ಬೃಹತ್ ಹೊಂಡಗಳಿಂದ ಸಂಚಾರ ದುಸ್ತರ
Team Udayavani, Oct 30, 2018, 12:53 PM IST
ಪುಂಜಾಲಕಟ್ಟೆ: ಬಂಟ್ವಾಳ- ಮೂಡಬಿದಿರೆ ರಸ್ತೆಯಲ್ಲಿ ಸಿದ್ದಕಟ್ಟೆವರೆಗೆ ಅಲ್ಲಲ್ಲಿ ಹೊಂಡಗಳು ತುಂಬಿದ್ದು, ಸಂಚಾರ ಪ್ರಯಾಸವಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಇಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಈ ರಸ್ತೆ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು, ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಲು ಎಲ್ಲ ಅರ್ಹತೆ ಹೊಂದಿದೆ. ಬಂಟ್ವಾಳದಿಂದ ಮೂಡ ಬಿದಿರೆ, ಕಾರ್ಕಳ, ಉಡುಪಿ, ವಾಮದಪದವು, ವೇಣೂರು, ನಾರಾವಿ, ಪುಂಜಾಲ ಕಟ್ಟೆಗೆ ಈ ರಸ್ತೆಯಿಂದ ಸಂಪರ್ಕವಿದೆ. ಸಾವಿರಾರು ವಾಹನಗಳು ಇದರಲ್ಲಿ ಸಾಗುತ್ತವೆ. ಕಳೆದ ವಿಧಾನಸಭಾ ಚುನಾವಣೆ ಮೊದಲು ಈ ರಸ್ತೆ ದ್ವಿಪಥ ರಸ್ತೆಯನ್ನಾಗಿಸಲು ಅನುದಾನ ಒದಗಿಸಲಾಗಿದೆ ಎಂದು ಘೋಷಿಸಲಾಗಿತ್ತು.
ಈ ರಸ್ತೆ ಬಂಟ್ವಾಳ ಪುರಸಭೆ, ಅಮ್ಟಾಡಿ, ಅರಳ, ರಾಯಿ, ಕುಕ್ಕಿಪಾಡಿ, ಸಂಗಬೆಟ್ಟು ಗ್ರಾಮ ಪಂಚಾಯತ್‌ಗಳನ್ನು ಹಾದುಹೋಗುತ್ತದೆ. ಮಳೆಗಾಲದಲ್ಲಿ ಹೊಂಡ ಉಂಟಾಗಿದ್ದು, ಇದೀಗ ಮಳೆ ನಿಂತರೂ ಕನಿಷ್ಠ ತೇಪೆ ಕಾರ್ಯವನ್ನೂ ಕೈಗೊಂಡಿರದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಟ್ವಾಳ – ಬೈಪಾಸ್‌ನಿಂದ ಮೂಡಬಿದಿರೆಗೆ ತಿರುಗುವ ಜಂಕ್ಷನ್‌ನಲ್ಲಿ ರಸ್ತೆ ಹೊಂಡವಾಗಿದ್ದು, ಅಪಾಯಕಾರಿಯಾಗಿತ್ತು. ಬಂಟ್ವಾಳ ಪೇಟೆ, ಧರ್ಮಸ್ಥಳ ಹೆದ್ದಾರಿ, ಬಿ.ಸಿ. ರೋಡ್ ರಸ್ತೆಗಳು ಒಂದಕ್ಕೊಂದು ಸಂಪರ್ಕಿಸುವ ಜಂಕ್ಷನ್ ಆದುದರಿಂದ ಇಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ರಸ್ತೆಯೂ ಕೆಟ್ಟಿದ್ದರಿಂದ ಮತ್ತಷ್ಟು ಅಧ್ವಾನವಾಗಿದೆ. ಇಲ್ಲಿ ಸ್ವಲ್ಪ ತೇಪೆ ಕಾರ್ಯ ನಡೆದರೂ ಪ್ರಯೋಜನವಾಗಿಲ್ಲ.
