ಸದ್ದಿಲ್ಲದ ಸಾಧಕ, ಜನಪರ ಕಾಳಜಿಯ ನಾಯಕ ಎಸ್. ಅಂಗಾರ
ಕೋವಿಡ್ ನಿಯಂತ್ರಣದೆಡೆ; ಸುಳ್ಯ ಶಾಸಕರ ನಡೆ; ಲಾಕ್‌ಡೌನ್ ಅವಧಿಯಲ್ಲಿ ಹೀಗಿತ್ತು ಶಾಸಕ ಎಸ್.ಅಂಗಾರ ಅವರ ಕಾರ್ಯವೈಖರಿ
Team Udayavani, May 14, 2020, 8:13 AM IST
ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ
ಇಡೀ ಜಗತ್ತನ್ನೇ ಕಾಡಿದ ಕೋವಿಡ್ ನಮ್ಮ ದೇಶದಲ್ಲಿಯೂ ತಲ್ಲಣ ಉಂಟುಮಾಡಿದೆ. ನಮ್ಮ ಜಿಲ್ಲೆಯಲ್ಲಿಯೂ ಹಲವು ಜೀವ ಬಲಿ ಪಡೆದುಕೊಂಡ ಕೋವಿಡ್ ಎಲ್ಲರನ್ನೂ ಆತಂಕಕ್ಕೆ ದೂಡಿದ್ದು ಸುಳ್ಳಲ್ಲ. ಇಂತಹ ಸಂದರ್ಭದಲ್ಲಿ ಜನರಿಗೆ ಧೈರ್ಯ ತುಂಬುತ್ತಾ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದವರು ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ಅವರು. ಕೋವಿಡ್ ಸಂಕಷ್ಟದ ವೇಳೆ ಅವರ ಕಾರ್ಯವೈಖರಿ ಹೇಗಿತ್ತು ಎಂಬುದನ್ನು ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಪ್ರಯತ್ನವನ್ನು ಮಾಡುತ್ತಿದ್ದೇವೆ… ಕೋವಿಡ್ ಮಹಾಮಾರಿ ಯಾರೂ ಊಹಿಸದ ರೀತಿಯಲ್ಲಿ ನಮ್ಮನ್ನು ನಲುಗಿಸಿದ್ದು, ಇದರ ನಿರ್ವಹಣೆ ಹೇಗೆ ಮಾಡಬೇಕು ಎಂಬುದು ಪ್ರತಿಯೊಬ್ಬರಿಗೂ ಹೊಸ ಅನುಭವವನ್ನೇ ನೀಡಿದೆ. ಇಂತಹ ಮಹಾಮಾರಿಯಿಂದ ಸುಳ್ಯ ಕ್ಷೇತ್ರದ ಜನತೆಯನ್ನು ಪಾರು ಮಾಡುವ ನಿಟ್ಟಿನಲ್ಲಿ ಶಾಸಕ ಎಸ್.ಅಂಗಾರ ಅವರು ತನ್ನ ಅನಾರೋಗ್ಯದ ನಡುವೆಯೂ ಸದ್ದಿಲ್ಲದೆ ನಿರ್ವಹಿಸಿದ ಕಾರ್ಯ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
ಸಾಮಾನ್ಯ ಬಡ ಕುಟುಂಬದಿಂದ ಬಂದ ಎಸ್.ಅಂಗಾರ ಅವರು ಸತತ ಆರು ಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಜನಾನುರಾಗಿ ನಾಯಕ. ಕ್ಷೇತ್ರದ ಜನರ ಸಮಸ್ಯೆ-ಸವಾಲುಗಳನ್ನು ಚೆನ್ನಾಗಿ ಅರಿತಿರುವ ಅಂಗಾರ ಅವರು ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಹಗಲಿರುಳು ದುಡಿದಿದ್ದಾರೆ. ಸರಕಾರದ ಭಾಗವಾಗಿ ಎರಡೂ ತಾಲೂಕುಗಳ ಕೋವಿಡ್ ವಾರಿಯರ್ಸ್‌ಗೆ ಮಾರ್ಗದರ್ಶನ, ಎಲ್ಲ ರೀತಿಯ ಸಹಕಾರವನ್ನು ನೀಡುತ್ತಾ ಅಧಿಕಾರಿಗಳು ಕರ್ತವ್ಯವನ್ನು ನಿರ್ಭೀತಿಯಿಂದ ಮಾಡುವಂತೆ ಸಲಹೆ ನೀಡಿರುವ ಶಾಸಕರು ವಿಶೇಷವಾಗಿ ಕಂಡುಬರುತ್ತಾರೆ.
ಶಾಸಕರ ಕರೆಗೆ ಸ್ಪಂದಿಸಿದ ನೂರಾರು ಮಂದಿ ದಾನಿಗಳು ಸೇವಾ ಭಾರತಿ ಸಂಘಟನೆಯ ಮೂಲಕ ಸಂಕಷ್ಟದಲ್ಲಿದ್ದ ಜನರ ನೆರವಿಗೆ ಧಾವಿಸಿದ್ದಾರೆ. ಸುಳ್ಯ ಕ್ಷೇತ್ರದ ವರ್ತಕ ಸಂಘದ ದಾನಿಗಳು, ಉದ್ಯಮಿಗಳು, ಬಂಟರ ಸಂಘ, ಬಿಲ್ಲವರ ಸಂಘ, ಒಕ್ಕಲಿಗರ ಸಂಘ, ವಿಶ್ವಕರ್ಮ ಸಂಘ, ಸವಿತಾ ಸಮಾಜ ಹೀಗೆ ಹತ್ತಾರು ಸಂಘಟನೆಗಳು ನೀಡಿದ ಅಗತ್ಯ ಸಾಮಗ್ರಿಗಳು ಅಗತ್ಯವುಳ್ಳವರ ಹಸಿವನ್ನು ತಣಿಸಿವೆ. ಕಿಟ್‌ಗಳನ್ನು ಒದಗಿಸುವುದಕ್ಕಾಗಿಯೇ ಪ್ರತ್ಯೇಕ ತಂಡಗಳನ್ನು ಮಾಡಿ ಆ ಮೂಲಕ ಸಂಕಷ್ಟಕ್ಕೆ ಒಳಗಾದವರನ್ನು ತಲುಪುವ ಕಾರ್ಯ ಮಾಡಲಾಗಿದೆ. ಸಾಕಷ್ಟು ಕಾರ್ಯಕರ್ತರು, ತಳಮಟ್ಟದ ಜನಪ್ರತಿನಿಧಿಗಳು, ಸ್ವಯಂಸೇವಕರು ಇದರ ಹಿಂದೆ ನಿಂತು ದುಡಿದಿದ್ದು, ಹೀಗಾಗಿ ಶಾಸಕರ ಸಮಗ್ರ ಚಿಂತನೆಯ ಫಲವಾಗಿ ಕ್ಷೇತ್ರದ ಜನತೆಯ ಹಸಿವು ನೀಗಿಸುವ ಕಾರ್ಯ ನಡೆದಿದೆ.
