ಜ್ಞಾನ ದೀವಿಗೆ ಬೆಳಗಿದ ಮೂರು ತಲೆಮಾರು
Team Udayavani, Sep 5, 2021, 8:00 AM IST
ಶಿಕ್ಷಕರು ಎಂದರೆ ಹಲವು ಪೀಳಿಗೆಗಳಿಗೆ ವಿದ್ಯೆಯನ್ನು ಧಾರೆಯೆರೆಯುವ ತಪಸ್ವಿಗಳು. ಮೂರು ತಲೆಮಾರುಗಳಿಂದ ಜ್ಞಾನದೀವಿಗೆಯನ್ನು ಬೆಳಗಿಸುವ ಕೆಲಸ ಮಾಡುತ್ತಿರುವ ವಿಶಿಷ್ಟ ಬೋಧಕ ಕುಟುಂಬಗಳ ಪರಿಚಯ ಇಲ್ಲಿದೆ.
ಬ್ರಿಟಿಷರ ಕಾಲದಿಂದ ನಡೆದು ಬಂದ ವೃತ್ತಿ:
ಪುತ್ತೂರು: ಬಂಟ್ವಾಳ ತಾಲೂಕಿನ ಪೀಟರ್ ಡೇಸಾ ಅವರು ಕಡಬ ತಾಲೂಕಿನ ಮರ್ಧಾಳ ಬೋರ್ಡ್ ಶಾಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದವರು. ಬ್ರಿಟಿಷರ ಕಾಲದಲ್ಲಿ 17 ವರ್ಷ ಸೇವೆ ಸಲ್ಲಿಸಿದ್ದರು. ಅವರ ಪುತ್ರಿ ಆಗ್ನೆಸಾ ಡೇಸಾ ಶಿಕ್ಷಕಿಯಾಗಿದ್ದವರು. ಪ್ರಸ್ತುತ ಆಗ್ನೆಸಾ ಡೇಸಾ ಅವರ ಪುತ್ರಿ ಮರ್ಸಿ ಮಮತಾ ಮೋನಿಸ್ ಕೊಂಬೆಟ್ಟು ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.
ಪೀಟರ್ ಡೇಸಾ ಅವರ ನಾಲ್ವರು ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಶಿಕ್ಷಕರಾಗಿದ್ದಾರೆ. ಪೀಟರ್ ಡೇಸಾ ಅವರ ಮೊದಲ ಸಂಬಳ 9 ರೂ. ಆಗಿದ್ದರೆ, ಪುತ್ರಿ ಆಗ್ನೇಸಾ ಅವರದ್ದು 200 ರೂ. ಇಬ್ಬರೂ ಸೈಕಲ್‌ನಲ್ಲಿ ಶಾಲೆಗೆ ತೆರಳುತ್ತಿದ್ದರು. ಪೀಟರ್ 6ನೇ ತರಗತಿ ಪೂರ್ಣಗೊಳಿಸಿ 2 ವರ್ಷ ತರಬೇತಿ ಪಡೆದು ಶಿಕ್ಷಕರಾಗಿದ್ದರು. ತಣ್ಣಿರುಪಂತ, ಮಚ್ಚಿನ, ಮಾಲಾಡಿ ಬೋರ್ಡ್ ಶಾಲೆಯಲ್ಲಿ ಸೇವೆ ಸಲ್ಲಿಸಿ 1959ರಲ್ಲಿ ನಿವೃತ್ತಿ ಹೊಂದಿದವರು.
ಆಗ್ನೇಸಾ ಅವರು ಮಂಗಳೂರು, ವಗ್ಗ, ಮಡಂತ್ಯಾರು, ಗರ್ಡಾಡಿ ಶಾಲೆ ಯಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿದರು.
“ಅಜ್ಜ, ತಾಯಿ; ಬಳಿಕ ಈಗ ನಾನು ಶಿಕ್ಷಕಿ. ಇದು ನಮ್ಮ ಕುಟುಂಬದ ಸೌಭಾಗ್ಯ’ ಎನ್ನುತ್ತಾರೆ ಮರ್ಸಿ ಮಮತಾ ಮೋನಿಸ್.
