ಸಾವಯವದಲ್ಲಿ ಯಶಸ್ಸು ಕಂಡ “ಕೃಷಿ ಪಂಡಿತ’ ತ್ಯಾಂಪ ನಾಯ್ಕ
ಬೆಟ್ಟಂಪಾಡಿ ಕಜೆ ಪರಿಸರದಲ್ಲಿ ಮಾದರಿ ತೋಟ
Team Udayavani, Dec 21, 2019, 4:54 AM IST
ಹೆಸರು: ತ್ಯಾಂಪ ನಾಯ್ಕ
ಏನೇನು ಕೃಷಿ?: ಅಡಿಕೆ, ತೆಂಗು, ಕರಿಮೆಣಸು
ಎಷ್ಟು ವಯಸ್ಸು: 60
ಕೃಷಿ ಪ್ರದೇಶ: 8.7 ಎಕ್ರೆ
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ “ಉದಯವಾಣಿ’ಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಪುತ್ತೂರು: ಸಾವಯವ ಕೃಷಿಯ ಕೂಗು ಇತ್ತೀಚೆಗೆ ನಮ್ಮಲ್ಲಿ ಕೇಳಿ ಬರುತ್ತಿದ್ದರೆ, ಪುತ್ತೂರು ತಾಲೂಕಿನ ಗ್ರಾಮಾಂತರದ ಕೃಷಿಕರೊಬ್ಬರು ಕೆಲವು ದಶಕಗಳ ಹಿಂದೆಯೇ ಅದನ್ನು ಅನುಷ್ಠಾನಕ್ಕೆ ತಂದಿದ್ದರು. ಈ ರೀತಿಯ ಕೃಷಿ ಸಾಧನೆಯ ಯಶಸ್ಸಿಗೆ ಅವರಿಗೆ ಸಿಕ್ಕಿರುವ ಪ್ರಶಸಿ,¤ ಗೌರವಗಳೇ ಸಾಕ್ಷಿ.
ಈ ಅಪ್ಪಟ ಸಾವಯವ ಕೃಷಿಕ ಬೆಟ್ಟಂಪಾಡಿ ಗ್ರಾಮದ ಕಜೆ ಮನೆ ನಿವಾಸಿಯಾಗಿರುವ ತ್ಯಾಂಪ ನಾಯ್ಕ. ಅವರು ದಿ| ವೆಂಕಪ್ಪ ನಾಯ್ಕ ಹಾಗೂ ದಿ| ಗೋಪಿ ಹೆಂಗು ಅವರ 7 ಮಕ್ಕಳಲ್ಲಿ ನಾಲ್ಕನೇ ಪುತ್ರ. ತನ್ನ 20ನೇ ವಯಸ್ಸಿನಲ್ಲೇ ಕೃಷಿಯ ಕಡೆಗೆ ಆಸಕ್ತಿ ಬೆಳೆಸಿಕೊಂಡ ತ್ಯಾಂಪ ನಾಯ್ಕ ಅವರು ಇಂದು ತಮ್ಮ 60ರ ಹರೆಯದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೇ ಪಾಠ ಮಾಡುವಷ್ಟು ಅನುಭವ ಬೆಳೆಸಿಕೊಂಡಿದ್ದಾರೆ.
40 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ತ್ಯಾಂಪ ನಾಯ್ಕ ಅವರು ಸಾವಯವ ಪ್ರಯೋಗಶೀಲ ಕೃಷಿಕ ಎಂಬ ಹೆಗ್ಗಳಿಕೆ ಪಡೆದವರು. ರಾಸಾಯನಿಕ ಗೊಬ್ಬರ ಅಗತ್ಯವಿಲ್ಲದೆ ರೋಗ ರಹಿತವಾದ ಯಶಸ್ವಿ ಕೃಷಿಯನ್ನು ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದವರು.
ಸೆಗಣಿ ನೀರು ಸಾಕು
ತನ್ನ ಅಷ್ಟೂ ವಿಸ್ತಾರದ ಕೃಷಿಗೆ ಎರಡು ತಿಂಗಳಿಗೊಮ್ಮೆ ಸಂಪೂರ್ಣ ಸೆಗಣಿ ನೀರು ಹಾಕುವುದು ಬಿಟ್ಟರೆ ಬೇರೆ ಏನೂ ಮಾಡುವುದಿಲ್ಲ. ತೋಟದ ಅಗೆತ ಇಲ್ಲ, ಸೊಪ್ಪು, ಮಣ್ಣು, ರಾಸಾಯನಿಕ ಗೊಬ್ಬರ, ಯಾವುದೂ ಹಾಕುವುದಿಲ್ಲ. ಡ್ರಿಪ್ ಮಾದರಿಯಲ್ಲಿ ನೀರು ಹಾಗೂ ದೈನಂದಿನಲ್ಲಿ ಗೋಬರ್ ಗ್ಯಾಸ್ ಮೂಲಕ ಬಳಕೆಯಾದ ಸೆಗಣಿ ನೀರು ತೋಟಕ್ಕೆ ಹರಿಸುತ್ತೇವೆ. ಇವಿಷ್ಟೇ ನನ್ನ ಕೃಷಿಯ ಯಶಸ್ಸಿನ ಗುಟ್ಟು ಎನ್ನುತ್ತಾರೆ ತ್ಯಾಂಪ ನಾಯ್ಕ.
