ವಿಪರೀತ ಮಳೆ: ಔಷಧ ಸಿಂಪಡಣೆ ದೊಡ್ಡ ಸವಾಲು: ಅಡಿಕೆ ತೋಟಗಳಲ್ಲಿ ಕೊಳೆರೋಗದ ಲಕ್ಷಣ
Team Udayavani, Jul 19, 2022, 6:40 AM IST
ಪುತ್ತೂರು: ಕರಾವಳಿಯ ಚಾಲಿ ಅಡಿಕೆ ಧಾರಣೆ ಸತತ ಏರಿಕೆಯ ಹಂತದಲ್ಲಿರುವಾಗಲೇ ಅಡಿಕೆ ಬೆಳೆಗಾರರು ತೋಟಕ್ಕೆ ತಗಲಿರುವ ಕೊಳೆರೋಗದಿಂದ ಕಳವಳಗೊಂಡಿದ್ದಾರೆ.
ಒಂದು ತಿಂಗಳಿನಿಂದ ವಿಪರೀತ ಮಳೆಯಿಂದ ಔಷಧ ಸಿಂಪಡಣೆ ಮಾಡಲು ಸಮಸ್ಯೆಯಾಗಿದೆ. ಇದರಿಂದ ಪುತ್ತೂರು, ಸುಳ್ಯ, ಕಡಬ ತಾಲೂಕಿನ ಅಡಿಕೆ ತೋಟಗಳಲ್ಲಿ ಕೊಳೆರೋಗದ ಲಕ್ಷಣಗಳು ಕಂಡು ಬಂದಿವೆ.
ಜುಲೈಯಲ್ಲಿ ಮಳೆ ಹೆಚ್ಚಳ
ಶೇ. 50ಕ್ಕಿಂತ ಅಧಿಕ ತೋಟಗಳಲ್ಲಿ ಸದ್ಯ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಮೊದಲ ಹಂತದಲ್ಲಿ ಔಷಧ ಸಿಂಪಡಣೆ ಸಾಧ್ಯವಾಗಿಲ್ಲ. ಇದರ ನೇರ ಪರಿಣಾಮ ಅಡಿಕೆ ಬೆಳೆಯ ಮೇಲೆ ಉಂಟಾಗಿದೆ. ಅಡಿಕೆಗೆ ಉತ್ತಮ ಧಾರಣೆ ಇದ್ದರೂ ಮುಂದಿನ ವರ್ಷದ ಫಸಲು ಕೊಳೆರೋಗಕ್ಕೆ ತುತ್ತಾದರೆ ಸಮಸ್ಯೆಯಾಗಲಿದೆ ಎನ್ನುತ್ತಾರೆ ಕೃಷಿಕ ಜತ್ತಪ್ಪ ಪುತ್ತೂರು.
ಔಷಧ ಸಿಂಪಡಣೆಯೇ ಪರಿಹಾರ
ಈ ಹಂತದಲ್ಲಿ ರೋಗ ತಗಲದಂತೆ ಬೋರ್ಡೊ ದ್ರಾವಣ ಸಿಂಪಡಿಸಬೇಕಾಗುತ್ತದೆ. ಪ್ರಸ್ತುತ ಸತತ ಮಳೆ ಸುರಿಯುವ ಜತೆಯಲ್ಲಿ ಶೀತಗಾಳಿಯೂ ಬೀಸುತ್ತಿದೆ. ಇದು ಕೊಳೆರೋಗ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ವಿಪರೀತ ಮಳೆ ಕಾರಣದಿಂದ ಸದ್ಯಕ್ಕೆ ಏನೂ ಮಾಡಲಾಗದ ಸ್ಥಿತಿ ಅಡಿಕೆ ಬೆಳೆಗಾರರದ್ದು. ಅಡಿಕೆ ಈಗಷ್ಟೇ ಬೆಳೆಯುತ್ತಿದ್ದು, ರೋಗಕ್ಕೆ ತುತ್ತಾದರೆ ಅಲ್ಲೇ ಉದುರುತ್ತದೆ. ಒಂದು ಮರದಲ್ಲಿ ರೋಗ ಕಾಣಿಸಿಕೊಂಡರೆ ಅದು ಇಡೀ ತೋಟಕ್ಕೆ ಆವರಿಸಿ ಹಾನಿ ಮಾಡುವ ಸಂಭವ ಇರುತ್ತದೆ. ಇದಕ್ಕಾಗಿ ಮಳೆ ಬಿಟ್ಟ ತತ್‌ಕ್ಷಣ ಅಡಿಕೆ ಗೊನೆಗಳಿಗೆ ಬೋರ್ಡೊ ದ್ರಾವಣ ಸಿಂಪಡಣೆ ಮಾಡಿದರೆ ಮಾತ್ರ ಈ ಕೊಳೆರೋಗದಿಂದ ಬೆಳೆಯನ್ನು ರಕ್ಷಿಸಲು ಸಾಧ್ಯ ಅನ್ನುತ್ತಾರೆ ತಜ್ಞರು.
