ಚಿಕಿತ್ಸೆ ಮೊಟಕುಗೊಳಿಸಿ ವಾಪಸಾದ ಸಿಎಂ
Team Udayavani, Apr 24, 2019, 6:10 AM IST
ಕಾಪು: ಮೂಳೂರಿನ ಸಾಯಿರಾಧಾ ಹೆರಿಟೇಜ್‌ನಲ್ಲಿ ಪ್ರಕೃತಿ ಮತ್ತು ಆಯುರ್ವೇದ ಚಿಕಿತ್ಸೆ ಪಡೆ ಯಲು ರವಿವಾರ ಆಗಮಿಸಿದ್ದ ಸಿಎಂ ಕುಮಾರಸ್ವಾಮಿ ಚಿಕಿತ್ಸೆ ಮೊಟಕು ಗೊಳಿಸಿ ಮಂಗಳವಾರ ಬೆಂಗಳೂರಿಗೆ ವಾಪಸಾಗಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಐವರು ಜೆಡಿಎಸ್ ಮುಖಂಡರ ಸಹಿತ ಏಳು ಮಂದಿ ಕನ್ನಡಿಗರು ಮೃತಪಟ್ಟಿರುವುದು ಸಿಎಂ ಅವರ ಈ ನಿರ್ಧಾರಕ್ಕೆ ಕಾರಣ.
ಮಂಗಳವಾರ ಬೆಳಗ್ಗೆ ಉಡುಪಿ ಸಾಯಿರಾಧಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ್ ಶೆಟ್ಟಿ ಅವರ ಕಾಪುವಿನ ಮನೆಯಲ್ಲಿ ಉಪಾಹಾರ ಸ್ವೀಕರಿಸಿದ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದ ಸಿಎಂ ರಾಜಧಾನಿಗೆ ಮರಳುವ ವಿಚಾರವನ್ನು ಬಹಿರಂಗಗೊಳಿಸಿದರು.
ಶ್ರೀಲಂಕಾ ಘಟನೆ ಖಂಡನೀಯ. ಏಳು ಮಂದಿ ಕನ್ನಡಿಗರು ಮೃತಪಟ್ಟಿ ರುವುದು ನೋವನ್ನುಂಟು ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ನಾನು ರಾಜಧಾನಿಯಿಂದ ಹೊರಗಿರುವುದು ಸರಿಯಲ್ಲ. ಇದರಿಂದ ರಾಜ್ಯದ ಜನತೆಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದವರು ಸ್ಪಷ್ಟಪಡಿಸಿದರು.
ಪಕ್ಷಕ್ಕೆ ಹಿನ್ನಡೆ
ದುರ್ಘಟನೆಯಲ್ಲಿ ಐವರು ಜೆಡಿಎಸ್ ಮುಖಂಡರು ಮೃತಪಟ್ಟಿದ್ದಾರೆ. ಅವರು ಪಕ್ಷಕ್ಕೆ ವಿಶೇಷ ಬಲ ತುಂಬಿದ್ದರು ಮತ್ತು ವೈಯಕ್ತಿಕವಾಗಿ ನನಗೂ ಆತ್ಮೀಯರಾಗಿದ್ದರು. ಅವರು ಮೃತಪಟ್ಟಿರುವುದು ಬೆಂಗಳೂರು ಭಾಗದಲ್ಲಿ ಪಕ್ಷದ ಹಿನ್ನಡೆಗೆ ಕಾರಣವಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ದೂತಾವಾಸ ಸಂಪರ್ಕ
ರಾಜ್ಯ ಮುಖ್ಯ ಕಾರ್ಯದರ್ಶಿಯವರ ಮೂಲಕ ಶ್ರೀಲಂಕಾದ ಭಾರತೀಯ ದೂತಾವಾಸ ಅಧಿಕಾರಿಗಳು ಮತ್ತು ಶ್ರೀಲಂಕಾ ಸಚಿವಾಲಯದೊಂದಿಗೆ ಸಂಪರ್ಕ ಸಾಧಿಸಲಾಗಿದೆ. ನೆಲ ಮಂಗಲ ಶಾಸಕ ಡಾ| ಶ್ರೀನಿವಾಸ ಮೂರ್ತಿ, ಮಾಜಿ ಶಾಸಕ ಕೃಷ್ಣಪ್ಪ ಅವರಿಗೆ ಮೃತದೇಹಗಳನ್ನು ತರುವ ಜವಾಬ್ದಾರಿ ವಹಿಸಲಾಗಿದೆ. ಶ್ರೀಲಂಕಾ ದಲ್ಲಿರುವ ಕನ್ನಡಿಗ ಅಧಿಕಾರಿ ಮಂಜು ನಾಥ್ ಅವರೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.
ಖಾಸಗಿ ಏರ್ ಕಾರ್ಗೊ ಅವಲಂಬನೆ
ಕನ್ನಡಿಗರ ಮೃತದೇಹಗಳನ್ನು ತರುವಲ್ಲಿ ವಿಳಂಬ ತಪ್ಪಿಸಲು ಖಾಸಗಿ ಏರ್ ಕಾರ್ಗೊ ವ್ಯವಸ್ಥೆ ಮಾಡಲಾಗುತ್ತಿದೆ. ನಮ್ಮವರ ಮೃತದೇಹಗಳ ಗುರುತು ಪತ್ತೆಯಾಗಿದೆ. ಮರಣೋತ್ತರ ಪ್ರಕ್ರಿಯೆ ನಡೆಸಿ 24 ತಾಸುಗಳ ಒಳಗೆ ತರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ ಎಂದರು.
