ಬೆಳೆಯುತ್ತಿರುವ ಗುತ್ತಿಗಾರಿಗೆ ಬೇಕಿದೆ ಹಲವು ಸೌಲಭ್ಯ
Team Udayavani, Aug 26, 2021, 3:00 AM IST
ಸುಳ್ಯ ತಾಲೂಕಿನ ಮೂರನೇ ಅತಿ ದೊಡ್ಡ ವ್ಯಾವಹಾರಿಕ ಗ್ರಾಮ ಗುತ್ತಿಗಾರು. ಇಲ್ಲಿನ ಸಮಸ್ಯೆಗಳೂ ಅಷ್ಟೇ ದೊಡ್ಡದು. ಅಸಮರ್ಪಕ ನೆಟ್‌ವರ್ಕ್, ಸೇತುವೆ ಇಲ್ಲದಿರುವುದು, ಸೂಕ್ತ ರಸ್ತೆಗಳ ಕೊರತೆ, ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು…ಹೀಗೆ ಪಟ್ಟಿ ಬೆಳೆಯುತ್ತದೆ. ಅಲ್ಲಿನ ಚಿತ್ರಣ ಇಂದು ಒಂದು ಊರು; ಹಲವು ದೂರು ಅಂಕಣದಲ್ಲಿ.
ಗುತ್ತಿಗಾರು:ಸುಳ್ಯ ತಾಲೂಕಿ ನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮೂರನೇ ಅತಿ ದೊಡ್ಡ ವ್ಯಾವಹಾರಿಕ ಗ್ರಾಮ ಗುತ್ತಿಗಾರು. ಗ್ರಾಮೀಣ ಭಾಗದಿಂದ ದೂರದ ಸುಳ್ಯಕ್ಕೆ ಹೋಗಲಾಗದ ಹಲವರ ಕೊಂಡುಕೊಳ್ಳುವಿಕೆಗೆ ಆಧಾರ ಗುತ್ತಿಗಾರು. ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯು ತ್ತಿರುವ ಗುತ್ತಿಗಾರಿನಲ್ಲಿ ಸಮಸ್ಯೆಗಳೂ ಅಷ್ಟೇ ದೊಡ್ಡದಾಗಿ ಬೆಳೆಯುತ್ತಿವೆ.
ಗುತ್ತಿಗಾರು ಹಾಗೂ ನಾಲ್ಕೂರು ಗ್ರಾಮಗಳನ್ನೊಳಗೊಂಡ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಅಭಿವೃದ್ಧಿ ಹೊಂದುತ್ತಿರುವ ಗ್ರಾಮವಾದರೂ ಇಲ್ಲಿನ ಜನರು ತಾವೇ ಸೇತುವೆ ನಿರ್ಮಿಸಿಕೊಂಡದ್ದೇ ಗುತ್ತಿಗಾರಿನ ಸಮಸ್ಯೆಗೆ ಹಿಡಿದ ಕೈಗನ್ನಡಿ.
ನೆಟ್‌ವರ್ಕ್ ಸಮಸ್ಯೆ:
ಕಳೆದ ಬಾರಿ ಗುತ್ತಿಗಾರಿನ ಬಳ್ಳಕ್ಕ ಭಾಗದಲ್ಲಿ ಹುಡುಗಿಯೊಬ್ಬಳು ಮಳೆಗೆ ತಂದೆಯ ಕೊಡೆಯಾಶ್ರಯದಲ್ಲಿ ಆನ್‌ಲೈನ್ ಕ್ಲಾಸ್‌ಗೆ ಹಾಜರಾಗುತ್ತಿದ್ದುದು ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ಇಂತಹ ಪರಿಸ್ಥಿತಿ ಗುತ್ತಿಗಾರು ಗ್ರಾಮಪಂಚಾಯತ್ ವ್ಯಾಪ್ತಿಯ ಹಲವು ಕಡೆ ಇದೆ. ನಡುಗಲ್ಲು ಭಾಗದ ಹಲವು ಕುಟುಂಬಗಳಿಗೆ ಈ ಸಮಸ್ಯೆ ದಿನಾ ಇದ್ದದ್ದೆ.
