ಯ ಇಲಾಖೆಯು ಮಂಗಗಳ ದಾಳಿ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿಂದೊಮ್ಮೆ ಪುತ್ತೂರು, ಸುಳ್ಯ ಭಾಗದಲ್ಲಿ ಮಂಕಿ ಪಾರ್ಕ್ ನಿರ್ಮಿಸುವಂತೆ ಕೃಷಿಕರು ಆಗ್ರಹಿಸಿದ್ದರೂ ಅದಕ್ಕೆ ಮನ್ನಣೆ ಸಿಗಲಿಲ್ಲ. ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಈ ಪ್ರಸ್ತಾವ ಮುನ್ನೆಲೆಗೆ ಬಂತಾದರೂ ಅನುಷ್ಠಾನಕ್ಕೆ ಬರಲಿಲ್ಲ ಅನ್ನುತ್ತಾರೆ ಬೆಳೆಗಾರರು.
ಮಂಗ ಬ್ರಿಲಿಯಂಟ್ ಆಗಿದೆ!
ಮಂಗ ಬ್ರಿಲಿಯಂಟ್ ಆಗಿದ್ದಾನೆ ಎನ್ನುವ ಸರ್ಟ್‌ಫಿಕೆಟ್ ಕೊಡುತ್ತಿರುವುದು ರೈತರೇ. ಕಾರಣ ಹಿಂದೆ ಚಪ್ಪಾಳೆ, ಪಟಾಕಿ ಸದ್ದಿಗೆ ಓಡಿ ಹೋಗುತ್ತಿದ್ದ ಮಂಗಗಳು ಕೆಲವು ವರ್ಷಗಳಿಂದ ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ. ತೋಟಕ್ಕೆ ಬಂದು ಫಸಲು ಹಾಳು ಮಾಡುವುದು ಮಾತ್ರವಲ್ಲದೇ ಮನೆ ವಠಾರ, ಜಗಲಿಗೂ ನುಗ್ಗುತ್ತಿದೆ. ಭಯವೇ ಇಲ್ಲದಷ್ಟು ವರ್ತನೆ ತೋರುತ್ತಿದೆ. ಮಂಗ ಅಪ್‌ಡೇಟ್ ಆಗಿದ್ದರೂ ಅದರ ನಿಯಂತ್ರಣ ಕ್ರಮಗಳು ಮಾತ್ರ ಹಳೆಯ ಕಾಲದಲ್ಲೇ ಇದೆ.
-ಕಿರಣ್‌ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.