ಕರಾವಳಿ ಅಪರಾಧ ಸುದ್ದಿಗಳು
Team Udayavani, Apr 15, 2017, 2:13 PM IST
ಕೊಣಾಜೆ: ವಿದ್ಯುತ್ ಆಘಾತ: ಓರ್ವ ಸಾವು
ಉಳ್ಳಾಲ: ಬೋರ್‌ವೆಲ್‌ನ ಹಾಳಾಗಿದ್ದ ಪಂಪ್ ರಿಪೇರಿಗೆಂದು ಬೋರ್‌ವೆಲ್‌ಗೆ ಅಳವಡಿಸಿದ್ದ ಪೈಪ್ ಹೊರ ತೆಗೆಯುತ್ತಿದ್ದಾಗ ಹೈಟೆನ್ಶನ್ ವಯರ್‌ಗೆ ತಗಲಿ ಕಾಮಗಾರಿ ನಡೆಸುತ್ತಿದ್ದ ಕೊಣಾಜೆ ನಿವಾಸಿ ಉಸ್ಮಾನ್ (20) ಮೃತಪಟ್ಟಿದ್ದು, ಇನ್ನೊರ್ವ ಗಾಯಗೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.
ಕೋಟೆಕಾರು ಪಟ್ಟಣ ಪಂಚಾಯತ್‌ಗೆ ಸೇರಿದ ಬೋರ್‌ವೆಲ್‌ನ ಪಂಪ್ ಹಾಳಾಗಿದ್ದು, ರಿಪೇರಿಗೆ ಖಲೀಲ್ ಅವರಿಗೆ ಗುತ್ತಿಗೆ ನೀಡಲಾಗಿತ್ತು.
ಖಲೀಲ್‌ರೊಂದಿಗೆ ಉಸ್ಮಾನ್ ಹಾಗೂ ಶರೀಫ್ ಸಹಿತ ಆರು ಜನರು ಕೆಲಸ ನಿರ್ವಹಿಸುತ್ತಿದ್ದರು.ಪಂಪ್ ರಿಪೇರಿ ಸಂದರ್ಭದಲ್ಲಿ ನಾಲ್ಕು ಪೈಪ್‌ಗ್ಳನ್ನು ಮೇಲಕೆತ್ತಿದ್ದ ಕೆಲಸಗಾರರು 5ನೇ ಪೈಪನ್ನು ಮೇಲಕ್ಕೆತ್ತುವಾಗ ಬೋರ್‌ವೆಲ್ ಬದಿಯಲ್ಲಿ ಹಾದು ಹೋಗಿದ್ದ ಹೈಟೆನ್ಶನ್ ವಯರ್‌ಗೆ ತಾಗಿದ್ದು, ಉಸ್ಮಾನ್ ಸ್ಥಳದಲ್ಲೇ ಸಾವನ್ನಪ್ಪಿದರು. ಶರೀಫ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಕೊಣಾಜೆ ಹಸೈನಾರ್ ಅವರ ಏಕೈಕ ಪುತ್ರನಾಗಿರುವ ಉಸ್ಮಾನ್ 9ನೇ ತರಗತಿ ಮುಗಿಸಿ ಕೂಲಿ ಕೆಲಸ ಮಾಡುತ್ತಿದ್ದರು. ಶ್ರಮ ಜೀವಿಯಾಗಿದ್ದ ಉಸ್ಮಾನ್ ಅವರು ಉತ್ತಮ ಕ್ರೀಡಾಪಟುವಾಗಿದ್ದರು ಎನ್ನಲಾಗಿದೆ. ಅವರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಮಂಗಳೂರು: ಮಹಿಳೆಯೊಬ್ಬರು ತನ್ನ ತಂಗಿಯ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಭವಿಸಿದೆ.
ಆಕಾಶಭವನದ ಮೇರಿ ಕ್ವಾಡ್ರಸ್ (50) ಆತ್ಮಹತ್ಯೆ ಮಾಡಿಕೊಂಡವರು. ಅವರು ಗುರುವಾರ ಸಂಜೆ ಆಕಾಶಭವನದಲ್ಲಿರುವ ತಂಗಿಯ ಮನೆಗೆ ಹೋಗಿದ್ದರು. ಬಳಿಕ ಮನೆಯ ಆವರಣದಲ್ಲಿದ್ದ ಬಾವಿಗೆ ಹಾರಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೇರಿ ಕ್ವಾಡ್ರಸ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಮಾರಾಟ : ಇಬ್ಬರ ಸೆರೆ
ಮಂಗಳೂರು: ನಗರದ ಕೊಟ್ಟಾರ ಬಳಿ ಸ್ಕೂಟರ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಕಾವೂರು ಪೊಲೀಸರು 150 ಗ್ರಾಂ ಗಾಂಜಾ ಹಾಗೂ 1,000 ರೂ. ನಗದು ವಶಪಡಿಸಿಕೊಂಡಿದ್ದಾರೆ. ಕೌಶಿಕ್ (23) ಹಾಗೂ ರವಿಕಿರಣ್ ಆಚಾರ್ಯ (26) ಬಂಧಿತ ಆರೋಪಿಗಳು.
ಸ್ಕೂಟರ್‌ನಲ್ಲಿ ಗಾಂಜಾ ಮಾರಾಟಕ್ಕೆ ಕುಳಿತುಕೊಂಡಿದ್ದಾಗ ಖಚಿತ ಮಾಹಿತಿಯನ್ವಯ ಕಾವೂರು ಪೊಲೀಸ್ ನಿರೀಕ್ಷಕರು ಸಿಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಗಾಂಜಾ, ನಗದು, ಸ್ಕೂಟರ್ ಹಾಗೂ 2 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು: ಯುವತಿಯರ ವ್ಯಾನಿಟಿ ಬ್ಯಾಗ್ ಕಸಿದ ಕಳ್ಳರು
ಮಂಗಳೂರು: ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಯುವತಿಯರ ಕೈಯಿಂದ ಬೈಕ್‌ನಲ್ಲಿ ಬಂದ ಮೂವರು ವ್ಯಾನಿಟಿ ಬ್ಯಾಗನ್ನು ಕಸಿದು ಪರಾರಿಯಾದ ಘಟನೆ ಯೆಯ್ನಾಡಿ ಕಟ್ಟೆ ಬಳಿ ಗುರುವಾರ ಸಂಭವಿಸಿದೆ.
ಯುವತಿಯರಿಬ್ಬರು ರಾತ್ರಿ 8.15ರ ವೇಳೆ ಸ್ಕೂಟರಿನಲ್ಲಿ ಕೆಪಿಟಿಯಿಂದ ಯೆಯ್ನಾಡಿ ಕಡೆಗೆ ಸಾಗುತ್ತಿದ್ದರು. ಈ ಸಂದರ್ಭ ಬೈಕೊಂದರಲ್ಲಿ ಬಂದ ಮೂವರು ಯುವಕರು ಸ್ಕೂಟರ್ ಸೀಟ್‌ನ ಮಧ್ಯಭಾಗದಲ್ಲಿ ಇರಿಸಲಾಗಿದ್ದ ವ್ಯಾನಿಟಿ ಬ್ಯಾಗನ್ನು ಎಳೆದು ಪರಾರಿಯಾಗಿದ್ಧಾರೆ. ಬ್ಯಾಗ್‌ನಲ್ಲಿ ಮೊಬೈಲ್, ಎಟಿಎಂ ಕಾರ್ಡ್ ಹಾಗೂ ನಗದು ಹಣವಿತ್ತು ಎಂದೆನ್ನಲಾಗಿದ್ದು, ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಕ್ಷಾಕ್ಕೆ ಕಾರು ಢಿಕ್ಕಿ: ಇಬ್ಬರಿಗೆ ಗಾಯ
