Soldier’s Story: ನಿವೃತ್ತರಾಗಿ ಊರಿಗೆ ಮರಳಲು ಕೆಲವೇ ತಿಂಗಳಿತ್ತು!
ಶ್ರೀಲಂಕಾದಲ್ಲಿ ವೀರ ಮರಣವನ್ನಪ್ಪಿದ ಯೋಧ ಬಂಟ್ವಾಳದ ಚಂದ್ರಶೇಖರ ಎ.
Team Udayavani, Aug 12, 2023, 11:00 AM IST
ಬಂಟ್ವಾಳ: ಹದಿಮೂರು ವರ್ಷಗಳ ದೇಶ ಸೇವೆ ಮುಗಿಸಿ ಇನ್ನೇನು ಕೆಲವೇ ತಿಂಗಳಲ್ಲಿ ಸೇವಾವಧಿ ಪೂರ್ಣಗೊಳಿಸಿ ಊರಿಗೆ ಬಂದು ಕುಟುಂಬದ ಜತೆ ಸಂತೋಷದ ಜೀವನ ಸಾಗಿಸಬೇಕಿತ್ತು. ಆದರೆ ಅದಾಗಲೇ ಆ ಕುಟುಂಬಕ್ಕೆ ಸುದ್ದಿಯೊಂದು ಬರ ಸಿಡಿಲಿನಂತೆ ಅಪ್ಪಳಿಸಿತ್ತು. ದೇಶ ಸೇವೆಗೆ ಹೋಗಿದ್ದ ಮನೆ ಮಗ ಯುದ್ಧ ಭೂಮಿಯಲ್ಲೇ ವೀರ ಮರಣವನ್ನಪ್ಪಿದ್ದು, ಕೊನೆಯದಾಗಿ ಆತನ ಮುಖವನ್ನೇ ಕಾಣುವ ಅವಕಾಶ ಆ ಕುಟುಂಬಕ್ಕೆ ದಕ್ಕಲಿಲ್ಲ.
ಇದು ಬಂಟ್ವಾಳದ ವೀರಯೋಧ ಚಂದ್ರಶೇಖರ ಎ. ಅವರು ಶ್ರೀಲಂಕಾದ ಯುದ್ಧ ಭೂಮಿಯಲ್ಲಿ ವೀರ ಮರಣವನ್ನೈದಿದ ಕಥೆ.
1987ರ ಕಾಲಘಟ್ಟದಲ್ಲಿ ಇಂಡೋ-ಶ್ರೀಲಂಕಾ ಶಾಂತಿ ಒಪ್ಪಂದದ ಮೇಲ್ವಿಚಾರಣೆಗಾಗಿ ಭಾರತೀಯ ಶಾಂತಿ ಪಾಲನ ಪಡೆ(ಐಪಿಕೆಎಫ್)ಯೊಂದು ಶ್ರೀಲಂಕಾಕ್ಕೆ ತೆರಳಿತ್ತು. ಆದರೆ ಈ ವೇಳೆ ಸಂಘರ್ಷ ಜೋರಾಗಿ ಭಾರತೀಯ ಯೋಧರನ್ನು ಹತ್ಯೆ ಮಾಡಲಾಗಿದ್ದು, ಅದರಲ್ಲಿ ಚಂದ್ರಶೇಖರ ಕೂಡ ಇದ್ದರು.
ಉದ್ಯೋಗ ಬೇಕೆಂದು ಸೇನೆಗೆ ಸೇರ್ಪಡೆ
ಬಿ.ಸಿ.ರೋಡು ಅಲೆತ್ತೂರಿನ ಮಾರು ಮೂಲ್ಯ ಹಾಗೂ ಲಕ್ಷ್ಮೀ ದಂಪತಿಯ 8 ಮಕ್ಕಳಲ್ಲಿ 7ನೇಯವರಾಗಿದ್ದ ಚಂದ್ರಶೇಖರ ಪ್ರೌಢಶಿಕ್ಷಣವನ್ನು ಬಂಟ್ವಾಳದಲ್ಲೇ ಪೂರೈಸಿ 2 ವರ್ಷ ಮಂಗಳೂರಿನಲ್ಲಿ ಐಟಿಐ ಪೂರ್ತಿ ಮಾಡಿದ್ದರು. ಮತ್ತೆರಡು ವರ್ಷ ಕಾಲ ವೆಲೆನ್ಸಿಯಾದ ಸೈಂಟ್ ಜೋಸೆಫ್ ವರ್ಕ್‌ಶಾಪ್‌ನಲ್ಲಿ ತರಬೇತಿ ಪಡೆದು ಬಳಿಕ ಉದ್ಯೋಗವಿಲ್ಲದೆ ಊರಿನಲ್ಲೇ ಇರಬೇಕಾಗಿತ್ತು.
