ಕುಟುಂಬಕ್ಕಿಂತ ದೇಶ ಮೊದಲು ಎನ್ನುವ ವಿಟ್ಲದ ವೀರ ಸೈನಿಕ
Team Udayavani, Feb 23, 2018, 3:26 PM IST
ಕುಟುಂಬಕ್ಕಿಂತ ದೇಶಸೇವೆ ದೊಡ್ಡದು ಎನ್ನುವುದು ಸೈನಿಕರಿಗೆ ಮಾತ್ರ ಸಾಧ್ಯ. 27 ವರ್ಷಗಳ ದೇಶಸೇವೆಯಲ್ಲಿ ಅಪಾರ ಅನುಭವ ಪಡೆದು, ಅದರಲ್ಲೇ ತೃಪ್ತಿ ಹೊಂದಿ, ವಿಟ್ಲಕ್ಕೆ ಹೆಮ್ಮೆ ತಂದವರು ಸು| ಮೇ| ದಾಸಪ್ಪ ಪೂಜಾರಿ.
ವಿಟ್ಲ: ಕಾರ್ಗಿಲ್ ಯುದ್ಧದಲ್ಲಿ ಹೋರಾಟ, ವಿವಿಧ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿ 27 ವರ್ಷಗಳಿಂದ ಭೂಸೇನೆಯಲ್ಲಿದ್ದು ದೇಶಸೇವೆಯಲ್ಲಿ ತೊಡಗಿಸಿಕೊಂಡಿರುವ ಸುಬೇದಾರ್ ಮೇಜರ್ ದಾಸಪ್ಪ ಪೂಜಾರಿ ಈಗ ವಿಟ್ಲಕ್ಕೆ ಹೆಮ್ಮೆಯ ವ್ಯಕ್ತಿ. ಕುಟುಂಬಕ್ಕಿಂತ ದೇಶಸೇವೆಯೇ ಮುಖ್ಯ ಎನ್ನುವ ದಾಸಪ್ಪ ಅವರು ವಿಟ್ಲ ಕಸಬಾ ಗ್ರಾಮದ ಸಂಜೀವ ಪೂಜಾರಿ ನೆಕ್ಕಿಲಾರು ಮತ್ತು ಸುಂದರಿ ದಂಪತಿಯ ಪುತ್ರ.
ದಾಸಪ್ಪ ಪೂಜಾರಿ ಅವರಿಗೆ ‘ಸುಬೇದಾರ್ ಮೇಜರ್’ ಆಗಿ ಭಡ್ತಿ
ವಿದ್ಯಾಭ್ಯಾಸ
ದಾಸಪ್ಪ ಅವರು ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಶಾಲೆಯಲ್ಲಿ ಪ್ರಾಥಮಿಕ, ವಿಟ್ಠಲ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಬಳಿಕ ವಿಟ್ಠಲ ಪಪೂ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದರು. ಈ ವೇಳೆಗೆ ಮಂಗಳೂರು ಬೋರ್ಡ್ ರಿಕ್ರ್ಯೂಟ್‌ಮೆಂಟ್ ಕಚೇರಿಯಲ್ಲಿ ನೋಂದಾಯಿಸಿ, ಸೇನೆಗೆ 1989, ಎ. 21ರಂದು ಸೇರ್ಪಡೆಯಾಗಿದ್ದರು. ಸಂಜೀವ ಪೂಜಾರಿ ದಂಪತಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು. ಬಡತನ ಕಾರಣದಿಂದ ಮಕ್ಕಳಿಗೆ ಶಿಕ್ಷಣ ಸುಲಭವಾಗಿರಲಿಲ್ಲ. ಕುಟುಂಬ ಬಡತನದಲ್ಲಿದ್ದುದರಿಂದ ಮತ್ತು ದೇಶಸೇವೆಗೆ ಆಸಕ್ತಿಯೂ ಇದ್ದುದರಿಂದ ದಾಸಪ್ಪ ಅವರು ಸೇನೆಗೆ ಅರ್ಜಿ ಹಾಕುವ ಮನಸ್ಸು ಮಾಡಿದ್ದರು.