ಪುಷ್ಪಗಿರಿ ಅರಣ್ಯಧಾಮ ಕರಿನೆರಳು:
ನಾಲ್ಕೂರು ಗ್ರಾಮವು ಪುಷ್ಪಗಿರಿ ಅರಣ್ಯಧಾಮದ ವ್ಯಾಪ್ತಿಯಲ್ಲಿ ಬರುವುದರಿಂದ ಈ ಭಾಗದ ಜನರು ಆತಂಕದಲ್ಲೇ ದಿನ ದೂಡುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಕೆಲವು ದಿನಗಳ ಹಿಂದೆ ಅರಣ್ಯಾಧಿಕಾರಿಯೊಬ್ಬರು ಅರಣ್ಯದಂಚಿನಲ್ಲಿ ಬೆಳೆಸಿದ ಅಡಿಕೆ ಗಿಡಗಳನ್ನು ಕಡಿಸಿದ್ದರು. ಈ ಗ್ರಾಮದ ಅರಣ್ಯದಂಚಿನ ಪ್ರದೇಶಗಳಲ್ಲಿ ಕೃಷಿ ಮಾಡಲು ಜನ ಮೀನಾಮೇಷ ಎಣಿಸುತ್ತಿದ್ದಾರೆ.
ಮರಿಚಿಕೆಯಾದ ಹೊರಠಾಣೆ:
ಗುತ್ತಿಗಾರು ಬೆಳವಣಿಗೆಯಾಗುತ್ತಿದ್ದಂತೆ ಅಪರಾಧ ಕೃತ್ಯಗಳೂ ಹೆಚ್ಚಾಗುತ್ತಿವೆ. ಗುತ್ತಿ ಗಾರು ಪೇಟೆಯಲ್ಲಿ ದಿನಾ ಅಪಘಾತಗಳು ಸಂಭವಿಸುತ್ತಿರುತ್ತವೆ. ಅಲ್ಲದೇ ಹಲವು ಕಡೆ ಕಳ್ಳತನದಂತಹ ಅಪರಾಧ ಕೃತ್ಯಗಳೂ ನಡೆಯುತ್ತಿರುತ್ತವೆ. ಇಂತಹ ಕೃತ್ಯಗಳನ್ನು ತಡೆಯಲು ಈ ಗ್ರಾಮಕ್ಕೆ ಸುಬ್ರಹ್ಮಣ್ಯ ಪೊಲೀಸರೇ ಬರಬೇಕಿದೆ. ಈ ಸಮಸ್ಯೆ ನಿವಾರಣೆಗೆ ಹಲವು ಬಾರಿ ಗ್ರಾಮಸಭೆಗಳಲ್ಲಿ ಗುತ್ತಿಗಾರಿನಲ್ಲಿ ಪೊಲೀಸ್ ಹೊರಠಾಣೆ ಸ್ಥಾಪಿಸಲು ಗ್ರಾಮಸ್ಥರು ಆಗ್ರಹಿಸಿದ್ದರು. ಆದರೆ ಇದುವರೆಗೂ ನಿರೀಕ್ಷೆ ಕನಸಾಗಿಯೇ ಉಳಿದಿದೆ. ಜನಪ್ರತಿನಿಧಿಗಳು ಈ ವಿಷಯದಲ್ಲಿ ಆಸಕ್ತಿ ತೋರದಿರುವುದು ವಿಪರ್ಯಾಸ.
