![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Oct 27, 2024, 1:59 PM IST
ಪುತ್ತೂರು: ನೆಲ್ಯಾಡಿ ಪೇಟೆ ದಾಟಿ ಅಡ್ಡಹೊಳೆ ದಾರಿಯಲ್ಲಿ ಪೆರಿಯಶಾಂತಿ ತನಕದ ಮುಕ್ಕಾಲು ಹಾದಿ ತನಕ ನಿಮ್ಮನ್ನು ಸ್ವಾಗತಿಸುವುದು ಲೆಕ್ಕವಿಲ್ಲದಷ್ಟು ‘ತಿರುವು ತೆಗೆದುಕೊಳ್ಳಿ’ ಫಲಕಗಳು.!
ಈ ಫಲಕಗಳೇ ಇಡೀ ಕಾಮಗಾರಿಯ ಸ್ಥಿತಿಗತಿಗೆ ಕೈಗನ್ನಡಿ. ಅಲ್ಲಲ್ಲಿ ಅಪಾಯ ಒಡ್ಡುವ ಚರಂಡಿಗಳು ವಾಹನ ಸವಾರರ ಪಾಲಿಗೆ ಆತಂಕ ಮೂಡಿಸುತ್ತಿರುವುದು ಸುಳ್ಳಲ್ಲ. ಅಂದ ಹಾಗೆ ಹೆದ್ದಾರಿ ಇಲಾಖೆ ಮನಸ್ಸು ಮಾಡಿದರೆ ನೆಲ್ಯಾಡಿ-ಅಡ್ಡಹೊಳೆ ತನಕದ ಕಾಮಗಾರಿಯನ್ನು ಶೀಘ್ರ ಮುಗಿಸುವ ಸುವರ್ಣ ಅವಕಾಶ ಇರುವುದು ಕೂಡ ಇಲ್ಲೇ.
ಇಡೀ ರಸ್ತೆಯಲ್ಲಿ ಅಲ್ಲಲ್ಲಿ ತಿರುವು ಪಡೆದುಕೊಳ್ಳಿ (ಟೇಕ್ ಡೈವರ್ಷನ್) ಅನ್ನುವ ಫಲಕ ರಾರಾಜಿಸುತ್ತಿರುವುದು ಕಾಮಗಾರಿ ಎಷ್ಟು ಅಡ್ಡಾದಿಡ್ಡಿಯಾಗಿದೆ ಎನ್ನುವುದಕ್ಕೆ ಸಾಕ್ಷಿ. ವಾಹನ ಸವಾರರು ಅರ್ಧ ಕಿ.ಮೀ. ದೂರಕ್ಕೆ ಕ್ಷಣ ಕ್ಷಣ ತಿರುವು ಪಡೆದುಕೊಳ್ಳ ಬೇಕಿದೆ. ಹಗಲಾದರೂ ಪರವಾಗಿಲ್ಲ. ರಾತ್ರಿ ವೇಳೆಯಂತೂ ಕಷ್ಟ ಹೇಳ ತೀರದು. ಇಲ್ಲಿ ತಿರುವುಗಳನ್ನು ದಾಟಿ ಅಡ್ಡಹೊಳೆ ಮೂಲಕ ಘಾಟ್ ರಸ್ತೆ ಏರುವುದೇ ದೊಡ್ಡ ಸವಾಲು ಅನ್ನುತ್ತಾರೆ ಬೆಂಗಳೂರು ಮೂಲದ ದ್ವಿಚಕ್ರ ಸವಾರ ನಾಗರಾಜು. ಕೆಲವೆಡೆ ಸಣ್ಣ ಪುಟ್ಟ ಕಾಮಗಾರಿಯನ್ನೇ ಬಾಕಿ ಉಳಿಸಿದ್ದು ಇದರಿಂದ ಬಹುತೇಕ ಭಾಗ ಕಾಮಗಾರಿ ಆಗಿದ್ದರೂ ಪ್ರಯಾಣಿಕರಿಗೆ ಅನುಕೂಲವಾಗದ ಸ್ಥಿತಿ ಉಂಟಾಗಿರುವುದು ಸ್ಪಷ್ಟ.
ಶಾಲೆಗೆ ಕಾದಿದೆ ಚರಂಡಿ ಆಪತ್ತು..!
