ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ಗೆ ಮರಳಿದ ಜನರೇಟರ್
Team Udayavani, Jun 20, 2019, 5:00 AM IST
ಉಪ್ಪಿನಂಗಡಿ: ಸುಮಾರು ಎರಡು ವರ್ಷಗಳಿಂದ ನಾಪತ್ತೆಯಾಗಿ ಹಲವು ಸಂಶಯಗಳಿಗೆ ಕಾರಣವಾಗಿದ್ದ 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಜನರೇಟರ್ ಗ್ರಾ.ಪಂ.ಗೆ ಮರಳುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆಬಿದ್ದಿದೆ. ಪತ್ರಿಕೆಗಳಲ್ಲಿ ಜನರೇಟರ್ ನಾಪತ್ತೆ ಬಗ್ಗೆ ವರದಿ ಪ್ರಕಟಗೊಂಡ ಬಳಿಕ ಎಚ್ಚೆತ್ತ ಸದಸ್ಯರು ಕಳೆದ ಸಾಮಾನ್ಯ ಸಭೆಯಲ್ಲಿ ಜನರೇಟರ್ ಮರಳಿ ತರಲು ತೀವ್ರ ಒತ್ತಡ ಹೇರಿದ್ದರು. ಅಧಿಕಾರಿಗಳು ಕೊನೆಗೂ ದುರಸ್ತಿಗೆ ಕೊಟ್ಟಿದ್ದ ಜನರೇಟರ್ ತಂದು ಗ್ರಾ.ಪಂ.ನಲ್ಲಿರಿಸಿದ್ದಾರೆ.
ಜನರೇಟರ್ ಖರೀದಿ ಬಗ್ಗೆ ಗ್ರಾ.ಪಂ.ನಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ ಹೋಂಡಾ ಕಂಪೆನಿಯ ಇಎಕ್ಸ್‌ಕೆ- 2000 ಎಸಿ ಕೆರೋಸಿನ್ ಮಾಡೆಲ್ ಜನರೇಟರ್ ಇದಾಗಿದ್ದು, ಮಂಗಳೂರಿನ ತ್ರಿಭುವನ್ ಪವರ್ ಪ್ರಾಡಕ್ಟ್ ಸಂಸ್ಥೆಗೆ 74279 ನಂಬರ್‌ನ ಚೆಕ್‌ನಲ್ಲಿ 3.3.2009ರಂದು 47,250 ರೂಪಾಯಿ ಮೊತ್ತವನ್ನು ಪಾವತಿ ಮಾಡಿತ್ತು. ಕೆಲವು ವರ್ಷ ಗ್ರಾ.ಪಂ. ಕಚೇರಿಯಲ್ಲಿದ್ದ ಈ ಜನರೇಟರ್ ಸುಮಾರು ಎರಡು ವರ್ಷಗಳಿಂದ ದಿಢೀರ್ ಆಗಿ ನಾಪತ್ತೆಯಾಗಿತ್ತು.
ಒಂದು ದಿನದ ಚರ್ಚೆಗೆ ಸೀಮಿತ
ಏಳು ತಿಂಗಳ ಹಿಂದೆ ನಡೆದ 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಸದಸ್ಯೆಯೋರ್ವರು ಈ ಜನರೇಟರ್ ವಿಷಯ ಪ್ರಸ್ತಾವಿಸಿದ್ದರು. ಜನರೇಟರ್ ತಾಂತ್ರಿಕ ತೊಂದರೆಗೆ ಸಿಲುಕಿದ್ದರಿಂದ ಅದನ್ನು ರಿಪೇರಿಗೆ ಕಳುಹಿಸಲಾಗಿದೆ ಎಂದು ಸದಸ್ಯರೋರ್ವರು ಸ್ಪಷ್ಟನೆ ನೀಡಿದ್ದರು. ಆಗ ಸರಕಾರಿ ಸೊತ್ತನ್ನು ಎಲ್ಲೆಂದರಲ್ಲಿ ಇಡುವುದು ಸರಿಯಲ್ಲ. ಅದನ್ನು ಮುಂದಿನ ಸಾಮಾನ್ಯ ಸಭೆಯೊಳಗೆ ಪಂ. ಕಚೇರಿಗೆ ತರಬೇಕು. ಇಲ್ಲದಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಸರಕಾರಿ ಸೊತ್ತು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ದೂರು ನೀಡಬೇಕು ಎಂಬ ಬಗ್ಗೆ ಚರ್ಚೆಯಾಗಿತ್ತು. ಆದರೆ ಇದು ಒಂದು ದಿನದ ಚರ್ಚೆಗೆ ಸೀಮಿತವಾಯಿತೇ ಹೊರತು ತಿಂಗಳು ಕಳೆದರೂ ಜನರೇಟರ್ ಬರಲಿಲ್ಲ. ಆ ಮೇಲಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಬಲವಾದ ಧ್ವನಿಯೂ ಕೇಳಿ ಬಂದಿಲ್ಲ.
ಸಂಶಯಕ್ಕೆ ಕಾರಣವಾದ ನಡೆ!