ಅನಾಥವಾಗಿದೆ ಸಾರ್ವಜನಿಕ ಶ್ಮಶಾನ:
ಗುತ್ತಿಗಾರು ಗ್ರಾಮದಲ್ಲಿ ಇದುವರೆಗೂ ಸಾರ್ವಜನಿಕ ಸ್ಮಶಾನ ನಿರ್ಮಾಣವಾಗಿಲ್ಲ. ಶ್ಮಶಾನಕ್ಕಾಗಿ ಕಾಯ್ದಿರಿಸಿದ ಎಕರೆಗಟ್ಟಲೆ ಜಾಗ ಖಾಸಗಿ ಪಾಲಾಗುವ ಭೀತಿ ಎದುರಾಗಿದೆ. ಕಾಯ್ದಿರಿಸಿದ ಜಾಗವು ಈಗಾಗಲೇ ಒತ್ತುವರಿಯಾಗಿದ್ದು, ಗ್ರಾಮ ಪಂಚಾಯತ್ ಕೂಡಾ ಈ ವಿಷಯದಲ್ಲಿ ಆಸಕ್ತಿ ವಹಿಸುತ್ತಿಲ್ಲ. ಏರಿ ಮೇಲೆ ಇರುವ ಈ ಜಾಗಕ್ಕೆ ಶವ ಸಾಗಿಸಲೂ ಕಷ್ಟವಾಗಿರುವ ಕಾರಣ ಶ್ಮಶಾನ ಜಾಗ ಅನಾಥವಾಗಿದೆ. ಗುತ್ತಿಗಾರು ನಲ್ಲಿವುದು ಒಂದೇ ರಾಷ್ಟ್ರೀಕೃತ ಬ್ಯಾಂಕ್. ಇಲ್ಲಿಯ ಸಿಬಂದಿ ಮತ್ತು ಗ್ರಾಹಕರಿಗೆ ಆಗಾಗ್ಗೆ ವೈಮನಸ್ಸು ಮೂಡು ತ್ತಿರುತ್ತದೆ. ಈ ಬ್ಯಾಂಕ್ ಹೊರತಾಗಿ ಇನ್ನೊಂದು ರಾಷ್ಟ್ರೀಕೃತ ಬ್ಯಾಂಕ್‌ನ ಅಗತ್ಯವಿದೆ.
ಪ್ರಸ್ತಾವನೆಗೆ ಸೀಮಿತ :
ದಿನಂಪ್ರತಿ ನಗರದಲ್ಲಿ ರಾಶಿಗಟ್ಟಲೆ ಕಸ ಸಂಗ್ರಹವಾಗುತ್ತಿದ್ದು, ವಿಲೇವಾರಿಗೆ ಘನತ್ಯಾಜ್ಯ ಘಟಕ ಇನ್ನೂ ನಿರ್ಮಾಣವಾಗಿಲ್ಲ. ಗ್ರಾಮದ ಕಾಜಿಮಡ್ಕದಲ್ಲಿ ಹೆಚ್ಚು ಕಮ್ಮಿ 2 ಎಕರೆ ಘನತ್ಯಾಜ್ಯ ಘಟಕಕ್ಕೆ ಕಾದಿರಿಸಿದ್ದು, ನಿರ್ಮಾಣದ ಪ್ರಸ್ತಾವನೆ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕಾಜಿಮಡ್ಕದಲ್ಲಿನ ಈ ಸ್ಥಳಕ್ಕೆ ಸ್ಥಳೀಯರು ಆಕ್ಷೇಪ ಎತ್ತಿರುವುದಾಗಿ ಗ್ರಾಮ ಪಂಚಾಯತ್ ಹೇಳಿದ್ದರೂ, ಬದಲಿ ಸ್ಥಳವನ್ನು ಗುರುತಿಸದಿರುವುದು ದೊಡ್ಡ ಸಮಸ್ಯೆಯೊಂದರ ಕಡೆಗಣನೆಯಾಗಿದೆ. ಸದ್ಯಕ್ಕೆ ಪೇಟೆಯ ಕಸವನ್ನು ವರ್ತಕರ ಸಹಕಾರದೊಂದಿಗೆ ಗ್ರಾಮ ಪಂಚಾಯತ್ ಹಣ ವ್ಯಯಿಸಿ ಗುಂಡಿತೋಡಿ ಹಾಕುತ್ತಿದ್ದು, ಇದು ತಾತ್ಕಾಲಿಕ ಪರಿಹಾರವಷ್ಟೇ.
