Puttur: ಎಪಿಎಂಸಿ ವಸತಿಗೃಹದಲ್ಲಿ ಅನಧಿಕೃತ ವಾಸ; ಮಹಿಳೆ ಹೊರಕ್ಕೆ
ನೆಲೆ ಕಳೆದುಕೊಂಡ ಅಂಗವಿಕಲೆ ಆಕ್ರಂದನ; ಶಾಸಕರ ಟ್ರಸ್ಟ್‌ನಿಂದ 3 ಸೆಂಟ್ಸ್ ಜಾಗ ಭರವಸೆ
Team Udayavani, Oct 18, 2024, 12:50 PM IST
ಜಡಿದ ವಸತಿಗೃಹದ ಮುಂಭಾಗದಲ್ಲಿ ಕುಳಿತ ಮಹಿಳೆ.
ಪುತ್ತೂರು: ಎಪಿಎಂಸಿ ಪ್ರಾಂಗಣದ ಸರಕಾರಿ ವಸತಿ ಗೃಹಕ್ಕೆ ಅಧಿಕಾರಿಗಳು ಬೀಗ ಜಡಿದ ಪರಿಣಾಮ ಅಲ್ಲಿ ವಾಸವಾಗಿದ್ದ ಅಂಗವಿಕಲ ಮಹಿಳೆ ನೆಲೆ ಕಳೆದುಕೊಂಡಿದ್ದಾರೆ. ಬುಧವಾರ ತಡ ರಾತ್ರಿವರೆಗೂ ಈ ಮಹಿಳೆ ಮನೆಯ ಹೊರಭಾಗದಲ್ಲೇ ಕಾಲ ಕಳೆದು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು.
ಅಂಗವಿಕಲರಾಗಿರುವ ಜಾನಕಿ 28 ವರ್ಷಗಳಿಂದ ಎಪಿಎಂಸಿಯಲ್ಲಿ ಹೊರಗುತ್ತಿಗೆ ಸಿಬಂದಿಯಾಗಿದ್ದಾರೆ. ಆಕೆ ಇಲ್ಲಿನ ವಸತಿಗೃಹದಲ್ಲಿ ವಾಸವಾಗಿದ್ದಾರೆ. ಆದರೆ ಇದು ಅನಧಿಕೃತ ಎಂದು ಹೇಳಿ ಎಪಿಎಂಸಿ ಕಾರ್ಯ ದರ್ಶಿ ಎಂ.ಸಿ.ಪಡಾಗನೂರ ಅವರ ನೇತೃತ್ವದ ಅಧಿಕಾರಿಗಳ ತಂಡ ಬುಧ ವಾರ ವಸತಿಗೃಹಕ್ಕೆ ಬೀಗ ಜಡಿದಿತ್ತು. ಇದರಿಂದಾಗಿ ನೆಲೆ ಕಳೆದುಕೊಂಡ ಆಕೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಮೂರು ಸೆಂಟ್ಸ್ ಜಾಗ ನೀಡುವುದಾಗಿ ಭರವಸೆ ನೀಡಿದ್ದಾರೆ.
ಏನಿದು ಘಟನೆ?