ಪತ್ನಿ ಆರತಿ, ಮಕ್ಕಳು ಧರಿತ್ರಿ ಮತ್ತು ಜ್ಞಾನೇಶ್ ಜತೆ ದಾಸಪ್ಪ ಪೂಜಾರಿ.
ಕುಟುಂಬ
ದಾಸಪ್ಪ ಪೂಜಾರಿಯವರ ಪತ್ನಿ ಆರತಿ ಅವರು ಕೋಡಪದವು ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಪತಿ ದಾಸಪ್ಪ ಪೂಜಾರಿಯವರು ಸೇನೆಯಲ್ಲಿ ಮುಂದುವರಿಯಬೇಕೆನ್ನುವ ಆಶಯ ಅವರದೇ. ಇದಕ್ಕೆ ಪುತ್ರಿ ಧರಿತ್ರಿ ಎನ್.ಡಿ. ಮತ್ತು ಜ್ಞಾನೇಶ್ ಎನ್.ಡಿ. ಅವರೂ ಬೆಂಬಲವಾಗಿದ್ದಾರೆ.
ಚಂದ್ರಹಾಸ ಅವರ ಪ್ರೇರಣೆ
ದಾಸಪ್ಪ ಪೂಜಾರಿ ಅವರಿಗೆ ಸೇನೆಗೆ ಸೇರ್ಪಡೆಗೆ ಪ್ರೇರಣೆ, ಮಾರ್ಗದರ್ಶನ ನೀಡಿದ್ದು, ಪ್ರಸಕ್ತ ಎಚ್‌ಎಎಲ್‌ನ ಸೀನಿಯರ್ ಮೆನೇಜರ್ (ಹೆಲಿಕಾಪ್ಟರ್ ವಿಭಾಗ) ಆಗಿರುವ, ಅಂಗರಕೋಡಿಯ ಎ. ಚಂದ್ರಹಾಸ ಅವರು. ಉದ್ಯೋಗಕ್ಕೆ ಆಸಕ್ತಿ ಇದ್ದ ದಾಸಪ್ಪ ಅವರಿಗೆ ಸೇನೆಗೆ ಸೇರುವಂತೆ ಪ್ರೇರೇಪಿಸಿದರು. ನೌಕಾಪಡೆ ನೇಮಕಾತಿಗೆ ಕರೆದಿದ್ದಾಗ ಅದಕ್ಕೆ ಅರ್ಜಿ ಸಲ್ಲಿಸಲು ಹೇಳಿದ್ದರು. ಆದರೆ ವಯಸ್ಸು ಆಗದ್ದರಿಂದ ಅರ್ಹತೆ ಸಿಕ್ಕಿರಲಿಲ್ಲ. ಶಾಲಾ ಜೀವನದಲ್ಲಿ ಕಬಡ್ಡಿ, ಪೋಲ್ ವಾಲ್ಟ್, ಇನ್ನಿತರ ಕ್ರೀಡಾಚಟುವಟಿಕೆಗಳಲ್ಲಿ ನಿರಂತರ ಭಾಗಿಯಾಗುತ್ತಿದ್ದುದರಿಂದ ಅನಂತರ ದಾಸಪ್ಪ ಅವರು ಸೇನೆಗೆ ಅರ್ಜಿ ಸಲ್ಲಿಸಿದ್ದು, ಸೇರ್ಪಡೆ ಸುಲಭವಾಯಿತು.