ನೆಲ್ಯಾಡಿ ಪೇಟೆಯಲ್ಲಿ ಸರ್ಕಸ್ ಮಾಡಿಕೊಂಡು ದಾಟಿ ಕೊಂಚ ಮುಂದೆ ಹೋದರೆ ಅಲ್ಲೊಂದು ಅಪಾಯಕಾರಿ ಚರಂಡಿ ಸ್ವಾಗತಿಸುತ್ತಿದೆ. ಹೆದ್ದಾರಿಯ ಬದಿಯಲ್ಲಿರುವ ಹೊಸಮಜಲು ಸರಕಾರಿ ಶಾಲೆಯ ಆವರಣ ಗೋಡೆ, ವಿದ್ಯಾರ್ಥಿಗಳು ಸಂಚರಿಸುವ ಕಾಲು ಹಾದಿಗೆ ತಾಗಿಕೊಂಡೇ ಆಳೆತ್ತರದ ಚರಂಡಿ ಅಗೆಯಲಾಗಿದೆ. ಕಳೆದ ಕೆಲವು ಸಮಯದಿಂದ ಕಾಮಗಾರಿ ಅರ್ಧದಲ್ಲೇ ಇದೆ. ಇಲ್ಲಿ ಮಳೆಗಾಲದಲ್ಲಿ ನೀರು ತುಂಬಿದ್ದರೆ, ಬೇಸಗೆ ಕಾಲದಲ್ಲಿ ಬೃಹತ್ ಹೊಂಡ ಕಾಣಿಸುತ್ತಿದ್ದು ಕೊಂಚ ತಪ್ಪಿದರೂ ಮೃತ್ಯುಕೂಪ ಆಗುವ ಅಪಾಯ ಇಲ್ಲಿನದ್ದು. ಇದು ವಿದ್ಯಾರ್ಥಿಗಳ ಪಾಲಿಗೆ ಪಕ್ಕಾ ಡೇಂಜರ್.
ನೆಲ್ಯಾಡಿಯಿಂದ ಪೆರಿಯಶಾಂತಿ ತನಕ ಬಹುತೇಕ ಕಡೆಗಳಲ್ಲಿ ರಸ್ತೆ ಕಾಮಗಾರಿಗೆ ಅಗೆದು ಹಾಕಿದ್ದು ಅದಿನ್ನು ಪೂರ್ಣ ಆಗಿಲ್ಲ. ಅಲ್ಲಿ ರಸ್ತೆಗೆ ಸಂಬಂಧಿಸಿ ಯಾವ ಕಾಮಗಾರಿಯು ನಡೆಯುತ್ತಿಲ್ಲ. ಬೆರಳೆಣಿಕೆಯ ಕೆಲಸಗಾರರು ಮಾತ್ರ ಆಯ್ದ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಶೇ.90 ಕೆಲಸ ಪೂರ್ಣ
ಅಡ್ಡಹೊಳೆಯಿಂದ ಪೆರಿಯಶಾಂತಿ ತನಕ 15 ಕಿ.ಮೀ. ಕಾಮಗಾರಿಯನ್ನು ಮಹಾರಾಷ್ಟ್ರ ಪುಣೆ ಮೂಲದ ಎಸ್.ಎಂ. ಔತಾಡೆ ಪ್ರೈ.ಲಿ. ಕಂಪೆನಿ ನಿರ್ವಹಿಸುತ್ತಿದ್ದು ಇಲ್ಲಿ ಶೇ. 90ಕ್ಕಿಂತ ಅಧಿಕ ಕೆಲಸ ಪೂರ್ಣಗೊಂಡಿದೆ. ಬಾಕಿ ಇರುವ ಕಡೆಗಳಲ್ಲಿ ಕಾಮಗಾರಿ ವೇಗದಿಂದ ಸಾಗುತ್ತಿದೆ. ಆನೆಪಥ ನಿರ್ಮಾಣಕ್ಕೆ ನ್ಯಾಯಾಲಯದ ತಡೆ ಇರುವ ಕಾರಣ ಸದ್ಯಕ್ಕೆ ಇಲ್ಲಿ ಕಾಮಗಾರಿ ಪೂರ್ಣ ಕಷ್ಟ. ಅದು ಹೊರತುಪಡಿಸಿ ಉಳಿದ ಕಾಮಗಾರಿ ಕೆಲವು ದಿನಗಳಲ್ಲಿಯೇ ಪೂರ್ತಿಗೊಳ್ಳುವ ಸಾಧ್ಯತೆ ಇದೆ. ಇನ್ನೊಂದೆಡೆ ಬಿ.ಸಿ.ರೋಡ್-ಪೆರಿಯಶಾಂತಿ ತನಕ ಹೈದರಾಬಾದ್ ಮೂಲದ ಕೆ.ಎನ್.ಆರ್. ಸಂಸ್ಥೆ ಕಾಮಗಾರಿ ನಿರ್ವಹಿಸುತ್ತಿದ್ದು ನಿಧಾನಗತಿಯಲ್ಲೇ ಸಾಗುತ್ತಿದೆ.
