ವಿದ್ಯಾರ್ಥಿನಿ ಅನಿತಾ ಕುಟುಂಬಕ್ಕೆ ಸೂರು ಶೀಘ್ರ ಹಸ್ತಾಂತರ
ಎಸೆಸೆಲ್ಸಿ ವಿದ್ಯಾರ್ಥಿಗಳ ಮನೆ ಭೇಟಿ ಅಭಿಯಾನದ ಫಲಶ್ರುತಿ
Team Udayavani, Jun 24, 2022, 4:54 PM IST
ಪುತ್ತೂರು : ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಎಸೆಸೆಲ್ಸಿ ವಿದ್ಯಾರ್ಥಿಗಳ ಮನೆ ಭೇಟಿಯ ಫಲವಾಗಿ ಹರಕಲು ಗುಡಿಸಲಿನಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿನಿಗೆ ಹೊಸ ಮನೆ ನಿರ್ಮಾಣ ಹಂತದಲ್ಲಿದ್ದು ಜುಲೈ ಮೊದಲ ವಾರದಲ್ಲಿ ಹಸ್ತಾಂತರಗೊಳ್ಳಲಿದೆ.
ನಗರಸಭೆ ವ್ಯಾಪ್ತಿಯ ಕೊಡಿಪ್ಪಾಡಿ ಗ್ರಾಮದ ಪೆರಿಯ ತ್ತೋಡಿ ದಲಿತ ಸಮುದಾಯದ ವಿಧವೆ ಸುನಂದಾ ಅವರ ಕುಟುಂಬಕ್ಕೆ ದಾನಿಗಳ ಸಹಕಾರದಿಂದ ಹೊಸ ಮನೆಯ ಭಾಗ್ಯ ದೊರೆತಿದೆ. ಮನೆ ಭೇಟಿಯ ಮೂಲಕ ವಿದ್ಯಾರ್ಥಿನಿಯ ಕುಟುಂಬದ ಬವಣೆ ನೀಗಿದೆ.
ಎಸೆಸೆಲ್ಸಿ ವಿದ್ಯಾರ್ಥಿನಿ ಸುನಂದಾ ಕೂಲಿ ಕೆಲಸ ಮಾಡುತ್ತಿದ್ದು, ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಪೆರಿಯತ್ತೋಡಿಯಲ್ಲಿ ವಾಸವಾಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡುತ್ತಿದ್ದಾರೆ. ಕಿರಿಯ ಪುತ್ರಿ ಅನಿತಾ 2021ನೇ ಸಾಲಿನಲ್ಲಿ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿನಿ ಆಗಿದ್ದರು. ಗೋಡೆಗಳು ಶಿಥಿಲಗೊಂಡಿರುವ, ಟಾರ್ಪಲ್ ಹೊದಿಸಿರುವ ಗುಡಿಸಲು ಮನೆಯೊಳಗೆ ದಯನೀಯ ಸ್ಥಿತಿಯಲ್ಲಿ ವಾಸಿಸುತ್ತಿದ್ದರು.
ಮನೆ ಭೇಟಿ ವೇಳೆ ಬೆಳಕಿಗೆ ಬಂತು ಪರೀಕ್ಷೆಯ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಅವರ ಸ್ಥಿತಿಗತಿಗಳ ಅವಲೋಕನ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿನಿ ಅನಿತಾ ಮನೆ ಪರಿಸ್ಥಿತಿ ಕಂಡು ಹೊಸ ಮನೆ ಕಟ್ಟುವ ಯೋಚನೆ ಮಾಡಿದರು.
