Deepavali ಹಿರಿಯರ ನೆನಪಿನ ಬೆಳಕು; ನರಕ ಚತುರ್ದಶಿಗೂ ಮೊದಲೇ ನಡೆಯುತ್ತದೆ ಸೈತಿನಕ್ಲೆನ ಪರ್ಬ
Team Udayavani, Nov 1, 2024, 3:02 PM IST
ಉಡುಪಿ: ದೀಪಾವಳಿ ಎಂದರೆ ಹಣತೆ ಹಚ್ಚುವುದು, ಪಟಾಕಿ ಸಿಡಿಸುವುದು, ಹೊಸ ಬಟ್ಟೆ, ರುಚಿಕರ ಖಾದ್ಯ ತಯಾರಿ, ಖರೀದಿ ಹಬ್ಬ ಎಂಬ ಕಲ್ಪನೆಗಳು ವಿಜೃಂಭಿಸುತ್ತಿರುವ ನಡುವೆಯೇ ತುಳುನಾಡಿನಲ್ಲಿ ಹಲವು ಜನಪದೀಯ ಆಚರಣೆಗಳು ಈಗಲೂ ಚಲಾವಣೆಯಲ್ಲಿವೆ. ಅದರಲ್ಲಿ ದೀಪಾವಳಿಯನ್ನು ಹಿರಿಯರ ನೆನಪಿನಲ್ಲಿ ಆಚರಿಸುವ ಕ್ರಮವೂ ಒಂದು.
ನಿಜವೆಂದರೆ ಉಡುಪಿ ಭಾಗದಲ್ಲಿ ದೀಪಾವಳಿಯ ಆರಂಭಕ್ಕೂ ಮೊದಲೇ ಹಿರಿಯರನ್ನು ನೆನಪಿಸಿ ಕೊಳ್ಳುವ ಪರಿಪಾಠವಿದೆ. ನರಕ ಚತುರ್ದಶಿಯ ಮುನ್ನಾದಿನ ರಾತ್ರಿಯೇ ಮೃತಪಟ್ಟವರ ಹಬ್ಬ (ಸೈತಿನಕ್ಲೆನ ಪರ್ಬ) ಆಚರಿಸಲಾಗುತ್ತದೆ. ಹಿರಿಯರ ನೆನಪಿನಲ್ಲಿ ಎಡೆ ಇಡುವುದು ನರಕ ಚತುರ್ದಶಿ ಮತ್ತು ಅಮಾವಾಸ್ಯೆಯ ದಿನವೂ ನಡೆಯುತ್ತದೆ.
ಹೇಗೆ ನಡೆಯುತ್ತದೆ ಸೈತಿನಕ್ಲೆನ ಪರ್ಬ?
ನರಕ ಚತುರ್ದಶಿಯ ಮುನ್ನಾ ದಿನ ರಾತ್ರಿ, ಮನೆಯಲ್ಲಿ ಹಿಂದೆ ಗತಿಸಿಹೋದವರ ನೆನಪಿನಲ್ಲಿ ಬಡಿಸುವ ಕಾರ್ಯಕ್ರಮವಿದೆ. ಅಂದರೆ ನಾವು ದೀಪಾವಳಿಯನ್ನು ಸಂಭ್ರಮಿಸುವ ಮೊದಲೇ ಹಿರಿಯರನ್ನು ನೆನಪಿಸಿಕೊಳ್ಳುವ ಕ್ರಮವಿದು. ಎಲೆ ಹಾಕಿ ಬಡಿಸಲಾಗುತ್ತದೆ. ಇದಕ್ಕೆ ಅರಶಿನ ಎಲೆ ಮತ್ತು ಹೆಬ್ಬಲಸು ಎಲೆಯ ಕಡುಬು ಅತ್ಯಂತ ಮುಖ್ಯ. ಅದರ ಜತೆಗೆ ಮೀನು, ಬಾಳೆ ದಿಂಡಿನ ಪದಾರ್ಥ ಇರುತ್ತದೆ.
ಮಣ್ಣಿನ ಪಾತ್ರೆಯಲ್ಲಿ ನೀರು ಕಾಯಿಸಿ ಹಿರಿಯರಿಗೆ ಆಹ್ವಾನ ನೀಡಲಾಗುತ್ತದೆ. ಬಳಿಕ ಮನೆಯೊಳಗೆ ಎಲೆಗಳನ್ನು ದಕ್ಷಿಣಕ್ಕೆ ಮುಖ ಮಾಡಿ ಇಡುತ್ತಾರೆ. ಅದಕ್ಕೆ ಆಹಾರ ಖಾದ್ಯಗಳನ್ನು ಬಡಿಸಲಾಗುತ್ತದೆ.
ಇನ್ನು ಎಲೆಯ ಎದುರಿನ ಮರದ ಮಣೆಯಲ್ಲಿ ಮೃತರನ್ನು ಕೂರಿಸುವುದು ಎಂಬ ನಂಬಿಕೆ. ಮೃತರು ಪುರುಷರಾಗಿದ್ದರೆ ಬಿಳಿ ಧೋತಿ ಮತ್ತು ಶಾಲು ಇಡಲಾಗುತ್ತದೆ. ಹೆಂಗಸರಾಗಿದ್ದರೆ ಸೀರೆ, ರವಿಕೆ ಕಣ, ಬಂಗಾರ ಇರಿಸಲಾಗುತ್ತದೆ. ಕೆಲವು ಮನೆಗಳಲ್ಲಿ ಈ ಬಟ್ಟೆಗಳನ್ನು ಪ್ರತಿ ವರ್ಷಕ್ಕೂ ಕಾಯ್ದಿಡಲಾಗುತ್ತದೆ.
