ನರ್ಮ್ ಬಸ್ ನಿಲ್ದಾಣದಲ್ಲೊಂದು ಅಪಾಯಕಾರಿ ಬಾವಿ!
Team Udayavani, May 25, 2020, 8:17 AM IST
ಉಡುಪಿ: ಸುಸಜ್ಜಿತ ನೂತನ ನರ್ಮ್ ಸಿಟಿ ಬಸ್ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಬಾವಿಯೊಂದು ಅಪಾಯಕಾರಿಯಾಗಿ ತೆರೆದುಕೊಂಡಿದೆ. ಹೊಸ ಬಸ್ ನಿಲ್ದಾಣದಲ್ಲಿ ಬಾವಿ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಪ್ರದೇಶದಲ್ಲಿ ಯಾವುದೇ ರೀತಿಯಾದ ಸುರಕ್ಷತಾ ಕ್ರಮ ವಹಿಸದೆ ಕಾಮಗಾರಿ ನಡೆಸಲಾಗುತ್ತಿದೆ. ಗುತ್ತಿಗೆದಾರರು ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಬಾವಿಗೆ ತಾತ್ಕಾಲಿಕ ಸುರಕ್ಷತ ಗೋಡೆಯನ್ನು ಸಹ ನಿರ್ಮಿಸಿಲ್ಲ. ಮದ್ಯ ಸೇವಿಸಿ ತಿರುಗಾಡುವವರು, ಮಾನಸಿಕ ಅಸ್ವಸ್ಥರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಕೊಂಚ ಎಚ್ಚರ ತಪ್ಪಿದರೂ ಪ್ರಾಣಕ್ಕೆ ತೊಂದರೆಯಾಗುವುದು ಖಚಿತ ಎನ್ನುವ ಆತಂಕ ಸ್ಥಳೀಯರದು.
ಅಗೆದ ಮಣ್ಣು ರಸ್ತೆಗೆ
ನಿಲ್ದಾಣ ಮುಂಭಾಗದಲ್ಲಿ ಬಾವಿ ಅಗೆದು ಬಂದ ಮಣ್ಣನ್ನು ಆವರಣ ಗೋಡೆ ಹತ್ತಿರವೇ ಶೇಖರಿಸಲಾಗಿದೆ. ಈಗಾಗಲೇ ಹನಿ ಮಳೆಗೆ ಕೆಂಪು ಮಣ್ಣು ರಸ್ತೆ ತುಂಬ ಬಂದು ನಿಂತಿದೆ. ಮಳೆ ನೀರಿನಲ್ಲಿ ಕೆಂಪು ಮಣ್ಣು ಶೇಖರಣೆಯಾದರೆ ಬೈಕ್‌ಗಳು ಸ್ಕಿಡ್ ಆಗುವ ಸಾಧ್ಯತೆ ಇದೆ. ಇದರಿಂದಾಗಿ ಈ ಮಾರ್ಗವಾಗಿ ಪ್ರಯಾಣಿಸುವ ದ್ವಿಚಕ್ರ ವಾಹನಗಳು ತೊಂದರೆ ಅನುಭವಿಸುತ್ತಿದ್ದಾರೆ.
ಕೊಠಡಿ ಹರಾಜಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಕಟ್ಟಡ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾರ್ಚ್ ಕೊನೆಯಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇತ್ತು. ನಿಲ್ದಾಣದ ವಾಣಿಜ್ಯ ಸಂಕೀರ್ಣದ ಅಂಗಡಿ ಕೊಠಡಿಗಳ ಹರಾಜಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ.
41 ಸೆಂಟ್ಸ್ ಜಾಗದಲ್ಲಿ 4 ಕೋ.ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ. ಬಸ್ ನಿಲ್ದಾಣವು 3 ಅಂತಸ್ತುಗಳನ್ನು ಹೊಂದಿದೆ. ನೆಲ ಅಂತಸ್ತಿನಲ್ಲಿ 6,814 ಚ.ಅ., ಮೊದಲ ಅಂತಸ್ತು 5,637 ಚ.ಅ., ಎರಡನೆಯ ಅಂತಸ್ತು 5,807 ಚ.ಅ. ಸೇರಿದಂತೆ ಒಟ್ಟು ಕಟ್ಟಡವು 18,258 ಚ.ಅ. ಇದೆ. ನಿಲ್ದಾಣದಲ್ಲಿ ಏಕಕಾಲದಲ್ಲಿ 10 ಬಸ್ಸುಗಳು ನಿಲುಗಡೆಯಾಗಲು ವ್ಯವಸ್ಥೆ ಕಲ್ಪಿಸಲಾಗಿದೆ. 12 ಕಾರು ಹಾಗೂ 20 ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಕ್ರಮ ತೆಗೆದುಕೊಳ್ಳಲಾಗುವುದು
ಕಾಮಗಾರಿ ನಡೆಯುತ್ತಿರುವುದರಿಂದ ನಿಲ್ದಾಣಕ್ಕೆ ವಾಚ್‌ಮೆನ್ ನೇಮಿಸಲಾಗಿದೆ. ಜತೆಗೆ ಬಾವಿಗೆ ತಾತ್ಕಾಲಿಕ ಆವರಣ ಗೋಡೆ ಹಾಗೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.
ಸುರಕ್ಷತೆ ಅಗತ್ಯ
ಕಾಮಗಾರಿ ಮಾಡುವವರು ಜನರ ಸುರಕ್ಷತೆ ಕಡೆಗೆ ಗಮನ ಕೊಡಬೇಕಾಗಿದೆ. ಕತ್ತಲಿನಲ್ಲಿ ಮದ್ಯದಲ್ಲಿ ಅಮಲಿನಲ್ಲಿ ಅಲೆದಾಡಿದರೆ ಬಾವಿಗೆ ಬೀಳುವುದು ಗ್ಯಾರೆಂಟಿ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುವುದು ಉತ್ತಮ.
-ಸಂತೋಷ್ ನಾಯಕ್, ಪಾದಚಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.