ಜನರೇಟರ್ ರಿಪೇರಿಗೆ ಹೋಗಿದೆ ಎಂಬ ಮಾತುಗಳು ಕೆಲವು ಸದಸ್ಯರಿಂದ ಕೇಳಿ ಬಂದರೆ, ನಮಗೆ ಜನರೇಟರ್ ಹ್ಯಾಂಡೋವರ್ ಆಗಿಲ್ಲ ಎಂಬ ಮಾತುಗಳು ಅಧಿಕಾರಿಗಳ ಕಡೆಯಿಂದ ಬರುತ್ತಿತ್ತು. ಆದರೆ ಜನರೇಟರ್ ಗ್ರಾ.ಪಂ.ಗೆ ತರುವ ಕೆಲಸ ಮಾತ್ರ ಸಾಗಲೇ ಇಲ್ಲ. ದುರಸ್ತಿಗೆ ಹೋಗಿದ್ದರೆ ಅದರ ದುರಸ್ತಿಗೆ ಇಷ್ಟೊಂದು ಕಾಲಾವಕಾಶ ಬೇಕೇ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸಿತ್ತು. ತಿಂಗಳುಗಳು ಉರುಳಿದರೂ ಜನರೇಟರ್ ಮರಳಿ ಪಂಚಾಯತ್‌ಗೆ ಬಾರದಿದ್ದಾಗ ಇದು ಗ್ರಾಮಸ್ಥರಲ್ಲಿ ನಾನಾ ಸಂಶಯಕ್ಕೆ ಕಾರಣವಾಗಿತ್ತು. ಜನರೇಟರ್ ನಾಪತ್ತೆ, ಸದಸ್ಯರ ಮೌನ, ಜನರೇಟರ್ ಮರಳಿ ತರುವಲ್ಲಿ ಅಧಿಕಾರಿಗಳ ವಿಳಂಬ ಹಾಗೂ ಸಾರ್ವಜನಿಕರ ಸಂಶಯಗಳನ್ನೆಲ್ಲ ಮುಂದಿಟ್ಟುಕೊಂಡ ಜನರೇಟರ್ ನಾಪತ್ತೆ ಬಗ್ಗೆ “ಉದಯವಾಣಿ’ ಸುದಿನ ವಿಸ್ತೃತ ವರದಿಗಳನ್ನು ಪ್ರಕಟಿಸಿತ್ತು. ನಮ್ಮೂರು- ನೆಕ್ಕಿಲಾಡಿ ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್, 15 ದಿನಗಳೊಳಗೆ ಜನರೇಟರ್ ತಾರದಿದ್ದಲ್ಲಿ ಕಾನೂನು ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದರು.
ಹಸ್ತಾಂತರದ ಪಟ್ಟಿಯಲ್ಲಿ ಜನರೇಟರ್ ಬಗ್ಗೆ ಇರಲಿಲ್ಲ!
34ನೇ ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅವರನ್ನು ಕೇಳಿದಾಗ, ತಾವು ಅಧಿಕಾರ ವಹಿಸಿಕೊಂಡ ಸಂದರ್ಭ ಹಸ್ತಾಂತರಿಸಿದ್ದ ವಸ್ತುಗಳ ಪಟ್ಟಿಯಲ್ಲಿ ಜನರೇಟರ್ ನಮೂದಿಸಿಲ್ಲ. ಹೀಗಾಗಿ, ಈ ಕುರಿತು ನನಗೇನೂ ಗೊತ್ತಿಲ್ಲ. ನಾವು ಅದನ್ನು ನೋಡಿಯೂ ಇಲ್ಲ. ಇಲ್ಲೊಂದು ಜನರೇಟರ್ ಇತ್ತು. ಅದು ಈಗ ನಾಪತ್ತೆಯಾಗಿದೆ ಎಂದು ಸದಸ್ಯರು ಚರ್ಚೆ ವೇಳೆ ಹೇಳಿದಾಗಲೇ ಗೊತ್ತಾಗಿದ್ದು. ಅದನ್ನು ದುರಸ್ತಿಗೆ ಕೊಟ್ಟ ಬಗ್ಗೆ ದಾಖಲೆಯೂ ನಮಗೆ ಸಲ್ಲಿಸಿಲ್ಲ. ಕಳೆದ ಸಾಮಾನ್ಯ ಸಭೆಯಲ್ಲಿ ಸದಸ್ಯರೋರ್ವರು ಜನರೇಟರ್ ಪುತ್ತೂರಿನ ಅಂಗಡಿಯೊಂದರಲ್ಲಿ ದುರಸ್ತಿಗೆ ನೀಡಿದ ಬಗ್ಗೆ ಮಾಹಿತಿಯಿತ್ತರು. ದುರಸ್ತಿಯ ಬಿಲ್ 2,900 ರೂ. ಪಾವತಿಸಿ ಜನರೇಟರ್ ತರಿಸಲಾಗಿದೆ ಎಂದು ತಿಳಿಸಿದ್ದಾರೆ.
“ಸದ್ದು’ ಮಾಡಿದ ಜನರೇಟರ್!
ಪತ್ರಿಕಾ ವರದಿ ಬಳಿಕ ನಡೆದ ಸಾಮಾನ್ಯ ಸಭೆಯಲ್ಲಿ ಜನರೇಟರ್ ನಾಪತ್ತೆ ಪ್ರಕರಣ ತೀವ್ರ ಕೋಲಾಹಲವನ್ನೇ ಸೃಷ್ಟಿಸಿತು. ಗ್ರಾ.ಪಂ.ಗೆ ಜನರೇಟರ್ ಶೀಘ್ರ ಮರಳಿ ತರಬೇಕು. ಅಧಿಕಾರ ಹಸ್ತಾಂತರಿಸುವ ವೇಳೆ ಜನರೇಟರ್ ಕುರಿತು ಮಾಹಿತಿ ನೀಡದೆ ಬೇಜವಾಬ್ದಾರಿ ತೋರಿದ ಅಧಿಕಾರಿ ವಿರುದ್ಧ ತಾ.ಪಂ. ಇಒಗೆ ದೂರು ನೀಡಬೇಕೆಂದು ತೀರ್ಮಾನಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ
ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್
Kota ಸರಣಿ ಸುಸೈ*ಡ್ ಬೆನ್ನಲ್ಲೇ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.