Crime: ವಾಮದಪದವು; ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ
Team Udayavani, Mar 31, 2024, 2:19 PM IST
ಪುಂಜಾಲಕಟ್ಟೆ: ಯುವಕನೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸಂಭವಿಸಿದ್ದು, ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಆದರೆ ಇದು ಕೊಲೆಯಾಗಿರಬೇಕೆಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಲಾಗಿದೆ.
ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ವಾಮದಪದವು ತಿಮರಡ್ಡ ನಿವಾಸಿ ಪದ್ಮನಾಭ ಸಾಮಂತ (ಸೇವಂತ) ಮೃತಪಟ್ಟವರಾಗಿದ್ದಾರೆ.
ಪದ್ಮನಾಭ ಅವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾಗಿದ್ದರು. ಮಾಹಿತಿ ಹಕ್ಕು (ಆರ್‌ಟಿಐ)ಮೂಲಕ ಮಾಹಿತಿ ಪಡೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದರು. ಆದರೆ ಇತ್ತೀಚೆಗೆ ಅವರ ಮೇಲೆಯೇ ವಂಚನೆ ಆರೋಪ ಕೇಳಿಬಂದಿತ್ತು. ಯುವಕನೋರ್ವನಿಗೆ ಸರಕಾರಿ ಉದ್ಯೋಗ ದೊರಕಿಸಿಕೊಡುವುದಾಗಿ 1.50 ಲಕ್ಷ ರೂ. ಹಣವನ್ನು ಪಡೆದುಕೊಂಡು ವಂಚಿಸಿದ್ದ ಎಂದು ಯುವಕ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಕುರಿತು ಪದ್ಮನಾಭ ಸಾಮಂತ ವಿಚಾರಣೆಗೆ ಹಾಜರಾಗುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದು,ಆದರೆ ಕಳೆದ ಮೂರು ದಿನಗಳಿಂದ ಠಾಣೆಗೆ ಹಾಜರಾಗಿರಲಿಲ್ಲ. ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪದ್ಮನಾಭ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಮೃತಪಟ್ಟು ಕೆಲವು ದಿನಗಳು ಕಳೆದಿರುವ ಹಿನ್ನೆಲೆ ಮರಣೋತ್ತರ ಪರೀಕ್ಷೆಗಾಗಿ ಫೋರೆನ್ಸಿಕ್ ತಜ್ಞರು ಆಗಮಿಸಬೇಕಾಗಿದೆ.
ಪದ್ಮನಾಭ ಅವರು ತಾಯಿ, ಸಹೋದರನೊಂದಿಗೆ ವಾಸವಿದ್ದು, ನಿರ್ದಿಷ್ಟ ಉದ್ಯೋಗ ಹೊಂದಿರಲಿಲ್ಲ. ಮನೆಯ ಹಿಂಬದಿಯ ಗುಡ್ಡದಲ್ಲಿ ಮೃತದೇಹ ಕಂಡುಬಂದಿದ್ದು, ರವಿವಾರ ಬೆಳಗ್ಗೆ ವಾಸನೆಯಿಂದ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಪ್ರಾಥಮಿಕ ಮಾಹಿತಿ ಪ್ರಕಾರ ಆತ್ಮಹತ್ಯೆ ಎನ್ನಲಾಗಿದ್ದು, ಆದರೆ ನಿಜಾಂಶವೇನು ಎನ್ನುವುದು ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದು ಬರಬೇಕಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿ, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು,ಸಾವಿನ ಕುರಿತು ತನಿಖೆ ಮುಂದುವರಿದಿದೆ.
ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಪದ್ಮನಾಭ ಅವರ ಮನೆಗೆ ತೆರಳಿ ಮನೆ ಮಂದಿಗೆ ಸಾಂತ್ವನ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.