ಕೋವಿಡ್ ನಿಯಂತ್ರಣಕ್ಕೆ ವಿಶೇಷ ಮುತುವರ್ಜಿ
– ಕಡಬ ಹಾಗೂ ಸುಳ್ಯ ಸರಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಕೋವಿಡ್ ವಾರ್ಡ್‌ಗಳನ್ನು ತೆರೆದು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧಗೊಳಿಸಲಾಗಿದೆ. ಜತೆಗೆ ಸುಳ್ಯದ ಕೆವಿಜಿ ಆಸ್ಪತ್ರೆ ಹಾಗೂ ಜ್ಯೋತಿ ಆಸ್ಪತ್ರೆಯಲ್ಲಿಯೂ ಐಸೊಲೇಶನ್ ವಾರ್ಡ್ ರಚನೆಯಾಗಿದೆ.
– ತಾಲೂಕಿನ ಕೇರಳ ಗಡಿ ಸಂಪರ್ಕದ ಗ್ರಾಮಗಳಲ್ಲಿ ಗಡಿ ರಸ್ತೆ ಬಂದ್ ಮಾಡುವ ನಿರ್ಧಾರ.
– ಆಯ್ದ ಪ್ರದೇಶಗಳಲ್ಲಿ ಕ್ರಿಮಿನಾಶಕ ಸಿಂಪಡಣೆಯ ಮೂಲಕ ವೈರಸ್ ನಿಯಂತ್ರಣಕ್ಕೆ ಆದ್ಯತೆ.
– ಕ್ಷೇತ್ರದ ವಿವಿಧೆಡೆ ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರ ಆರಂಭಕ್ಕೆ ಪ್ರಯತ್ನ. ಎಪಿಎಂಸಿ ಮೂಲಕ ಕೃಷಿ ಉತ್ಪನ್ನ ಖರೀದಿಗೆ ವ್ಯವಸ್ಥೆ. ಸಹಕಾರ ಸಂಘಗಳ ಮೂಲಕವೂ ಜನರಿಗೆ ಪಡಿತರ ಮಾತ್ರವಲ್ಲದೆ ಮೆಣಸು, ಬೆಲ್ಲ, ಈರುಳ್ಳಿ, ತರಕಾರಿ ಇತ್ಯಾದಿ ಸಾಮಗ್ರಿಗಳನ್ನು ಮಿತದರದಲ್ಲಿ ಪೂರೈಸುವ ಕಾರ್ಯ. ಕ್ಷೇತ್ರದ ಎಲ್ಲ ಪಡಿತರ ಚೀಟಿದಾರರಿಗೆ ಎರಡು ತಿಂಗಳ ಪಡಿತರ ಅಕ್ಕಿ ದೊರಕಿಸಿಕೊಡುವ ನಿಟ್ಟಿನಲ್ಲಿ ಸಭೆ-ನಿರ್ದೇಶನ.
ಜನರ ನೆರವಿಗೆ ಬಂತು ಶಾಸಕರ ವಾರ್ ರೂಂ
ಕೋವಿಡ್ ವಿಷಮ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶಾಸಕ ಅಂಗಾರ ಅವರು ಸುಳ್ಯದಲ್ಲಿ ಕೋವಿಡ್ ವಾರ್‌ರೂಂ ತೆರೆಯುವ ಮೂಲಕ ಜನರ ನೆರವಿಗೆ ನಿಂತರು. ಜನರ ಹತ್ತಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದ ಶಾಸಕರ ಕೋವಿಡ್ ವಾರ್‌ರೂಂ ನಿಜಕ್ಕೂ ಕೋವಿಡ್ ವಿರುದ್ಧ ಯುದ್ಧವನ್ನೇ ಸಾರಿತು. ಒಂದೆಡೆ ಜನರು ಸಂಕಷ್ಟಕ್ಕೆ ಸಿಲುಕಿರುವ ವಿಚಾರ, ಒಂದೆಡೆ ಆಹಾರ ಸಿಗುತ್ತಿಲ್ಲ, ಮತ್ತೂಂದೆಡೆ ಈ ರೀತಿಯ ಖಾಯಿಲೆ ಇದೆ ಯಾರನ್ನು ಸಂಪರ್ಕಿಸಬೇಕು, ಇನ್ನೊಂದೆಡೆ ನಮಗೆ ಪಾಸ್ ಎಲ್ಲಿ ಸಿಗುತ್ತದೆ…ಹೀಗೆ ದಿನವೊಂದಕ್ಕೆ ನೂರಾರು ಕರೆಗಳು ಬರುತ್ತಿದ್ದವು. ಆದರೆ ವಾರ್ ರೂಂಗಳಲ್ಲಿ ಶಾಸಕರ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸುತ್ತಿದ್ದ ವಾರಿಯರ್ಸ್ ಎಲ್ಲರಿಗೂ ಪ್ರೀತಿಯ ಸ್ಪಂದನೆ ನೀಡಿ ಅವರ ಕಣ್ಣೀರು ಒರೆಸುವ ಕಾರ್ಯ ನಡೆಸಿದರು.