ಕೊಳೆರೋಗ ಲಕ್ಷಣ
ಕೊಳೆರೋಗ ಫೈಟಾಪ್ರತ್ ಆರಕೆ ಎಂಬ ಶಿಲೀಂಧ್ರದಿಂದ ಹರಡುತ್ತದೆ. ಗಾಳಿ, ಮಳೆ ಹನಿ ಮೂಲಕ ಆರೋಗ್ಯವಂತ ಕಾಯಿಗಳನ್ನು ಆವರಿಸಿಕೊಂಡು ಶಿಲೀಂಧ್ರ ಹೆಚ್ಚಿ ರೋಗ ವ್ಯಾಪಿಸತೊಡಗುತ್ತದೆ. ಕಡಿಮೆ ಉಷ್ಣಾಂಶ, ಹೆಚ್ಚು ಮಳೆ, ತೇವಾಂಶದಿಂದ ಕೂಡಿದ ವಾತಾವರಣ, ಒಟ್ಟಾಗಿ ಬರುವ ಮಳೆ ಬಿಸಿಲು ಈ ರೋಗ ಹರಡುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಮೊದಲಿಗೆ ಅಡಿಕೆ ಕಾಯಿಗಳ ಮೇಲೆ ಹಚ್ಚ ಹಸಿರು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಅನಂತರ ಇದೇ ಮಚ್ಚೆಗಳು ದೊಡ್ಡದಾಗಿ ಕಾಯಿಗಳ ಮೇಲ್ಭಾಗದಲ್ಲೂ ಆವರಿಸಿ ನಿಧಾನಕ್ಕೆ ಕೊಳೆಯುವಂತೆ ಮಾಡುತ್ತದೆ. ರೋಗದ ತೀವ್ರತೆ ಹೆಚ್ಚಾದಾಗ ಅಡಿಕೆ ಕಾಯಿಗಳು ದಟ್ಟ ಹಸುರು ಬಣ್ಣಕ್ಕೆ ತಿರುಗಿ ತೊಟ್ಟಿನಿಂದ ಕಳಚಿ ಉದುರಿಹೋಗುತ್ತವೆ.
ರೋಗ ಹತೋಟಿ ಹೇಗೆ
ಕೊಳೆ ರೋಗ ತಗುಲಿದ ಕಾಯಿಗಳು, ಒಣಗಿದ ಗೊಂಚಲುಗಳನ್ನು ನಾಶಪಡಿಸಬೇಕು. ಬೋರ್ಡೊ ದ್ರಾವಣವನ್ನು ಅಡಿಕೆ ಗೊನೆಗಳ ಮೇಲೆ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕು. ಬಳಿಕ 30ರಿಂದ 45 ದಿನಗಳ ಅಂತರದಲ್ಲಿ ಎರಡನೇ ಸಿಂಪಡಣೆ ಮಾಡಬೇಕು. ಮಳೆಗಾಲ ಮುಂದುವರಿದಲ್ಲಿ ಮೂರನೇ ಬಾರಿಯೂ ಸಿಂಪಡಿಸಬೇಕಾಗುತ್ತದೆ. ರೋಗಾಣು ಮಣ್ಣಿನ ಪದರದಲ್ಲೂ ಬದುಕು ವುದರಿಂದ ಮಣ್ಣು ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.