ಹಾಲು ಖರೀದಿ ದರ ಇಳಿಕೆ; ಹೈನುಗಾರರಿಗೆ ಗಾಯದ ಮೇಲೆ ಬರೆ
3 ತಿಂಗಳಿನಿಂದ ಪ್ರೋತ್ಸಾಹ ಧನವೂ ಇಲ್ಲ
Team Udayavani, Jul 22, 2020, 10:58 AM IST
ಸಾಂದರ್ಭಿಕ ಚಿತ್ರ
ಉಡುಪಿ: ಕೋವಿಡ್ ಮಹಾಮಾರಿ ಹಾಲು ಉತ್ಪಾದಕರ ಬದುಕಿನ ಮೇಲೂ ಪರಿಣಾಮ ಬೀರಿದೆ. ಸರಕಾರವು ಹಾಲು ಉತ್ಪಾದಕರಿಗೆ ಕಳೆದ ಮೂರು ತಿಂಗಳಿಂದ ಪ್ರೋತ್ಸಾಹಧನ ನೀಡಿಲ್ಲ. ಜತೆಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹಾಲು ಖರೀದಿ ದರವನ್ನು ಇತ್ತೀಚೆಗೆ 1 ರೂಪಾಯಿಷ್ಟು ಇಳಿಸಿದೆ. ಇದು ಹಾಲು ಉತ್ಪಾದಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಜಿಲ್ಲೆಯಲ್ಲಿ ಹಲವು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಮಂದಿಗೆ ಅದುವೇ ಜೀವನಾಧಾರ. ಜಾನುವಾರುಗಳ ಆಹಾರ ಪದಾರ್ಥಗಳಾದ ಬೂಸಾ, ಹಿಂಡಿ, ಹೊಟ್ಟು, ಮೇವಿನ ದರ ಹೆಚ್ಚಾಗಿರುವ ಕಾರಣ ಹಸುಗಳ ಸಾಕಣೆ ಕಷ್ಟವಾಗಿರುವಾಗ ಮತ್ತು ಕೊರೊನಾ ಸಂಕಷ್ಟ ಕಾಲದಲ್ಲಿ ಹಾಲಿನ ದರವನ್ನು ಕಡಿಮೆ ಮಾಡಿ ರುವುದರಿಂದ ಹೈನುಗಾರರು ಆತಂಕಗೊಂಡಿದ್ದಾರೆ.
ದಿನಕ್ಕೆ 5 ಲಕ್ಷ ಲೀ. ಸಂಗ್ರಹ
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಹಾಲು ಶೇಖರಣೆ ಏರಿಕೆಯಾಗಿ ಈಗ ದಿನಕ್ಕೆ 5 ಲಕ್ಷ ಲೀ.ಗೂ ಅಧಿಕ ಸಂಗ್ರಹವಾಗುತ್ತಿದೆ. ಈಗಿನ ಕನಿಷ್ಠ ಹಾಲಿನ ದರ ಪ್ರತಿ ಲೀ.ಗೆ 28.67 ರೂ. ಇದೆ.
ಬೇಡಿಕೆ ಕಡಿಮೆ; ರೈತರಿಗೆ ಹೊಡೆತ
ಕಳೆದ ಮೂರು ತಿಂಗಳಿನಿಂದ ಸರಕಾರ ಪ್ರೋತ್ಸಾಹ ಧನ ನೀಡಿಲ್ಲ. ಕೋವಿಡ್ ಸೋಂಕು, ಲಾಕ್‌ಡೌನ್ ಕಾರಣದಿಂದ ರಾಜ್ಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಒಕ್ಕೂಟಗಳಲ್ಲಿ ಸಂಗ್ರಹವಾದ ಹಾಲು ಉಳಿಕೆಯಾಗುತ್ತಿದೆ. ಅದರಿಂದ
ಹಾಲಿನ ಪುಡಿ ತಯಾರಿಸಲಾಗುತ್ತಿದ್ದರೂ ಹಾಲಿನ ಪುಡಿಯ ಬೇಡಿಕೆಯೂ ಕುಸಿದಿದೆ. ನಷ್ಟ ಸರಿದೂಗಿಸಲು ಖರೀದಿಸುವ ಹಾಲಿನ ದರವನ್ನು ಕಡಿಮೆ ಮಾಡಲು ಒಕ್ಕೂಟ ನಿರ್ಧರಿಸಿದ್ದು, ಅದರ ನೇರ ಹೊಡೆತ ಹೈನುಗಾರರನ್ನು ತಟ್ಟಿದೆ.
ಜಗತ್ತಿಗೆ ವ್ಯಾಪಿಸಿದ ಕೋವಿಡ್-19 ಹಾಲು ಉತ್ಪಾದನಾ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ಮಾರಾಟ, ನಿರ್ವಹಣೆ ಇತ್ಯಾದಿ ವೆಚ್ಚಗಳನ್ನು ಸರಿದೂಗಿಸಲು ಖರೀದಿ ದರ ಇಳಿಕೆ ಅನಿವಾರ್ಯವಾಗಿದೆ.
– ರವಿರಾಜ ಹೆಗ್ಡೆ, ಅಧ್ಯಕ್ಷರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ
ಹಸುಗಳ ಸಾಕಣೆಯೇ ಕಷ್ಟ ಎಂಬ ಸ್ಥಿತಿಯಲ್ಲಿರುವಾಗ ಹಾಲಿನ ಖರೀದಿ ದರ ಕಡಿತ ಮಾಡಿದರೆ ಹೈನುಗಾರಿಕೆಯನ್ನು ಮುಂದುವರಿಸುವುದಾದರೂ ಹೇಗೆ? ಇದರಿಂದಾಗಿ ಹೈನುಗಾರರಿಗೆ ತುಂಬ ಕಷ್ಟವಾಗಿದೆ.
– ಬಸವರಾಜು, ಹೈನೋದ್ಯಮಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.