ಕಾರ್ಗಿಲ್ ಹೋರಾಟದ ಯೋಧ
ಮೂರು ವರ್ಷ ತರಬೇತಿ ಬಳಿಕ 1991ರಲ್ಲಿ ಪಠಾಣ್‌ಕೋಟ್‌ಗೆ ದಾಸಪ್ಪ ಅವರನ್ನು ಪೋಸ್ಟಿಂಗ್ ಮಾಡಲಾಗಿತ್ತು. ಬಳಿಕ ಜಮ್ಮು ಮತ್ತು ಕಾಶ್ಮೀರದ ರಜೌರಿ ಸೆಕ್ಟರ್, 199ರಲ್ಲಿ ಕಾರ್ಗಿಲ್ ಯುದ್ಧ ಸಂದರ್ಭ ಫಜಿಲ್ ಕಾದಲ್ಲಿ ನಿಯೋಜಿಸಲ್ಪಟ್ಟಿದ್ದರು. 2002ರಲ್ಲಿ ಹವಾಲ್ದಾರ್ ಆಗಿ ಭಡ್ತಿ ಹೊಂದಿ 2009ರಲ್ಲಿ ಜೂನಿಯರ್ ಕಮಿಷನರ್ ಆಗಿದ್ದು, ಹರಿಯಾಣದ ಹಿಸ್ಸಾರ್‌ನಲ್ಲಿ ಸೇವೆಯಲ್ಲಿದ್ದರು. ಬಳಿಕ ಎನ್‌ಸಿಸಿ ಸುಬೇದಾರ್ ಆಗಿದ್ದು, ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಟ್ರೈನಿಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಈಗ ಸುಬೇದಾರ್ ಮೇಜರ್ ಆಗಿ ಜೈಸಲ್ಮೇರ್‌ನಲ್ಲಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ ಮತ್ತು ವಿಟ್ಲ ಯೂತ್ ಬಿಲ್ಲವ ಅಸೋಸಿಯೇಶನ್ ಸಮ್ಮಾನಿಸಿ, ಗೌರವಿಸಿವೆ.
ಕಾರ್ಗಿಲ್ ಯುದ್ಧ , ತಾಯಿಯ ಉಪವಾಸ
ಕಾರ್ಗಿಲ್ ಯುದ್ಧದ ಅವಧಿಯಲ್ಲಿ ಪಂಜಾಬ್ ಗಡಿಯಲ್ಲಿ ದಾಸಪ್ಪ ಅವರ ನಿಯೋಜನೆಯಾಗಿತ್ತು. ಇದು ಅವರ ತಾಯಿ ಸುಂದರಿಯವರಿಗೆ ತಿಳಿದು ಭಯಭೀತರಾಗಿದ್ದರು. ಮಗ ಊಟ ಮಾಡಿದ್ದಾನೋ ಇಲ್ಲವೋ ಎಂಬ ವ್ಯಾಕುಲತೆ ಅವರದ್ದಾಗಿತ್ತು. ಕೆಲವು ದಿನ ಅಳುತ್ತಲೇ ಇದ್ದ ಅವರು, ಎಷ್ಟೋ ದಿನ ಉಪವಾಸ ಕೂತಿದ್ದರು. ಯುದ್ಧ ಮುಗಿಯುತ್ತಲೇ ದಾಸಪ್ಪ ಅವರು ಊರಿಗೆ ಆಗಮಿಸಿದ್ದು, ತಾಯಿಯ ಆಶೀರ್ವಾದ ಪಡೆದಾಗಲೇ ಆಕೆ ಸಮಾಧಾನಗೊಂಡಿದ್ದರು.
ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಕಷ್ಟಪಡುತ್ತಿದ್ದೇನೆ ಎಂದು ಹೇಳುವುದೇ ಇಲ್ಲ. ದೇಶಕ್ಕಾಗಿ ಸೇವೆ ಸಲ್ಲಿಸುವುದೇ ಹೆಮ್ಮೆ ಎನ್ನುತ್ತಾರೆ. ಇತ್ತೀಚೆಗೆ ಚೀನ ಯುದ್ಧಭೀತಿ ವೇಳೆ ಚೀನ ಹೆಚ್ಚು ಹಾರಾಡಿದರೆ ಯುದ್ಧ ಘೋಷಣೆಯಾಗುವುದನ್ನೇ ಕಾಯುತ್ತಿದ್ದೇವೆ. ನಾವು ಭಾರತಕ್ಕಾಗಿ ಹೋರಾಡುತ್ತೇವೆ ಎಂದಾಗ ನನಗೆ ಹೆಮ್ಮೆ ಅನಿಸಿತ್ತು.
–ಆರತಿ, ಪತ್ನಿ
ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.