ಸೇವಾಜೆ ಸರಕಾರಿ ಶಾಲೆ: ದಿನ ಬಳಕೆಗೆ ನೀರಿಲ್ಲ !
Team Udayavani, Mar 17, 2019, 6:23 AM IST
ಸುಳ್ಯ : ದೇವಚಳ್ಳ ಗ್ರಾಮದ ಸೇವಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀರಾ ಬಿಗಡಾಯಿಸಿದೆ. ಶಾಲೆಗೆ ಕುಡಿಯುವ ನೀರಿನ ಏಕೈಕ ಮೂಲವಾಗಿದ್ದ ಶಾಲಾ ಬಾವಿಯಲ್ಲಿ ನೀರು ಬತ್ತಿದ್ದು, ದಿನ ಬಳಕೆಯ ನೀರಿಗೆ ಪರದಾಡುವ ಸ್ಥಿತಿ ಉಂಟಾಗಿದೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದಾಗಿದ್ದು, 1ರಿಂದ 5 ನೇ ತರಗತಿ ತನಕ 32 ಮಕ್ಕಳು, ಶಾಲೆಗೆ ಒಳಪಟ್ಟ ಅಂಗನವಾಡಿ ಕೇಂದ್ರದಲ್ಲಿ 30 ಮಕ್ಕಳಿದ್ದಾರೆ. ಅಡುಗೆ ತಯಾರಿ, ಕುಡಿಯಲು, ಶೌಚಾಲಯ ಸಹಿತ ಅಗತ್ಯ ವ್ಯವಸ್ಥೆಗಳಿಗೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಕೊಳವೆಬಾವಿ ನೀರು ಸಿಗಲಿಲ್ಲ
ನೀರಿನ ಕೊರತೆ ಸಮಸ್ಯೆಯನ್ನು ಜಿ.ಪಂ. ಗಮನಕ್ಕೆ ತಂದ ಕಾರಣ, ಕೊಳವೆಬಾವಿ ಕೊರೆಯಲು ಅನುಮತಿ ಸಿಕ್ಕಿತ್ತು. ಜಿ.ಪಂ. ವತಿಯಿಂದ ಕೆಲ ದಿನಗಳ ಹಿಂದೆ ಕೊಳವೆ ಬಾವಿ ಕೊರೆಯಲಾಗಿದ್ದು, 640 ಫೀಟ್ ಆಳಕ್ಕಿಳಿದರೂ ತೊಟ್ಟು ನೀರು ಸಿಗಲಿಲ್ಲ. ಹೀಗಾಗಿ ಕೊಳವೆ ಬಾವಿಯಲ್ಲಿ ನೀರು ಸಿಗುವ ನಿರೀಕ್ಷೆ ಕೈ ಕೊಟ್ಟಿದೆ. ಈ ಶಾಲೆ ಆಸುಪಾಸಿನಲ್ಲಿ ಜನವಸತಿ ಪ್ರದೇಶಗಳು ಇಲ್ಲದ ಕಾರಣ ಖಾಸಗಿ ವ್ಯವಸ್ಥೆ ಮೂಲಕ ನೀರು ಬಳಸುವ ಸ್ಥಿತಿಯೂ ಇಲ್ಲಿಲ್ಲ. ಹೀಗಾಗಿ ಇನ್ನೆರಡು ತಿಂಗಳು ನೀರಿಗೇನು ಮಾಡುವುದು ಎನ್ನುವ ಚಿಂತೆ ಶಾಲೆಯನ್ನು ಕಾಡಿದೆ.
ಬಯಲೇ ಗತಿ!
