ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬನೆಯ ಹೆಗ್ಗಳಿಕೆ
ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ಸೋಲಾರ್ ಘಟಕ ,ಮೆಸ್ಕಾಂನಿಂದ ಹೆಚ್ಚುವರಿ ವಿದ್ಯುತ್ ಖರೀದಿ
Team Udayavani, Jan 28, 2021, 2:20 AM IST
ಬಂಟ್ವಾಳ: ಸರಕಾರವು ತನ್ನ ಅಧೀನ ಸಂಸ್ಥೆಗಳ ನಿರ್ವಹಣೆಗಾಗಿ ಪ್ರತೀ ತಿಂಗಳು ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದು, ಅದರಲ್ಲಿ ವಿದ್ಯುತ್ ಶುಲ್ಕ ಮುಖ್ಯವಾಗಿರುತ್ತದೆ. ಆದರೆ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಸೋಲಾರ್ ಘಟಕದ ಮೂಲಕ ಮೆಸ್ಕಾಂನ ಗ್ರಿಡ್‌ಗೆ ಹೆಚ್ಚುವರಿ ವಿದ್ಯುತ್ ಪೂರೈಕೆ ಮಾಡುತ್ತಿದೆ !
ಬಂಟ್ವಾಳ ಪುರಸಭೆ ವ್ಯಾಪ್ತಿಯ ಎತ್ತರದ ಪ್ರದೇಶವಾದ ಅರ್ಬಿಗುಡ್ಡೆ ಭಾಗದಲ್ಲಿ ಸರ ಕಾರಿ ಪಾಲಿಟೆಕ್ನಿಕ್ ಕಾರ್ಯಾಚರಿಸುತ್ತಿದ್ದು, ಪಾಲಿಟೆಕ್ನಿಕ್ ಕಟ್ಟಡದ ಮೇಲ್ಛಾವಣಿಯಲ್ಲಿ 33 ಕಿಲೋವ್ಯಾಟ್(ಕೆವಿ) ಸಾಮರ್ಥ್ಯದ ಸೋಲಾರ್ ಘಟಕ ಅಳವಡಿಸಲಾಗಿದೆ. ಇದು ಬಹಳ ಎತ್ತರದ ಪ್ರದೇಶವಾದ ಕಾರಣದಿಂದ ಬಿಸಿಲಿನ ತೀವ್ರತೆಯು ಹೆಚ್ಚಿದ್ದು, ವಿದ್ಯುತ್ ಉತ್ಪಾದನೆಗೆ ಪೂರಕ ವಾತಾವರಣವಿದೆ.
ತಿಂಗಳ ಮೊತ್ತ 40 ಸಾವಿರ ರೂ. :
ಪಾಲಿಟೆಕ್ನಿಕ್‌ನ ವಿವಿಧ ವಿಭಾಗಗಳ ಪ್ರಯೋಗಾಲಯಗಳಲ್ಲಿ ಕಂಪ್ಯೂಟರ್ ಹಾಗೂ ಮೆಷಿನರಿಗಳು ಕಾರ್ಯಾಚರಿಸುವುದರಿಂದ ವಿದ್ಯುತ್ ಶುಲ್ಕ ಸರಾಸರಿ ಸುಮಾರು 40 ಸಾವಿರ ರೂ. ಬರುತ್ತದೆ. ಈ ಮೊತ್ತ ಕಳೆದು ಸೋಲಾರ್ ಘಟಕದಿಂದ ಹೆಚ್ಚುವರಿ ವಿದ್ಯುತ್ ಅನ್ನು ಮೆಸ್ಕಾಂಗೆ ನೀಡುವುದರಿಂದ ತಿಂಗಳಿಗೆ ಸುಮಾರು 3ರಿಂದ 4 ಸಾವಿರ ರೂ. ಮೆಸ್ಕಾಂ ನೀಡುತ್ತಿದ್ದು, ಕಳೆದ ವರ್ಷ 31 ಸಾವಿರ ರೂ. ಪಾಲಿಟೆಕ್ನಿಕ್‌ಗೆ ಹೆಚ್ಚುವರಿ ವಿದ್ಯುತ್ ಮಾರಾಟದ ಆದಾಯ ಬಂದಿತ್ತು.