ಇತರ ಸಮಸ್ಯೆಗಳೇನು? :
- ಉರುಂಬಿ ಹೊಳೆಗೆ ಶಾಶ್ವತ ಸೇತುವೆ ರಚನೆಯಾಗಬೇಕಿದೆ.
- ನಾಲ್ಕೂರು ಗ್ರಾಮದ ಚಾರ್ಮತ, ಉಜಿರಡ್ಕ, ಹಾಲೆಮಜಲು ಭಾಗದಲ್ಲಿ ಸರಿಯಾದ ರಸ್ತೆಗಳಿಲ್ಲದೆ ಇರುವುದರಿಂದ ಮಳೆಗಾಲದಲ್ಲಿ ಸಂಚಾರ ಕಷ್ಟವಾಗುತ್ತಿದೆ.
- ನಾಲ್ಕೂರು ಗ್ರಾಮದ ಪಂಜಿಪಳ್ಳ ಭಾಗದಲ್ಲಿ ಆಗಾಗ್ಗೆ ಕಾಡಾನೆಗಳ ಭಯ ಗ್ರಾಮಸ್ಥರಲ್ಲಿದೆ. ಇದಕ್ಕಾಗಿ ಆನೆಕಂದಕ ನಿರ್ಮಾಣದ ಕೂಗು ಕೇಳಿಬರುತ್ತಿದೆ.
- ಹಾಲೆಮಜಲು ಹೊಸಹಳ್ಳಿ ರಸ್ತೆಯ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯಾಗಿದ್ದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.
- ಮೊಗ್ರ ಪ್ರದೇಶದಲ್ಲಿನ ಹೊಳೆಗೆ ಗ್ರಾಮಸ್ಥರೇ ಸೇರಿ ಕಾಲುಸಂಕ ನಿರ್ಮಾಣ ಮಾಡಿದ್ದಾರೆ. ಆದರೆ ಈ ಹೊಳೆಗೆ ಶಾಶ್ವತ ಸೇತುವೆ ನಿರ್ಮಾಣ ಆಗಲೇಬೇಕಿದೆ. ಇದರಿಂದ ಏರಣಗುಡ್ಡೆ, ಎಡೋಣಿ ಭಾಗದ ಜನರಿಗೆ ಪ್ರಯೋಜನವಾಗುತ್ತದೆ.
- ಗ್ರಾ. ಪಂ. ಗ್ರಂಥಾಲಯವನ್ನು ಮೇಲ್ದರ್ಜೆಗೆ ಏರಿಸಬೇಕಿದೆ.
- ಗುತ್ತಿಗಾರು ಪೇಟೆಯಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ.
– ಕೃಷ್ಣಪ್ರಸಾದ್ ಕೋಲ್ಚಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಬಸ್ ನಿಲ್ದಾಣದಲ್ಲಿ ಕಿರುಕುಳ; ಯುವಕನಿಗೆ ಗೂಸಾ
Guttigaru: ಕಮರಿಗೆ ಉರುಳಿದ ಕಾರು; ಗಾಯ
Kadaba ಕೋಡಿಂಬಾಳ ಮರಬಿದ್ದು ವ್ಯಕ್ತಿ ಸಾವು ಪ್ರಕರಣ: 2 ದಿನವಾದರೂ ಸ್ಥಳ ಬಿಟ್ಟು ಕದಲದ ಕೋಳಿ!
Farangipete Devaki Krishna Ravalnath Temple: ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು
Puttur:ನಾಪತ್ತೆಯಾಗಿದ್ದ ಅಸ್ಥಿಪಂಜರ ಪತ್ತೆ; ಸಾವಿನ ಬಗ್ಗೆ ಅನುಮಾನ ಆತ್ಮಹ*ತ್ಯೆಯೋ,ಕೊ*ಲೆಯೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.