Ayodhya ಶ್ರೀ ರಾಮಮಂದಿರದ ರಾಮಲಲ್ಲಾ ವಿಗ್ರಹ; ಅಪೂರ್ವ ಅವಕಾಶ ಪಡೆದ ನಾಳದ ಶಿಲ್ಪಿ ಜಯಚಂದ್ರ
Team Udayavani, Jan 3, 2024, 7:00 AM IST
ಬೆಳ್ತಂಗಡಿ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠೆಗೊಳ್ಳುವ ಬಾಲರಾಮ (ರಾಮಲಲ್ಲ)ನ ವಿಗ್ರಹ ಕೆತ್ತನೆಗೆ ಅವಕಾಶ ಪಡೆದ ಮೂರು ತಂಡಗಳ ಶಿಲ್ಪಿಗಳ ಪೈಕಿ ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ನಾಳದ ಜಯಚಂದ್ರ ಆಚಾರ್ಯ ಅವರಿಗೂ ಅವಕಾಶ ಸಿಕ್ಕಿದೆ.
ವಿಗ್ರಹ ಕೆತ್ತನೆಗೆಂದು ಹೊಸದಿಲ್ಲಿ ಯಲ್ಲಿ 7 ತಿಂಗಳ ಹಿಂದೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದ ನೂರಕ್ಕೂ ಹೆಚ್ಚು ಶಿಲ್ಪಿ ಗಳೊಂದಿಗೆ ಸಭೆ ನಡೆಸಿತ್ತು. ಅಂತಿಮವಾಗಿ ಆ ಪೈಕಿ ರಾಜಸ್ಥಾನದ ಸತ್ಯನಾರಾಯಣ ಪಾಂಡೆ, ಮೈಸೂರಿನ ಅರುಣ್ ಯೋಗಿರಾಜ್, ಸಾಗರದ ವಿಪಿನ್ ಬದೋರಿಯಾ ಹಾಗೂ ಜಿ.ಎಲ್. ಭಟ್ ಇಡಗುಂಜಿಯವರ ತಂಡಗಳಿಗೆ ಅವಕಾಶ ಸಿಕ್ಕಿತ್ತು. ಈ ಪೈಕಿ ವಿಪಿನ್ ಬದೋರಿಯಾ, ಜಿಎಲ್ ಭಟ್ ತಂಡದಲ್ಲಿ ಬೆಳ್ತಂಗಡಿಯ ಜಯಚಂದ್ರ ಆಚಾರ್ಯ, ಹಾನಗಲ್‌ನ ಮೌನೇಶ್ ಬಡಿಗೇರ್, ಕಲ್ಗಟಿಗೆ ಪ್ರಕಾಶ್ ಹರಮನ್ ನವರ್, ಇಡಗುಂಜಿಯ ಸಂದೀಪ್ ಸಹ ಇದ್ದರು.
ಬಾಲರಾಮನ ವಿಗ್ರಹ
ಬಾಲರಾಮನ ವಿಗ್ರಹ ಕೆತ್ತನೆಗೆಂದು ಕಾರ್ಕಳದ ಈದುವಿನ ಕೃಷ್ಣಶಿಲೆ, ಎಚ್.ಡಿ. ಕೋಟೆಯ ಕೃಷ್ಣ ಶಿಲೆ, ರಾಜಸ್ಥಾನದ ಅಮೃತಶಿಲೆ ಹಾಗೂ ನೇಪಾಳದ ಗಂಡಕಿ ನದಿಯ ಸಾಲಿಗ್ರಾಮದ ಶಿಲೆಯನ್ನು ಆಯ್ಕೆ ಮಾಡಲಾಗಿತ್ತು. ಆ ಪೈಕಿ ಮೈಸೂರಿನ ಮತ್ತು ರಾಜಸ್ಥಾನದ ಶಿಲೆಗಳನ್ನು ವಿಗ್ರಹಕ್ಕೆ ಆಯ್ಕೆ ಮಾಡಲಾಯಿತು. ಐದು ವರ್ಷದ ಬಾಲರಾಮನ ನಿಂತಿರುವ ಭಂಗಿಯ 8 ಅಡಿ ಎತ್ತರದ ಪ್ರತ್ಯೇಕ ವಿಗ್ರಹ ರೂಪಿಸಲು ಮೂರೂ ತಂಡಗಳಿಗೆ ಟ್ರಸ್ಟ್ ಸೂಚಿಸಿತು.