ಸುಳ್ಯ ಎಂದರೆ ಕೃಷಿಕರೇ ತುಂಬಿರುವ ಕ್ಷೇತ್ರ. ಹೀಗಿರುವಾಗ ನಿರೀಕ್ಷೆಯಂತೆಯೇ ಕೃಷಿ ಸಂಬಂಧಿ ಸಮಸ್ಯೆಗಳು ಶಾಸಕರ ಕಚೇರಿಗೆ ಬಂದಿದ್ದವು. ಜನರ ಸಮಸ್ಯೆಗಳ ಗಂಭೀರತೆಯನ್ನು ಅರಿತ ಶಾಸಕರು ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಿ ಸಮಸ್ಯೆಗೆ ಸೂಕ್ತ ಸ್ಪಂದನೆ ನೀಡಿದರು. ವೈದ್ಯಕೀಯ ಸೇವೆಯ ಕುರಿತು ಕೂಡ ಅನೇಕ ಕರೆಗಳು ಬಂದಿದ್ದು, ಅದಕ್ಕೂ ಸೂಕ್ತ ರೀತಿಯ ಸ್ಪಂದನೆ ನೀಡುವ ಕಾರ್ಯ ನಡೆದಿತ್ತು. ಹೀಗೆ ಒಬ್ಬ ಶಾಸಕನಾಗಿ ತನ್ನ ಕಚೇರಿಯ ಮೂಲಕ ಜನರಿಗೆ ಯಾವ ರೀತಿಯ ಸ್ಪಂದನೆ ನೀಡಬೇಕು ಎಂಬುದನ್ನು ಎಸ್.ಅಂಗಾರ ಅವರು ಸಮರ್ಥವಾಗಿ ನಿರ್ವಹಿಸಿ ಯಶಸ್ವಿಯಾಗಿದ್ದರು. ಅವರ ವಾರ್ ರೂಂನಲ್ಲಿ ಕರ್ತವ್ಯ ನಿರ್ವಹಿಸಿದ ತಂಡವೂ ಶಾಸಕರ ನಿರ್ದೇಶನವನ್ನು ಸಮರ್ಥವಾಗಿ ನಿಭಾಯಿಸಿ ಗೌರವಕ್ಕೆ ಪಾತ್ರವಾಗಿತ್ತು.
ಸೀಲ್‌ಡೌನ್ ಪ್ರದೇಶ: ಮುತುವರ್ಜಿ
ಸುಳ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ಇದುವರೆಗೆ ಕೇವಲ 1 ಕೋವಿಡ್ ಸೋಂಕು ಪ್ರಕರಣ ದೃಢಪಟ್ಟಿದ್ದು, ಸೋಂಕು ಕಾಣಿಸಿಕೊಂಡ ಅಜ್ಜಾವರ ಪ್ರದೇಶದ ನಿರ್ದಿಷ್ಟ ವ್ಯಾಪ್ತಿ ಸೀಲ್‌ಡೌನ್ ಆಗಿ ಸ್ಥಳೀಯ ನಿವಾಸಿಗಳು ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಈ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶಾಸಕರು, ತತ್‌ಕ್ಷಣ ಸ್ಪಂದಿಸಿ ಅಲ್ಲಿನ ವ್ಯವಸ್ಥೆಗಳ ಕುರಿತು ವಿಶೇಷ ಮುತುವರ್ಜಿ ವಹಿಸಿದರು. ಮುಖ್ಯವಾಗಿ ಕೋವಿಡ್ ಸೋಂಕು ದೃಢಪಟ್ಟಾಗ ಸ್ಥಳೀಯ ಪ್ರದೇಶವನ್ನು ಸೀಲ್‌ಡೌನ್ ಮಾಡಬೇಕಾಗುತ್ತದೆ. ಜತೆಗೆ ಸೋಂಕಿತರ ನೇರ ಸಂಪರ್ಕದಲ್ಲಿದ್ದವರಿಗೆ ಕ್ವಾರಂಟೈನ್ ವ್ಯವಸ್ಥೆಯನ್ನೂ ಮಾಡಬೇಕಾಗುತ್ತದೆ. ಸುಳ್ಯ ಕ್ಷೇತ್ರದಲ್ಲಿ ಈ ವಿಚಾರದ ಕುರಿತು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಈ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ. ಜತೆಗೆ ಜನರು ಮನೆಯಿಂದ ಹೊರ ಬರಲಾಗದ ಪರಿಸ್ಥಿತಿ ಇದ್ದಾಗ ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಬೇಕಾಗುತ್ತದೆ. ಇಲ್ಲೂ ಕೂಡ ಶಾಸಕರು ಸ್ಥಳೀಯ ಅಧಿಕಾರಿಗಳು, ಟಾಸ್ಕ್ಪೋರ್ಸ್ ಸಮಿತಿಯವರ ಜತೆಗೆ ವಿಶೇಷ ಚರ್ಚೆ ನಡೆಸಿ ಜನತೆಗೆ ಯಾವುದೇ ತೊಂದರೆ ಎದುರಾಗದ ರೀತಿಯಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದ್ದಾರೆ.
ಅಧಿಕಾರಿ ವರ್ಗಕ್ಕೆ ಧೈರ್ಯ ತುಂಬಿದ ಶಾಸಕರು
ಸರಕಾರಿ ಅಧಿಕಾರಿಗಳು ಎಂದಾಗ ಅವರು ಸರಕಾರದ ಚೌಕಟ್ಟಿನಲ್ಲೇ ಕೆಲಸ ಮಾಡಬೇಕಾಗುತ್ತದೆ. ಜತೆಗೆ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುವ ವೇಳೆಯೂ ಸರಕಾರದ ಬಳಿ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಇಂತಹ ತುರ್ತು ಸಂದರ್ಭಗಳು ಎದುರಾದಾಗ ಪ್ರತಿ ವಿಚಾರಕ್ಕೂ ಸರಕಾರದ ಬಳಿ ಕೇಳುವುದು ಕಷ್ಟದ ವಿಚಾರವಾಗುತ್ತದೆ. ಅಧಿಕಾರಿಗಳಿಗೆ ಇಂತಹ ಸವಾಲು ಎದುರಾದಾಗ ಅವರಿಗೆ ಧೈರ್ಯ ತುಂಬಿ ಮಾರ್ಗದರ್ಶನ ನೀಡಿದವರು ಶಾಸಕ ಎಸ್.ಅಂಗಾರ ಅವರು. ಅಧಿಕಾರಿಗಳು ಕೂಡ ಶಾಸಕರ ನಿರ್ದೇಶನದಂತೆ ಕೆಲಸ ನಿರ್ವಹಿಸಿ ಕೋವಿಡ್ ಮಹಾಮಾರಿಯ ಹುಟ್ಟಡಗಿಸಲು ಶಾಸಕರಿಗೆ ಸಾಥ್ ನೀಡಿದ್ದಾರೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್ ಕಟೀಲು ಅವರನ್ನು ಕ್ಷೇತ್ರಕ್ಕೆ ಕರೆದು ಅಧಿಕಾರಿಗಳ ಸಭೆ ನಡೆಸಿ ಅವರಿಂದ ಸೂಕ್ತ ನಿರ್ದೇಶನಗಳನ್ನು ಕೊಡಿಸುವ ಕಾರ್ಯವನ್ನು ಶಾಸಕ ಅಂಗಾರ ನಿರ್ವಹಿಸಿದ್ದಾರೆ.