ಆಗ ಮಿಲಿಟರಿ ಸೆಲೆಕ್ಷನ್‌ನವರು ಬಂಟ್ವಾಳ (ಖಚಿತವಾಗಿ ಮಾಹಿತಿ ಸಿಕ್ಕಿಲ್ಲ) ಭಾಗಕ್ಕೆ ಆಗಮಿಸಿದ್ದರು. ಯಾವುದಾದರೂ ಉದ್ಯೋಗ ಬೇಕು ಎಂಬ ನಿರೀಕ್ಷೆಯಲ್ಲಿದ್ದ ಚಂದ್ರಶೇಖರ ಸ್ವಇಚ್ಛೆಯಿಂದ ಆಯ್ಕೆ ಶಿಬಿರಕ್ಕೆ ಹೋಗಿದ್ದರು. ದೈಹಿಕವಾಗಿ ಸದೃಢರಾಗಿದ್ದ ಕಾರಣಕ್ಕೆ ಆಯ್ಕೆಯಾದರು. ಮನೆಯವರು ಕೂಡ ಆಕ್ಷೇಪ ವ್ಯಕ್ತಪಡಿಸದೆ ದೇಶ ಸೇವೆಗೆ ಕಳುಹಿದರು. ಈ ಹಿಂದೆ ಅವರ ಕುಟುಂಬದ ಯಾರೂ ಮಿಲಿಟರಿಯಲ್ಲಿರಲಿಲ್ಲ. ಆದರೆ ಅವರ ಚಿಕ್ಕಪ್ಪನೊಬ್ಬ ಬ್ರಿಟಿಷ್ ಸರಕಾರದಲ್ಲಿ ಪೊಲೀಸ್ ಆಗಿದ್ದರು.
ಟೆಲಿಗ್ರಾಮ್ ಮೂಲಕ ಸುದ್ದಿ
ವೀರ ಮರಣವನ್ನಪ್ಪುವ ಸಂದರ್ಭ ಚಂದ್ರಶೇಖರಗೆ 33-34ರ ಹರೆಯ. ಯೌವನಾವಸ್ಥೆಯಲ್ಲಿದ್ದ ಅವರು ಬದುಕಿನಲ್ಲಿ ಸಾಧಿಸುವುದು ನೂರಾರಿತ್ತು. ದೇಶ ಸೇವೆಗೆ ಹೋಗಿದ್ದ ಮನೆ ಮಗ ಈ ರೀತಿ ವೀರ ಮರಣವನ್ನಪ್ಪಿದ ಸುದ್ದಿ ಟೆಲಿಗ್ರಾಮ್ ಮೂಲಕ ಬಂದಿತ್ತು. ಅದು ಬಿಟ್ಟರೆ ಅಂತಿಮವಾಗಿ ಅವರ ಮುಖವನ್ನು ನೋಡುವ ಅವಕಾಶವೂ ಸಿಕ್ಕಿಲ್ಲ ಎಂದು ಅಂದಿನ ಘಟನೆಗಳನ್ನು ನೆನೆಯುವಾಗ ಮನೆಮಂದಿಯ ಕಣ್ಣುಗಳು ತೇವಗೊಳ್ಳುತ್ತವೆ.
ಪತಿಯ ನಿಧನಾನಂತರ ಪತ್ನಿ ಇಂದಿರಾ ಇಬ್ಬರು ಹೆಣ್ಣು ಮಕ್ಕಳ ಜತೆ ಬಂಟ್ವಾಳದ ಭಂಡಾರಿಬೆಟ್ಟಿನಲ್ಲಿ ನೆಲೆಸಿದ್ದಾರೆ. ಚಂದ್ರಶೇಖರ ಜತೆ ಕಳೆದ ಕೆಲವೇ ವರ್ಷಗಳ ನೆನಪುಗಳೊಂದಿಗೆ ಪತ್ನಿ ಇಂದಿರಾ ಜೀವನವನ್ನು ಸಾಗಿಸುತ್ತಿದ್ದಾರೆ. ಮಕ್ಕಳಿಗೆ ವಿದ್ಯೆ ಕಲಿಸಿ ಸ್ವಾಭಿಮಾನದ ಬದುಕನ್ನೂ ನೀಡಿದ್ದಾರೆ.