ಗೌಪ್ಯ, ಬಿಗು ಬಂದೋಬಸ್ತ್
ಅಯೋಧ್ಯೆಯಿಂದ 3 ಕಿ.ಮೀ. ದೂರದ ಗೌಪ್ಯ ಸ್ಥಳದಲ್ಲಿ ಮೂರು ತಂಡಗಳೂ ಬಿಗು ಬಂದೋಬಸ್ತ್ನಲ್ಲಿ ವಿಗ್ರಹ ರಚನೆ ಪೂರ್ಣಗೊಳಿಸಿವೆ. ಇವುಗಳಲ್ಲಿ ಪ್ರಾಣ ಪ್ರತಿಷ್ಠೆಗೆ ಆಯ್ಕೆಗೊಳ್ಳುವ ವಿಗ್ರಹ ಹೊರತುಪಡಿಸಿ ಉಳಿದವನ್ನು ಶ್ರೀ ರಾಮಮಂದಿರದ ಪ್ರಾಂಗಣದಲ್ಲೇ ಪ್ರತಿಷ್ಠಾಪಿಸುವ ಸಂಭವವಿದೆ. ಸದ್ಯದ ಮಾಹಿತಿ ಪ್ರಕಾರ ಮೈಸೂರಿನ ಅರುಣ್ ಯೋಗಿರಾಜ್ ತಂಡದ ಕೃಷ್ಣಶಿಲೆಯ ವಿಗ್ರಹ ಆಯ್ಕೆಯಾಗಿದೆ ಎನ್ನಲಾಗಿದ್ದು. ರಾಮಜನ್ಮಭೂಮಿ ಟ್ರಸ್ಟ್ ಅಧಿಕೃತವಾಗಿ ಘೋಷಣೆ ಬಾಕಿ ಇದೆ. ವಿಗ್ರಹ ರಚನೆಗೆ ಆಯ್ಕೆಯಾಗದ ಶಿಲೆಗಳನ್ನೂ ಗಣಪತಿ ಮಂದಿರದ ಬಳಿ ಇರಿಸಲಾಗಿದೆ. ಅವುಗಳೂ ಮುಂದಿನ ದಿನಗಳಲ್ಲಿ ಬೇರೆ ವಿಗ್ರಹ ರಚನೆಗೆ ಬಳಕೆಯಾಗುವ ಸಾಧ್ಯತೆ ಇದೆ.
ನಾಳದ ಪ್ರತಿಭೆ ಜಯಚಂದ್ರ
ನಾಳದ ಗ್ರಾಮೀಣ ಯುವ ಪ್ರತಿಭೆ ಜಯಚಂದ್ರ ಆಚಾರ್ಯ (33) ಅತ್ಯುತ್ತಮ ಶಿಲ್ಪಿಯಾಗಿದ್ದು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ. ಪಿಯುಸಿ ಬಳಿಕ ಶಿಲ್ಪಕಲೆ ಅಧ್ಯಯನ ಮಾಡಿರುವ ಅವರು, ರಥ ರಚನೆ, ಪಲ್ಲಕ್ಕಿ ರಚನೆ, ಹೊಯ್ಸಳ ಶೈಲಿ, ಚೋಳ ಶೈಲಿ, ಚಾಲುಕ್ಯ ಶೈಲಿ ಸೇರಿದಂತೆ ಪಾರಂಪರಿಕ ಶೈಲಿಯ ವಿಗ್ರಹಗಳ ರಚನೆಯಲ್ಲಿಯೂ ತೊಡಗಿದ್ದಾರೆ.
ನಮ್ಮ ಗುರುಗಳಾದ ಸಾಗರದ ವಿಪಿನ್ ಬದೋರಿಯಾ ಮೂಲಕ ರಾಮಜನ್ಮಭೂಮಿಗೆ ಕಾಲಿರಿಸುವ ಅವಕಾಶ ಸಿಕ್ಕಿತಲ್ಲದೇ, ಬಾಲರಾಮನ ವಿಗ್ರಹ ನಿರ್ಮಾಣದಲ್ಲಿ ಭಾಗಿಯಾಗುವ ಸೌಭಾಗ್ಯ ಸಿಕ್ಕಿದ್ದು ನನ್ನ ಬದುಕಿನ ಪವಿತ್ರ ಕ್ಷಣ.
– ಜಯಚಂದ್ರ ಆಚಾರ್ಯ ನಾಳ, ಶಿಲ್ಪಿ
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.