ಎರಡು ಯಾತ್ರಾ ಸ್ಥಳಗಳ ಸಂಪರ್ಕ ಹಾದಿ ದುಸ್ತರ
ಪೆರಿಯಶಾಂತಿ ಬಳಿ ಎರಡು ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಸಂಪರ್ಕಿಸುವ ರಸ್ತೆಯ ಅಂಡರ್‌ಪಾಸ್‌ನ ಸರ್ವೀಸ್ ರಸ್ತೆಗಳು ತೀರಾ ಹದಗೆಟ್ಟಿದೆ. ಇಲ್ಲಿ ಒಂದು ಬದಿ ಸರ್ವೀಸ್ ರಸ್ತೆಯೇ ಇಲ್ಲ. ಇನ್ನೊಂದು ಭಾಗದಲ್ಲಿ ನೆಲ್ಯಾಡಿ ಭಾಗದಿಂದ ಬರುವವರಿಗೆ ಹೊಂಡ ತುಂಬಿದ್ದ ರಸ್ತೆ ಇದ್ದರೆ, ಅಡ್ಡಹೊಳೆ ಭಾಗದವರಿಗೆ ರಸ್ತೆಯೇ ಇಲ್ಲ. ಆ ಭಾಗದವರು ಅಂಡರ್‌ಪಾಸ್‌ನ ಸೇತುವೆ ಮೂಲಕ ಬಂದು ನೆಲ್ಯಾಡಿ ಭಾಗದ ರಸ್ತೆಗೆ ಇಳಿದು ಅಂಡರ್‌ಪಾಸ್ ಮೂಲಕ ಸುಬ್ರಹ್ಮಣ್ಯಕ್ಕೆ ದಾಟಬೇಕು. ಹೀಗಾಗಿ ಇಲ್ಲಿ ದಿನಂಪ್ರತಿ ವಾಹನ ದಟ್ಟನೆ ತಪ್ಪಿಲ್ಲ. ಈ ಅಂಡರ್‌ಪಾಸ್ ಇರುವುದು ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಬೆಸೆಯಲು.
ಪೆರಿಯಶಾಂತಿಯಿಂದ ಇಚ್ಲಂಪಾಡಿ-ಮರ್ಧಾಳ ರಸ್ತೆ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳುವ ರಸ್ತೆ ಇದು. ಇಲ್ಲೇ ತುಸು ದೂರದಲ್ಲಿ ಕೊಕ್ಕಡದ ಮೂಲಕ ಧರ್ಮಸ್ಥಳಕ್ಕೆ ಸಂಪರ್ಕಿಸುವ ರಸ್ತೆಯೂ ರಾ. ಹೆದ್ದಾರಿಯಿಂದ ಕವಲೊಡೆದಿದೆ. ಹೀಗಾಗಿ ಸುಬ್ರಹ್ಮಣ್ಯ-ಧರ್ಮಸ್ಥಳ ಎರಡೂ ಕ್ಷೇತ್ರಕ್ಕೆ ತೆರಳುವ ಭಕ್ತರು ಈ ಅಂಡರ್‌ಪಾಸ್ ಅನ್ನು ಆಶ್ರಯಿಸಿದ್ದು ಇಲ್ಲಿ ಸರ್ವೀಸ್ ರಸ್ತೆಯಿಂದ ಅವರ ಸಂಚಾರದ ವೇಗಕ್ಕೆ ತಡೆಯಾಗಿದೆ. ಇನ್ನೊಂದೆಡೆ ಅಂಡರ್‌ಪಾಸ್‌ನ ಮೇಲ್ಭಾಗದಲ್ಲಿ ಎರಡು ಸೇತುವೆ ಕಾಮಗಾರಿ ಪೂರ್ಣವಾಗಿದ್ದರೂ ಒಂದು ಭಾಗದ ರಸ್ತೆ ಸೇತುವೆಗೆ ಸಂಪರ್ಕ ಪಡೆದಿಲ್ಲ. ಆಳೆತ್ತರದ ಹೊಂಡಕ್ಕೆ ಮಣ್ಣು ಹಾಸಿ ಸಮತಟ್ಟು ಮಾಡುವ ಕೆಲಸ ಇಲ್ಲಿ ಪ್ರಗತಿಯಲ್ಲಿದೆ.