ಶೌಚಾಲಯ ಬಳಕೆಗೆ ನೀರಿಲ್ಲದ ಕಾರಣ ಮಕ್ಕಳಿಗೆ ಬಯಲು ಶೌಚಾಲಯವೇ ಗತಿ ಎನ್ನುವಂತಾಗಿದೆ. ಕೆಲ ವರ್ಷಗಳಿಂದ ನೀರಿನ ಅಭಾವ ಉಂಟಾಗುತ್ತಿದ್ದು, ಸ್ಥಳೀಯಾಡಳಿತ, ಎಲ್ಲ ಸ್ತರದ ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಆದರೆ ಸಮಸ್ಯೆ ಪರಿಹಾರ ಕಂಡಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಭವಿಷ್ಯವೂ ತೂಗುಯ್ನಾಲೆಯಲ್ಲಿದೆ.
ಬಿಸಿಯೂಟಕ್ಕೂ ಕಾಡಿದೆ ಸಮಸ್ಯೆ
ದಿನಂಪ್ರತಿ 32 ವಿದ್ಯಾರ್ಥಿಗಳಿಗೆ ಬಿಸಿಯೂಟದ ಸೌಲಭ್ಯವಿದೆ. ಅಂಗನವಾಡಿ ಮಕ್ಕಳಿಗೂ ಊಟ ತಯಾರಿ ಆಗಬೇಕು. ಆದರೆ ನೀರಿಲ್ಲದ ಕಾರಣ ಅಡುಗೆ ಮಾಡುವುದು ಹೇಗೆ ಎನ್ನುವ ಸಮಸ್ಯೆ ಉಂಟಾಗಿದೆ. ಶಾಲಾ ಮಕ್ಕಳು ಮನೆಯಿಂದ ಬಾಟಲ್ ಬಳಸಿ ನೀರು ತರುತ್ತಾರೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೂ ಪರ್ಯಾಯ ವ್ಯವಸ್ಥೆ ಇಲ್ಲದೆ ದಿನ ಕಳೆಯುವುದು ಹೇಗೆ ಎನ್ನುವಂತಾಗಿದೆ.
ತಹಶೀಲ್ದಾರ್‌ಗೆ ಮನವಿ
ಜನವರಿಯಿಂದಲೇ ನೀರಿನ ಸಮಸ್ಯೆ ಕಾಡಿದೆ. ಈಗಂತೂ ಬಾವಿ ಬತ್ತಿದೆ. ಕೊಳವೆಬಾವಿ ಕೈ ಕೊಟ್ಟಿದೆ. ವಿದ್ಯಾರ್ಥಿಗಳಿಗೆ ನೀರೊದಗಿಸುವು ಹೇಗೆ ಎನ್ನುವುದೇ ಚಿಂತೆಯಾಗಿದೆ. ಈ ಬಗ್ಗೆ ತಾಲೂಕು ಎಸ್‌ಡಿಎಂಸಿ ಮೂಲಕ ತಹಶೀಲ್ದಾರ್ ಅವರಿಗೆ ಶನಿವಾರ ಮನವಿ ಮಾಡಿದ್ದೇವೆ.
– ರಾಜೇಂದ್ರ ಜೈನ್
ಎಸ್‌ಡಿಎಂಸಿ ಸದಸ್ಯ
ಸ್ಪಂದನೆಯ ಭರವಸೆ
ಸೇವಾಜೆ ಶಾಲೆಯ ಸಮಸ್ಯೆ ಬಗ್ಗೆ ಸ್ಥಳೀಯ ಎಸ್‌ಡಿಎಂಸಿ ಅವರ ವತಿಯಿಂದ ತಾಲೂಕು ಎಸ್‌ಡಿಎಂಸಿ ಒಕ್ಕೂಟದ ಮೂಲಕ ತಹಶೀಲ್ದಾರ್ ಗೆ ಮನವಿ ಮಾಡಿದ್ದೇವೆ. ಅವರು ಸ್ಪಂದಿಸುವ ಭರವಸೆ ನೀಡಿದ್ದಾರೆ.
– ಹಸೈನಾರ್ ಜಯನಗರ ಕಾರ್ಯದರ್ಶಿ,
ಎಸ್‌ಡಿಎಂಸಿ ತಾಲೂಕು ಒಕ್ಕೂಟ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.