ಪ್ರತಿ ಬಾರಿ ಅಧಿಕಾರಿಗಳ ಮೀಟಿಂಗ್ ಕರೆದು ಅವರಿಂದ ಮಾಹಿತಿ ಪಡೆದು ಅದನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಗ್ರಾ.ಪಂ.ಮಟ್ಟದಲ್ಲೂ ಟಾಸ್ಕ್ಪೋರ್ಸ್ ಗ್ರಾಮೀಣ ಕಾರ್ಯಪಡೆಯ ಕಾರ್ಯವೈಖರಿಯನ್ನು ಪರಿಶೀಲಿಸುತ್ತಾ, ಅವರಿಂದಲೂ ಉತ್ತಮ ಕೆಲಸ ಮಾಡಿಸಿದ್ದಾರೆ. ಮುಖ್ಯವಾಗಿ ಲಾಕ್‌ಡೌನ್ ಆದೇಶವಿದ್ದಾಗ ಪೊಲೀಸ್ ಇಲಾಖೆಗೆ ಹೆಚ್ಚು ಕೆಲಸವಿದ್ದು, ಪೊಲೀಸರ ಯಾವುದೇ ಕಾರ್ಯದಲ್ಲೂ ಹಸ್ತಕ್ಷೇಪವನ್ನು ಮಾಡದೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ತನ್ನ ಕರ್ತವ್ಯ ನಿರ್ವಹಿಸಿದ್ದಾರೆ. ಅಧಿಕಾರಿಗಳ ಈ ಎಲ್ಲಾ ಕಾರ್ಯಚಟುವಟಿಕೆಗೆ ಬೆಂಬಲ ನೀಡಿರುವ ಶಾಸಕರ ಕುರಿತು ಅಧಿಕಾರಿಗಳೂ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ.
ಜನಪ್ರತಿನಿಧಿಗಳ ಸಾಥ್.!
ಸುಳ್ಯ ಕ್ಷೇತ್ರದ ಕೋವಿಡ್ ನಿಯಂತ್ರಣದ ಕಾರ್ಯಚಟುವಟಿಕೆಯಲ್ಲಿ ಶಾಸಕ ಎಸ್.ಅಂಗಾರ ಅವರ ನೇತೃತ್ವಕ್ಕೆ ಕ್ಷೇತ್ರದ ಎಲ್ಲಾ ಜನಪ್ರತಿನಿಧಿಗಳು ಕೂಡ ಸಾಥ್ ನೀಡಿದ್ದಾರೆ. ಮುಖ್ಯವಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಅವರ ಸಲಹೆ-ಸಹಕಾರ ಪಡೆದು ಶಾಸಕರು ಸರಕಾರದ ನಿರ್ದೇಶನಗಳನ್ನು ಸುಳ್ಯದಲ್ಲಿ ಅನುಷ್ಠಾನಗೊಳಿಸಿದ್ದಾರೆ.
ಸುಳ್ಯ ಕ್ಷೇತ್ರದ ಜಿ.ಪಂ. ಸದಸ್ಯರು, ತಾ.ಪಂ. ಅಧ್ಯಕ್ಷರು ಸೇರಿದಂತೆ ಜನಪ್ರತಿನಿಧಿಗಳು, ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು ಸೇರಿದಂತೆ ಜನಪ್ರತಿನಿಧಿಗಳು, ಸುಳ್ಯ ನಗರಪಂಚಾಯತ್ ಸದಸ್ಯರು ಶಾಸಕರ ಜನತೆಗೆ ನಿಂತು ಕೆಲಸ ನಿರ್ವಹಿಸಿದ್ದಾರೆ. ತಾನು ಪ್ರತಿನಿಧಿಸುವ ಪಕ್ಷಗಳು ಬೇರೆ ಬೇರೆಯಾದರೂ ಕೋವಿಡ್ ನಿಯಂತ್ರಣದಲ್ಲಿ ರಾಜಕೀಯ ಮಾಡದೆ ತಮ್ಮ ಕೆಲಸವನ್ನು ಎಲ್ಲರೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಜತೆಗೆ ಇತರ ಪಕ್ಷಗಳ ಜನಪ್ರತಿನಿಧಿಗಳು ಶಾಸಕರ ಸಹಕಾರ ಕೇಳಿದಾಗಲೂ ಶಾಸಕರು ಅಲ್ಲಿ ರಾಜಕೀಯ ಭೇದವಿಲ್ಲದೆ ಸ್ಪಂದನೆ ನೀಡಿರುವುದು ವಿಶೇಷವಾಗಿದೆ.
ಕೋವಿಡ್ ಸಂಕಷ್ಟದ ಸಮಯದಲ್ಲಿ ಸರಕಾರಕ್ಕೆ ನೆರವಾಗುವ ಉದ್ದೇಶದಿಂದ ಶಾಸಕರ ಪ್ರೇರಣೆಯಿಂದಲೇ ಸಾಕಷ್ಟು ಸಂಘ ಸಂಸ್ಥೆಗಳು, ಸಹಕಾರ ಸಂಘಗಳು ನೆರವನ್ನು ನೀಡುವ ಕಾರ್ಯ ಮಾಡಿವೆ. ಜತೆಗೆ ಸುಳ್ಯ ಕ್ಷೇತ್ರದ ನೆರವಿನ ಕಾರ್ಯದಲ್ಲೂ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಶಾಸಕರಿಗೆ ಸಾಥ್ ನೀಡಿದ್ದಾರೆ.
32500 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಮತ್ತು ಸುಳ್ಯ ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 32500 ಆಹಾರ ಕಿಟ್‌ಗಳನ್ನು ಅರ್ಹ ಕುಟುಂಬಗಳಿಗೆ ಶಾಸಕರ ನೇತೃತ್ವದಲ್ಲಿ ವಿತರಿಸಲಾಗಿದೆ. ಶಾಸಕರು ಸ್ವತಃ ವೈಯಕ್ತಿಕ ನೆಲೆಯಲ್ಲಿ 550 ಕ್ವಿಂಟಾಲ್ ಅಕ್ಕಿ (ತಲಾ 10 ಕೆಜಿಯ 5500 ಚೀಲ ಅಕ್ಕಿ) ಹಾಗೂ ದಿನಬಳಕೆಯ ದಿನಸಿ ಸಾಮಗ್ರಿಗಳನ್ನೊಳಗೊಂಡ 15 ಸಾವಿರ ಕಿಟ್‌ಗಳನ್ನು ಗೃಹರಕ್ಷಕ ಸಿಬಂದಿಗಳು, ಆಶಾ ಕಾರ್ಯಕರ್ತೆಯರು, ದೈವ ನರ್ತಕರು, ಪೌರಕಾರ್ಮಿಕರು, ಕ್ಷೌರಿಕರು ಸೇರಿದಂತೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಜನರಿಗೆ ವಿತರಿಸಿದ್ದಾರೆ.
ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ನೀಡಲಾದ 3450 ಆಹಾರ ಕಿಟ್‌ಗಳ ಪೈಕಿ 2500 ಕಿಟ್‌ಗಳನ್ನು ಕ್ಷೇತ್ರದ ವ್ಯಾಪ್ತಿಯ ಗ್ರಾ.ಪಂ.ಗಳ ಮೂಲಕ ಅರ್ಹ ಫಲಾನುಭವಿಗಳ ಪಟ್ಟಿ ತರಿಸಿಕೊಂಡು ಶಾಸಕರ ವಾರ್ ರೂಮ್ ಮೂಲಕ ಪಾರದರ್ಶಕ ರೀತಿಯಲ್ಲಿ ಫಲಾನುಭವಿಗಳ ಮನೆಗೆ ನೇರವಾಗಿ ವಿತರಿಸಿದ್ದಾರೆ. ಕ್ಷೇತ್ರದ ವ್ಯಾಪ್ತಿಯ 51 ಗ್ರಾ.ಪಂ.ಗಳ ಮೂಲಕ ಕೇಂದ್ರ ಸರಕಾರದ 14ನೇ ಹಣಕಾಸು ಯೋಜನೆಯ ಮೂಲಕ 25 ಸಾವಿರಕ್ಕೂ ಹೆಚ್ಚು ಆಹಾರ ಕಿಟ್‌ಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರು, ವಿಧವೆಯರು, ಆಶಾ ಕಾರ್ಯಕರ್ತೆಯರು ಮುಂತಾದ ಫಲಾನುಭವಿಗಳಿಗೆ ವಿತರಿಸುವಲ್ಲಿ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ಶಾಸಕರ ಕರೆಗೆ ಓಗೊಟ್ಟಿರುವ ನೂರಾರು ಮಂದಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬಡ ಜನರಿಗೆ ನೆರವು ನೀಡುವ ಕೆಲಸವನ್ನು ದೊಡ್ಡಮಟ್ಟದಲ್ಲಿ ಮಾಡಿರುವುದು ಜನರಿಗೆ ಶಾಸಕರ ಮೇಲಿನ ಪ್ರೀತಿ ಮತ್ತು ಗೌರವವನ್ನು ತೋರಿಸುತ್ತದೆ.
ಅನಾರೋಗ್ಯದ ನಡುವೆಯೂ ಜನಪರ ಕಾಳಜಿ
ಕೋವಿಡ್ ಲಾಕ್ ಡೌನ್ ನ ಆರಂಭದ ದಿನಗಳಲ್ಲಿ ಕಡಬದ ಅನುಗ್ರಹ ಸಭಾಭವನದಲ್ಲಿ ಸಹಾಯಕ ಆಯುಕ್ತರು, ಡಿವೈಎಸ್ಪಿ, ತಹಶೀಲ್ದಾರ್ ಉಪಸ್ಥಿತಿಯಲ್ಲಿ ಕಡಬ ತಾಲೂಕಿನ ವರ್ತಕರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಬಳಿಕ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಪಡಿತರ ವಿತರಣೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಕಡಬ ತಾಲೂಕು ವ್ಯಾಪ್ತಿಯ ಸಹಕಾರಿ ಸಂಘಗಳ ಅಧ್ಯಕ್ಷರ ಸಭೆ ನಡೆಸುತ್ತಿದ್ದ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ತೀವ್ರ ಅಸ್ವಸ್ಥರಾದ ಶಾಸಕ ಅಂಗಾರ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕಾದ ಅನಿವಾರ್ಯತೆ ಎದುರಾಯಿತು. ಬಳಿಕ ವೈದ್ಯರ ಕಟ್ಟುನಿಟ್ಟಿನ ಸೂಚನೆಯಂತೆ 14 ದಿನ ವಿಶ್ರಾಂತಿ ಪಡೆಯುವ ವೇಳೆಯಲ್ಲಿಯೂ ಅಧಿಕಾರಿಗಳು ಹಾಗೂ ಕಾರ್ಯಕರ್ತರ ಜತೆ ದೂರವಾಣಿ ಮೂಲಕ ನಿರಂತರ ಸಂಪರ್ಕವಿರಿಸಿಕೊಂಡು ಕೋವಿಡ್ನಿಯಂತ್ರಣದ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶಾಸಕರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.
ಮನೆ ಮನೆಗೆ ಉಚಿತ ಔಷಧಿ ಪೂರೈಕೆ
ಶಾಸಕರ ಮಾರ್ಗದರ್ಶನದಲ್ಲಿ ಸೇವಾಭಾರತಿ ಹಾಗೂ ಸಂಘ ಪರಿವಾರದ ಸಂಘಟನೆಗಳು ನಡೆಸಿದ ಆರೋಗ್ಯ ಸಮಸ್ಯೆಗಳಿದ್ದ ಗ್ರಾಮೀಣ ಜನರ ಮನೆಗೆ ಉಚಿತ ಔಷಧಿ ಪೂರೈಕೆ ಕಾರ್ಯಕ್ರಮ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ. ಲಾಕ್‌ಡೌನ್, ಆರ್ಥಿಕ ಸಂಕಷ್ಟ ಹಾಗೂ ಸಮರ್ಪಕವಾದ ವಾಹನ ವ್ಯವಸ್ಥೆಗಳಿಲ್ಲದ ಸಂದರ್ಭದಲ್ಲಿ ಯುವ ಕಾರ್ಯಕರ್ತರು ಅಗತ್ಯ ಔಷಧಿಗಳನ್ನು ಉಚಿತವಾಗಿ ಗ್ರಾಮೀಣ ಭಾಗದ ರೋಗಿಗಳ ಮನೆಗಳಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದರು. ಈ ಕಾರ್ಯಕ್ರಮದಡಿ ಸುಳ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 70 ಸಾವಿರ ರೂ. ಮೌಲ್ಯದ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗಿದೆ.
