ಸುಬ್ರಹ್ಮಣ್ಯ: ಹಲವು ಪ್ರದೇಶಗಳಿಗೆ ನುಗ್ಗಿದ ನೆರೆ ನೀರು
Team Udayavani, Aug 15, 2018, 1:01 PM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿದ ಅಬ್ಬರದ ಮಳೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ದಂಗಾದರು. ಅವರ ಪ್ರಯಾಣದಲ್ಲೂ ಮಳೆ ಹಾನಿಯ ಬಿಸಿ ತಟ್ಟಿತು. ಕುಮಾರಧಾರಾ ಸ್ನಾನಘಟ್ಟ, ಪರಿಸರದ ಮನೆಗಳು, ಅಂಗಡಿ-ಮುಂಗಟ್ಟುಗಳು ಜಲಾವೃತವಾಗಿವೆ. ಕುಮಾರಧಾರಾ ಜಂಕ್ಷನ್ ಸಮೀಪ ಅಂಗಡಿ, ಹೊಟೇಲ್ ಗಳಿಗೆ ನೀರು ನುಗ್ಗಿದೆ. ಮಾಲಕರು ತಮ್ಮ ಸರಂಜಾಮುಗಳನ್ನು ಎತ್ತರದ ಸ್ಥಳಗಳಿಗೆ ಸಾಗಿಸಿ, ರಕ್ಷಿಸಿಕೊಂಡರು. ಮಂಜೇಶ್ವರ-ಸುಬ್ರಹ್ಮಣ್ಯ ಸೇತುವೆಯೂ ಜಲಾವೃತವಾಗಿತ್ತು.
ಮೂವತ್ತೈದು ವರ್ಷಗಳ ಹಿಂದಿನ ನೆರೆಯ ಅವಾಂತರವನ್ನು ನೆನಪಿಸುವ ರೀತಿಯಲ್ಲಿ ಈ ಬಾರಿ ಮತ್ತೆ ಪ್ರವಾಹ ಬಂದಿದೆ. ಇದರಿಂದಾಗಿ ಸುಬ್ರಹ್ಮಣ್ಯ-ಮಂಜೇಶ್ವರ ಮತ್ತು ಗುಂಡ್ಯ-ಧರ್ಮಸ್ಥಳ ಸಂಪರ್ಕ ಕಡಿತಗೊಂಡಿತ್ತು. ಕ್ಷೇತ್ರಕ್ಕೆ ಬಂದ ಭಕ್ತರು ಹಾಗೂ ಸ್ಥಳೀಯರು ತೊಂದರೆಗಳೆ ಒಳಗಾದರು. ಜನ ಜೀವನ ಸಂಪೂರ್ಣ ಹದಗೆಟ್ಟಿದೆ. ಸುಬ್ರಹ್ಮಣ್ಯ ಪರಿಸರದ ತಗ್ಗು ಪ್ರದೇಶಗಳಾದ ಕುಲ್ಕುಂದ, ನೂಚಿಲ ಕಾಲನಿಯ ತನಿಯಪ್ಪ ನಾಯ್ಕ, ಚಂದ್ರ, ಸುಬ್ಬಣ್ಣ, ರಾಮಣ್ಣ, ಸುಬ್ಬಪ್ಪ ಸಹಿತ 20 ಮನೆಗಳು ಜಲಾವೃತಗೊಂಡಿವೆ. ಅಪಾಯದ ಮುನ್ಸೂಚನೆ ಅರಿತು ನಿವಾಸಿಗಳನ್ನು ಸ್ಥಳಾಂತರಿಸಲಾಯಿತು. ಮಂಜೇಶ್ವರ-ಸುಬ್ರಹ್ಮಣ್ಯ ಮಾರ್ಗದ ಬೊಳ್ಮಲೆ ಸೇತುವೆ, ಪಂಜ-ಕಡಬ ರಸ್ತೆ ನಡುವಿನ ಪುಳಿಕುಕ್ಕು ಸೇತುವೆ ಮುಳುಗಡೆ ಹಂತದಲ್ಲಿವೆ.
ಬಾಳುಗೋಡಿನ ಪದಕ ಸೇತುವೆ, ಗುಂಡಡ್ಕ ಸೇತುವೆ ಮುಳುಗಿದ್ದು, ಸುಬ್ರಹ್ಮಣ್ಯ ನಗರದ ವಾಣಿವನಿತಾ ಸಮಾಜ ಕಟ್ಟಡ ಕುಸಿದು ಬಿದ್ದಿದೆ. ಹರಿಹರ, ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರು, ಮಡಪ್ಪಾಡಿ, ಗುತ್ತಿಗಾರು, ಯೇನೆಕಲ್ಲು ಭಾಗಗಳ ನದಿ, ಹಳ್ಳ, ಕೊಳ್ಳ ಕೆರೆ ಬಾವಿಗಳು ತುಂಬಿವೆ. ಎಲ್ಲೆಡೆ ಪ್ರವಾಹದ ವಾತಾವರಣ ಸೃಷ್ಟಿಯಾಗಿದ್ದು, ಕೃಷಿ ಭೂಮಿಗಳೆಲ್ಲ ಜಲಾವೃತಗೊಂಡಿವೆ. ಸುಬ್ರಹ್ಮಣ್ಯ ಪರಿಸರಗಳಲ್ಲಿ ಹಾನಿಗೊಳಗಾದ ಸ್ಥಳಗಳಿಗೆ ತಹಶೀಲ್ದಾರ್ ಕುಂಞಮ್ಮ, ಸುಳ್ಯ ಶಾಸಕ ಎಸ್. ಅಂಗಾರ, ಸುಬ್ರಹ್ಮಣ್ಯ ಗ್ರಾ.ಪಂ. ಪಿಡಿಒ ಯು.ಡಿ. ಶೇಖರ್, ಗ್ರಾ.ಪಂ. ಸದಸ್ಯ ರಾಜೇಶ್ ಎನ್.ಎಸ್. ಭೇಟಿ ನೀಡಿದರು. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.