ನಗರಸಭೆ ವಾರ್ಡ್‌ಗಳ ಹೂಳೆತ್ತುವ ಕಾಮಗಾರಿ ಆರಂಭ
ನಗರದ ಚರಂಡಿ ಹೂಳಿಗೆ ಕೊನೆಗೂ ಮುಕ್ತಿ
Team Udayavani, Jun 12, 2020, 5:30 AM IST
![ನಗರಸಭೆ ವಾರ್ಡ್‌ಗಳ ಹೂಳೆತ್ತುವ ಕಾಮಗಾರಿ ಆರಂಭ](https://www.udayavani.com/wp-content/uploads/2020/06/nagarasabhe-620x431.jpg)
![ನಗರಸಭೆ ವಾರ್ಡ್‌ಗಳ ಹೂಳೆತ್ತುವ ಕಾಮಗಾರಿ ಆರಂಭ](https://www.udayavani.com/wp-content/uploads/2020/06/nagarasabhe-620x431.jpg)
ಉಡುಪಿ: ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಚರಂಡಿ ಹೂಳೆತ್ತುವ ಕಾಮಗಾರಿ ಚುರುಕು ಪಡೆದುಕೊಂಡಿದೆ. ಸುಮಾರು 39 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆಯುವ ಕಾಮಗಾರಿ ನಡೆಯಲಿದೆ.
ನಗರಸಭೆಯ 22 ವಾರ್ಡ್‌ಗಳಲ್ಲಿ 5 ಪ್ಯಾಕೇಜ್‌ಗಳಂತೆ ಹಾಗೂ 13 ವಾರ್ಡ್‌ಗಳಲ್ಲಿ 3 ಪ್ಯಾಕೆಜ್‌ಗಳ ಮೂಲಕ ಚರಂಡಿಗಳ ಹೂಳೆತ್ತುವ ಕಾಮಗಾರಿ ಆರಂಭಗೊಂಡಿದೆ. 23ರಿಂದ 24 ವಾರ್ಡ್‌ಗಳಲ್ಲಿ ಈಗ ಕೆಲಸ ನಡೆಯುತ್ತಿದೆ. ಇನ್ನುಳಿದ ವಾರ್ಡ್‌ಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ಚರಂಡಿಗಳ ಹೂಳು ತೆಗೆಯುವ ಕಾಮಗಾರಿ ನಡೆಯಲಿದೆ. ಪೂರ್ಣ ಪ್ರಮಾಣದ ಮಳೆ ಶುರುವಾಗುವುದರೊಳಗೆ ಎಲ್ಲ ವಾರ್ಡ್‌ಗಳ ಚರಂಡಿಗಳ ಹೂಳೆತ್ತುವ ಕೆಲಸ ಮುಕ್ತಾಯವಾಗಲಿದೆ ಎಂದು ನಗರಸಭೆ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಹೂಳು ತೆಗೆದು ಸ್ವಚ್ಛತೆ
2 ಜೆಸಿಬಿ ಯಂತ್ರ ಹಾಗೂ ಕಾರ್ಮಿಕ ರನ್ನು ಬಳಸಿಕೊಂಡು ಹೂಳು ತೆಗೆಯುವ ಕಾಮಗಾರಿ ಬನ್ನಂಜೆ, ಅಜ್ಜರಕಾಡು ವಾರ್ಡ್‌ಗಳಲ್ಲಿ ಈಗ ನಡೆಯುತ್ತಿದೆ. ನಗರಸಭೆ ಪೌರಾಯುಕ್ತರ ಮಾರ್ಗ ದರ್ಶನ, ಅಧಿಕಾರಿಗಳ ಸಹಕಾರ, ವಾರ್ಡ್ ಸದಸ್ಯರ ಮೇಲುಸ್ತುವಾರಿಯಲ್ಲಿ ಸ್ಥಳೀಯರ ಸಲಹೆ ಸೂಚನೆ ಪಡೆದು ಚರಂಡಿಗಳ ಹುಲ್ಲು ಕತ್ತರಿಸಿ ಹೂಳು ತೆಗೆಯುವ ಕೆಲಸ ನಡೆಯುತ್ತಿದೆ. ಈ ಹಿಂದೆ ನಗರಸಭೆ ವ್ಯಾಪ್ತಿಯ ಇಂದ್ರಾಣಿ ನದಿಯ ಹೂಳನ್ನು 35 ಲಕ್ಷ ರೂ. ವೆಚ್ಚದಲ್ಲಿ ತೆಗೆಯಲಾಗಿತ್ತು.