ಸರಕಾರಿ 40 ಸಾವಿರ ರೂ. ವಿದ್ಯುತ್ ಶುಲ್ಕದಂತೆ ವಾರ್ಷಿಕವಾಗಿ 4.80 ಲಕ್ಷ ರೂ. ಉಳಿಕೆ ಮಾಡಲಾಗುತ್ತಿದ್ದು, ಜತೆಗೆ ಹೆಚ್ಚುವರಿ ವಿದ್ಯುತ್ ಮಾರಾಟದ ಮೊತ್ತ ಸೇರಿ ವಾರ್ಷಿಕ ಉಳಿಕೆ 5 ಲಕ್ಷ ರೂ. ದಾಟುತ್ತದೆ. ಆದರೆ ಮಳೆಗಾಲದಲ್ಲಿ ಕೆಲ ತಿಂಗಳು ಸ್ವಲ್ಪ ಮೊತ್ತವನ್ನು ಮೆಸ್ಕಾಂಗೆ ಪಾವತಿಸಲು ಸಿಗುತ್ತದೆ. ರಜಾ ಸಮಯದಲ್ಲಿ ಇಲ್ಲಿ ಬಳಕೆಯಾಗದೇ ಇದ್ದಾಗ ನೇರವಾಗಿ ವಿದ್ಯುತ್ ಗ್ರಿಡ್‌ಗೆ ಪೂರೈಕೆಯಾಗುತ್ತದೆ.
20 ಲಕ್ಷ ರೂ.ಅನುಷ್ಠಾನ ವೆಚ್ಚ :
ಪಾಲಿಟೆಕ್ನಿಕ್ ಕೆಲವೊಂದು ಸೇವೆಗಳ ಮೂಲಕ ಆದಾಯ ಗಳಿಕೆ (ರೆವೆನ್ಯೂ ಜನರೇಶನ್)ಮಾಡುತ್ತಿದ್ದು, ಅದರ ಮೊತ್ತದಲ್ಲಿ ಸೋಲಾರ್ ಘಟಕ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಅನುಷ್ಠಾನಗೊಳಿಸಿದೆ. 2015ರಲ್ಲಿ ಈ ಸೋಲಾರ್ ಘಟಕವನ್ನು ಅಳವಡಿಸಿದ್ದು, 20 ಲಕ್ಷ ರೂ. ವೆಚ್ಚ ತಗಲಿತ್ತು. ಅನುಷ್ಠಾನ ವೆಚ್ಚ ಹಾಗೂ ವಾರ್ಷಿಕ ಆದಾಯವನ್ನು ಲೆಕ್ಕ ಹಾಕಿದರೆ, ಅನುಷ್ಠಾನದ ಮೊತ್ತ ಈಗಾಗಲೇ ಬಂದಿರುವ ಸಾಧ್ಯತೆ ಇದೆ. ಸುಮಾರು 25 ವರ್ಷಗಳ ಇದರ ನಿರ್ವಹಣೆ ಉಚಿತವಾಗಿದ್ದು, ಯಾವುದೇ ಖರ್ಚುಗಳಿರುವುದಿಲ್ಲ. ಅಂದಿನ ಪ್ರಾಂಶುಪಾಲ ಡಾ| ಚೆನ್ನಗಿರಿ ಗೌಡ ನೇತೃತ್ವದಲ್ಲಿ ಈ ಕಾರ್ಯ ನಡೆದಿದ್ದು, ಪ್ರಸ್ತುತ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ದೇವರಾಜ್ ನಾಯಕ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಟಾಪ್-10 ಕಾಲೇಜು ಗೌರವ :
ಪ್ರಸ್ತುತ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ಸುಮಾರು 580 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ರಾಜ್ಯದ ಟಾಪ್-10 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಇದೂ ಒಂದಾಗಿದೆ. ಮಂಗಳೂರು ಕೆಪಿಟಿಯನ್ನು ಹೊರತು ಪಡಿಸಿದರೆ ಜಿಲ್ಲೆಯ 2ನೇ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಎಂಬ ಗೌರವವಿದೆ. ಇದರ ಜತೆಗೆ ವಿದ್ಯುತ್ ಬಳಿಕೆಯಲ್ಲೂ ಸ್ವಾವಲಂಬನೆ ಸಾಧಿಸಿರುವುದು ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ.
ಸಂಸ್ಥೆಯಲ್ಲಿ ಸೋಲಾರ್ ಘಟಕ ಅಳವಡಿಸಿರುವ ಕಾರಣ ನಮಗೆ ವಿದ್ಯುತ್ ಶುಲ್ಕ ಪಾವತಿಗೆ ಸಿಗುವುದಿಲ್ಲ. ಹೆಚ್ಚುವರಿ ವಿದ್ಯುತ್ ಗ್ರಿಡ್‌ಗೆ ಪೂರೈಕೆ ಮಾಡಲಾಗುತ್ತಿದ್ದು, ಅದರ ಮೊತ್ತವನ್ನು ಮೆಸ್ಕಾಂನವರು ನೀಡುತ್ತಿದ್ದಾರೆ. ಹೀಗಾಗಿ ಸಂಸ್ಥೆಯು ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆ. -ಸಿ.ಜೆ. ಪ್ರಕಾಶ್, ಪ್ರಾಂಶುಪಾಲರು, ಸರಕಾರಿ ಪಾಲಿಟೆಕ್ನಿಕ್, ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.