ಆನೆಪಥಕ್ಕೆ ಹೊಸ ಜಾಗ ಆಯ್ಕೆಗೆ ಆಗ್ರಹ ..!
ಪೆರಿಯಶಾಂತಿಯು ಆನೆ ಸೇರಿದಂತೆ ಇತರ ವನ್ಯ ಜೀವಿಗಳು ಹೆಚ್ಚಾಗಿ ಸಂಚರಿಸುವ ಪ್ರದೇಶವಾ ಗಿರುವುದರಿಂದ ಇದನ್ನು ವಿಶೇಷ ವಲಯವಾಗಿ ಗುರುತಿಸಲಾಗಿದೆ. ಇಲ್ಲಿ ಆನೆ ಕಾರಿಡಾರ್, ಪ್ರಾಣಿಗಳ ದಾಟು ಸೇತುವೆ ನಿರ್ಮಾಣ ಯೋಜನೆಯಲ್ಲಿದ್ದು ಪೆರಿಯಶಾಂತಿ ಅಂಡರ್‌ಪಾಸ್‌ಗಿಂತ ಸ್ವಲ್ಪ ಮುಂದೆ ಒಂದು ಆನೆಪಥ ನಿರ್ಮಾಣವಾಗಿದೆ. ಇನ್ನೊಂದು ಅಡ್ಡೋಳೆ ಬಳಿ ನಿರ್ಮಾಣವಾಗಿದೆ. ಮೂರನೇ ಆನೆ ಕಾರಿಡಾರ್ ಎಂಜಿರ ಬಳಿ ನಿರ್ಮಾಣ ಹಂತದಲ್ಲಿದೆ. ನಿಯಮ ಪ್ರಕಾರ ಇಲ್ಲಿ ಆನೆಪಥ ಕಾರ್ಯ ಸಾಧುವಲ್ಲ. ಏಕೆಂದರೆ ಎರಡು ಕಡೆ ಫಾರೆಸ್ಟ್ ಇದ್ದರ ಮಾತ್ರ ಆನೆ ಕಾರಿಡಾರ್ ನಿರ್ಮಾಣ ಮಾಡಬಹುದು. ಇಲ್ಲಿ ಒಂದು ಭಾಗದಲ್ಲಿ ಅರಣ್ಯ, ಇನ್ನೊಂದು ಭಾಗದಲ್ಲಿ ಕೃಷಿ ತೋಟ ಇದೆ. ಆನೆಪಥ ನಿರ್ಮಾಣ ಮಾಡಿದರೆ ಆನೆಗಳು ನೇರವಾಗಿ ಕೃಷಿ ತೋಟಕ್ಕೆ ಇಳಿಯುವ ಸಾಧ್ಯತೆ ಇರುವುದು ಕಂಡು ಬರುತ್ತಿದೆ. ಇದೇ ಅಂಶವನ್ನು ಇಟ್ಟುಕೊಂಡು ಸ್ಥಳೀಯ ಕೃಷಿಕರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು ಕೆಲಸ ಸ್ಥಗಿತಗೊಳಿಸಲಾಗಿದೆ. ಬೇರೆ ಸ್ಥಳವನ್ನು ಗುರುತಿಸಿ ಆನೆಪಥ ನಿರ್ಮಿಸುವುದು ಇಲ್ಲಿ ಸೂಕ್ತ ಅನ್ನುತ್ತಾರೆ ಸ್ಥಳೀಯರು.
-ಕಿರಣ್ ಪ್ರಸಾದ್ ಕುಂಡಡ್ಕ
You seem to have an Ad Blocker on.
To continue reading, please turn it off or whitelist Udayavani.