ಮಂಗಳೂರು: ರಿಕ್ಷಾವೊಂದಕ್ಕೆ ಕಾರು ಢಿಕ್ಕಿ ಯಾದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಪದವು ಗ್ರಾಮದ ದತ್ತನಗರದಲ್ಲಿ ಸಂಭವಿಸಿದೆ. ಸುಕುಮಾರ್ ಮತ್ತು ಪರಮೇಶ್ವರ್ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಎ.13ರಂದು ಸುಕುಮಾರ್ ಅವರು ಪರಮೇಶ್ವರ್‌ರೊಂದಿಗೆ ಬಿಜೈಗೆ ರಿಕ್ಷಾದಲ್ಲಿ ಹೋಗುತ್ತಿರುವಾಗ ದತ್ತ ನಗರ ಸಮೀಪ ಕಾರು ಢಿಕ್ಕಿ ಯಾದ ಪರಿಣಾಮ ರಿಕ್ಷಾಕ್ಕೆ ಹಾನಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರತ್ಕಲ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಯುವಕ ನಾಪತ್ತೆ
ಮಂಗಳೂರು: ಸೈಟ್ ಮಾರಾಟ ವಿಚಾರದಲ್ಲಿ ತಂದೆಯೊಂದಿಗೆ ಜಗಳವಾಡಿ ಪುತ್ರ ಕೆ.ಬಿ.ಸನತ್ ಕುಮಾರ್ (21) ಮನೆಬಿಟ್ಟು ಹೋಗಿರುವ ಘಟನೆ ನಗರದ ಚಿಲಿಂಬಿಯಲ್ಲಿ ನಡೆದಿದೆ.
ಚಿಕ್ಕಮಗಳೂರಿನಲ್ಲಿರುವ ಸೈಟ್ ಮಾರಾಟ ಕುರಿತಂತೆ ತಂದೆ ಜತೆ ಜಗಳ ಮಾಡಿಕೊಂಡು ಮಾ.25ರಂದು ಸಂಜೆ 6.45ಕ್ಕೆ ಮನೆಯಿಂದ ಹೊರಗೆ ಹೋಗಿದ್ದು ಬಳಿಕ ಮನೆಗೆ ವಾಪಸು ಬಂದಿಲ್ಲ. ಅವರ ಬಗ್ಗೆ ಸ್ವಂತ ಊರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮುಂತಾದ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಸುಮಾರು 5 ಅಡಿ ಎತ್ತರವಿದ್ದು ಗೋದಿ ಮೈಬಣ್ಣ , ಗುಂಗುರ ಕೂದಲು ಹೊಂದಿದ್ದಾರೆ. ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಹಳದಿ ಬಣ್ಣದ ಶರ್ಟ್ ಧರಿಸಿದ್ದಾರೆ. ಇವರು ಪತ್ತೆಯಾದಲ್ಲಿ ಉರ್ವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಠಾಣಾಧಿಕಾರಿಯವರು ಪ್ರಕಟನೆಯಲ್ಲಿ ಕೋರಿದ್ದಾರೆ.