ಮತ್ತೆ ಬರಲಿದ್ದೇನೆ
ಕರ್ತವ್ಯ ಪ್ರಜ್ಞೆಯಿಂದ ರಾಜಧಾನಿಗೆ ವಾಪಸಾಗುತ್ತಿದ್ದೇನೆ. ತಜ್ಞ ವೈದ್ಯರ ಸಲಹೆ ಪಡೆದು ಎ. 27ರ ಬಳಿಕ ಮತ್ತೆ ಮೂಳೂರಿಗೆ ಬರುವುದಾಗಿ ಸಿಎಂ ತಿಳಿಸಿದರು.
ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಶಾಸಕರಾದ ಶಿವಲಿಂಗೇ ಗೌಡ, ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿ ಗೌಡ, ಭೋಜೇ ಗೌಡ, ಚೌಡ ರೆಡ್ಡಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿಗಳಾದ ಮನೋಹರ್ ಶೆಟ್ಟಿ ಕಾಪು, ಕೆ. ವಾಸುದೇವ ಶೆಟ್ಟಿ, ಗೌರವ್ ಶೇಣವ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕಾರ್ಯಾಧ್ಯಕ್ಷ ವಾಸುದೇವ ರಾವ್, ಕಾರ್ಯದರ್ಶಿ ಜಯರಾಮ ಆಚಾರ್ಯ ಉಪಸ್ಥಿತರಿದ್ದರು.
ಹೈರಾಣಾದ ಪೊಲೀಸರು!
ಉಪ್ಪಿನಂಗಡಿ: ಮುಖ್ಯಮಂತ್ರಿ ಕುಮಾರಸ್ವಾಮಿ ಕಾಪುವಿನಿಂದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ತೆರಳುವ ಸಂದರ್ಭ ಸುಗಮ ಸಂಚಾರಕ್ಕಾಗಿ ಅಲ್ಲಲ್ಲಿ ನಿಯೋಜಿತರಾಗಿದ್ದ ಪೊಲೀಸರು ಬಿರು ಬಿಸಿಲಿನಲ್ಲಿ ಹೈರಾಣಾದರು. ಮಂಗಳವಾರ ಬೆಳಗ್ಗೆ ಏಳು ಗಂಟೆಗೆ ಸಿಎಂ ಕಾಪುವಿನಿಂದ ಹೊರಡಲಿದ್ದು, ಉಪ್ಪಿನಂಗಡಿ ಮೂಲಕ ತೆರಳಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಹೆದ್ದಾರಿಯುದ್ದಕ್ಕೆ ಪೊಲೀಸರು ಅಲರ್ಟ್ ಆಗಿ ನಿಂತಿದ್ದರು. ಆದರೆ ಸಿಎಂ ಹೊರಟದ್ದು 12.15ಕ್ಕೆ. ಸಿಎಂ ಮತ್ತವರ ಬೆಂಗಾವಲು ವಾಹನಗಳು ಶಿರಾಡಿ ಮೂಲಕ ದ.ಕ. ಜಿಲ್ಲಾ ವ್ಯಾಪ್ತಿ ದಾಟುವಾಗ ಮಧ್ಯಾಹ್ನ 1.40 ಆಗಿತ್ತು. ಪೊಲೀಸರು ಮಾತ್ರ ಬೆಳಗ್ಗಿನಿಂದಲೇ ಉರಿ ಬಿಸಿಲಿನಲ್ಲಿ ಬೆಂದು ಹೈರಾಣಾಗಿದ್ದರು.
ಮರಳಿನಲ್ಲಿ ಹೂತುಹೋದ ಸಿಎಂ ಕಾರು
ಮೂಳೂರು ಸಾಯಿರಾಧಾ ಹೆರಿಟೇಜ್‌ನಿಂದ ಮನೋಹರ್ ಶೆಟ್ಟಿಯವರ ಮನೆಗೆ ಉಪಾಹಾರಕ್ಕೆ ಬರಲು ಸಿದ್ಧತೆ ನಡೆಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪ್ರವಾಸ ಕಾರು ಚಾಲಕನ ನಿರ್ಲಕ್ಷ್ಯದಿಂದ ಅರ್ಧ ತಾಸು ವಿಳಂಬವಾಯಿತು. ಸ್ಥಳೀಯ ಪೊಲೀಸರ ಮಾತು ಕೇಳದ ಚಾಲಕ ಕಾರನ್ನು ಮರಳಿನ ಮೇಲೆ ಚಲಾಯಿಸಿಕೊಂಡು ಬಂದ ಪರಿಣಾಮ ಗಾಲಿಗಳು ಹೂತುಹೋದವು. ಬಳಿಕ ಕ್ರೇನ್ ಮೂಲಕ ಕಾರನ್ನು ಎಳೆಯಲಾಯಿತು. ಬಳಿಕ ಕಾಪುವಿಗೆ ಬಂದು ಉಪಾಹಾರ ಸೇವಿಸಿದ ಸಿಎಂ, ಮಾಧ್ಯಮದವರೊಂದಿಗೆ ಮಾತನಾಡಿ ಬಳಿಕ ರಸ್ತೆ ಮೂಲಕ ಬೆಂಗಳೂರಿಗೆ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.