ನಮ್ಮದು ಅಧ್ಯಾಪನದ ಪರಂಪರೆ… :
ಪುತ್ತೂರು: ಕಾಸರಗೋಡಿನ ಪಳ್ಳತ್ತಡ್ಕದಲ್ಲಿ 1917ರಲ್ಲಿ ಶಾಲೆ ಸ್ಥಾಪಿಸಿ, ಮುನ್ನಡೆಸಿದವರು ಪಳ್ಳ ತ್ತಡ್ಕ ಸುಬ್ರಾಯ ಭಟ್. ಅವರ ಮಗಳು ಗಿರಿಜಾ ಶಿಕ್ಷಕಿಯಾಗಿದ್ದರು. ಅವರ ಪುತ್ರಿ ವನಲಕ್ಷ್ಮೀ ಉಪ್ಪಿನಂಗಡಿ ಸರಕಾರಿ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದಾರೆ.
ಸುಬ್ರಾಯ ಭಟ್ಟರ ಹಿರಿಯ ಪುತ್ರ ವೆಂಕಟ ರಮಣ ಭಟ್ ಹೈಸ್ಕೂಲ್ ಅಧ್ಯಾಪಕರಾಗಿದ್ದರೆ, 2ನೇ ಪುತ್ರ ಡಾ| ಪಳ್ಳತ್ತಡ್ಕ ಕೇಶವ ಭಟ್ಟರು ವೆನೆಜುವೆಲಾದಲ್ಲಿ ಪ್ರಾಧ್ಯಾಪಕರಾಗಿದ್ದರು. ಕೊನೆಯ ಮಗ ಶಂಕರನಾರಾಯಣ ಭಟ್ ಅಜ್ಜನ ಬಳಿಕ ಮುಖ್ಯೋಪಾಧ್ಯಾಯರಾಗಿ ಪಳ್ಳತ್ತಡ್ಕ ಶಾಲೆಯನ್ನು ಮುನ್ನಡೆಸಿದರು.
“ನನ್ನ ದೊಡ್ಡಮ್ಮನ ಐದೂ ಮಂದಿ ಮಕ್ಕಳು ಶಿಕ್ಷಕರಾಗಿದ್ದರು. ಒಬ್ಬರು ಈಗಲೂ ವೃತ್ತಿಯಲ್ಲಿದ್ದಾರೆ. ಅಮ್ಮನ ತಂಗಿ ಶಾಂತಾ ಕುಮಾರಿ ಮುಖ್ಯ ಶಿಕ್ಷಕಿಯಾಗಿದ್ದರು’ ಎನ್ನುತ್ತಾರೆ ವನಲಕ್ಷ್ಮೀ. ವನಲಕ್ಷ್ಮೀ ಅವರ ತಂಗಿ ಸುಮನಾ ಪ್ರಾಧ್ಯಾಪಕಿ, ತಮ್ಮ ಡಾ| ಸುಬ್ರಹ್ಮಣ್ಯ ಭಟ್ ಸಹಪ್ರಾಧ್ಯಾಪಕರು.
ತಲೆಮಾರುಗಳಿಂದ ಬೋಧಕರು :
ಬೆಳ್ತಂಗಡಿ: ಬೆಳಾಲು ಶ್ರೀ ಸರಸ್ವತಿ ಅನುದಾನಿತ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಉಜಿರೆಯ ವಿದ್ಯಾನಗರ ನಿವಾಸಿ ಚಿದಾನಂದ ಕೆ. ಅವರ ಕುಟುಂಬದಲ್ಲಿ ಹಲವರು ಶಿಕ್ಷಕರು.
ಚಿದಾನಂದರ ಅಜ್ಜ ರಂಗಪ್ಪ ಪ್ರಭು ಹಳೆನೇರಂಕಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅವರ ಪುತ್ರ ಅನಿರುದ್ಧ ನರಿಮೊಗರು, ಮರಕ್ಕೂರು, ಶಾಂತಿಗೋಡು ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರ ಪುತ್ರ ಚಿದಾನಂದ. ಚಿದಾನಂದರ ಪತ್ನಿ ಜಮುನಾ ಬದನಾಜೆ ಶಾಲೆಯ ಮುಖ್ಯಶಿಕ್ಷಕಿ, ಚಿದಾನಂದರ ಸಹೋದರ ಅನಂತ, ಅಕ್ಕ ನಳಿನಿ ಜಿಡೆಕಲ್ಲು ಸ.ಹಿ.ಪ್ರಾ. ಶಾಲೆಯಲ್ಲಿ ಮುಖ್ಯಶಿಕ್ಷಕಿ. ಭಾವ ಅಪ್ಪಣ್ಣ ನಾಯಕ್ ಮುಖ್ಯ ಶಿಕ್ಷಕರಾಗಿದ್ದರು. ಅವರ ಪುತ್ರಿ ಆಶಾಲತಾ ಉಪನ್ಯಾಸಕಿಯಾಗಿದ್ದಾರೆ.
