ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜೆ, ಸರಳ ಕೃಷ್ಣಾಷ್ಟಮಿ
Team Udayavani, Sep 11, 2020, 6:15 AM IST
ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಗುರುವಾರ ಕೃಷ್ಣಜಯಂತಿ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು. ಬೆಳಗ್ಗೆ ಲಕ್ಷ ತುಳಸೀ ಅರ್ಚನೆ, ಮಹಾ ಪೂಜೆ ನಡೆಸಿದ ಬಳಿಕ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಜತೆಗೂಡಿ ರಾತ್ರಿ ಪೂಜೆಯ ನಿವೇದನೆಗಾಗಿ ಲಡ್ಡು ಕಟ್ಟಿದರು. ಸ್ಯಾಕ್ಸೋಫೋನ್ ವಾದನ, ವೀಣಾವಾದನ, ರಾತ್ರಿ ಸಂಸ್ಕೃತ ಯಕ್ಷಗಾನ ತಾಳಮದ್ದಲೆ, ನಾಗಸ್ವರ ವಾದನ ನಡೆದವು. ಸಂಜೆ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪ್ರವಚನದ ಮಂಗಲೋತ್ಸವ ನಡೆಸಿದರು. ಕೋವಿಡ್ ಕಾರಣದಿಂದ ಭಕ್ತರಿಗೆ ಕೃಷ್ಣ ಮಠಕ್ಕೆ ಪ್ರವೇಶವಿಲ್ಲದ ಕಾರಣ ರಥಬೀದಿಯಲ್ಲಿ ಕನಕನ ಕಿಂಡಿ ಮೂಲಕ ದರ್ಶನ ಪಡೆದರು.
ಕೃಷ್ಣಜಯಂತಿಯಂದು ಏಕಾದಶಿ ಯಂತೆ ನಿರ್ಜಲ ಉಪವಾಸ ಮಾಡುವ ಕಾರಣ ರಾತ್ರಿಯೂ ಕೃಷ್ಣನಿಗೆ ಮಹಾಪೂಜೆ ಯನ್ನು ಪರ್ಯಾಯ ಶ್ರೀಪಾದರು ನಡೆಸಿದರು. ಭಕ್ತರಿಗೆ ವಿತರಿಸಲೋಸುಗ ಮಾಡಿದ ಉಂಡೆ, ಚಕ್ಕುಲಿಗಳನ್ನು ದೇವರಿಗೆ ನಿವೇದಿಸಿದರು. ಬಳಿಕ ಕೃಷ್ಣಾರ್ಘ್ಯ ಪ್ರದಾನ ಮಾಡಿದರು. ಇವೆಲ್ಲವನ್ನು ಲೈವ್‌ನಲ್ಲಿ ತೋರಿಸಿದ ಕಾರಣ ಭಕ್ತರು ಮನೆಗಳಲ್ಲಿ ನೋಡಿ ಪೂಜೆ ಸಲ್ಲಿಸಿದರು.
ಇಂದು ವಿಟ್ಲಪಿಂಡಿ
ವಿಟ್ಲಪಿಂಡಿ ಉತ್ಸವ ಶುಕ್ರವಾರ ಅಪರಾಹ್ನ ನಡೆಯಲಿದೆ. ಸ್ವಾಮೀಜಿಯವರು, ಮಠದ ಸಿಬಂದಿಯಿಂದ ಕೇವಲ ಸಾಂಪ್ರದಾಯಿಕ ವಾಗಿ ಉತ್ಸವದ ಆಚರಣೆ ನಡೆಯಲಿದೆ.ಶುಕ್ರವಾರ ರಥಬೀದಿ ಪ್ರವೇಶ ವನ್ನು ನಿರ್ಬಂಧಿಸಲಾಗಿದೆ. ವಿಶೇಷ ಬಂದೋಬಸ್ತ್ಗೆ 120 ಪೊಲೀಸರನ್ನು ನಿಯೋಜಿಸಲಾಗಿದೆ.