ಪುತ್ರನ ಜತೆಗೂಡಿ ತೆರಳಿದ ಮಹಿಳೆ ನಾಪತ್ತೆ
ವಿಟ್ಲ: ಅಕ್ಕನ ಮನೆಗೆ ಹೋಗುತ್ತೇನೆ ಎಂದು ಹೇಳಿ ಪುತ್ರನೊಂದಿಗೆ ಹೊರಟ ಮಹಿಳೆ ನಾಪತ್ತೆ ಯಾಗಿದ್ದಾರೆ ಎಂದು ಪತಿ ಶುಕ್ರವಾರ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಇಡಿRದು ಸೂರ್ಯ ನಿವಾಸಿ ಚಿತ್ರಾ(29), ಜೀವಿತ್ ಕುಮಾರ್ (8) ನಾಪತ್ತೆಯಾದವರು. ಎ.11ರಂದು ಸಂಜೆ 4 ಗಂಟೆಗೆ ಪುತ್ರ ಜೀವಿತ್‌ನ ಜತೆಗೆ ಆಕೆ ಹೊರಟಿದ್ದಾರೆ. ಅಕ್ಕನ ಮನೆಗೂ ಹೋಗದೆ ಬಂಧುಗಳ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆಂದು ಪತಿ ನವೀನ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ನಿಟ್ಟೂರು: ನಿಲ್ಲಿಸಿದ್ದ ಲಾರಿಯಿಂದ
4.78 ಲ.ರೂ. ಮೌಲ್ಯದ ಟಯರ್ ಕಳಧಿವು
ಉಡುಪಿ: ಗೋವಾದಿಂದ ಮಂಗಳೂರಿಗೆ ಟಯರ್‌ಗಳನ್ನು ಒಯ್ಯುತ್ತಿದ್ದ ಕಂಟೈನರ್ ಗೂಡ್ಸ್ ಲಾರಿಯನ್ನು ಉಡುಪಿಯ ನಿಟ್ಟೂರು ರಾ.ಹೆ. 66 ಬಳಿಯಲ್ಲಿ ರಾತ್ರಿ ನಿಲ್ಲಿಸಿದ್ದಾಗ ಅದರಲ್ಲಿದ್ದ 4.78 ಲ.ರೂ. ಮೌಲ್ಯದ 37 ಟಯರ್‌ಗಳನ್ನು ಕಳವು ಮಾಡಲಾಗಿದೆ.
ಗೋವಾ ಉಸಾYಂನ ಮಹಾವೀರ ಟ್ರಾನ್ಸ್‌ಪೊàರ್ಟ್ ಲಿ.ನ ಬ್ರಾಂಚ್ ಮ್ಯಾನೇಜರ್ ಸಯ್ಯದ್ ಯಸ್‌ದಾನಿ ಪಾಷ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋವಾದ ಉಸಾYಂನ ಎಂಆರ್‌ಎಫ್ ಫ್ಯಾಕ್ಟರಿಯಿಂದ ಮಂಗಳೂರಿನ ಎಂಆರ್‌ಎಫ್ ಡಿಪೋಗೆ ಟಯರ್‌ಗಳನ್ನು ಕೊಂಡೊಯ್ಯಲು ಕಂಟೈನರ್ ಲಾರಿಯಲ್ಲಿ ಎ. 9ರಂದು 230 ಹೊಸ ಟೈರ್‌ಗಳನ್ನು ಅದರ ಟ್ಯೂಬ್, ಪ್ಲಾಪ್ ಜತೆಗೆ ಲೋಡ್ ಮಾಡಲಾಗಿದ್ದು, ಚಾಲಕ ಬಸವರಾಜ್ ಅವರು ಎ. 10ರ ರಾತ್ರಿ ನಿಟ್ಟೂರಿನ ಹೊಟೇಲಿನಲ್ಲಿ ಊಟ ಮಾಡಿ ಲಾರಿಯನ್ನು ಪಾರ್ಕ್ ಮಾಡಿ ಮಲಗಿದ್ದು, ಎ. 11ರ ಬೆಳಗ್ಗೆ 5 ಗಂಟೆಯ ಸುಮಾರಿಗೆ ನೋಡಿದಾಗ ಕಂಟೈನರ್ ಡೋರ್‌ನ ಬೀಗ ಮುರಿದಿತ್ತು. ಪರಿಶೀಲಿಸಿದಾಗ 230 ಟಯರ್‌ಗಳ ಪೈಕಿ 11,720 ಬೆಲೆಯ 37 ಟಯರ್‌ಗಳು, 833 ರೂ. ಬೈಲೆಯ ಟ್ಯೂಬ್, 388 ರೂ. ಮೌಲ್ಯದ ಪ್ಲಾಪ್‌ಗ್ಳು ಕಳವಾಗಿತ್ತು. ಇವುಗಳ ಒಟ್ಟು ಮೌಲ್ಯ 4,78,856 ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಿಕ್ಷಾಗಳಿಗೆ ಕಾರು ಢಿಕ್ಕಿ: ಗಾಯ