ಎಪಿಎಂಸಿ ಪ್ರಾಂಗಣದೊಳಗಿರುವ ಸರಕಾರಿ ವಸತಿ ಗೃಹಗಳ ಪೈಕಿ ಒಂದರಲ್ಲಿ ಜಾನಕಿ ಅವರು ವರ್ಷದಿಂದ ವಾಸವಾಗಿದ್ದರು. ಸರಕಾರಿ ನೌಕರರಲ್ಲದವರ ವಾಸಕ್ಕೆ ಕೆಲವರು ಆಕ್ಷೇಪ ಸಲ್ಲಿಸಿದ್ದರು. ಹೀಗಾಗಿ ಮನೆಯಿಂದ ವಾಸ ತೆರವು ಮಾಡಲು ಎಪಿಎಂಸಿ ಕಾರ್ಯದರ್ಶಿ ನೋಟಿಸ್ ಜಾರಿಗೊಳಿಸಿದ್ದರು. ಆದರೆ ಆಕೆ ತೆರವು ಮಾಡಿರಲಿಲ್ಲ. ಈ ನಡುವೆ ಬುಧವಾರ ಎಪಿಎಂಸಿ ಆಡಳಿತಾ ಧಿಕಾರಿ ಆಗಿರುವ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಸೂಚನೆಯ ಮೇರೆಗೆ ಎಪಿಎಂಸಿ ಕಾರ್ಯದರ್ಶಿಗಳು ಪೊಲೀಸ್ ಭದ್ರತೆಯಲ್ಲಿ ಮನೆಗೆ ಬೀಗ ಜಡಿದರು.
ಈ ಕಾರ್ಯಾಚರಣೆ ವೇಳೆ ಜಾನಕಿ ಅವರು ಎಪಿಎಂಸಿ ಕಚೇರಿಯಲ್ಲಿದ್ದರು. ಸಿಬಂದಿ ಮೂಲಕ ಕರೆಸಿದರೂ ಬಂದಿರಲಿಲ್ಲ. ಹೀಗಾಗಿ ಅವರ ಅನು ಪಸ್ಥಿತಿಯಲ್ಲಿ ಬೀಗ ಜಡಿಯಲಾಯಿತು.
ಮನೆ ನೀಡಿದ್ದು ಎಪಿಎಂಸಿ..!
ಎಪಿಎಂಸಿ ಪ್ರಾಂಗಣದಲ್ಲಿನ ಖಾಲಿ ಉಳಿದಿರುವ ಸರಕಾರಿ ವಸತಿಗೃಹವನ್ನು ಬೇರೆ ಇಲಾಖೆಯ ಸರಕಾರಿ ನೌಕರರಿಗೆ ನೀಡಲು ಕಾನೂನು ರೂಪಿಸಲಾಗಿತ್ತು. ಅದರಂತೆ ಹಿಂದಿನ ಕಾರ್ಯದರ್ಶಿ ಅವರು ಕೊಂಬೆಟ್ಟು ಸರಕಾರಿ ಹಾಸ್ಟೆಲ್‌ನ ಅಡುಗೆ ಸಹಾಯಕಿ ಪ್ರೇಮ ಕುಮಾರಿ ಅವರಿಗೆ ಮನೆ ನೀಡಿದ್ದರು. ಈ ಮನೆಯಲ್ಲಿ ಎಪಿಎಂಸಿ ಹೊರಗುತ್ತಿಗೆ ಸಿಬಂದಿ ಜಾನಕಿ ಅವರು ಎಪಿಎಂಸಿಯ ಸಾಮಾನ್ಯ ಸಭೆಯ ಒಪ್ಪಿಗೆ ಪಡೆದು ವಾಸ್ತವ್ಯ ಹೂಡಿದ್ದರು. ಬಳಿಕದ ಕೆಲವು ಘಟನೆಯಿಂದಾಗಿ ಪ್ರೇಮಾ ಕುಮಾರಿ ಅವರು ತನಗೆ ಮನೆ ಬೇಡ ಎಂದು ಲಿಖೀತವಾಗಿ ತಿಳಿಸಿದ್ದರು. ಹೀಗಾಗಿ ನಾಲ್ಕು ತಿಂಗಳ ಹಿಂದೆ ಮನೆಯಲ್ಲಿದ್ದ ಜಾನಕಿ ಅವರಿಗೆ ಮನೆ ತೆರವು ಮಾಡುವಂತೆ ಸೂಚನೆ ನೀಡಲಾಗಿತ್ತು.
ಜಾನಕಿ ಅವರ ವಾದವೇನು?
