Udupi ಪ್ರಮುಖ ಭಾಗದಲ್ಲಿ ಸಿಸಿ ಕೆಮರಾ ಮರೀಚಿಕೆ
ಕಾನೂನು ಸುವ್ಯವಸ್ಥೆ: ನಗರಕ್ಕೆ ಅವಶ್ಯಕವಾಗಿ ಬೇಕಿದೆ ಕಣ್ಗಾವಲು
Team Udayavani, Nov 28, 2023, 7:20 AM IST
ಉಡುಪಿ: ಇತ್ತೀಚೆಗೆ ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣ ಸಹಿತ ನಗರದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳನ್ನು ಸುಲಭದಲ್ಲಿ ಪತ್ತೆ ಹಚ್ಚಲು ಸೂಕ್ತ ಸಿಸಿ ಟಿವಿ ಕೆಮರಾಗಳು ಲಭ್ಯವಿಲ್ಲದಿರುವುದು ಆರೋಪಿಗಳ ಪತ್ತೆ ಕಾರ್ಯ ವಿಳಂಬವಾಗಲು ಕಾರಣವಾಗುತ್ತಿದೆ. ಇದನ್ನು ತಡೆಯಲು ನಗರ ವ್ಯಾಪ್ತಿಯಲ್ಲಿ ಸಿಸಿ ಕೆಮರಾ ಕಣ್ಗಾವಲು ಅಗತ್ಯವಿದೆ.
ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯು ಪ್ರಮುಖ ನಗರವಾಗಿ ಬೆಳೆಯುತ್ತಿದೆ. ಈ ಹಿಂದೆ ಉಡುಪಿ ನಗರಾದ್ಯಂತ 90 ಸಿಸಿ ಟಿವಿಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ಬಹುತೇಕ ಹೆಚ್ಚಿನ ಕೆಮರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಸಣ್ಣ ನಗರವಾದರೂ ಜನದಟ್ಟನೆ, ವಾಹನದಟ್ಟನೆ ಅತ್ಯಧಿಕವಾಗಿ ಕಂಡುಬರುತ್ತಿದ್ದು, ಈ ನಡುವೆ ಅಲ್ಲಲ್ಲಿ ಅಪಘಾತ, ಕಳ್ಳತನ ಸಹಿತ ಸಂಜೆಯ ಬಳಿಕ ಮಟ್ಕಾ, ಗಾಂಜಾದಂತಹ ಚಟುವಟಿಕೆಗಳೂ ವ್ಯಾಪಕವಾಗಿ ನಡೆಯುತ್ತಿದೆ. ಈ ಎಲ್ಲದರ ಬಗ್ಗೆ ಪೊಲೀಸರು ಕಣ್ಗಾವಲು ಇರಿಸುವುದು ಕಷ್ಟಸಾಧ್ಯವಾದರೂ ಸಿಸಿಟಿವಿಗಳ ಆಧಾರದಲ್ಲಿ ಪತ್ತೆಹಚ್ಚಲು ಸಾಧ್ಯವಿದೆ.
ಖಾಸಗಿಯವರ ಅವಲಂಬನೆ
ನಗರದಲ್ಲಿ ಯಾವುದಾದರೂ ಘಟನೆಗಳು ನಡೆದರೆ ಪೊಲೀಸರು ಸ್ಥಳೀಯ ಅಂಗಡಿ, ಹೊಟೇಲ್, ಶಾಪ್‌ಗಳಲ್ಲಿ ಅಳವಡಿಸಿರುವ ಸಿಸಿ ಕೆಮರಾಗಳಲ್ಲಿರುವ ದಾಖಲೆಗಳನ್ನು ಪರಿಶೀಲನೆ ನಡೆಸುವ ಅಗತ್ಯ ಎದುರಾಗುತ್ತಿದೆ. ಇದು ಅಗತ್ಯವಾದರೂ ಇಲಾಖೆಯೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ ಆಯಾಕಟ್ಟಿನ ಜಾಗದಲ್ಲಿ ಸಿಸಿಟಿವಿ ಅಳವಡಿಕೆ ಮಾಡಿದರೆ ತನಿಖೆ ನಡೆಸಲೂ ಪೊಲೀಸರಿಗೆ ಸುಲಭವಾಗಲಿದೆ.
