![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, May 18, 2020, 5:45 AM IST
ಸುಳ್ಯ: ಅರಣ್ಯ ಇಲಾಖೆ ವ್ಯಾಪ್ತಿಯ ಸುಳ್ಯ ವಲಯ ವಿಭಾಗದ ಸಸ್ಯ ಕ್ಷೇತ್ರದಲ್ಲಿ ಈ ಬಾರಿ 1.70 ಲಕ್ಷ ಗಿಡ ಬೆಳೆಸಲಾಗಿದ್ದು, ನಾಟಿ ಹಾಗೂ ವಿತರಣೆಗೆ ಸಿದ್ಧವಾಗಿದೆ.
ಸಾರ್ವಜನಿಕರಿಗೆ ವಿತರಿಸಲು ಹಾಗೂ ನೆಡುತೋಪುಗಳಲ್ಲಿ ನೆಡಲು ಗಿಡ ಬೆಳೆಸಲಾಗುತ್ತದೆ. ಅರಣ್ಯ ಇಲಾಖೆ ವಿವಿಧ ಯೋಜನೆ ಮೂಲಕ ಗಿಡ ವಿತರಿಸಲಿದೆ.
ಸಾರ್ವಜನಿಕ ವಿತರಣೆಗೆ 60,800 ಗಿಡ
ಸುಳ್ಯ ವಲಯದ ಮೇದಿನಡ್ಕ ಸಸ್ಯ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ವಿತರಣೆಗೆಂದು 60,800 ಗಿಡಗಳಿವೆ. ಕಳೆದ ವರ್ಷ 42,500 ಗಿಡಗಳಿತ್ತು. ಅಂದರೆ ಈ ಬಾರಿ 18,300 ಗಿಡಗಳು ಹೆಚ್ಚುವರಿಯಾಗಿ ಬೆಳೆಯಲಾಗಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಸಹಿತ ವಿವಿಧ ಯೋಜನೆಗಳಡಿ ಪ್ರೋತ್ಸಾಹ ದರದಲ್ಲಿ ಗಿಡ ವಿತರಿಸಲಾಗುತ್ತದೆ. ಪ್ರತಿ ವರ್ಷ ಮಳೆಗಾಲ ಆರಂಭಗೊಂಡ ಮೇಲೆ ಸಂಘ-ಸಂಸ್ಥೆ, ಶಾಲೆಗಳ ಸಹಯೋಗದಲ್ಲಿ ವನಮಹೋತ್ಸವ ಮೊದಲಾದ ಚಟುವಟಿಕೆ ಹಮ್ಮಿಕೊಳ್ಳಲು ಅರಣ್ಯ ಇಲಾಖೆ ತಯಾರಿ ನಡೆಸುತ್ತದೆ. ಆದರೆ ಬಾರಿ ಶಾಲಾ ಶೈಕ್ಷಣಿಕ ವರ್ಷ ಕಾರ್ಯಾರಂಭದ ಅನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ.ನೆಡುತೋಪುಗಳಲ್ಲಿ ನಾಟಿ ಮಾಡಲು ಮೇದಿನಡ್ಕ ಸಸ್ಯ ಕ್ಷೇತ್ರದಲ್ಲಿ 1,09,900 ಗಿಡಗಳಿವೆ. ಇವುಗಳು ಮಾರಾಟಕ್ಕೆಂದು ನಾಟಿ ಮಾಡಿದ ಗಿಡಗಳಲ್ಲ. ಅರಣ್ಯ ಇಲಾಖೆಯ ನೆಡುತೋಪುಗಳಲ್ಲಿ ಇವುಗಳನ್ನು ಬೆಳೆಸಲಾಗುತ್ತದೆ.
ಯಾವೆಲ್ಲ ಗಿಡಗಳಿವೆ?
ಮೂರು ವಲಯದ ಸಸ್ಯ ಕ್ಷೇತ್ರದಲ್ಲಿ ಸಾಗುವಾನಿ, ಮಹಾಗನಿ, ಹುಣಸೆ, ಶ್ರೀಗಂಧ, ನೆಲ್ಲಿ, ಕಿರಾಲ್‌ಬೋಗಿ, ರಾಂಪತ್ರೆ, ರೆಂಜೆ, ಹೊಂಗೆ, ಹೆಬ್ಬೇವು, ಅಂಟುವಾಳ, ಬಾದಾಮಿ, ನೇರಳೆ, ಮಾವು ಮೊದಲಾದ 55ಕ್ಕೂ ಅಧಿಕ ಜಾತಿಯ ಸಸ್ಯಗಳಿವೆ.
ಕಳೆದ ಎರಡು ವರ್ಷ 1.83 ಲಕ್ಷ ಗಿಡಗಳು
2018ರಲ್ಲಿ ಮೇದಿನಡ್ಕ ಕೇಂದ್ರೀಯ ಸಸ್ಯ ಕ್ಷೇತ್ರದಲ್ಲಿ 81,575 ಗಿಡಗಳನ್ನು ಬೆಳೆದು, ನೆಡು ತೋಪುಗಳಲ್ಲಿ ನೆಡಲು 67,575 ಮತ್ತು ಸಾರ್ವಜನಿಕ ವಿತರಣೆಗೆ 14 ಸಾವಿರ ಗಿಡಗಳನ್ನು ಬಳಸಲಾಗಿತ್ತು. 2019 ಸಾರ್ವಜನಿಕರಿಗೆ ವಿತರಣೆಗೆ 42,500 ಗಿಡಗಳು, ನೆಡುತೋಪುಗಳಲ್ಲಿ ನಾಟಿ ಮಾಡಲು 1,01,500 ಗಿಡಗಳು ಸಹಿತ 1.44 ಲಕ್ಷ ಗಿಡಗಳನ್ನು ವಿತರಿಸಲಾಗಿತ್ತು.
ಹಸುರು ಸಂಪತ್ತು ವೃದ್ಧಿಗೆ ಕ್ರಮ
ಮೇದಿನಡ್ಕ ಸಸ್ಯ ಕ್ಷೇತ್ರದಲ್ಲಿ ಸಾರ್ವಜನಿಕ ವಿತರಣೆ ಮತ್ತು ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ನೆಡಲು 1,70,700 ಗಿಡಗಳು ಸಿದ್ಧವಾಗಿವೆ. ಹಸುರು ಸಂಪತ್ತು ವೃದ್ಧಿಗೆ ಅರಣ್ಯ ಇಲಾಖೆ ಪೂರಕ ಕ್ರಮ ಕೈಗೊಂಡಿದೆ.
-ಮಂಜುನಾಥ,ವಲಯ ಅರಣ್ಯಾಧಿಕಾರಿ, ಸುಳ್ಯ
You seem to have an Ad Blocker on.
To continue reading, please turn it off or whitelist Udayavani.