ಪಡುಬಿದ್ರಿ: ಅದಮಾರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯ ಏಕಮುಖ ಸಂಚಾರ ರಸ್ತೆಯಲ್ಲಿ ಸಾಗುತ್ತಿದ್ದ ರಿಕ್ಷಾವೊಂದರ ಹಿಂಬದಿಗೆ ಕಾರೊಂದು ಢಿಕ್ಕಿ ಹೊಡೆದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಈ ಅಪಘಾತದಲ್ಲಿ ರಿಕ್ಷಾ ಚಾಲಕ ಬಡಾ ಗ್ರಾಮದ ನಿವಾಸಿ ಶ್ರೀಧರ ಆಚಾರ್ಯ ಅವರು ಗಂಭೀರವಾಗಿ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಢಿಕ್ಕಿಯಾದ ಕಾರು ಡಿವೈಡರನ್ನು ಏರಿ ರಸ್ತೆಯ ಇನ್ನೊಂದು ಬದಿಗೆ ಸಾಗುತ್ತಲೇ ಎದುರಿನಿಂದ ಬರುತ್ತಿದ್ದ ಮತ್ತೂಂದು ರಿಕ್ಷಾದ ಎದುರುಬದಿಗೆ ಢಿಕ್ಕಿಹೊಡೆಯಿತು. ಅದರ ಚಾಲಕ ಪವಾಡ ಸದೃಶ ಅಪಾಯದಿಂದ ಪಾರಾಗಿದ್ದಾರೆ.
ರಿಕ್ಷಾಗಳೆರಡೂ ಜಖಂಗೊಂಡಿದ್ದು ಕಾರು ರಸ್ತೆಯ ಪಶ್ಚಿಮ ಬದಿಯ ಮಣ್ಣಿನ ರಸ್ತೆಗೆ ಸಾಗಿ ನಿಂತಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
ರಿಕ್ಷಾ ಢಿಕ್ಕಿ: ಬೈಕ್ ಸವಾರರಿಗೆ ಗಾಯ
ಕುಂದಾಪುರ: ಕೊಲ್ಲೂರು ಗ್ರಾಮದ ನಾಗೋಡಿ ಸಮೀಪದ ದಳಿಯಲ್ಲಿ ರಿಕ್ಷಾವೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಪ್ರವೀಣ್ ಹಾಗೂ ಸಹ ಸವಾರರಾದ ಚಂದ್ರಿಕಾ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಸಿಂಗಧೂರು ಕಡೆಯಿಂದ ಕೊಲ್ಲೂರು ಕಡೆಗೆ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ. ರಿಕ್ಷಾ ಚಾಲಕ ಯಾವುದೇ ಸೂಚನೆ ನೀಡದೆ ಒಮ್ಮೆಲೇ ರಸ್ತೆಯ ಬಲಕ್ಕೆ ತಿರುಗಿಸಿದ ಪರಿಣಾಮ ಬೈಕ್‌ಗೆ ರಿಕ್ಷಾ ಢಿಕ್ಕಿ ಹೊಡೆದಿದೆ ಎಂದು ಚಂದ್ರಿಕಾ ಅವರು ಕೊಲ್ಲೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರಪುರ : ಮಹಿಳೆ ಆತ್ಮಹತ್ಯೆ
ಕಾಪು: ಮೂಡಬೆಟ್ಟು ನಿವಾಸಿ ಲವಿನಾ ಮಿನೇಜಸ್ (46) ಅವರು ಎ. 13ರಂದು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಸಹೋದರ ಅಲ್ವಿನ್ ಮಿನೇಜಸ್ ಅವರು ನೀಡಿರುವ ದೂರಿನಂತೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ವ್ಯಕ್ತಿ ನಾಪತ್ತೆ
ಉಡುಪಿ: ಗುಂಡಿಬೈಲುವಿನ ಅಶೋಕ್ ಕುಮಾರ್ ಅವರ ತಂದೆ ನಾರಾಯಣ ಪೂಜಾರಿ (65) ಎ. 10ರಂದು ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘಟನೆ ಕೈಗೆ ಸಿಕ್ಕಿ ಬಿದ್ದ ಜೋಡಿ
ಕುಂದಾಪುರ: ಯುವತಿಯೋರ್ವಳು ಅನ್ಯ ಕೋಮಿನ ಯುವಕನೊಂದಿಗೆ ತಿರುಗಾಡುತ್ತಾ ಕುಂದಾಪುರದ ಹೋಟೇಲ್ ಒಂದರಲ್ಲಿ ಊಟಕ್ಕೆ ಬಂದಾಗ ಹಿಂದೂ ಸಂಘಟನೆಯವರ ಕೈಗೆ ಸಿಕ್ಕಿ ಪೊಲೀಸ್ ವಶಕ್ಕೆ ನೀಡಿದ ಘಟನೆ ಮಧ್ಯಾಹ್ನ ಸಂಭವಿಸಿದೆ.