ಮನೆಯಲ್ಲೇ ಶಾಲೆ ತೆರೆದವರ ಕುಟುಂಬ :
ಬೆಳ್ತಂಗಡಿ: ಗೇರುಕಟ್ಟೆ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲೆ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕುಟುಂಬದ 3 ತಲೆಮಾರುಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿವೆ. ಅಜ್ಜ ದಿ| ನಾಗರಾಜ್ ಶೆಟ್ಟಿ ಶಿಕ್ಷಕರಾಗಿ ಮನೆಯಲ್ಲೇ ಶಾಲೆ ತೆರೆದವರು. ಅನಂತರ ಅದು ಸರಕಾರಿ ಕಟ್ಟಡಕ್ಕೆ ಸ್ಥಳಾಂತರವಾಯಿತು. ತಂದೆ ಲೋಕಪಾಲ ಹೆಗ್ಡೆ ಅಂಡಾರು ಶಾಲಾ ಮುಖ್ಯ ಶಿಕ್ಷಕ ರಾಗಿದ್ದರು. ಅಜಿತ್ ಕುಮಾರ್ 1998ರಲ್ಲಿ ಪಿಲ್ಯ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ವೃತ್ತಿ ಆರಂಭಿಸಿದ್ದರು. ಆಲ್ ಇಂಡಿಯಾ ಕಬಡ್ಡಿ ರೆಫ್ರಿ, ಕರ್ನಾಟಕ ಸರಕಾರಿ ನೌಕರರ ಸಂಘದ ಸಂಚಾಲಕರಾಗಿ, ಯೋಗದೊಂದಿಗೆ ಆ್ಯತ್ಲೆಟಿಕ್ಸ್, ಖೋ ಖೋ, ಥ್ರೋಬಾಲ್‌ಗಳ ರಾಜ್ಯ ಮಟ್ಟದ ರೆಫ್ರಿಯಾಗಿದ್ದಾರೆ.
ಅಜ್ಜಂದಿರ ಹಾದಿಯಲ್ಲಿ ಮುನ್ನಡೆದ ಕುಟುಂಬ :
ಬೆಳ್ತಂಗಡಿ: ಉಜಿರೆ ಲಲಿತನಗರ ನಿವಾಸಿ ವಿಶ್ವನಾಥ ರಾವ್ ವೈ. ಚಿಕ್ಕೋಡಿಯಲ್ಲಿ ಶಿಕ್ಷಕರಾಗಿದ್ದರು. ಅವರ ಮಗ ವಿಕಾಸ್ ಕುಮಾರ್ 15 ವರ್ಷಗಳಿಂದ ಶಿಕ್ಷಕರಾಗಿದ್ದಾರೆ.
ವಿಕಾಸ್ ಅವರ ಅಜ್ಜ ದಿ| ವಾಸು ದೇವ ರಾವ್ ಶಿಕ್ಷಕರಾಗಿದ್ದರು. ಬಾರಕೂರಿನ ಹೇರಾಡಿ ರುಕ್ಮಿಣಿ ಶೆಡ್ತಿ ಅನುದಾನಿತ ಪ್ರಾ. ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ತಾವೇ ಶಾಲೆ ಆರಂಭಿಸಿ ಬಳಿಕ ಟ್ರಸ್ಟ್‌ಗೆ ಬಿಟ್ಟುಕೊಟ್ಟಿದ್ದರು.
ವಿಕಾಸ್ ಅವರ ತಾಯಿ ಸರಸ್ವತಿ ಬ್ರಹ್ಮಾವರ ವಲಯದ ಬಣ್ಣಂಪಳ್ಳಿ, ಪಾಡಿಗಾರ ಸರಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ.