ಶಿಕ್ಷಕಿ ಗೀತಾಮಣಿ ಶಿಷ್ಯೆ ಅನಿತಾಗೆ ಮನೆ ನಿರ್ಮಾಣಕ್ಕಾಗಿ ಸಂಘ ಸಂಸ್ಥೆಗಳ ಸಹಾಯಯಾಚಿಸಲು ಮುಂದಾದರು. ರೋಟರಿ ಸಂಸ್ಥೆ, ಇತರ ದಾನಿಗಳು, ರೋಟರಿ ಕ್ಲಬ್‌ನ ಸುಜಿತ್ ರೈ, ವಾಮನ್ ಪೈ, ಸುರೇಶ್ ಶೆಟ್ಟಿ ಸಹಕಾರದೊಂದಿಗೆ 6 ಲಕ್ಷ ರೂ. ವೆಚ್ಚದಲ್ಲಿ ಆರ್ ಸಿಸಿ ಮನೆ ಸಿದ್ಧವಾಗುತ್ತಿದೆ. ನವೀನ್ ಕುಲಾಲ್, ಸ್ಫೂರ್ತಿ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಸಾಲ್ಯಾನ್, ವಿವೇಕಾನಂದ ಎನ್‌ಎಸ್ ಎಸ್ ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ. ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಸೈಂಟ್ ವಿಕ್ಟರ್ ಬಾಲಿಕ ಪ್ರೌಢಶಾಲೆಯ 2000ನೇ ಸಾಲಿನ ಹಿ.ವಿದ್ಯಾರ್ಥಿ ಸಂಘದ ವತಿಯಿಂದ 25 ಸಾವಿರ ರೂ. ವೆಚ್ಚದಲ್ಲಿ ಶೌಚಾಲಯ, ಸ್ನಾನಗೃಹ, ಶೆಡ್, ಇನ್ನರ್‌ವ್ಹೀಲ್ ಕ್ಲಬ್ ಸಂಸ್ಥೆ ವಿದ್ಯುತ್ ವ್ಯವಸ್ಥೆ ಒದಗಿಸುವ ಭರವಸೆ ನೀಡಿದೆ. ಅನಿತಾ ಕಲಿಕೆಯಲ್ಲಿ ಮುಂಚೂಣಿಯಲ್ಲಿದ್ದರು. ಚಿಮಿಣಿ ದೀಪದ ಬೆಳಕಿನಲ್ಲಿಯೇ ಓದುತ್ತ ಎಸೆಸೆಲ್ಸಿ ಪರೀಕ್ಷೆಯಲ್ಲಿ 568 ಅಂಕ ಪಡೆದಿದ್ದರು.
ಅಂತಿಮ ಹಂತ: ಮನೆ ಭೇಟಿ ಮಾಡುವ ಸಂದರ್ಭದಲ್ಲಿ ಅನಿತಾಳ ಮನೆ ಪರಿಸ್ಥಿತಿ ಬೆಳಕಿಗೆ ಬಂದಿತ್ತು. ಶಿಕ್ಷಕಿ ಗೀತಾಮಣಿ ಅವರೊಂದಿಗೆ ಚರ್ಚೆ ನಡೆಸಿ ಪುತ್ತೂರಿನ ರೋಟರಿ ಸಂಸ್ಥೆ ಹಾಗೂ ಇನ್ನಿತರ ದಾನಿಗಳ ಸಹಕಾರದ ಮೂಲಕ ಮನೆ ನಿರ್ಮಾಣಕ್ಕೆ ಮುಂದಡಿ ಇಟ್ಟಿದ್ದೆವು. ಇದೀಗ ಮನೆ ನಿರ್ಮಾಣ ಅಂತಿಮ ಹಂತದಲ್ಲಿದೆ. -ಲೋಕೇಶ್ ಸಿ., ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು
ಶೇ. 80ರಷ್ಟು ಪೂರ್ಣ: 5ರಿಂದ 6 ಲಕ್ಷ ರೂ. ವೆಚ್ಚದಲ್ಲಿ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಕ್ಲಬ್‌ನ ಎಲ್ಲ ಸದಸ್ಯರ ದೇಣಿಗೆಯ ಮೂಲಕ ಮನೆ ನಿರ್ಮಿಸಿ ಕೊಡುತ್ತಿದ್ದೇವೆ. ಶೇ. 80ರಷ್ಟು ಕಾಮಗಾರಿ ಪೂರ್ಣ ಗೊಂಡಿದೆ. ನಗರಸಭೆಯಿಂದ 1.5 ಲಕ್ಷ ರೂ. ಅನುದಾನ ಸಿಗಲಿದೆ.-ಸುಜಿತ್ ಡಿ. ರೈ, ಯೂತ್ ಸರ್ವಿಸ್ ಡೈರೆಕ್ಟರ್, ರೋಟರಿ ಕ್ಲಬ್ ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.