ನೈಸರ್ಗಿಕ ಮೂರ್ತಿಗೆ ಪೂಜೆ
ಉಡುಪಿ: ಶುಕ್ರವಾರ ನಡೆಯುವ ವಿಟ್ಲಪಿಂಡಿ ಉತ್ಸವ ದಲ್ಲಿ ಪಾಲ್ಗೊಳ್ಳುವ ಮೂರ್ತಿ ಅಪ್ಪಟ ನೈಸರ್ಗಿಕವಾಗಿ ತಯಾರಾಗಿದೆ. ಸ್ವಾಮೀಜಿಗಳ ಚಾತುರ್ಮಾಸ ಆಚರಣೆ ನಡೆಯುತ್ತಿರುವುದರಿಂದ ಈ ಅವಧಿಯಲ್ಲಿ ಉತ್ಸವಗಳು ನಡೆಯದೆ ಉತ್ಸವ ಮೂರ್ತಿ ಗರ್ಭಗುಡಿಯಲ್ಲಿರುತ್ತದೆ. ಕೃಷ್ಣಾಷ್ಟಮಿ ಈ ಅವಧಿಯಲ್ಲಿ ಬರುವ ಕಾರಣ ಮಣ್ಣಿನ ವಿಗ್ರಹ ರಚಿಸಲಾಗುತ್ತದೆ. ವಿಗ್ರಹವು ಹತ್ತು ಇಂಚು ಎತ್ತರವಿದೆ. ತಯಾರಿಸಿದವರು ಕಲಾವಿದ ವಾದಿರಾಜ ರಾವ್. ಶುಕ್ರವಾರ ಅಪರಾಹ್ನ ನಡೆಯುವ ವಿಟ್ಲಪಿಂಡಿ ಉತ್ಸವದಲ್ಲಿ ಈ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಬಳಿಕ ಮಧ್ವ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ.
5,229ನೇ ಶ್ರೀಕೃಷ್ಣ ಜಯಂತಿ
ಈಗ ನಡೆಯುತ್ತಿರುವ ಕಲಿಯುಗಕ್ಕೆ ಹಿಂದಿನ ದ್ವಾಪರ ಯುಗದ ಕೊನೆಯ ಹೊತ್ತಿಗೆ ಶ್ರೀಕೃಷ್ಣನ ಜನನವಾಯಿತು. ಈಗ ಕಲಿಯುಗ ಆರಂಭವಾಗಿ 5,122 ವರ್ಷಗಳಾಗಿವೆ. ಕೃಷ್ಣ ಭೂಮಿಯಲ್ಲಿದ್ದದ್ದು 106 ವರ್ಷ. ಕೃಷ್ಣ ಇಹಲೋಕ ತ್ಯಜಿಸಿದ ದಿನ ಕಲಿಯುಗ ಆರಂಭವಾಯಿತು ಎಂದು ಶಾಸ್ತ್ರಗಳು ಸಾರುತ್ತವೆ. ಅಂದರೆ 5,228 ವರ್ಷಗಳ ಹಿಂದೆ ಮಥುರಾ ಪಟ್ಟಣದಲ್ಲಿ ವಸುದೇವ-ದೇವಕಿಯರ ಮಗನಾಗಿ ಕೃಷ್ಣ ಜನಿಸಿದ.
ಸಿಂಹ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಚಂದ್ರೋದಯದ ವೇಳೆ ರೋಹಿಣಿ ನಕ್ಷತ್ರ ಕೂಡಿಬಂದಾಗ ಕೃಷ್ಣ ಜನಿಸಿದ. ಸೂರ್ಯೋದಯದ ವೇಳೆ ಅಷ್ಟಮಿ ತಿಥಿ ಇದ್ದು, ರಾತ್ರಿ ಚಂದ್ರೋದಯದ ವೇಳೆ ರೋಹಿಣಿ ನಕ್ಷತ್ರವಿದ್ದರೆ ಅದನ್ನು ಜಯಂತಿ ಎಂದೂ ರೋಹಿಣಿ ನಕ್ಷತ್ರ ಇಲ್ಲದಿದ್ದಾಗ ಕೃಷ್ಣಾಷ್ಟಮಿ ಎಂದೂ ಕರೆಯುತ್ತಾರೆ. ಇದೀಗ ಕೊರೊನಾ ಸಂಕಷ್ಟ ಕಾಲದಲ್ಲಿ ಕೃಷ್ಣಜಯಂತಿ ಉತ್ಸವದ ಘಳಿಗೆ ಕೂಡಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.