ವಿಕಾಸ್ ಅವರ ತಂದೆಯ ತಂದೆ ದಿ| ರಾಮಚಂದ್ರ ರಾವ್ ಮುಖ್ಯೋಪಾಧ್ಯಾಯರಾಗಿದ್ದರು. ತಂದೆಯ ಅಣ್ಣ ದಿ| ಭಾಸ್ಕರ್ ರಾವ್ ಕೂಡ ಮುಖ್ಯ ಶಿಕ್ಷಕರಾಗಿದ್ದರು. ವಿಕಾಸರ ಪತ್ನಿ ಶುಭಾ ಕೂಡ ಶಿಕ್ಷಕಿ. ತಂಗಿ ವಿನಯಾ ಗುರುಪ್ರಸಾದ್ ಶಿಕ್ಷಕಿಯಾಗಿದ್ದರು.
ಶಿಕ್ಷಕ ತಂದೆಯವರಿಂದ ತಾಯಿಯೂ ಶಿಕ್ಷಕಿಯಾದರು :
ಬಂಟ್ವಾಳ: “ತಂದೆ ನನ್ನಮ್ಮನನ್ನು ಮದುವೆಯಾದ ಬಳಿಕ ಶಿಕ್ಷಣ ಕೊಡಿಸಿ ಶಿಕ್ಷಕಿಯಾಗಿಸಿದರು. ನಾನು ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಅಜ್ಜನೇ ಪ್ರೇರಣೆ ಎಂದು ಅಜ್ಜಿಬೆಟ್ಟು ಶಾಲೆಯ ಶಿಕ್ಷಕಿ ವಾಣಿ ಬಿ. ಹೆಮ್ಮೆಯಿಂದ ಹೇಳುತ್ತಾರೆ. ವಾಣಿ ಅವರ ತಾಯಿ ಶಾರದಾ ಬಡಗನ್ನೂರು ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಅವರ ತಂದೆ ರಾಮಣ್ಣ ಕೆದಿಲಾಯ ಪಾಣಾಜೆ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ವಾಣಿ ಅವರ ತಂದೆ ಗೋಪಾಲ ಕೃಷ್ಣ ಬೈಪಡಿತ್ತಾಯರು ಬೆಳಂದೂರು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದರು. ವಾಣಿ ಅವರ ಪತಿ ರಾಧೇಶ್ ತೋಳ್ಪಾಡಿ ಉಪನ್ಯಾಸಕರು.
ನಮಗೆ ತಾಯಿಯೇ ಸ್ಫೂರ್ತಿ :
ಬಂಟ್ವಾಳ: ತಂದೆಯ ಪ್ರೇರಣೆಯಿಂದ ಶಿಕ್ಷಕಿಯಾದ ತಾಯಿ. ತಾಯಿಯ ಪ್ರೇರಣೆಯಿಂದ ಶಿಕ್ಷಕರಾದ ಮಕ್ಕಳು… ಇದು ಕೊಡ್ಮಾಣ್ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಪ್ರಸನ್ನ ಕುಮಾರ್ ಅವರ ಕುಟುಂಬದಲ್ಲಿ ಮೂರು ತಲೆಮಾರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದರ ಹಿನ್ನೋಟ.
ಪ್ರಸನ್ನರ ಅಜ್ಜ ಕಾಸರಗೋಡು ಆವಳ ಲೋವರ್ ಪ್ರೈಮರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅವರ ಪುತ್ರಿ ಗೀತಾ ಅವರು ಉದ್ಯಾವರ ತೋಟ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದರು. ಗೀತಾ ಅವರ ಇಬ್ಬರು ಪುತ್ರರು ಕೂಡ ಶಿಕ್ಷಕರಾಗಿದ್ದಾರೆ. ಒಬ್ಬರು ಪ್ರಸನ್ನಕುಮಾರ್; ಮತ್ತೋರ್ವರು ಪ್ರಶಾಂತ್ ಕುಮಾರ್ ಕೆ.ಎಸ್. ಹಿಂದೆ ಪಾವೂರು ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದು, ಪ್ರಸ್ತುತ ಬಿ.ಆರ್.ಸಿ. ಕೊಆರ್ಡಿನೇಟರ್ ಆಗಿದ್ದಾರೆ.
