ಪೂರ್ಣವಾಗದ ಅನುಮೋದಿತ ಬಿಪಿಎಲ್ ಅರ್ಜಿ ವಿಲೇ!
Team Udayavani, Mar 1, 2023, 7:50 AM IST
ಉಡುಪಿ: ಅರ್ಹ ಫಲಾನುಭವಿಗಳಿಗೆ ಆದ್ಯತ ಪಡಿತರ ಚೀಟಿ (ಬಿಪಿಎಲ್ ಕಾರ್ಡ್) ವಿತರಣೆ ಪ್ರಕ್ರಿಯೆ ಆರಂಭವಾಗಿದ್ದು, ಹೊಸದಾಗಿ 2,921 ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಒದಗಿಸಲಾಗಿದೆ. 1,446 ಕುಟುಂಬಗಳಿಗೆ ಕಾರ್ಡ್ ನೀಡಲು ಬಾಕಿಯಿದೆ.
ಉಡುಪಿ ಜಿಲ್ಲೆಯ 7 ತಾಲೂಕುಗಳಿಂದ ಹೊಸದಾಗಿ ಬಿಪಿಎಲ್ ಕಾರ್ಡ್‌ಗಳಿಗೆ 11,151 ಕುಟುಂಬಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಅದರಲ್ಲಿ 10,465 ಕುಟುಂಬ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹವಿದೆ ಎಂಬುದನ್ನು ಪರಿಶೀಲನೆ ವೇಳೆ ಖಾತರಿಪಡಿಸಲಾಗಿತ್ತು. ಆದರೆ ಇದರಲ್ಲಿ 4,367 ಕುಟುಂಬಗಳಿಗೆ ಮಾತ್ರ ಕಾರ್ಡ್ ಹಂಚಿಕೆಗೆ ಸರಕಾರ ಅನುಮೋದನೆ ನೀಡಿದೆ. 6,098 ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಲು ಸರಕಾರ ಇನ್ನೂ ಆದೇಶ ನೀಡಿಲ್ಲ. ಸರಕಾರ ಒಪ್ಪಿಗೆ ಸೂಚಿಸಿರುವ 4,367 ಕುಟುಂಬಗಳಲ್ಲಿ 1,446 ಕುಟುಂಬಗಳಿಗೆ ಇನ್ನೂ ಕಾರ್ಡ್ ಹಂಚಿಕೆ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ.
ದ.ಕ. ಜಿಲ್ಲೆಯ 9 ಕಂದಾಯ ತಾಲೂಕುಗಳಿಂದ 15,464 ಅರ್ಜಿ ಬಂದಿದ್ದು, 14,739 ಖಾತರಿಪಡಿಸಿ, 725 ತಿರಸ್ಕರಿಸಲಾಗಿದೆ. ಈವರೆಗೆ 9,979 ಕುಟುಂಬಗಳಿಗೆ ಕಾರ್ಡ್ ವಿತರಿಸಲಾಗಿದ್ದು, 4,760 ಹಂಚಿಕೆಗೆ ಬಾಕಿಯಿದೆ.
ನಿಯಮ
ಒಂದು ಜಿಲ್ಲೆಯಲ್ಲಿ ನಿರ್ದಿಷ್ಟ ಪ್ರಮಾಣದಷ್ಟು ಬಿಪಿಎಲ್ ಕಾರ್ಡ್ ಮಾತ್ರ ಇರಬೇಕು ಎಂಬ ನಿಯಮವಿದೆ. ಶೇ. 100ರಷ್ಟು ಜನಸಂಖ್ಯೆಯಲ್ಲಿ ಎಲ್ಲರಿಗೂ ಬಿಪಿಎಲ್ ಕಾರ್ಡ್ ನೀಡಲು ಸಾಧ್ಯವಿಲ್ಲ. ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಿದವರಲ್ಲಿ ಎಲ್ಲರೂ ಅರ್ಹರಿದ್ದರೂ ನಿರ್ದಿಷ್ಟ ಪ್ರಮಾಣ ಮೀರದಂತೆ ಅದರಲ್ಲಿ ಹಂತಹಂತವಾಗಿ ವಿತರಣೆ ಮಾಡಲಾಗುತ್ತದೆ. ಹೀಗಾಗಿ ಉಭಯ ಜಿಲ್ಲೆಯಲ್ಲಿ 25,104 ಕುಟುಂಬಗಳು ಅರ್ಹವಿದ್ದರೂ 14,346 ಕುಟುಂಬಗಳಿಗೆ ಮಾತ್ರ ವಿತರಣೆಗೆ ಸರಕಾರ ಅನುಮೋದನೆ ನೀಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ರಾತ್ರಿ ಪಾಳಿ ಇದ್ದಂತೆ
ಬಿಪಿಎಲ್ ಕಾರ್ಡ್ ಕೋರಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಅದನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಜಿಲ್ಲೆಯಿಂದ ರಾಜ್ಯಕ್ಕೆ ಕಳುಹಿಸಿ, ರಾಜ್ಯದಿಂದ ಅನುಮೋದನೆ ಪಡೆದು ಹಂಚಿಕೆ ಮಾಡಲಾಗುತ್ತದೆ. ಹಂಚಿಕೆ ಮಾಡುವ ಪ್ರಕ್ರಿಯೆಯು ಆಹಾರ ನಿರೀಕ್ಷಕರ ಮೂಲಕ ಮಾಡಲಾಗುತ್ತದೆ. ಆನ್‌ಲೈನ್ ಮೂಲಕವೇ ಪ್ರಕ್ರಿಯೆ ನಡೆಯುವುದರಿಂದ ಇದರ ಲಿಂಕ್ ತೆರೆದುಕೊಳ್ಳುವುದೇ ಸಂಜೆ 5ರ ಅನಂತರ ಮತ್ತು ರಾತ್ರಿ 8ಕ್ಕೆ ಕ್ಲೋಸ್ ಆಗುತ್ತದೆ. ಈ ಅವಧಿಯೊಳಗೆ ಆಹಾರ ನಿರೀಕ್ಷಕರು ಲಾಗಿನ್ ಆಗಿ ಅನುಮೋದನೆ ನೀಡಬೇಕು. ಇದೊಂದು ರೀತಿಯಲ್ಲಿ ರಾತ್ರಿ ಪಾಳಿಯಿದ್ದಂತೆ ಎಂದು ಆಹಾರ ನಿರೀಕ್ಷಕರು ಹೇಳುತ್ತಿದ್ದಾರೆ.
15 ದಿನ ಮಾತ್ರ ಅವಕಾಶ
ಅನುಮೋದಿತ ಅರ್ಜಿಗಳನ್ನು ಅಂಗೀಕರಿಸಿಲು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಇಲಾಖೆಯಿಂದ ತಿಂಗಳು ಪೂರ್ತಿ ಅವಕಾಶ ನೀಡುವುದಿಲ್ಲ. ಬದಲಾಗಿ ಪ್ರತೀ ತಿಂಗಳ ಅಥವಾ ಎರಡು ಮೂರು ತಿಂಗಳಿಗೆ ಒಮ್ಮೆ 15 ದಿನಗಳ ಅವಕಾಶ ಮಾತ್ರ ನೀಡಲಾಗುತ್ತದೆ. ಈ ಅವಧಿಯಲ್ಲೇ ಅನುಮೋದನೆಯನ್ನು ಆಹಾರ ನಿರೀಕ್ಷಕರು ನೀಡಬೇಕಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸಮಯ ನೀಡುವುದಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.