ಕೆಲವೆಡೆ ಮೂರು ದಿನ ಸ್ಮರಣೆ
ದೀಪಾವಳಿ ಹಬ್ಬದ ಆರಂಭದ ಮುನ್ನಾ ದಿನ, ನರಕ ಚತುರ್ದಶಿ ಮತ್ತು ಅಮಾವಾಸ್ಯೆ ಈ ಮೂರೂ ದಿನಗಳಲ್ಲೂ ಹಿರಿಯರಿಗೆ ಬಡಿಸುವ ಪರಿಪಾಠ ತುಳುನಾಡಿನಲ್ಲಿ ಇದೆ. ಅದರಲ್ಲೂ ಮಾಂಸದ ಖಾದ್ಯ ಮಾಡಿದ್ದರೆ ಬಡಿಸುವುದು ಸಂಪ್ರದಾಯ. ತುಳು ನಾಡು ಅಳಿಯಕಟ್ಟಿನ ನಡಾವಳಿ ಹೊಂದಿದ ಭಾಗವಾಗಿದ್ದರಿಂದ ಮನೆಯ ಮಹಿಳೆಯ ಕುಟುಂಬದವರಿಗೆ ಒಳಗೂ, ಗಂಡ ತೀರಿಕೊಂಡಿದ್ದರೆ ಅವರ ಪ್ರೇತಕ್ಕೆ ಹೊರಗೆ ಬಡಿಸುವ ಕ್ರಮ ಕೆಲವು ಕಡೆ ಇದೆ.
ಏನೆಂದು ಪ್ರಾರ್ಥಿಸಲಾಗುತ್ತದೆ?
ಹಿರಿಯರೇ ಬಿಸಿ ನೀರಲ್ಲಿ ಮಿಂದು ಮಡಿಯಾಗಿಕೊಳ್ಳಿ. ಮಡಿ ಬಟ್ಟೆ ತೊಟ್ಟು ನೀಡಿದ ಆತಿಥ್ಯವನ್ನು ಸ್ವೀಕರಿಸಿ, ಮನೆಗೆ ಒಳಿತಾಗಲಿ ಎಂದು ಆಶೀರ್ವಾದ ಮಾಡಿ ಎಂದು ಮನೆಯ ಹಿರಿಯರು ಪ್ರಾರ್ಥಿಸುತ್ತಾರೆ. ಅನಂತರ ಕೆಲವು ಹೊತ್ತು ಬಾಗಿಲು ಓರೆ ಮಾಡಿ ಹೊರಗೆ ಹೋಗಿ ವಾಪಸ್ ಬಂದು ಎಡೆ ಜಾರಿಸಲಾಗುತ್ತದೆ.
ಮುಂದಿನ ಜನಾಂಗಕ್ಕೆ ದಾಟಿಸುವ ಕಾರ್ಯವಾಗಲಿ
ಕೆಲವು ಸಮುದಾಯದಲ್ಲಿ ಇಂತಹ ಆಚರಣೆ ಪದ್ಧತಿ ತಲಾಂತರದಿಂದ ನಡೆದುಕೊಂಡು ಬಂದು ಈಗಲೂ ಮುಂದುವರಿದಿದೆ. ಇದು ತುಳುನಾಡಿನಲ್ಲಿ ಮಾತ್ರ ಕಾಣಲು ಸಾಧ್ಯ. ಹಿರಿಯರನ್ನು ಸ್ಮರಿಸುವುದು ದೀಪಾವಳಿ ಸಂದರ್ಭ ನಡೆದುಕೊಂಡು ಬರುವ ಪದ್ಧತಿ. ಇಂದಿನ ಯುವ ಜನಾಂಗಕ್ಕೆ ಇಂತಹ ಆಚರಣೆಗಳ ಬಗ್ಗೆ ತಿಳಿವಳಿಕೆ ಕಡಿಮೆ. ತಿಳಿಯುವಂತಾಗಬೇಕು ಮತ್ತು ಮುಂದಿನ ಜನಾಂಗಕ್ಕೆ ನಮ್ಮ ಪೂರ್ವಕಾಲದ ಆಚರಣೆ ದಾಟಿಸುವ ಕಾರ್ಯ ಆಗಬೇಕಿದೆ.
-ಬಾಬು ಅಮೀನ್ ಬನ್ನಂಜೆ, ಹಿರಿಯ ಜನಪದ ವಿದ್ವಾಂಸ
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Darshan; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಟ: ಬಿಗಿ ಪೊಲೀಸ್ ಬಂದೋಬಸ್ತ್
Tulu Cinema: ವಿನೀತ್ ಕುಮಾರ್ ನಟನೆಯ “90 ಎಮ್ ಎಲ್” ಸಿನಿಮಾ ಮುಹೂರ್ತ
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
Tulu Cinema: “ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ
Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.