3 ಮೂರು ವರ್ಷಗಳ ಹಿಂದೆ ನನ್ನ ಗಂಡ ಮೃತಪಟ್ಟಿದ್ದರು. ಬಾಡಿಗೆ ಮನೆಯಲ್ಲಿದ್ದ ನಾನು ವಸತಿಗೃಹದಲ್ಲಿ ವಾಸವಾಗಿದ್ದ ಪ್ರೇಮ ಕುಮಾರಿ ಅವರ ಜತೆಗೆ ಇರಲು ಕೇಂದ್ರ ಕಚೇರಿಯ ಅನುಮತಿ ಪಡೆದಿದ್ದೆ. ಪ್ರೇಮಾ ಅವರನ್ನು ವಸತಿಗೃಹದಿಂದ ಬಿಡುಗಡೆಗೊಳಿಸಿದ ಬಳಿಕ, ವಸತಿಗೃಹ ತನಗೆ ನೀಡುವಂತೆ ಪುತ್ತೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ನನ್ನ ಅಣ್ಣ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದ್ದರು. ಖಾಲಿಯಿರುವ ವಸತಿ ಗೃಹದಲ್ಲಿ ತನ್ನ ಸಹೋದರನಿಗೆ ಅವಕಾಶ ನೀಡಿದರೆ ನಾನು ಅವರ ಜತೆಗೆ ವಾಸಿಸುವುದಾಗಿ ಕೇಂದ್ರ ಕಚೇರಿಗೆ ಮನವಿ ಮಾಡಿದ್ದೆ. ವಸತಿ ಗೃಹ ನೀಡುವಂತೆ ಕೇಂದ್ರ ಕಚೇರಿಯಿಂದ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದರೂ ಕಾರ್ಯದರ್ಶಿ ನೀಡದೇ ಸತಾಯಿಸುತ್ತಿದ್ದಾರೆ ಎನ್ನುವುದು ಜಾನಕಿ ಅವರ ವಾದ.
ಮಳೆಯಲ್ಲೇ ತಡರಾತ್ರಿ ತನಕ ಕುಳಿತ ಮಹಿಳೆ
ಸಂಜೆ ಕೆಲಸ ಮುಗಿಸಿ ಮರಳಿದಾಗ ಬಾಗಿಲಿಗೆ ಬೀಗ ಜಡಿದ ಕಾರಣ ಮಹಿಳೆಯು ಸುರಿಯುವ ಮಳೆಯಲ್ಲೇ ಮನೆ ಮುಂಭಾಗದಲ್ಲಿ ಕುಳಿತರು. ಊಟವನ್ನೂ ಮಾಡದೆ ತಡರಾತ್ರಿ ತನಕ ಮೌನ ಪ್ರತಿಭಟನೆ ಮುಂದುವರಿಸಿದ್ದರು. ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
3 ಸೆಂಟ್ಸ್ ಜಾಗದ ಭರವಸೆ
ನಿಯಮ ಪ್ರಕಾರ ಜಾನಕಿ ಅವರಿಗೆ ಸರಕಾರಿ ವಸತಿಗೃಹದಲ್ಲಿ ಇರಲು ಅವಕಾಶ ಇಲ್ಲ. ಹೀಗಾಗಿ ಆರು ತಿಂಗಳ ಹಿಂದೆಯೇ ಸೂಚನೆ ನೀಡಲಾಗಿದೆ. ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ವಿಟ್ಲದಲ್ಲಿ ಬಡವರಿಗೆ ನಿವೇಶನ, ಮನೆ ನೀಡಲು ಯೋಜನೆ ರೂಪಿಸಿದ್ದು ಜಾನಕಿ ಅವರಿಗೆ 3 ಸೆಂಟ್ಸ್ ಜಾಗ ನೀಡಲಾಗುವುದು. ಇದಕ್ಕೆ ಜಾನಕಿಯವರು ಒಪ್ಪಿಗೆ ಸೂಚಿಸಿದ್ದಾರೆ.
-ಅಶೋಕ್ ಕುಮಾರ್ ರೈ ಶಾಸಕ, ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.