ಯಾವ ಭಾಗದಲ್ಲಿ ಅಗತ್ಯ
ಕಿನ್ನಿಮೂಲ್ಕಿ ಜಂಕ್ಷನ್, ಸಂತೆಕಟ್ಟೆ, ಕಡಿಯಾಳಿ, ಕಲ್ಸಂಕ, ಸಿಟಿ ಬಸ್ ತಂಗುದಾಣ, ಸರ್ವಿಸ್ ಬಸ್ ತಂಗುದಾಣ, ಬನ್ನಂಜೆ ಸರ್ಕಲ್, ಕರಾವಳಿ ಬೈಪಾಸ್, ಬ್ರಹ್ಮಗಿರಿ, ಅಂಬಲಪಾಡಿ, ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ, ಅಂಬಾಗಿಲು ಜಂಕ್ಷನ್, ಸಿಂಡಿಕೇಟ್ ಸರ್ಕಲ್, ಕಾಯಿನ್ ಸರ್ಕಲ್, ಪೆರಂಪಳ್ಳಿ ಸಹಿತ ಇನ್ನಿತರ ಕೆಲವು ಭಾಗದಲ್ಲಿ ಅತ್ಯಾಧುನಿಕ ಸಿಸಿ ಟಿವಿಗಳನ್ನು ಇಲಾಖೆಯ ಮೂಲಕ ಅಳವಡಿಸುವುದು ಅತೀ ಅಗತ್ಯವಾಗಿದೆ. ಕೆಲವೆಡೆ ಸಿಸಿ ಟಿವಿಗಳು ಇವೆಯಾದರೂ ಕಾರ್ಯಾಚರಣೆ ಸ್ಥಗಿತಗೊಳಿಸಿವೆ.
ಸಿಎಸ್‌ಆರ್ ಅನುದಾನ ಬಳಕೆಯಾಗಲಿ
ಜನಪ್ರತಿನಿಧಿಗಳ ಸಹಕಾರ ಮತ್ತು ಸಿಎಸ್‌ಆರ್ ಅನುದಾನ ಬಳಕೆ ಮಾಡಿ ನಗರದಲ್ಲಿ ಸಿಸಿ ಕೆಮರಾ ಅಳವಡಿಕೆ ಮಾಡಬಹುದು. ಇದರಿಂದ ನಗರ ಪ್ರವೇಶ ಮತ್ತು ನಿರ್ಗಮನ ಪ್ರದೇಶ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಯಾರು ಬರುತ್ತಾರೆ ಮತ್ತು ಹೋಗುತ್ತಾರೆ ಎಂಬ ಮಾಹಿತಿಯನ್ನು ಸುಲಭದಲ್ಲಿ ತಿಳಿಯಲು ಸಾಧ್ಯವಾಗುತ್ತದೆ. ಈಗಾಗಲೇ ಸಿಸಿಟಿವಿ ಇರುವೆಡೆ ಹೊರತುಪಡಿಸಿ ಉಳಿದ ಭಾಗದಲ್ಲಿ ಅಳವಡಿಸಬೇಕು. ನಗರಸಭೆ ಸಹಿತ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ತುರ್ತು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಪರಾಧಗಳ ಬಗ್ಗೆ ಮಾಹಿತಿ ಕಲೆಹಾಕಲು ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಆಯಾಕಟ್ಟಿನ 15 ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಉದ್ದೇಶಿಸಲಾಗಿದ್ದು, ಶೀಘ್ರವಾಗಿ ಸಂಬಂಧಪಟ್ಟವರಿಗೆ ಪ್ರಸ್ತಾವನೆ ಕಳುಹಿಸಲಾಗುವುದು. 15 ಜಂಕ್ಷನ್‌ಗಳಲ್ಲಿ ಒಂದೊಂದರಲ್ಲಿ 3-4 ಕೆಮರಾಗಳನ್ನು ಅಳವಡಿಸಲಾಗುವುದು. ಮೊದಲ ಆದ್ಯತೆಯಾಗಿ ಉಡುಪಿ ನಗರಕ್ಕೆ ಕೆಮರಾಗಳನ್ನು ಅಳವಡಿಸಿ, ಮುಂದೆ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಅಳವಡಿಸಲಾಗುವುದು. ಇದಕ್ಕೆ ಬೇಕಾದ ಪ್ರಸ್ತಾವವನ್ನು ಸಿದ್ಧಪಡಿಸಲಾಗುವುದು.
– – ಡಾ| ಅರುಣ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
– ಪುನೀತ್ ಸಾಲ್ಯಾನ್ ಸಸಿಹಿತ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.