ಡೆಂಗ್ಯೂ, ಮಲೇರಿಯಾ ಮುಂಜಾಗ್ರತೆಗೂ ಕ್ರಮ
ಕೋವಿಡ್ ನಿಯಂತ್ರಣಕ್ಕೆ ಎಲ್ಲರೂ ಕಟಿಬದ್ಧರಾಗಿರುವ ಸಂದರ್ಭದಲ್ಲಿ ಇತರ ರೋಗಗಳ ಹಾಗೂ ರೋಗಿಗಳ ಬಗ್ಗೆ ಆರೋಗ್ಯ ಇಲಾಖೆಯ ಗಮನ ಕಡಿಮೆಯಾಗುತ್ತಿದೆ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಶಾಸಕ ಅಂಗಾರ ಅವರು ಸುಳ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ನಿಯಂತ್ರಣ ಅಭಿಯಾನದ ಜೊತೆ ಜೊತೆಗೆ ಮಳೆಗಾಲದಲ್ಲಿ ಸೊಳ್ಳೆಗಳಿಂದಾಗಿ ಕಾಣಿಸಿಕೊಳ್ಳುವ ಡೆಂಗ್ಯೂ ಹಾಗೂ ಮಲೇರಿಯಾ ಕಾಯಿಲೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಆರೋಗ್ಯ ಇಲಾಖೆಯ ಮೂಲಕ ಚಾಲನೆ ನೀಡಿದ್ದಾರೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಕುರಿತು ಚಟುವಟಿಕೆಗಳು ತೀವ್ರಗೊಂಡಿದ್ದು, ಶಾಸಕರ ಮಾರ್ಗದರ್ಶನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ವಿಶೇಷವಾಗಿ ಕೆಲಸ ಮಾಡುತ್ತಿರುವುದು ಜನರ ಆರೋಗ್ಯದ ನಿಟ್ಟಿನಲ್ಲಿ ಶಾಸಕರಿಗಿರುವ ಕಾಳಜಿಗೆ ಉದಾಹರಣೆಯಾಗಿದೆ.
ಹಸಿವು ನೀಗಿಸುವ ನಿಟ್ಟಿನಲ್ಲಿ ವಿಶೇಷ ಕಾಳಜಿ
ಯಾರೂ ಕಂಡು ಕೇಳರಿಯದ ರೀತಿಯಲ್ಲಿ ಕೋವಿಡ್ ಸಂಕಷ್ಟ ಜನರನ್ನು ಕಾಡಿದ್ದು,ಯಾರನ್ನೂ ಹಸಿವು ಕಾಡಬಾರದು ಎನ್ನುವ ಶಾಸಕ ಅಂಗಾರ ಅವರ ಕಾಳಜಿಯ ಕಾರಣದಿಂದಾಗಿ ಅಗತ್ಯ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಿದ ಆಹಾರ ಕಿಟ್‌ಗಳು ಕ್ಷೇತ್ರದ ಜನರಲ್ಲಿ ಆಹಾರದ ಕೊರತೆಯನ್ನು ದೂರ ಮಾಡಿತು. ಶಾಸಕರು ಪ್ರತಿಯೊಬ್ಬರ ಕಷ್ಟವನ್ನರಿತು ಹಸಿವನ್ನು ನೀಗಿಸುವ ಕಾರ್ಯವನ್ನು ಮುಂದೆ ನಿಂತು ಮಾಡಿದರು. ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿ ಹಳ್ಳಿಯನ್ನು ತಲುಪಿದ ಇವರ ಆಹಾರ ಸಾಮಗ್ರಿಗಳು ಸಂಕಷ್ಟದಲ್ಲಿರುವ ಸಹಸ್ರಾರು ಮಂದಿಗೆ ಆಶಾಕಿರಣವಾಗಿ ಸಾಂತ್ವನ ನೀಡಿತು.
ಶಾಸಕರ ಜತೆ ಸೇವಾಭಾರತಿ ಸೇರಿದಂತೆ ಹತ್ತಾರು ಸಂಘಟನೆಗಳು, ಸಹಸ್ರಾರು ಕಾರ್ಯಕರ್ತರು ಬೆನ್ನೆಲುಬಾಗಿ ನಿಂತು ತಮ್ಮ ಶಾಸಕರ ಸೇವಾ ಮನೋಭಾವಕ್ಕೆ ಶಕ್ತಿ ತುಂಬುವ ಕಾರ್ಯವನ್ನು ಮಾಡಿದರು. ಸುಳ್ಯ ಕ್ಷೇತ್ರದಾದ್ಯಂತ ಪ್ರಸ್ತುತ 60 ಲಕ್ಷ ರೂ.ಗಳಿಗಿಂತಲೂ ಅಧಿಕ ಮೊತ್ತದ ನೆರವು ಸಂಕಷ್ಟದಲ್ಲಿದ್ದವರನ್ನು ತಲುಪಿದೆ. ತಿನ್ನುವ ತುತ್ತಿಗೆ ಪರಿತಪಿಸುವ ಬೀದಿ ಬದಿಯ ಕಾರ್ಮಿಕರು, ನಿರಾಶ್ರಿತರು, ಭಿಕ್ಷುಕರಿಗೆ ಹೀಗೆ ಹಲವು ಮಂದಿಗೆ ನಿತ್ಯವೂ ಆಹಾರವನ್ನು ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.
ಶಾಸಕ ಅಂಗಾರ ಅವರ ಮನದಾಳದ ಮಾತು
ಲಾಕ್‌ಡೌನ್‌ಗೆ ಕ್ಷೇತ್ರದ ಜನತೆಯ ಸಹಕಾರ ಹೇಗಿತ್ತು.?
ಸುಳ್ಯ ಕ್ಷೇತ್ರದ ಜನತೆಯ ಸಹಕಾರ ಫಲವಾಗಿಯೇ ಕೋವಿಡ್ ಎಂಬ ಮಹಾಮಾರಿ ಸುಳ್ಯದಲ್ಲಿ ಹೆಚ್ಚಿನ ತೊಂದರೆ ನೀಡಲು ಸಾಧ್ಯವಾಗಿಲ್ಲ. ಲಾಕ್‌ಡೌನ್‌ನಿಂದಾಗಿ ಜನರಿಗೆ ತೊಂದರೆಗಳಾಗಿರುವುದು ನಿಜ. ಆದರೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ಸರಕಾರ ಕೆಲವೊಂದು ಕಠಿನ ನಿರ್ಧಾರಗಳನ್ನು ಪ್ರಕಟಿಸುವುದು ಅನಿವಾರ್ಯವಾಗುತ್ತದೆ. ಹೀಗಾಗಿ ಜನರ ಕಷ್ಟಗಳಿಗೂ ನಾವು ಸ್ಪಂದನೆ ನೀಡಿದ್ದೇವೆ. ಆಹಾರದ ಕೊರತೆಯಾದರೆ ಅದಕ್ಕೂ ಸ್ಪಂದಿಸಿದ್ದೇವೆ. ಮುಂದಿನ ದಿನಗಳಲ್ಲೂ ಜನರ ಯಾವುದೇ ಸಮಸ್ಯೆಗಳಿಗೆ ಪರಿಹಾರ ನೀಡಲು ಸಿದ್ಧರಿದ್ದೇವೆ. ಒಟ್ಟಿನಲ್ಲಿ ಜನರು ಸಹಕಾರದ ಜತೆ, ಅಧಿಕಾರಿಗಳ ಜತೆ, ಜನಪ್ರತಿನಿಧಿಗಳ ಜತೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಎಲ್ಲರ ಆರೋಗ್ಯವನ್ನು ಕಾಪಾಡಬೇಕಿದೆ.