ಕೊನೆಯ ಕ್ಷಣ ಶ್ರೀಲಂಕಾಕ್ಕೆ ತೆರಳಬೇಕಾಯಿತು
ದೇಶ ಸೇವೆಗೆ ಹೊರಟ 20ರ ಹರೆಯದ ತರುಣ ಚಂದ್ರಶೇಖರ ಪ್ರಾರಂಭದಲ್ಲಿ ರಾಂಚಿಯ ಭಾರತೀಯ ಸೇನಾ ಶಿಬಿರದಲ್ಲಿ ಸೇವೆಯನ್ನು ಪ್ರಾರಂಭಿಸಿ ಬಳಿಕ ಹೊಸದಿಲ್ಲಿ ಸೇರಿದಂತೆ ವಿವಿಧೆಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸೇವೆಯ ಕೊನೆಯ ವರ್ಷಗಳಲ್ಲಿ ಹೈದರಾಬಾದ್ ಗೆ ವರ್ಗಾವಣೆಗೊಂಡಿದ್ದರು.
ಆಗ ವಿವಾಹವಾಗಿದ್ದ ಅವರು ಪತ್ನಿ ಇಂದಿರಾ ಚಂದ್ರಶೇಖರ ಅವರನ್ನೂ ಅಲ್ಲಿಗೆ ಕರೆಸಿಕೊಂಡಿದ್ದರು. ಸುಮಾರು 4 ವರ್ಷಗಳ ಕಾಲ ಹೈದರಾಬಾದ್‌ನಲ್ಲೇ ಇದ್ದು, ಬಳಿಕ ತುರ್ತು ಆದೇಶದ ಮೇರೆಗೆ ಚಂದ್ರಶೇಖರ ಶ್ರೀಲಂಕಾಕ್ಕೆ ಹೋಗುವಂತೆ ಸೇನೆಯ ಆದೇಶವಾಯಿತು. ಹೀಗಾಗಿ ಪತ್ನಿ, ಮಕ್ಕಳನ್ನು ಊರಿಗೆ ಕಳುಹಿಸಿ ಲಂಕೆಗೆ ತೆರಳಿದ್ದರು.
ಲಂಕೆಗೆ ಹೋದ ಕೆಲವೇ ದಿನಗಳಲ್ಲಿ ಅಘಾತಕಾರಿ ಸುದ್ದಿಯೊಂದು ಬಂತು. ಘಟನೆ ನಡೆದು 36 ವರ್ಷಗಳೇ ಕಳೆದಿವೆ. ಭಾರತೀಯ ಸೇನೆಯ ಕೆಲವು ಯೋಧರು ಕರ್ತವ್ಯ ಮುಗಿಸಿ ಸೇನಾ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಜೋರಾದ ಶಬ್ದ ಕೇಳಿಸಿತು. ಆಗ ನಮ್ಮ ಯೋಧರು ಜೀಪು ನಿಲ್ಲಿಸಿ ಕೆಳಗೆ ಧುಮುಕು ತ್ತಿದ್ದಂತೆ ಅಲ್ಲೇ ಬಾಂಬ್ ಸ್ಫೋಟಗೊಂಡು ಸ್ಥಳದಲ್ಲೇ ವೀರ ಮರಣವನ್ನಪ್ಪಿದ್ದಾರೆ ಎಂಬ ಮಾಹಿತಿ ಸೇನೆಯಿಂದ ಬಂದುದಾಗಿ ಕುಟುಂಬದ ಮಂದಿ ತಿಳಿಸುತ್ತಾರೆ.
ಪತಿ ಹೈದರಾಬಾದ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಾನು ಕೂಡ ನಾಲ್ಕು ವರ್ಷಗಳ ಕಾಲ ಅವರ ಜತೆಗಿದ್ದೆ. ಮುಂದೆ ಅವರು ಶ್ರೀಲಂಕಾಕ್ಕೆ ತೆರಳಬೇಕು ಎಂಬ ಸೂಚನೆ ಬಂದಾಗ ನಾನು ಊರಿಗೆ ಬರಬೇಕಾಯಿತು. ಅಂದಿನ ವಿಚಾರಗಳನ್ನು ವಿವರಿಸುವಷ್ಟು ಮಾಹಿತಿ ನನಗೆ ತಿಳಿದಿಲ್ಲ. –ಇಂದಿರಾ ಚಂದ್ರಶೇಖರ ಚಂದ್ರಶೇಖರ ಅವರ ಪತ್ನಿ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.