ಹದಗೆಟ್ಟಿದೆ ಪೆರಾಜೆ – ಅಮಚೂರು ರಸ್ತೆ; ಸಂಚಾರಕ್ಕೆ ತೊಡಕು
ಕಿತ್ತು ಹೋಗಿರುವ ಡಾಮರು; ರಸ್ತೆ ಮೇಲ್ದರ್ಜೆಗೇರಿಸಲು ಆಗ್ರಹ
Team Udayavani, Dec 5, 2019, 4:50 AM IST
ಅರಂತೋಡು: ಪೆರಾಜೆ- ಅಮಚೂರು- ತೊಡಿಕಾನ ಸಂಪರ್ಕ ರಸ್ತೆ ತುಂಬಾ ಕಿರಿದಾಗಿದ್ದು, ಈಗ ನಾದುರಸ್ತಿಯಲ್ಲಿದೆ. ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಮೇಲ್ದರ್ಜೆಗೇರಿಸಬೇಕೆಂದು ಹಲವು ವರ್ಷಗಳಿಂದ ಸ್ಥಳೀಯರು ಒತ್ತಾಯಿಸುತ್ತಲೇ ಇದ್ದಾರೆ.
ಪೆರಾಜೆ ರಾಜ್ಯ ಹೆದ್ದಾರಿಯಿಂದ ಪೆರಾಜೆ – ಅಮಚೂರು, ಚಾಂಬಾಡು – ತೊಡಿಕಾನ ಸಂಪರ್ಕ ರಸ್ತೆ ಆರಂಭಗೊಳ್ಳುತ್ತದೆ. ಪೆರಾಜೆ ರಾಷ್ಟ್ರೀಯ ಹೆದ್ದಾರಿಂದ ತೊಡಿಕಾನ ಕೂಡು ರಸ್ತೆಗೆ 7 ಕಿ.ಮೀ. ದೂರ ಇದೆ. ಪೆರಾಜೆಯಿಂದ 5 ಕಿ.ಮೀ. ರಸ್ತೆ ಕೊಡಗು ಜಿಲ್ಲಾಡಳಿತಕ್ಕೆ ಒಳಪಡುತ್ತದೆ. ಉಳಿದ 2 ಕಿ.ಮೀ. ರಸ್ತೆ ದ.ಕ. ಜಿಲ್ಲೆಯ ಆಡಳಿತದ ವ್ಯಾಪ್ತಿಗೆ ಒಳಪಡುತ್ತದೆ. ಇದು ಅಲ್ಲಲ್ಲಿ ಕಿರಿದಾಗಿದೆ. ರಸ್ತೆಯ ಮಧ್ಯೆ ಅನೇಕ ತಿರುವುಗಳಿವೆ. ಹಲವು ಕಡೆಗಳಲ್ಲಿ ಡಾಮರು ಕಿತ್ತು ಹೋಗಿದೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ಸೇತುವೆಯೂ ಅಪಾಯದಲ್ಲಿ
ಇಲ್ಲಿನ ರಸ್ತೆಯಲ್ಲಿ ಕೆಂಪು ಕಲ್ಲು ಸಾಗಾಟದ ವಾಹನ ಸಂಚರಿಸುತ್ತಿರುವುದರಿಂದ ರಸ್ತೆಯ ಬಾಳಿಕೆ ಇನ್ನಷ್ಟು ಕಡಿಮೆಯಾಗಿದೆ. ಕಲ್ಲುಕೋರೆ ಮಾಲಕರು ಈ ರಸ್ತೆಯ ಒಂದಷ್ಟು ಭಾಗವನ್ನು ಅಭಿವೃದ್ಧಿ ಮಾಡಿಕೊಡುತ್ತೇವೆ ಎಂದು ಹೇಳಿ ಜಲ್ಲಿ ಕಲ್ಲುಗಳನ್ನು ರಸ್ತೆಗೆ ಹಾಕಿದ್ದಾರೆ. ಈ ಎಲ್ಲ ಸಮಸ್ಯೆಯನ್ನು ಅರಿತುಕೊಂಡಿರುವ ಜನರು ರಸ್ತೆಯನ್ನು ಅಭಿವೃದ್ಧಿಗೊಳಿಸಿ ಮೇಲ್ದರ್ಜೆಗೆ ಏರಿಸಬೇಕೆಂದು ಒತ್ತಾಯಿಸಿದ್ದಾರೆ. ತೊಡಿಕಾನ ಅಮಚೂರು ಸಮೀಪದ ಹೊಳೆಗೆ 35 ವರ್ಷಗಳ ಹಿಂದೆ ನಿರ್ಮಿಸಲಾದ ಸೇತುವೆಯ ಬದಿಯ ಕೆಲವು ಭಾಗಗಳು ಕುಸಿತಗೊಂಡಿದ್ದು, ಅಪಾಯ ಎದುರಾಗಿದೆ.