ಮುಂದಕ್ಕೆ ಎಸ್‌ವಿಎಸ್ ಶಾಲಾ ಬಳಿ, ಪೆದಮಲೆ ದೇವಸ್ಥಾನದ ದ್ವಾರ ಬಳಿ, ಡಾಮರು ಎದ್ದುಹೋಗಿ ಹೊಂಡ ಉಂಟಾಗಿದೆ. ಸೊರ್ನಾಡು-ಅಣ್ಣಳಿಕೆ ನಡುವಿನ ತಿರುವಿನಲ್ಲಿ ಹೊಂಡಗಳು ಉಂಟಾಗಿರುವ ಜತೆ ರಸ್ತೆ ಕಿರಿದಾಗಿದ್ದು ವಾಹನಗಳು ಏಕಕಾಲದಲ್ಲಿ ಸಾಗುವಂತಿಲ್ಲ. ರಾಯಿ ಜಂಕ್ಷನ್, ಸಿದ್ದಕಟ್ಟೆ ಜಂಕ್ಷನ್, ಪೆಟ್ರೋಲ್ ಪಂಪ್‌ಬಳಿ ಅಲ್ಲಲ್ಲಿ ರಸ್ತೆಯಲ್ಲಿ ಹೊಂಡಗಳಾಗಿವೆ. ರಸ್ತೆ ಬದಿ ಗಿಡ, ಪೊದೆಗಳು ತುಂಬಿದ್ದು, ತಿರುವುಗಳಲ್ಲಿ ಅಪಾಯಕಾರಿಯಾಗಿದೆ. ಈ ಬಗ್ಗೆ ಹಲವಾರು ಬಾರಿ ಮಾಧ್ಯಮಗಳಲ್ಲಿ ವರದಿಯಾದರೂ ಪ್ರಯೋಜನವಾಗಿಲ್ಲ. ಈ ರಸ್ತೆಯ ಸಮಸ್ಯೆಗಳನ್ನು ಸಂಬಂಧಿತರು, ಗ್ರಾ.ಪಂ. ಗಮನಿಸಿ ಶೀಘ್ರ ವಾಗಿ ಪರಿಹರಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.
ಶೀಘ್ರ ಕಾಮಗಾರಿ
ಬಂಟ್ವಾಳದಿಂದ ಸಿದ್ದಕಟ್ಟೆಯವರೆಗೆ ರಸ್ತೆ ಕೆಟ್ಟು ಹೋಗಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಭಾರತ್‌ಮಾಲಾ ಯೋಜನೆಯಲ್ಲಿ ಬಂಟ್ವಾಳ-ಮೂಡಬಿದಿರೆ ರಸ್ತೆ ಅಭಿವೃದ್ಧಿಗೆ ಅನುಮೋದನೆ ದೊರಕಿದೆ. ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಸರ್ವೆ ಕಾರ್ಯನಡೆಯುತ್ತಿದೆ. ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ.
– ರಾಜೇಶ್ ನಾೖಕ್ ಶಾಸಕರು
ತಾತ್ಕಾಲಿಕ ದುರಸ್ತಿ
ರಸ್ತೆ ಅಭಿವೃದ್ಧಿ ಬಗ್ಗೆ ಲೋಕೋಪಯೋಗಿ ಇಲಾಖಾ ಅಭಿಯಂತರರಿಗೆ ಸೂಚಿಸಲಾಗಿದೆ. ಹೊಂಡ-ಗುಂಡಿಗಳನ್ನು ಮುಚ್ಚಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೊಳಿಸಲಾಗುವುದು ಎಂದು ಅಭಿಯಂತರರು ತಿಳಿಸಿದ್ದಾರೆ.
– ಎಂ. ತುಂಗಪ್ಪ ಬಂಗೇರ
ಜಿ.ಪಂ. ಸದಸ್ಯರು, ಸಂಗಬೆಟ್ಟು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.