ಕಾಮಗಾರಿಗೆ ವೇಗ
ಮಳೆಗಾಲಕ್ಕೂ ಮುಂಚಿತ ನಗರ ಸ್ವಚ್ಛ ಗೊಳಿಸಿ, ಸುಸಜ್ಜಿತವಾಗಿಡುವ ಕೆಲಸವನ್ನು ನಗರಸಭೆ ಮರೆತೇ ಬಿಟ್ಟಿದೆ ಎನ್ನುವ ಅಸಮಾಧಾನ ಸಾರ್ವಜನಿಕ ವಲಯದಿಂದ ವ್ಯಕ್ತಗೊಂಡಿತ್ತು. ಇದೀಗ ನಗರಸಭೆ ಅಧಿಕಾರಿಗಳಿಂದ ಚರಂಡಿ ಹೂಳು ತೆಗೆಯುವ ಕಾಮಗಾರಿಗೆ ವೇಗ ದೊರೆತಿದ್ದು, ಪೂರ್ಣ ಮಳೆಗಾಲ ಆರಂಭವಾಗುವ ಮೊದಲು ಕೆಲಸ ಪೂರ್ತಿಗೊಳಿಸುವ ವಿಶ್ವಾಸ ಅವರಲ್ಲಿದೆ.
ಸುದಿನ ಸರಣಿ ವರದಿ ಪ್ರಕಟಿಸಿ ಎಚ್ಚರಿಸಿತ್ತು
ವರ್ಷದಿಂದ ವರ್ಷಕ್ಕೆ ನಗರಗಳ ವಿವಿಧೆಡೆಗಳ ಚರಂಡಿ ಗಾತ್ರ ಕುಗ್ಗುತ್ತಿವೆ. ಇದು ಹೂಳಿನಿಂದ ಮುಚ್ಚಿ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇದರಿಂದ ನಗರ ಸಭೆಯ ವಾರ್ಡ್‌ಗಳ ವಿವಿಧೆಡೆ ಕೃತಕ ನೆರೆಗಳು ಉಂಟಾಗುತ್ತಿತ್ತು. ಈ ಬಾರಿಯೂ ನಗರಸಭೆ ವ್ಯಾಪ್ತಿ ಯಲ್ಲಿ ಈ ಸಮಸ್ಯೆ ಪುನಾರಾವರ್ತನೆಯಾಗುವ ಮುನ್ಸೂಚನೆ ಮಳೆಗಾಲದ ಮುಂಚಿತವಾಗಿ ಸಿಕ್ಕಿತ್ತು. ಈ ಬಗ್ಗೆ ವಾರ್ಡ್‌ಗಳ ನಿವಾಸಿಗಳು ದೂರು ನೀಡಲು ಆರಂಭಿಸಿದ್ದರು. ಇದನ್ನು ಮನಗಂಡ ಉದಯವಾಣಿ ಸುದಿನ ವಾರ್ಡ್ ಸಮಸ್ಯೆಗಳ ಬಗ್ಗೆ ಸರಣಿ ವರದಿ ಪ್ರಕಟಿಸಿತ್ತು. ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ನಡೆಸಿ ವಾರ್ಡ್‌ಗಳ ಚರಂಡಿ ಹೂಳೆತ್ತುವ ಕೆಲಸಕ್ಕೆ ಮುಂದಾಗಿದ್ದಾರೆ.
ಮಡುಗಟ್ಟಿದ ಕೊಳಚೆ ನೀರು
ಮಳೆ ಆರಂಭವಾಗುವ ಮೊದಲು ನಗರದ ಬಹುಪಾಲು ಚರಂಡಿಗಳು ಕೊಳಚೆ ನೀರಿನಿಂದ ಮಡುಗಟ್ಟಿದ್ದವು. ಸೊಳ್ಳೆಗಳ ಕಾಟಕ್ಕೆ ನಾಗರಿಕರು ಸಂಜೆಯಾದರೆ ಮನೆಯ ಬಾಗಿಲು, ಕಿಟಿಕಿಗಳನ್ನು ತೆರೆಯಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿತ್ತು. ಮಳೆ ನೀರಿಗೆ ಸರಾಗ ಹರಿವು ಕಲ್ಪಿಸಿಕೊಡುವ ಕಾರ್ಯದಿಂದ ಸಮಸ್ಯೆ ತಕ್ಕ ಮಟ್ಟಿಗೆ ಸರಿ ಹೋಗುವ ವಾತಾವರಣ ನಿರ್ಮಾಣವಾಗಲಿದೆ.
8 ಪ್ಯಾಕೇಜ್ ಮೂಲಕ ಹೂಳು ಎತ್ತುಗಡೆ
ನಗರಸಭೆ ವ್ಯಾಪ್ತಿಯಲ್ಲಿ ಚರಂಡಿಗಳ ಹೂಳೆತ್ತುವ ಕಾರ್ಯ ಆರಂಭಗೊಂಡಿದೆ. ಟೆಂಡರ್ ಪ್ರಕ್ರಿಯೆ ನಡೆಸಿ, ಆಯಾ ವಾರ್ಡ್‌ಗಳ ಸಮಸ್ಯೆ ಗಂಭೀರತೆ ಅರಿತು, 8 ಪ್ಯಾಕೇಜ್‌ಗಳ ಮೂಲಕ ಹೂಳು ತೆಗೆಯಲಾಗುತ್ತಿದೆ. ಮಳೆಗಾಲ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವುದರೊಳಗೆ ಕೆಲಸ ಅಂತಿಮಗೊಳಿಸುತ್ತೇವೆ.
-ಮೋಹನ್‌ರಾಜ್, ಎಂಜಿನಿಯರ್, ನಗರಸಭೆ ಉಡುಪಿ