ಕ್ಷೇತ್ರದಲ್ಲಿ ಹಿಂದಿನ ಅಭಿವೃದ್ಧಿ ಕಾರ್ಯಗಳ ಕಥೆ ಏನು?
ಕೋವಿಡ್ ಲಾಕ್‌ಡೌನ್‌ನಿಂದ ಎಲ್ಲಾ ಕ್ಷೇತ್ರಗಳಿಗೂ ಹೊಡೆತ ನೀಡಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕೂಡ ಅರ್ಧದಲ್ಲಿ ನಿಂತಿವೆ. ಈಗಾಗಲೇ ಅರ್ಧಕ್ಕೆ ನಿಂತಿರುವ ಹೆಚ್ಚಿನ ಕಾಮಗಾರಿಗಳು ಪ್ರಾರಂಭಗೊಂಡಿದ್ದು, ಮಳೆಗಾಲಕ್ಕೆ ಮುಂಚಿತವಾಗಿ ಪೂರ್ಣಗೊಳ್ಳುತ್ತವೆ. ಹೊಸದಾಗಿ ಪ್ರಾರಂಭವಾಗಬೇಕಿದ್ದ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಆರಂಭವಾಗುತ್ತವೆ. ಕೋವಿಡ್ ಆತಂಕಗಳು ದೂರವಾದ ಬಳಿಕ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹೆಚ್ಚಿನ ವೇಗವನ್ನು ಪಡೆದುಕೊಳ್ಳಲಿವೆ. ಪ್ರಸ್ತುತ ಬೇಸಗೆಯಾಗಿದ್ದು, ನೀರಿನ ತೊಂದರೆಗಳು ಕಂಡುಬಂದಲ್ಲಿ ಅದನ್ನು ಬಗೆಹರಿಸಲು ಬೇಕಾದ ಅನುದಾನ ಬರ ಪರಿಹಾರ ನಿಧಿಯಲ್ಲಿದ್ದು, ಅದರ ಮೂಲಕ ಕೊಳವೆಬಾವಿಗಳನ್ನು ಕೊರೆಯಲಾಗುತ್ತದೆ. ರಸ್ತೆ, ಚರಂಡಿ, ಸೇತುವೆ, ಶಾಲೆಗಳ ದುರಸ್ತಿ ಸೇರಿದಂತೆ ತುರ್ತು ಕಾಮಗಾರಿಗಳು ಈಗಾಗಲೇ ಪ್ರಾರಂಭಗೊಂಡಿವೆ.
ಶಾಸಕರ ಕಾರ್ಯಕ್ಕೆ ನೆರವು
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಜನರಿಗೆ ವಿತರಿಸುವುದಕ್ಕಾಗಿ ಒಟ್ಟು 3,450 ಆಹಾರ ಕಿಟ್‌ಗಳನ್ನು ನೀಡಲಾಗಿದೆ. ದೇವಳದ ವಸತಿಗೃಹಗಳಲ್ಲಿ ಹೊರಜಿಲ್ಲೆ ಮತ್ತು ಹೊರರಾಜ್ಯಗಳ ಕಾರ್ಮಿಕರಿಗೆ ಆಶ್ರಯ ನೀಡಿ ಉಟೋಪಚಾರವನ್ನು ಒದಗಿಸುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾವು ಕೂಡ ಶಾಸಕರ ಕಾರ್ಯದಲ್ಲಿ ಕೈಜೋಡಿಸಿದ್ದೇವೆ.
– ರವೀಂದ್ರ ಎಸ್, ಮುಖ್ಯಕಾರ್ಯನಿರ್ವಹಣಾಧಿಕಾರಿ , ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ
ಶಾಸಕರ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣ
ಸುಳ್ಯ ತಾಲೂಕಿನಲ್ಲಿ 1 ಕೋವಿಡ್ ಪ್ರಕರಣ ದೃಢಪಟ್ಟಿದ್ದು, ಆ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಕ್ಷೇತ್ರದ ಶಾಸಕ ಅಂಗಾರ ಅವರ ನೇತೃತ್ವದಲ್ಲಿ ಕೋವಿಡ್ವನ್ನು ಹತೋಟಿಗೆ ತಂದಿದ್ದೇವೆ. ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸದಾ ಸ್ಪಂದನೆಯನ್ನು ಶಾಸಕರು ಹಾಗೂ ನಾವೆಲ್ಲರೂ ಸೇರಿ ಮಾಡಿದ್ದೇವೆ. ಜನರು ಮುಂಜಾಗ್ರತಾ ಕ್ರಮವಾಗಿ ನಿರಂತರ ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ 19 ಹರಡದಂತೆ ಎಲ್ಲರೂ ಜಾಗೃತರಾಗಿರಿ.
– ಡಾ|ಯತೀಶ್ ಉಳ್ಳಾಲ್, ಸಹಾಯಕ ಆಯುಕ್ತರು, ಪುತ್ತೂರು ಉಪ ವಿಭಾಗ
ಕರೆಗಳಿಗೆ ಸ್ಪಂದನೆ
ಕೋವಿಡ್ ನಿಯಂತ್ರಣ ಅಭಿಯಾನದಲ್ಲಿ ಆರೋಗ್ಯ ಇಲಾಖೆಯ ಜತೆಗೆ ಆಶಾ ಕಾರ್ಯಕರ್ತೆಯರು ಕೂಡ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಕೆಲಸದ ವೇಳೆ ಎದುರಾದ ಎಡರು-ತೊಡರುಗಳನ್ನು ನಿವಾರಿಸುವಲ್ಲಿ ಶಾಸಕರು ಪೂರಕವಾಗಿ ಸ್ಪಂದಿಸಿ ನಮಗೆ ರಕ್ಷಣೆಗೆ ನೀಡಿರುವುದು ಅವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ನಮಗೆ ದಿನ ಬಳಕೆಯ ಸಾಮಗ್ರಿಗಳನ್ನು ಕೂಡ ವಿತರಿಸಿರುವುದು ಮಾತ್ರವಲ್ಲದೆ ಶಾಸಕರು ಖುದ್ದು ಆಶಾ ಕಾರ್ಯಕರ್ತರ ಕರೆಗಳಿಗೆ ಸ್ಪಂದನೆ ನೀಡುತ್ತಿರುವುದು ನಮಗೆ ಹೆಚ್ಚಿನ ಬಲ ಬಂದಿದೆ.