ಉಪ್ಪುಂದ ಮೂಲದ ಯುವತಿಯೋರ್ವಳು ಅನ್ಯ ಕೋಮಿನ ಯುವಕನೊಂದಿಗೆ ತಿರುಗಾಡುತ್ತಿದ್ದಳು ಎನ್ನಲಾಗಿದೆ. ಮಧ್ಯಾಹ್ನ ವಾಣಿಜ್ಯ ಸಂಕೀರ್ಣದಲ್ಲಿರುವ ಹೋಟೇಲ್‌ನಲ್ಲಿ ಊಟಕ್ಕೆಂದು ಬಂದಾಗ ಹಿಂದೂ ಸಂಘಟನೆಯವರ ಕೈಗೆ ಸಿಕ್ಕಿ ಬಿದ್ದಿದ್ದು, ಕೂಡಲೇ ಅವರನ್ನು ಕುಂದಾಪುರ ಠಾಣಾಧಿಕಾರಿಗಳಿಗೆ ಒಪ್ಪಿಸಲಾಯಿತು ಸಂಜೆ ವೇಳೆ ಬಂದ ಯುವತಿಯ ಕುಟುಂಬಿ ಕರಿಗೆ ಬುದ್ದಿವಾದವನ್ನು ಹೇಳಿ ಆಕೆಯನ್ನು ಅವರ ಸುಪರ್ದಿಗೆ ನೀಡಲಾಯಿತು.
ಮಟ್ಕಾ;ಸೆರೆ
ಕಾಪು: ಕಾಪು ಮಾರ್ಕೆಟ್ ಬಳಿ ಮಟ್ಕಾ ಅಡ್ಡೆಗೆ ದಾಳಿ ಮಾಡಿದ ಪೊಲೀಸರು ಓರ್ವನನ್ನು ಬಂಧಿಸಿ, 1,125 ರೂ. ನಗದು ವಶ ಪಡಿಸಿಕೊಂಡಿದ್ದಾರೆ.ಕಾಪು ಎಸ್‌ಐ ಜಗದೀಶ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಧಾಳಿ ನಡೆಸಿದರು ಈ ದಾಳಿಯ ಸಂದರ್ಭ ಆರೋಪಿ ವಿಜಯ್ (25) ನನ್ನು ಪೊಲೀಸರು ಬಂಧಿಸಿದ್ದಾರೆ.
ಮಟ್ಕಾ: ಬಂಧನ
ಉಡುಪಿ: ನಗರದ ಸಿಟಿ ಬಸ್ಸು ನಿಲ್ದಾಣದ ಸಮೀಪ ಎ. 13ರ ಸಂಜೆ ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುತ್ತಿದ್ದ ಸಂಜೀವ ದೇವಾಡಿಗ ಅವರನ್ನು ಉಡುಪಿ ನಗರ ಠಾಣೆ ಎಸ್‌ಐ ಅನಂತಪದ್ಮನಾಭ ಕೆ.ವಿ. ಅವರು ಬಂಧಿಸಿ ನಗದು ಮತ್ತಿತರ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.