ವಿಶೇಷ ವರದಿ: ಪುತ್ತೂರು ಎಪಿಎಂಸಿ: 1,000 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು
6 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸ; ಅ. 3ರಂದು ಲೋಕಾರ್ಪಣೆ
Team Udayavani, Sep 30, 2020, 3:22 AM IST
ಪುತ್ತೂರು ಎಪಿಎಂಸಿಯಲ್ಲಿನ ಗೋದಾಮು.
ಪುತ್ತೂರು: ಆದಾಯ ಮತ್ತು ರೈತರಿಗೆ ಸಹಕಾರಿ ಎನ್ನುವ ತತ್ತ್ವದಡಿ ಪುತ್ತೂರು ಎಪಿಎಂಸಿಯಲ್ಲಿ 1,000 ಮೆಟ್ರಿಕ್ ಟನ್ ಸಾಮರ್ಥ್ಯದ ಬೃಹತ್ ಗೋದಾಮು ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧಗೊಂಡಿದೆ. ನಗರದ ಸಾಲ್ಮರದಲ್ಲಿರುವ ಎಪಿಎಂಸಿ ಪ್ರಾಂಗಣದಲ್ಲಿ ನಡೆದಿರುವ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಈ ಗೋದಾಮು ಹೊಸ ಸೇರ್ಪಡೆಯೆನಿಸಿದೆ. ಇದರ ಅಂತಿಮ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, ನೀಲಿ, ಬಿಳಿ ಬಣ್ಣದೊಂದಿಗೆ ಕಂಗೊಳಿಸುತ್ತಿದೆ. ತರಕಾರಿ ಮಾರುಕಟ್ಟೆ ಪಕ್ಕದಲ್ಲೇ ಹೊಸ ಗೋದಾಮು ನಿರ್ಮಾಣಗೊಂಡಿದೆ.
ಆಹಾರ ಇಲಾಖೆಗೆ ಬಾಡಿಗೆಗೆ ನೀಡಲು ಚಿಂತನೆ
ಗೋದಾಮು ಅನ್ನು ಆಹಾರ ಇಲಾಖೆಯ ಪಡಿತರ ಆಹಾರ ಸಾಮಗ್ರಿ ದಾಸ್ತಾನು ಸಂಗ್ರಹಿಸಿಡಲು ಬಾಡಿಗೆ ರೂಪದಲ್ಲಿ ನೀಡಲು ಎಪಿಎಂಸಿ ಚಿಂತನೆ ನಡೆಸಿದೆ. ಇದರಿಂದ ಎಪಿಎಂಸಿಗೆ ಮಾಸಿಕ ಆದಾಯ ಸಿಗಲಿದೆ. ಸರಕಾರದಿಂದ ತಾಲೂಕಿನ ಪಡಿತರ ಫಲಾನುಭವಿಗಳಿಗೆ ಪ್ರತಿ ತಿಂಗಳು ನೀಡುವ ಆಹಾರ ಸಾಮಗ್ರಿಗಳನ್ನು ದಾಸ್ತಾನು ಇರಿಸಲು ಸುಸಜ್ಜಿತ ಗೋದಾಮಿನ ಆವಶ್ಯಕತೆ ಇದ್ದು, ಆಹಾರ ಇಲಾಖೆ ಈ ನಿಟ್ಟಿನಲ್ಲಿ ಎಪಿಎಂಸಿ ಗೋದಾಮು ಬಳಸಲು ಮಾತುಕತೆ ನಡೆದಿದೆ. ಇದರ ಜತೆಗೆ ರೈಲು ಮೂಲಕ ಅಡಿಕೆ ಸಾಗಾಟಕ್ಕೆ ಚಾಲನೆ ದೊರೆತಿದ್ದು, ಎಪಿಎಂಸಿ ಪ್ರಾಂಗಣದ ಅಂಗಡಿಗಳಲ್ಲಿನ ಅಡಿಕೆ ಜತೆಗೆ ಇತರ ಅಡಿಕೆ, ಕೃಷಿ ಉತ್ಪನ್ನ ದಾಸ್ತಾನು ಇಡಲು ಈ ಗೋದಾಮು ಪೂರಕವೆನಿಸಿದೆ.
