Sulya: ಶಾಲಾ ಆವರಣದಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ
Team Udayavani, Jun 17, 2024, 10:42 AM IST
ಅರಂತೋಡು: ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಶಾಲಾ ಜಗಲಿಯಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ವಿರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ಕೊಟ್ಟಚ್ಚಿ ವಸಂತ (45) ಮೃತಪಟ್ಟವರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಶಾಲೆಯ ಜಗಲಿ ಯಲ್ಲಿ ಶವ ಪತ್ತೆಯಾಗಿದೆ.
ವಸಂತ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಕುದುರೆಪಾಯದ ಕೃಷ್ಣಪ್ಪ ನಾಯ್ಕರ ಪುತ್ರಿಯನ್ನು ವಿವಾಹವಾ ಗಿದ್ದು, ಅಲ್ಲೇ ನೆಲೆಸಿದ್ದರು ಎನ್ನಲಾಗಿದೆ. ಏಳು ತಿಂಗಳುಗಳಿಂದ ಕಡಬ ತಾಲೂಕಿನ ಕಾಣಿಯೂರಿನಲ್ಲಿ ಕೆಲಸ ಮಾಡುತ್ತಿದ್ದು, ರವಿವಾರ ಅಲ್ಲಿಂದ ಒಂದು ಸಾವಿರ ರೂಪಾಯಿ ಪಡೆದುಕೊಂಡು ಬಂದಿದ್ದರು ಎಂದು ತಿಳಿದುಬಂದಿದೆ.
ಅಪರಾಹ್ನ ಈತ ಕೆಲಸ ಮಾಡುತ್ತಿದ್ದ ಮನೆಯವರು ಆಗಮಿಸಿ ಗುರುತು ಪತ್ತೆ ಹಚ್ಚಿದ್ದಾರೆ. ಬಳಿಕ ಮೃತರ ಪತ್ನಿಯೂ ಗುರುತು ಪತ್ತೆ ಹಚ್ಚಿದ್ದಾರೆ.
ಎಸ್‌ಪಿ ರಿಷ್ಯಂತ್ ಸಿ.ಬಿ., ಜಿಲ್ಲಾ ತನಿಖಾ ಎಎಸ್‌ಪಿ ರಾಜೇಂದ್ರ ಡಿ.ಎಸ್., ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ, ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ, ಪುತ್ತೂರು ನಗರ ಇನ್‌ಸ್ಪೆಕ್ಟರ್ ಸತೀಶ್ ಜೆ.ಜೆ., ಸುಳ್ಯ ಎಸ್‌ಐ ಮಹೇಶ್, ಸುಬ್ರಹ್ಮಣ್ಯ ಎಸ್‌ಐ ಕಾರ್ತಿಕ್ ಸಹಿತ ಪೊಲೀಸ್ ಅಕಾರಿಗಳು ಹಾಗೂ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳ, ವಧಿ ವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು.
ಮದ್ಯದ ಬಾಟಿಲಿ, ಸಿಮ್ ಪತ್ತೆ
ಸ್ಥಳದಲ್ಲಿ ಎರಡು ಮದ್ಯದ ಪ್ಯಾಕೆಟ್, ಒಂದು ಸಿಮ್ ಕಾರ್ಡ್ ಪತ್ತೆಯಾಗಿದೆ. ಶವದ ಅಲ್ಪ ದೂರಲ್ಲೇ ಕಲ್ಲಿನ ತುಂಡೊಂದು ಪತ್ತೆಯಾಗಿದ್ದು, ಅದರಲ್ಲೂ ರಕ್ತದ ಕಲೆ ಕಂಡು ಬಂದಿದೆ. ಪತ್ತೆಯಾದ ಸಿಮ್ ಕಾರ್ಡ್ ವಾರಸುದಾರರನ್ನು ಸಂಪರ್ಕಿಸಿದ ವೇಳೆ ಮೊಬೈಲ್ ಕಳೆದುಹೋಗಿರುವ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ವಾರದಲ್ಲಿ ಎರಡನೇ ಘಟನೆ
ವಾರದ ಅಂತರದಲ್ಲಿ ಸುಳ್ಯ ತಾಲೂಕಿನಲ್ಲಿ ಎರಡು ಕೊಲೆ ಪ್ರಕರಣ ನಡೆದಂತಾಗಿದೆ. ಕಳೆದ ರವಿವಾರ ರಾತ್ರಿ (ಜೂ.9) ಬೆಳ್ಳಾರೆ ಮಾರುಕಟ್ಟೆಯಲ್ಲಿ ನಳಿನಿ ಎಂಬ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ನಡೆಸಲಾಗಿತ್ತು. ಈ ಸಂಬಂಧ ಕಲ್ಮಡ್ಕದ ಜಯರಾಮ ಎಂಬವರನ್ನು ಪೊಲೀಸರು ಬಂಧಿಸಿದ್ದರು.
ಏಳು ತಿಂಗಳ ಹಿಂದೆ ಮನೆ ಬಿಟ್ಟಿದ್ದ
7 ತಿಂಗಳ ಹಿಂದೆ ಮನೆ ಬಿಟ್ಟಿದ್ದ ವ್ಯಕ್ತಿ ಮತ್ತೆ ಮನೆಗೆ ಹೋಗಿರಲಿಲ್ಲ. ವಿಪರೀತ ಮದ್ಯ ಸೇವಿಸುತ್ತಿದ್ದ ಎನ್ನಲಾಗಿದೆ. 15 ವರ್ಷಗಳ ಹಿಂದೆ ವಿವಾಹವಾಗಿದ್ದ ಈತನ ಇಬ್ಬರು ಪುತ್ರರು ಆಲೆಟ್ಟಿ ಆಶ್ರಮ ಶಾಲೆಯಲ್ಲಿ ಓದುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.