ವಿಶೇಷ ಎಂದರೆ, ಪ್ರಸನ್ನಕುಮಾರ್ ಅವರು ತಮ್ಮ ಮಗಳನ್ನು ಶಿಕ್ಷಕಿಯನ್ನಾಗಿ ರೂಪಿಸಬೇಕು ಎಂಬ ಗುರಿ ಇರಿಸಿಕೊಂಡು ವಿದ್ಯಾಭ್ಯಾಸ ನೀಡುತ್ತಿದ್ದಾರೆ.
ಮನೆಯ ವಾತಾವರಣವೇ ಪ್ರೇರಣೆ :
ಬಂಟ್ವಾಳ: ಹಲವು ದಶಕಗಳ ಹಿಂದಿನಿಂದಲೇ ನಮ್ಮ ಕುಟುಂಬ ವಿದ್ಯಾಭ್ಯಾಸ- ಓದಿಗೆ ಮಹತ್ವ ನೀಡುತ್ತ ಬಂದಿರುವುದರಿಂದ ಕುಟುಂಬದ ಬಹುತೇಕ ಮಂದಿ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಿನ ಮಂದಿ ಸಂಸ್ಕೃತ ಶಿಕ್ಷಕರಾಗಿ ದುಡಿದಿರುವುದು ಹೆಮ್ಮೆಯ ವಿಚಾರ ಎನ್ನುವುದು ವಿಟ್ಲ ವಿಠಲ ಪ್ರೌಢಶಾಲೆಯಲ್ಲಿ ಸಂಸ್ಕೃತ ಪ್ರಾಧ್ಯಾಪಕ ಪಾದೆಕಲ್ಲು ಶ್ರೀಹರಿ ಶರ್ಮ ಅವರ ಅಭಿಪ್ರಾಯ.
ಇವರ ಕುಟುಂಬದ ಮೂರು ತಲೆಮಾರಿನವರು ಶಿಕ್ಷಕರಾಗಿ ದುಡಿದಿದ್ದಾರೆ. ಅಜ್ಜ ಪಾದೆಕಲ್ಲು ನಾರಾಯಣ ಭಟ್ಟ ಅವರು ಬಂಟ್ವಾಳ ಕಮ್ಮಾಜೆ ಶಾಲೆಯಲ್ಲಿ ಶಿಕ್ಷಕರಾಗಿದ್ದರು, ತಂದೆ ಡಾ| ಪಾದೆಕಲ್ಲು ವಿಷ್ಣು ಭಟ್ಟ ಅವರು ವಿವಿಧ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿದ್ದರು. ಶ್ರೀಹರಿ ಶರ್ಮ ಅವರ ತಾಯಿ ಉಮಾಮಹೇಶ್ವರಿ ಅವರು ಉಡುಪಿಯ ಮುಕುಂದಕೃಪಾ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದರು. ಬಹುತೇಕ ಮಂದಿ ಸಂಸ್ಕೃತ ಶಿಕ್ಷಕರಾಗಿದ್ದರೆ, ತಾಯಿ ವಿಜ್ಞಾನ ಶಿಕ್ಷಕಿಯಾಗಿದ್ದರು.
ನಮ್ಮ ಮನೆಯ ವಾತಾವರಣವೇ ಶಿಕ್ಷಕ ವೃತ್ತಿಗೆ ಪ್ರೇರಣೆ. ಅಜ್ಜನ ಅಜ್ಜನ ಕಾಲದಿಂದಲೂ ಮನೆಯಲ್ಲಿ ಗ್ರಂಥಗಳ ಸಂಗ್ರಹವಿತ್ತು. ಹೀಗಾಗಿ ಓದು ನಮ್ಮೆಲ್ಲರಿಗೂ ಬಾಲ್ಯದಿಂದಲೇ ಬಂದ ಗುಣ. ಇಂತಹ ವಾತಾವರಣದಲ್ಲಿ ಬೆಳೆದುದರಿಂದ ನಾವು ಇದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಚಿಕ್ಕಪ್ಪನೂ ಶಿಕ್ಷಕರಾಗಿದ್ದರು. ಈ ವೃತ್ತಿಯ ಕುರಿತು ವಿಶೇಷ ಹೆಮ್ಮೆ ಹಾಗೂ ಅಭಿಮಾನವಿದೆ ಎನ್ನುತ್ತಾರೆ ಶ್ರೀಹರಿ ಶರ್ಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.