6 ಕೋ. ರೂ. ವೆಚ್ಚದ ಅಭಿವೃದ್ಧಿ ಕೆಲಸ
ಗೋದಾಮು ಸಹಿತ ಎಪಿಎಂಸಿ ಒಟ್ಟು 6 ಕೋ. ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ವಾರದ ಸಂತೆಗೆ ಪೂರಕವಾಗಿ 35 ಲಕ್ಷ ರೂ. ವೆಚ್ಚದ ನವೀಕೃತ ತರಕಾರಿ ಮಾರುಕಟ್ಟೆ, 60 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಎಪಿಎಂಸಿ ಪ್ರಾಂಗಣದಲ್ಲಿ 2 ಕೋ. ರೂ. ವೆಚ್ಚದಲ್ಲಿ ಸಿಸಿ ರಸ್ತೆ, 30 ಲಕ್ಷ ರೂ. ವೆಚ್ಚದಲ್ಲಿ ಸಂಡ್ರಿಶಾಪ್, 10 ಲಕ್ಷ ರೂ. ವೆಚ್ಚದಲ್ಲಿ 3 ಶೌಚಾಲಯ, 1.5 ಕೋ. ರೂ. ವೆಚ್ಚದಲ್ಲಿ ಇಂಟರ್‌ಲಾಕ್, ನವೀಕೃತ ಹೋದೋಟ ಹೀಗೆ ವಿವಿಧ ಕಾಮಗಾರಿಗಳು ಅನುಷ್ಠಾನಗೊಂಡಿವೆ. ಅ. 3ರಂದು ಲೋಕಾರ್ಪಣೆ ನಡೆಯಲಿದೆ.
ಕಬ್ಬಿಣದ ರಾಡ್ ರಹಿತ ಶೀಟ್ ಬಳಕೆ
1,000 ಮೆಟ್ರಿಕ್ ಟನ್ ಸಾಮರ್ಥ್ಯ ಇರುವ ಈ ಗೋದಾಮಿಗೆ ಗುಜರಾತ್‌ನ ತಂತ್ರಜ್ಞಾನ ಬಳಸಿ ಕಬ್ಬಿಣದ ರಾಡ್ ಸಹಿತ ಯಾವುದೇ ಪರಿಕರ ಬಳಸದೆ ಸ್ವ-ಸಾಮರ್ಥ್ಯದಲ್ಲಿ ನಿಲ್ಲುವ ಹೊಸ ಮಾದರಿಯ ಶೀಟು ಅಳವಡಿಸಲಾಗಿದೆ. ಶೀಟ್‌ಗೆ ಆಧಾರವಾಗಿ ಕಬ್ಬಿಣದ ರಾಡ್ ಬಳಸಿಲ್ಲ. ಇಡೀ ಛಾವಣಿಯನ್ನು ನೇರವಾಗಿ ಶೀಟ್‌ನಿಂದಲೇ ಮುಚ್ಚಲಾಗಿದೆ. ಗುಜರಾತ್ ಕಾರ್ಮಿಕರು ರೋಲ್ ತಂದು ಅದನ್ನು ಇಲ್ಲಿಯೇ ಸಿದ್ಧಪಡಿಸಿದ್ದಾರೆ. ಮಾಮೂಲಿ ಶೀಟ್‌ಗಿಂತ ಇದು ಬಾಳಿಕೆ, ಗಟ್ಟಿ ಹೆಚ್ಚು. 1 ಎಂ.ಎಂ. ದಪ್ಪ ಇದೆ. 36 ಮೀಟರ್ ಉದ್ದ ಹಾಗೂ 18 ಮೀಟರ್ ಅಗಲ ಇದೆ ಎನ್ನುತ್ತಾರೆ ಎಪಿಎಂಸಿ ಪ್ರಾಂಗಣದ ವಿವಿಧ ಕಾಮಗಾರಿ ನಿರ್ವಹಣೆ ಹೊಣೆ ಹೊತ್ತಿರುವ ಜಯಕುಮಾರ್. ಈ ಗೋದಾಮು ನಿರ್ಮಾಣಕ್ಕೆ 1 ಕೋ. ರೂ. ವೆಚ್ಚ ತಗಲಿದ್ದು, ಕಡಿಮೆ ವೆಚ್ಚ, ಉತ್ತಮ ಗುಣಮಟ್ಟದ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ ಎನ್ನುತ್ತಾರೆ ಗುತ್ತಿಗೆದಾರರು.
ರೈತ ಪರ ಎಪಿಎಂಸಿ
1,000 ಮೆಟ್ರಿಕ್ ಟನ್ ಗೋದಾಮು ನಿರ್ಮಾಣದ ಮೂಲಕ ಆದಾಯ ಸಂಗ್ರಹ ಹಾಗೂ ರೈತರಿಗೆ ಸಹಕಾರಿ ಆಗುವ ಚಿಂತನೆ ಹೊಂದಲಾಗಿದೆ. ಇದರ ಜತೆಗೆ ಒಟ್ಟು 6 ಕೋ. ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಪುತ್ತೂರು ಎಪಿಎಂಸಿ ಅನ್ನು ರೈತರ, ಕೃಷಿಕರ ಎಪಿಎಂಸಿಯನ್ನಾಗಿ ರೂಪಿಸುವುದು ನಮ್ಮ ಗುರಿ.
-ದಿನೇಶ್ ಮೆದು, ಅಧ್ಯಕ್ಷರು ಎಪಿಎಂಸಿ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.