ಶಾಲಾ ಮಕ್ಕಳಿಗೆ ಮೊಟ್ಟೆ /ಬಾಳೆಹಣ್ಣು ವಿತರಣೆ
Team Udayavani, Jul 28, 2022, 11:05 AM IST
ಉಡುಪಿ/ ಕಾರ್ಕಳ: ಸರಕಾರಿ ಶಾಲೆಯ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜತೆ ಪೌಷ್ಟಿಕ ಆಹಾರ ಭಾಗವಾಗಿ ಮೊಟ್ಟೆ /ಬಾಳೆಹಣ್ಣು / ಚಿಕ್ಕಿ ನೀಡುವ ಪ್ರಕ್ರಿಯೆ ಬುಧವಾರದಿಂದ ಆರಂಭಗೊಂಡಿದೆ.
ಬಿಸಿಯೂಟ ನಿತ್ಯವೂ ಇರಲಿದೆ. ಮೊಟ್ಟೆ /ಬಾಳೆಹಣ್ಣು/ ಚಿಕ್ಕಿಯನ್ನು ವಾರದಲ್ಲಿ ಎರಡು ದಿನ ನೀಡಲಾಗುತ್ತದೆ. ಯಾವ ದಿನ ನೀಡಬೇಕು ಎಂಬುದನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಥವಾ ಮೊಟ್ಟೆ ವಿತರಣೆ ಸಮಿತಿ ನಿರ್ಧರಿಸಲಿವೆ. ಉಡುಪಿ ಜಿಲ್ಲೆಯ ಬಹುತೇಕ ಶಾಲೆಗಳು ಬುಧವಾರ, ಶನಿವಾರ ನೀಡಲು ನಿರ್ಧರಿಸಿವೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಪ್ರತ್ಯೇಕ ಸಮಿತಿ
ಪ್ರತೀ ಶಾಲೆಯಲ್ಲೂ ಪೌಷ್ಟಿಕಾಂಶಯುಕ್ತ ಆಹಾರವಾದ ಮೊಟ್ಟೆ /ಬಾಳೆಹಣ್ಣು / ಚಿಕ್ಕಿ ವಿತರಣೆಗೆ ಒಂದು ಸಮಿತಿ ರಚನೆ ಮಾಡಲು ಸರಕಾರ ನಿರ್ದೇಶನ ನೀಡಿದೆ. ಅದರಂತೆ ಎಲ್ಲ ಶಾಲೆಗಳಲ್ಲೂ ಪ್ರತ್ಯೇಕ ಸಮಿತಿ ರಚನೆ ಮಾಡಲಾಗಿದೆ. ಇದರ ಸಂಪೂರ್ಣ ಮೇಲುಸ್ತುವಾರಿಯನ್ನು ಎಸ್‌ಡಿಎಂಸಿ ಹಾಗೂ ಮುಖ್ಯಶಿಕ್ಷಕರು ನಿರ್ವಹಿಸಲಿದ್ದಾರೆ. ಕೆಲವೊಂದು ಭಾಗದಲ್ಲಿ ಸೋಮವಾರ, ಗುರುವಾರ, ಶುಕ್ರವಾರ ಮೊಟ್ಟೆ ವಿತರಣೆ ಸಮಸ್ಯೆಯಾಗಲಿದೆ. ಹೀಗಾಗಿ ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಂಡು ಮೊಟ್ಟೆ /ಬಾಳೆಹಣ್ಣು / ಚಿಕ್ಕಿ ವಿತರಣೆಗೆ ಅವಕಾಶ ನೀಡಲಾಗಿದೆ.
ಪ್ರತೀ ಮೊಟ್ಟೆ /ಬಾಳೆಹಣ್ಣು / ಚಿಕ್ಕಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದಿಂದ 6 ರೂ. ಒದಗಿಸಲಾಗುತ್ತದೆ. ಮೊಟ್ಟೆಯ ದರ 6 ರೂ. ಇರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ 6 ರೂ. ಮೀರಿದರೆ, ಕೆಲಬಾರಿ ಕಡಿಮೆಯೂ ಆಗುತ್ತದೆ. ದರ 6 ರೂ. ಗಿಂತ ಹೆಚ್ಚಾದಾಗ ಹೆಚ್ಚುವರಿ ವೆಚ್ಚವನ್ನು ಎಸ್ ಡಿಎಂಸಿಯೇ ಭರಿಸಬೇಕು. ಹೀಗಾಗಿ ಎಸ್‌ಡಿಎಂಸಿಗೂ ಇದು ಹೊರೆಯಾಗುವ ಸಾಧ್ಯತೆಯಿದೆ.