ಸುಮಾರು 8.75 ಎಕ್ರೆ ಕೃಷಿ ಭೂಮಿ ಹೊಂದಿರುವ ಇವರು ಹಾಲಿ 3,500 ಅಡಿಕೆ ಮರ, 550 ತೆಂಗಿನ ಮರ, ಕರಿಮೆಣಸು ಕೃಷಿ ಹೊಂದಿದ್ದಾರೆ. ಕೃಷಿಗೆ ಪೂರಕವಾಗಿ ಸುಮಾರು 16 ದನಗಳನ್ನು ಸಾಕಿದ್ದಾರೆ. ವಾರ್ಷಿಕ ಸರಾಸರಿ 100 ಕ್ವಿಂಟಲ್ ಅಡಿಕೆ, 40 ಸಾವಿರ ತೆಂಗಿನಕಾಯಿ, ಜತೆಗೆ ಕರಿಮೆಣಸು ಫಸಲು ಪಡೆಯುತ್ತಾರೆ.
ಹೈನುಗಾರಿಕೆ ಸಾಧನೆ
ಕೃಷಿಯ ಜತೆಗೆ ಹೈನುಗಾರಿಕೆಯಲ್ಲೂ ಯಶಸ್ಸು ಸಾಧಿಸಿರುವ ತ್ಯಾಂಪ ನಾಯ್ಕ ಅವರು ಪ್ರತಿ ದಿನ 150 ಲೀ.ಗೂ ಮಿಕ್ಕಿ ಹಾಲು ಡೈರಿಗೆ ಪೂರೈಕೆ ಮಾಡುವ ಹೆಗ್ಗಳಿಕೆ ಹೊಂದಿದ್ದಾರೆ. ಹೈನುಗಾರಿಕೆಯ ಸಾಧನೆಗೆ ಜಿಲ್ಲಾ ಮಟ್ಟದ ಉತ್ತಮ ಹೈನುಗಾರ ಪ್ರಶಸ್ತಿಯೂ ಲಭಿಸಿದೆ.
ಪ್ರಶಸ್ತಿಗಳು
ಪಶುಸಂಗೋಪನ ಇಲಾಖೆ ಹಾಗೂ ಕೆಎಂಎಫ್ ಸಹಯೋಗದಲ್ಲಿ 2011 -12ನೇ ಸಾಲಿನಲ್ಲಿ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ, ಬೆಳಗಾವಿ ಸುವರ್ಣ ಸೌಧದಲ್ಲಿ ಪ್ರದಾನ.
ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಿಂದ 2011 -12ನೇ ಸಾಲಿನಲ್ಲಿ ಉತ್ತಮ ಹೈನುಗಾರ ಪ್ರಶಸ್ತಿ.
ಸರಕಾರದಿಂದ 2011 -12ರಲ್ಲಿ ಬೆಂಗಳೂರು ಕೃಷಿ ವಿದ್ಯಾಲಯದಲ್ಲಿ ರಾಜ್ಯಪಾಲರಿಂದ ದ. ಕ. ಜಿಲ್ಲಾಮಟ್ಟದ ಪ್ರಗತಿಶೀಲ ರೈತ ಪ್ರಶಸ್ತಿ
ಪುತ್ತೂರು ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉತ್ತಮ ಕೃಷಿಕ ಸಮ್ಮಾನ.
ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾನ.
ಕೃಷಿಯೇ ಸ್ವರ್ಗ
ಶ್ರಮ ಪಡುವವನಿಗೆ ಕೃಷಿಯೇ ಸ್ವರ್ಗ. ಒಂದಷ್ಟು ವೈಜ್ಞಾನಿಕವಾಗಿ, ವ್ಯವಸ್ಥಿತವಾಗಿ ಕೃಷಿಯನ್ನು ಮಾಡಬೇಕು. ಹಲವು ವರ್ಷಗಳ ಹಿಂದೆಯೇ ನಾನು ಸಾವಯವ ಕೃಷಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇನೆ. ನಮ್ಮ ಮನೆಯವರೆಲ್ಲರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಅಡಿಕೆ, ತೆಂಗು ಕೀಳುವುದನ್ನೂ ನಾವೇ ಮಾಡುತ್ತೇವೆ. ಇದು ಇತರ ಕೂಲಿಕಾರರ ಅವಲಂಬನೆಯನ್ನು ಕಡಿಮೆ ಮಾಡಿದೆ. ಕೃಷಿಯಲ್ಲಿ ಇರುವ ಖುಷಿ, ಸಾರ್ಥಕತೆ ಇತರ ಉದ್ಯೋಗಗಳಲ್ಲಿ ಸಿಗಲು ಸಾಧ್ಯವಿಲ್ಲ. ಇಲ್ಲಿ ಎಲ್ಲವೂ ನಮ್ಮವೇ, ನಮ್ಮಿಂದಲೇ ಎಂಬ ಹೆಮ್ಮೆಯೂ ಇರುತ್ತದೆ.
-ತ್ಯಾಂಪ ನಾಯ್ಕ, ಪ್ರಗತಿಪರ ಕೃಷಿಕ
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.