- ಶ್ರೀಮತಿ ಆಶಾ, ಆಶಾ ಫೆಸಿಲಿಟೇಟರ್, ಕಡಬ
ಮುತುವರ್ಜಿಯಿಂದ ಕೆಲಸ
ಕೋವಿಡ್ ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಜನರಿಗೆ ಯಾವುದೇ ತೊಂದರೆಯಿಲ್ಲದೆ ಆಹಾರ, ಇನ್ನಿತರ ಸೌಕರ್ಯಗಳನ್ನು ನಮ್ಮ ಶಾಸಕರಾದ ಎಸ್.ಅಂಗಾರ ಅವರು ತುಂಬ ಮುತುವರ್ಜಿ ವಹಿಸಿ ವ್ಯವಸ್ಥೆಗೊಳಿಸಿದ್ದಾರೆ. ಯಾವುದೇ ಪ್ರಚಾರ ಬಯಸದೆ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜಕೀಯ ಭೇದ ಮರೆತು ಅಗತ್ಯವಿರುವವರಿಗೆ ಆಹಾರ ಸಾಮಗ್ರಿಗಳನ್ನು ನೀಡಿ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ.
- ಫಯಾಝ್ ಕಡಬ, ಸಾಮಾಜಿಕ ಕಾರ್ಯಕರ್ತರು
ಆರೋಗ್ಯ ಇಲಾಖೆಗೆ ಪೂರ್ಣ ಸಹಕಾರ
ಕೋವಿಡ್ 19 ನಿಯಂತ್ರಣ, ತಡೆಗಟ್ಟಲು ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಶಾಸಕರು ಹಲವು ಬಾರಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ಶಾಸಕರಾದ ಎಸ್.ಅಂಗಾರ ಅವರು ಮಾಹಿತಿ ನೀಡುವ ಮೂಲಕ ಆರೋಗ್ಯ ಇಲಾಖೆಗೆ ಸಂಪೂರ್ಣವಾದ ಸಹಕಾರವನ್ನು ನೀಡಿರುವುದು ಶ್ಲಾಘನೀಯ.
– ಡಾ| ಸುಬ್ರಹ್ಮಣ್ಯ ಎಂ.ಆರ್. ತಾಲೂಕು ಆರೋಗ್ಯಾಧಿಕಾರಿ, ಸುಳ್ಯ
ಗ್ರಾಮ ಗ್ರಾಮಗಳಿಗೆ ಭೇಟಿ
ಸುಳ್ಯ ಶಾಸಕ ಎಸ್.ಅಂಗಾರ ಅವರು ಅತ್ಯಂತ ಜವಾಬ್ದಾರಿ ಹಾಗೂ ಪ್ರಾಮಾಣಿಕವಾಗಿ ಅಧಿಕಾರಿಗಳಿಂದ ಹಿಡಿದು ಸಾಮಾನ್ಯ ಜನರಿಗೂ ತತ್‌ಕ್ಷಣ ಸ್ಪಂದನೆ ನೀಡುತ್ತಿರುವುದರಿಂದ ಕೋವಿಡ್ ಲಾಕ್‌ಡೌನ್ ಯಶಸ್ವಿಯಾಗಲು ಸಾಧ್ಯವಾಗಿದೆ. ದೈನಂದಿನ ಚಟುವಟಿಕೆಯಾಗಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಪಿಡಿಒ, ವಿಎ ಹಾಗೂ ಅಧಿಕಾರಿಗಳ ಸಭೆಯನ್ನು ನಡೆಸಿ ಗ್ರಾಮಕ್ಕೆ ಬೇಕಾದ ಅಗತ್ಯತೆಗೆ ಪೂರಕವಾಗಿ ಸ್ಪಂದನೆ ನೀಡಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆಗೆ ಎಲ್ಲಿಯೂ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಅಧಿಕಾರಿಗಳಿಗೆ ವಿಶೇಷ ಆದೇಶ ನೀಡಿರುವುದು ಶಾಸಕರ ಕಾಳಜಿಗೆ ಸಾಕ್ಷಿಯಾಗಿದೆ.
- ಚನಿಯ ಕಲ್ತಡ್ಕ, ಅಧ್ಯಕ್ಷರು, ತಾಲೂಕು ಪಂಚಾಯತ್, ಸುಳ್ಯ
ಕೃಷಿಕರ ನೆರವಿಗೆ ಧಾವಿಸಿದ ಶಾಸಕ
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ತೊಂದರೆಗೊಳಗಾದ ಕೃಷಿಕರ ಮನವಿಗೆ ಸ್ಪಂದಿಸಿ ಕ್ಯಾಂಪ್ಕೋ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ ಅಡಿಕೆ ಖರೀದಿಗೆ ವ್ಯವಸ್ಥೆ ಮಾಡಿರುವುದಲ್ಲದೆ ಎಪಿಎಂಸಿ ಪ್ರಾಂಗಣದಲ್ಲಿ ರೈತರಿಂದ ಕೃಷಿ ಉತ್ಪನ್ನ ಖರೀದಿಸಲು ಅವಕಾಶವನ್ನು ಒದಗಿಸಿರುತ್ತಾರೆ. ಒಟ್ಟಿನಲ್ಲಿ ಲಾಕ್‌ಡೌನ್ ಸಮಯದಲ್ಲಿ ರೈತರಿಗೆ ಪೂರಕವಾಗಿ ಎಪಿಎಂಸಿಯೊಂದಿಗೆ ಶಾಸಕರು ಕಾರ್ಯನಿರ್ವಹಿಸಿರುವುದು ಕೃಷಿಕರಿಗೆ ಸಹಕಾರಿಯಾಗಿದೆ.
– ದೀಪಕ್ ಕುತ್ತಮೊಟ್ಟೆ, ಅಧ್ಯಕ್ಷರು, ಎಪಿಎಂಸಿ, ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.