ಹೆಚ್ಚುವರಿ ಹೊರೆ
ಶಾಲೆಯಲ್ಲಿ ಬಿಸಿಯೂಟ ಸಿದ್ಧಪಡಿಸುವವರಿಗೆ ಅನು ದಾನ ಹೆಚ್ಚಿಸಬೇಕೆಂಬ ಬೇಡಿಕೆ ಅನೇಕ ವರ್ಷಗಳಿಂದ ಇದೆ. ಬಿಸಿಯೂಟದ ಜತೆಗೆ ವಾರಕ್ಕೆ 2 ದಿನ ಮೊಟ್ಟೆ ಬೇಯಿಸಿ, ಅದರ ಸಿಪ್ಪೆ ತೆಗೆದು ಮಕ್ಕಳಿಗೆ ನೀಡಬೇಕು. ಮಕ್ಕಳ ಸಂಖ್ಯೆ ಕಡಿಮೆ ಇದ್ದ ಶಾಲೆಗಳಲ್ಲಿ ಮೊಟ್ಟೆ ಸಿಪ್ಪೆ ತೆಗೆಯುವುದು ಸುಲಭ. ಆದರೆ ಜಿಲ್ಲೆಯ ಹಲವು ಸರಕಾರಿ ಶಾಲೆಯಲ್ಲಿ 200ರಿಂದ 1,500 ಮಕ್ಕಳು ಇದ್ದಾರೆ. ಇಂತಹ ಶಾಲೆಯಲ್ಲಿ ಮೊಟ್ಟೆ ಸಿಪ್ಪೆ ತೆಗೆಯುವುದೇ ಸವಾಲು. ಹೀಗಾಗಿ ಸರಕಾರ ಬಿಸಿಯೂಟ ಕಾರ್ಯಕರ್ತೆಯರ ಸಮಸ್ಯೆಯನ್ನು ಅರಿತು ಸೂಕ್ತ ಪರಿಹಾರ ಒದಗಿಸಬೇಕು ಎಂಬ ಆಗ್ರಹವೂ ಇದೆ.
1 ಮೊಟ್ಟೆ, 2 ಬಾಳೆಹಣ್ಣು
ಮೊಟ್ಟೆ ಅಥವಾ ಬಾಳೆಹಣ್ಣು ಸೇವಿಸಲು ಯಾವ ವಿದ್ಯಾರ್ಥಿಗೂ ಒತ್ತಡ ಹೇರುವಂತಿಲ್ಲ. ಮೊಟ್ಟೆ ತಿನ್ನುವ ವಿದ್ಯಾರ್ಥಿಗಳು ಮೊಟ್ಟೆ ಪಡೆಯಬಹುದು. ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಎರಡು ಬಾಳೆ ಹಣ್ಣು ನೀಡಬೇಕು. ಮೊಟ್ಟೆ ಅಥವಾ ಬಾಳೆಹಣ್ಣು ತಿನ್ನದ ವಿದ್ಯಾರ್ಥಿಗಳಿಗೆ ಶೇಂಗಾ ಚಿಕ್ಕಿ ನೀಡಲು ಅವಕಾಶವಿದೆ.
ಮೊಟ್ಟೆ ವಿತರಿಸಿದ ಡಿಡಿಪಿಐ
ಉಡುಪಿಯ ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಡಿಡಿಪಿಐ ಶಿವರಾಜ್ ಅವರು ವಿದ್ಯಾರ್ಥಿಗಳಿಗೆ ಮೊಟ್ಟೆ/ ಬಾಳೆಹಣ್ಣು/ ಚಿಕ್ಕಿ ವಿತರಣೆ ಮಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿವೇಕಾನಂದ ಗಾಂವ್ಕರ್, ಎಸ್‌ಡಿಎಂಸಿ ಅಧ್ಯಕ್ಷ ನಾಗಭೂಷಣ ಶೇಟ್, ಶಾಲಾ ಶಿಕ್ಷಣ ಸಮಿತಿ ಉಪಾಧ್ಯಕ್ಷ ಶ್ಯಾಮ್ ಪ್ರಸಾದ್ ಕುಡ್ವ, ಮೊಟ್ಟೆ ವಿತರಣೆ ಸಮಿತಿಯ ಆಶಾ ಆರ್., ಶರೀಫ್ ರೋಣ್, ಜಯಶ್ರೀ ಹಾಗೂ ಅರುಣ್ ಶೆಟ್ಟಿ, ಪ್ರೌಢಶಾಲೆ ಮುಖ್ಯಶಿಕ್ಷಕಿ ನಿರ್ಮಲಾ ಬಿ., ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಕುಸುಮಾ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೆಲವು ಶಾಲೆಗಳಲ್ಲಿ ಆರಂಭ: ಕಾರ್ಕಳ, ಹೆಬ್ರಿ ತಾಲೂಕಿನ ಕೆಲವು ಶಾಲೆಗಳಿಗೆ ತೆರಳಿ ಪರಿಶೀಲಿಸಿದ್ದು ಕೆಲವು ಶಾಲೆಗಳಲ್ಲಿ ಬುಧವಾರ ಪ್ರಾರಂಭಗೊಂಡಿದ್ದರೆ, ಇನ್ನು ಕೆಲವು ಶಾಲೆಗಳಲ್ಲಿ ಮುಂದಿನ ದಿನಗಳಲ್ಲಿ ದಿನ ನಿಗದಿಪಡಿಸಿ ನೀಡಲಿದ್ದಾರೆ. –ವೆಂಕಟೇಶ್ ನಾಯಕ್, ಕಾರ್ಕಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.