ದಿನಗೂಲಿ ನೌಕರರ ಖಾಯಂಗೊಳಿಸದ ಜಿಲ್ಲಾಡಳಿತ
Team Udayavani, Feb 1, 2018, 9:47 AM IST
ಉಡುಪಿ: ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂದಾಯ ವಿಭಾಗದಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರನ್ನು ಖಾಯಂಗೊಳಿಸದ ಜಿಲ್ಲಾಡಳಿತದ ವಿರುದ್ಧ ಕಾನೂನು ಹೋರಾಟ ಆರಂಭಿಸಲಾಗುವುದು ಎಂದು ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶ್ಯಾನುಭಾಗ್ ತಿಳಿಸಿದ್ದಾರೆ.
ಉಡುಪಿಯ ಒಬ್ಬರು ಮತ್ತು ದ.ಕ. ಜಿಲ್ಲೆಯ 8 ಮಂದಿ 1986ರಲ್ಲಿ ದ.ಕ. ಜಿಲ್ಲಾಡಳಿತದ ಸೇವೆಗೆ ದಿನಗೂಲಿ ನೌಕರರರಾಗಿ ನೇಮಕಗೊಂಡಿದ್ದರು. ಇಂತಹ ನೌಕರರನ್ನು ಖಾಯಂಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿ 12 ವರ್ಷಗಳೇ ಆಗಿದ್ದರೂ ಕೂಡ ಜಿಲ್ಲಾಡಳಿತ ಆದೇಶ ಪಾಲನೆ ಮಾಡುತ್ತಿಲ್ಲ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೌಕರರು ಸರಕಾರದಿಂದ ಮಂಜೂರಾದ ಹುದ್ದೆಗಳಲ್ಲೇ ನೇಮಕವಾಗಿರಬೇಕು, ಅವಶ್ಯವಿರುವ ವಿದ್ಯಾರ್ಹತೆ ಹೊಂದಿರಬೇಕು. ತಮ್ಮ 10 ವರ್ಷಗಳ ಸೇವಾವಧಿಯಲ್ಲಿ ಯಾವುದೇ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರ
ಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿತ್ತು. ರಾಜ್ಯದ ವಿವಿಧ ಇಲಾಖೆಗಳಲ್ಲಿ ಈ ಮೇಲಿನ ನಾಲ್ಕು ಷರತ್ತುಗಳನ್ನು ಪೂರೈಸಿರುವ 248 ತಾತ್ಕಾಲಿಕ ನೌಕರರನ್ನು ಕಳೆದ 12 ವರ್ಷಗಳಲ್ಲಿ ಖಾಯಂಗೊಳಿಸಲಾಗಿದೆ. ಆದರೆ ಈ 9 ಮಂದಿ ನೌಕರರ ಮನವಿಯನ್ನು ನಿರ್ಲಕ್ಷಿಸಲಾಗಿದೆ ಎಂದರು.
ಜಿಲ್ಲಾಡಳಿತಕ್ಕೆ ಮನವಿ
ಕಳೆದ 12 ವರ್ಷಗಳಲ್ಲಿ ಜಿಲ್ಲಾಡಳಿತ, ಮೇಲಧಿಕಾರಿಗಳಿಗೆ ಈ ನೌಕರರು ಅರ್ಜಿ, ಮನವಿಗಳನ್ನು ನೀಡಿದರೂ ಅದರಿಂದ ಪ್ರಯೋಜನ ವಾಗಲಿಲ್ಲ. 2014ರಲ್ಲಿ ಈ ನೌಕರರು ಪ್ರತಿಷ್ಠಾನ ವನ್ನು ಸಂಪರ್ಕಿಸಿದರು. ಪ್ರತಿಷ್ಠಾನವು ಅಂದಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನ್ಯಾಯಾಲಯದ ಆದೇಶ, 248 ನೌಕರರ ಖಾಯಂ ಗೊಳಿಸಿದ ದಾಖಲೆ ನೀಡಿತು. ಅನಂತರ ಬಂದ ಜಿಲ್ಲಾಧಿಕಾರಿಯವರಿಗೂ ಮಾಹಿತಿ ನೀಡಲಾಯಿತು. ಆದರೂ ಪ್ರಯೋಜನವಾಗಿಲ್ಲ. 9 ಮಂದಿ ನೌಕರರ ಪೈಕಿ ಓರ್ವರು ಈಗಾಗಲೇ ನಿವೃತ್ತಿಯಾಗಿದ್ದಾರೆ. ಇನ್ನು ಕೆಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇದೀಗ ಪ್ರತಿಷ್ಠಾನವು ಇವರ ಪರವಾಗಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ದಾವೆ ಹೂಡಲು ಸಿದ್ಧತೆ ನಡೆಸಿದೆ. ನ್ಯಾಯವಂಚಿತರಿಗೆ ಪೂರ್ಣಪ್ರಮಾಣದ ವೇತನ ಹಾಗೂ ನಿವೃತ್ತಿ ಸೌಲಭ್ಯಗಳು ಸಿಗುವ ವರೆಗೂ ಹೋರಾಟ ನಡೆಯಲಿದೆ. ಇಂತಹ ಪ್ರಕರಣಗಳಲ್ಲಿ ಇನ್ನೂ ನ್ಯಾಯ ಸಿಗದೆ ಇರುವ ಬೇರೆ ಜಿಲ್ಲೆಯವರು ಕೂಡ ಪ್ರತಿಷ್ಠಾನವನ್ನು ಕೂಡಲೇ ಸಂಪರ್ಕಿಸಬಹುದಾಗಿದೆ ಎಂದು ಡಾ| ಶ್ಯಾನುಭಾಗ್ ತಿಳಿಸಿದರು. ಖಾಯಂ ಆಗದೆ ತೊಂದರೆಗೀಡಾಗಿರುವ ದಿನಗೂಲಿ ನೌಕರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಅಕ್ಕು -ಲೀಲಾ ಪ್ರಕರಣ ಆಧಾರ
ಉಡುಪಿಯ ಸರಕಾರಿ ಹೆಣ್ಣುಮಕ್ಕಳ ತರಬೇತಿ ಶಾಲೆಯಲ್ಲಿ 42 ವರ್ಷಗಳ ಕಾಲ ಕೇವಲ 15 ರೂ. ಮೂಲವೇತನದಲ್ಲಿ ದುಡಿದ ಅಕ್ಕು ಮತ್ತು ಲೀಲಾ ಅವರ ಪ್ರಕರಣದಲ್ಲಿ ಪ್ರತಿಷ್ಠಾನ 16 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿತ್ತು. ಈ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಇಬ್ಬರಿಗೂ ತಲಾ 27 ಲ.ರೂ. ಬಾಕಿ ವೇತನ ಹಾಗೂ ನಿವೃತ್ತಿ ಸೌಲಭ್ಯ ನೀಡುವಂತೆ ಆದೇಶ ನೀಡಿತ್ತು. ಸುಮಾರು 3 ದಶಕಗಳ ಕಾಲ ದಿನಗೂಲಿ ನೌಕರರಾಗಿ ದುಡಿದಿರುವ 9 ಮಂದಿಯ ಪ್ರಕರಣ ಕೂಡ ಅಕ್ಕು ಮತ್ತು ಲೀಲಾ ಅವರ ಪ್ರಕರಣದಂತೆಯೇ ಇದೆ. ಇದೇ ಆಧಾರದಲ್ಲಿ ಅವರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ಡಾ| ಶ್ಯಾನುಭಾಗ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.