ಕಾವೇರಿ ರಸ್ತೆ ಅಭಿವೃದ್ಧಿಗೊಳ್ಳಲಿ
ಇತಿಹಾಸ ಪ್ರಸಿದ್ಧ ಪೆರಾಜೆ – ತೊಡಿಕಾನ – ಪಟ್ಟಿ ರಸ್ತೆ (ಕಾವೇರಿ ರಸ್ತೆ) ಅಭಿವೃದ್ಧಿಗೊಳ್ಳಬೇಕೆಂದು ಹಲವು ವರ್ಷಗಳಿಂದ ಪೆರಾಜೆ ಭಾಗದ ಜನರು ಒತ್ತಾಯಿಸುತ್ತಿದ್ದಾರೆ. ಪೆರಾಜೆ ಶಾಸ್ತವು ದೇವಾಲಯ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ ಕೊಡಗಿನ ತಲಕಾವೇರಿ, ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಪುರಾತನ ಕಾಲದಿಂದಲೂ ಧಾರ್ಮಿಕ ಐತಿಹಾಸಿಕ ನೇರ ಸಂಬಂಧಗಳಿವೆ. ಪೆರಾಜೆ – ತೊಡಿಕಾನ – ಪಟ್ಟಿ – ಭಾಗಮಂಡಲ ರಸ್ತೆ ಮೂಲಕ ಈ ಭಾಗದ ಜನರು ಕೊಡಗಿನ ಭಾಗಮಂಡಲಕ್ಕೆ ಹಾಗೂ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಪೆರಾಜೆ ಶಾಸ್ತವು ದೇವಾಲಯದ ಪಕ್ಕ ಈಗಲೂ ಕಾವೇರಿ ಗದ್ದೆ ಇದ್ದು, ಇದರಲ್ಲಿ ಬೆಳೆದ ಕದಿರನ್ನು ತೆಗೆದು ಚೌತಿಯ ಸಂದರ್ಭ ಭಾಗಮಂಡಲದ ಭಗಂಡೇಶ್ವರ ಮತ್ತು ತಲಕಾವೇರಿಗೆ ಈ ರಸ್ತೆಯ ಮೂಲಕ ಸಾಗಿ ಕಟ್ಟುತ್ತಿದ್ದರು. ಬ್ರಿಟಿಷ್ ಸರಕಾರದ ದಾಖಲೆಯಲ್ಲಿ ಇದು “ಕಾವೇರಿ ರಸ್ತೆ’ ಎಂದೇ ನಮೂದಿಸಲಾಗಿದೆ. ಅಲ್ಲದೆ ಬ್ರಿಟಿಷ್ ಸರಕಾರದ ಆಡಳಿತ ವ್ಯವಸ್ಥೆಯಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಗಳ ಪಟ್ಟಿ ಮಾಡುತ್ತಿದ್ದ ಜಾಗವೇ “ಪಟ್ಟಿ’ ಎಂಬ ಹೆಸರು ಪಡೆದಿದೆ ಎಂದು ಹಿರಿಯರು ಹೇಳುತ್ತಾರೆ.
ತೊಡಿಕಾನ- ಪಟ್ಟಿ- ಬಾಚಿಮಲೆ ರಸ್ತೆ ಅಭಿವೃದ್ಧಿಗೆ ರಾಜ್ಯ ಸರಕಾರ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕಡತ ವಿಲೇವಾರಿಗೆ ಸಂಬಂಧಿಸಿದ ಕೆಲಸ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಅಭಿವೃದ್ಧಿಯ ಪ್ರಯತ್ನ ಸಾಗುತ್ತಿದೆ
ಪೆರಾಜೆ – ಅಮಚೂರು – ಚಾಂಬಾಡು ರಸ್ತೆ ಪೆರಾಜೆಯಿಂದ 5 ಕಿ.ಮೀ. ಕೊಡಗು ಜಿಲ್ಲಾಡಳಿತಕ್ಕೆ ಒಳಪಟ್ಟಿದೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಲದ ವಿಪರೀತ ಮಳೆಯಿಂದ ಕೆಲವೆಡೆ ಹದಗೆಟ್ಟಿದೆ. ಇದನ್ನು ಮಳೆ ಹಾನಿ ಅನುದಾನದಲ್ಲಿ ದುರಸ್ತಿಪಡಿಸಲಾಗುತ್ತದೆ. ಪೆರಾಜೆ ದೇವಾಲಯ ಕೊಡಗಿನ ತಲಕಾವೇರಿ ಭಾಗಮಂಡಲದ ಭಗಂಡೇಶ್ವರ ದೇವಾಲಯೊಂದಿಗೆ ಧಾರ್ಮಿಕ ಐತಿಹಾಸಿಕ ಸಂಬಂಧ ಹೊಂದಿದ್ದು, ಇದನ್ನು ಸಂಪರ್ಕಿಸಿ ಪೆರಾಜೆ-ತೊಡಿಕಾನ-ಪಟ್ಟಿ ರಸ್ತೆ ಅಭಿವೃದ್ಧಿಯ ಬಗ್ಗೆ ದೊಡ್ಡ ಪ್ರಯತ್ನ ನಡೆಯುತ್ತಿದೆ.
- ನಾಗೇಶ್ ಕುಂದಲ್ಪಾಡಿ, ತಾ.ಪಂ. ಸದಸ್ಯ, ಮಡಿಕೇರಿ
ದುರಸ್ತಿ ಅಗತ್ಯವಾಗಿ ಆಗಬೇಕಿದೆ
ಪೆರಾಜೆ – ಅಮಚೂರು – ತೊಡಿಕಾನ ರಸ್ತೆ ಅಲ್ಲಲ್ಲಿ ಹೊಂಡ – ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವುದಂತೂ ತ್ರಾಸದಾಯಕ. ಈ ರಸ್ತೆಯನ್ನು ದುರಸ್ತಿ ಮಾಡುವ ಅಗತ್ಯ ಇದೆ.
- ಗೋವರ್ಧನ ಬೊಳ್ಳೂರು, ಸ್ಥಳೀಯ ನಿವಾಸಿ
– ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.