‘ಪ್ರಶಸ್ತಿಗಿಂತಲೂ ಅವಕಾಶ ಸದುಪಯೋಗ ಮುಖ್ಯ’
Team Udayavani, Oct 22, 2018, 3:22 PM IST
ಸುಳ್ಯ: ಅವಕಾಶ ಎದುರಾದಾಗ ಪ್ರಶಸ್ತಿ ಗೆಲ್ಲುವುದಕ್ಕಿಂತಲೂ ಅದರಲ್ಲಿ ಭಾಗವಹಿಸುವುದೇ ಮುಖ್ಯವಾದ ಘಟ್ಟವಾಗುತ್ತದೆ. ಹಾಗಾಗಿ ‘ಉದಯವಾಣಿ’ ಬಳಗ ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆ ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆಗೆ ಒಂದು ಉತ್ತಮ ವೇದಿಕೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಹೇಳಿದರು.
ಉದಯವಾಣಿ ಮತ್ತು ಉಡುಪಿ ಆರ್ಟಿಸ್ಟ್ ಪೋರಂ ಆಶ್ರಯದಲ್ಲಿ ರವಿವಾರ ಸುಳ್ಯ ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಚಿಣ್ಣರ ಬಣ್ಣ -2018ರ ಮಕ್ಕಳ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಮನಸ್ಸಿನಲ್ಲಿ ಹಲವು ಯೋಚನೆಗಳು ಇರುತ್ತವೆ. ಅದಕ್ಕೆ ಬಣ್ಣ ತುಂಬಿ ಹೊಸತನ ನೀಡುವ ಅವಕಾಶವಿದು. ಈ ಸ್ಪರ್ಧೆ ನಿಮ್ಮಲ್ಲಿನ ಕ್ರಿಯಾಶೀಲತೆಯ ಉದ್ದಿಪನಕ್ಕೆ ಕಾರಣ ಎಂದು ಹೇಳಿ, ಉದಯವಾಣಿ ಪ್ರಯತ್ನವನ್ನು ಶ್ಲಾಘಿಸಿದರು. ಕೆವಿಜಿ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ರಂಜನ್ ಕೆ., ಮಕ್ಕಳಿಗೆ ಇದೊಂದು ಉತ್ತಮ ಅವಕಾಶ ಎಂದರು.
ಚಿತ್ರಗಳಿಂದ ಸಂಸ್ಕಾರ, ಸದಾಚಾರ
ಉದಯವಾಣಿ ಮಂಗಳೂರು ವಿಭಾಗದ ಮಾರುಕಟ್ಟೆ ಮುಖ್ಯಸ್ಥ ರಾಮಚಂದ್ರ ಮಿಜಾರ್, ಉದಯವಾಣಿ ಮತ್ತು ಉಡುಪಿ ಆರ್ಟಿಸ್ಟ್ ಪೋರಂ ಹಮ್ಮಿಕೊಂಡಿರುವ ಈ ಸ್ಪರ್ಧೆಯಲ್ಲಿ ಪ್ರತಿಭೆ ಆಧಾರಿತವಾಗಿ ಪ್ರಶಸ್ತಿ ದೊರೆಯುತ್ತದೆ. ವಿಜೇತರು ಅರ್ಹತೆಯಿಂದಲೇ ಗೆಲುವು ಪಡೆದು, ಜಿಲ್ಲಾಮಟ್ಟದ ಒಬ್ಬ ಉತ್ತಮ ಚಿತ್ರಕಾರ ಎಂದೆನಿಸಿಕೊಳ್ಳುತ್ತಾರೆ. ನಮ್ಮಲ್ಲಿ ಸಂಸ್ಕಾರ, ಸದಾಚಾರ ಇಲ್ಲದಿದ್ದರೆ ಅಂತಹ ಬದುಕಿಗೆ ಅರ್ಥ ಇರುವುದಿಲ್ಲ. ಚಿತ್ರಕಲೆಯಂತಹ ಸ್ಪರ್ಧೆಗಳು ಮಕ್ಕಳ ಮನಸ್ಸಿನಲ್ಲಿ ಸಂಸ್ಕಾರ, ಸದಾಚಾರ ಮೂಡಿಸಲು ಸಹಕಾರಿ ಎಂದರು.
ಉದಯವಾಣಿ ನ್ಯಾಶನಲ್ ಹೆಡ್ ಮ್ಯಾಗಜಿನ್ಸ್-ಸ್ಪೆಷಲ್ ಇನಿಷಿಯೇಟಿವ್ಸ್ ಆನಂದ ಕೆ. ಅವರು, ಜಿಲ್ಲಾ ಮಟ್ಟದ ಕಾರ್ಯಕ್ರಮ ತಾಲೂಕು ಮಟ್ಟದಲ್ಲಿ ಏರ್ಪಡಿಸಿದ ಕಾರಣ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ವರ್ಷದಿಂದ ವರ್ಷಕ್ಕೆ ನಿರೀಕ್ಷೆಗೂ ಮೀರಿ ಬರುತ್ತಿರುವ ವಿದ್ಯಾರ್ಥಿ ಸಂಖ್ಯೆಯೇ ಅದಕ್ಕೆ ಸಾಕ್ಷಿ ಎಂದರು.
ಪ್ರಸರಣ ವಿಭಾಗದ ವ್ಯವಸ್ಥಾಪಕ ಅಜಿತ್ ಭಂಡಾರಿ ಸ್ವಾಗತಿಸಿದರು. ವರದಿಗಾರ ಕಿರಣ್ ಪ್ರಸಾದ್ ಕುಂಡಡ್ಕ ವಂದಿಸಿದರು. ಜಾಹೀರಾತು ವಿಭಾಗದ ವ್ಯವಸ್ಥಾಪಕ ಸತೀಶ್ ಮಂಜೇಶ್ವರ ನಿರೂಪಿಸಿದರು. ಪ್ರಸರಣ ವಿಭಾಗದ ಜಯಾನಂದ ಸಿ.ಎಚ್., ಹರ್ಷಿತ್, ಜಾಹೀರಾತು ವಿಭಾಗದ ಜಯಂತ ಕೆ. ಬಾಯಾರ್, ಹರ್ಷ ಎ. ಪುತ್ತೂರು ಸಹಕರಿಸಿದರು. ಜೂನಿಯರ್, ಸಬ್ ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.