ಚುನಾವಣೆ ಅಖಾಡಕ್ಕೆ ಜಿಲ್ಲಾದ್ಯಂತ ಸಿದ್ಧತೆ
154 ಗ್ರಾಮ ಪಂಚಾಯತ್‌ಗಳಲ್ಲಿ ಮತದಾನ
Team Udayavani, Oct 6, 2020, 4:31 AM IST
ಸಾಂದರ್ಭಿಕ ಚಿತ್ರ
ಉಡುಪಿ: ರಾಜ್ಯ ಸರಕಾರ ಗ್ರಾ.ಪಂ.ಚುನಾವಣೆ ನಡೆಸುವಂತೆ ಮುನ್ಸೂಚನೆ ನೀಡಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಸುರಕ್ಷೆ, ಮುಂಜಾಗ್ರತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಬಹು ಹಂತಗಳಲ್ಲಿ ರಾಜ್ಯದಲ್ಲಿ ಅವಧಿ ಮುಗಿದ ಸುಮಾರು 5,800 ಗ್ರಾಮ ಪಂಚಾಯತ್‌ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಹಲವು ಪ್ರಕ್ರಿಯೆಗಳ ಮೂಲಕ ಸಿದ್ಧತೆ ಚುರುಕುಗೊಳಿಸಿದೆ.
890 ಮತಗಟ್ಟೆ, 7.93 ಲಕ್ಷ ಮತದಾರರು
ಪಂಚಾಯತ್ ಚುನಾವಣೆಗೆ ಜಿಲ್ಲೆಯಲ್ಲಿ 890 ಮತಗಟ್ಟೆಗಳನ್ನು ಗುರುತಿಸಲಾಗಿದೆ. 3,81,867 ಮಂದಿ ಪುರುಷರು, 4,11,821 ಮಂದಿ ಮಹಿಳೆ ಯರು, ಇತರ 9 ಮಂದಿ ಸಹಿತ ಒಟ್ಟು 7,93,697 ಮಂದಿ ಮತಚಲಾಯಿಸಲು ಸಜ್ಜಾಗಿದ್ದಾರೆ.
ಹಂತಗಳಲ್ಲಿ ಚುನಾವಣೆ
ಸಾಮಾನ್ಯ ಪರಿಸ್ಥಿತಿಯಲ್ಲಿ ಈ 5,800 ಗ್ರಾ.ಪಂ. ಗಳಿಗೆ 2 ಅಥವಾ 3 ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ. ಕೋವಿಡ್ 19 ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕುವಾರು ವಿವಿಧ ಹಂತಗಳಲ್ಲಿ ಚುನಾವಣೆ ನಡೆಸುವ ಇರಾದೆ ಹೊಂದಿದೆ. ಅವಧಿ ಮುಗಿದ ಎಲ್ಲ ಗ್ರಾ.ಪಂ.ಗಳಿಗೆ ಜೂ. 26ರಂದು ಆಡಳಿತಾಧಿಕಾರಿಗಳನ್ನು ಸರಕಾರ ನೇಮಕ ಮಾಡಿತ್ತು.
ಇಎಂಎಸ್ ತಂತ್ರಾಂಶ
ಕೋವಿಡ್-19 ಹಿನ್ನೆಲೆ ಇದೇ ಮೊದಲ ಬಾರಿಗೆ ಅಭ್ಯರ್ಥಿ ಚುನಾವಣೆ ಪ್ರಕ್ರಿಯೆ ಸಂಪೂರ್ಣ ತಂತ್ರಾಂಶದಿಂದಲೇ ಕೂಡಿರಲಿದೆ. ಇದಕ್ಕಾಗಿ ಇಎಂಎಸ್ (ಎಲೆಕ್ಷನ್ ಮಾನಿಟರಿಂಗ್ ಸಿಸ್ಟಮ್) ಸಾಫ್ಟ್‌ವೇರ್ ಅಳವಡಿಸಲಾಗಿದ್ದು ಅಭ್ಯರ್ಥಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವಿಕೆ (ಫಾರ್ಮ್ ನಂ. 9, 10) ಅಭ್ಯರ್ಥಿ ಚಿಹ್ನೆ ದಾಖಲೀಕರಣ ಎಲ್ಲವೂ ಆನ್‌ಲೈನ್ ಪ್ರಕ್ರಿಯೆಯಾಗಿದೆ. ಚುನಾವಣಾಧಿಕಾರಿ ಲಾಗಿನ್ ಹಕ್ಕು ಹೊಂದಿರುತ್ತಾರೆ. ಈ ಹಿಂದೆ ಅಭ್ಯರ್ಥಿ ಚಿಹ್ನೆ ಅಧಿಕೃತಗೊಳ್ಳಲು 3 ದಿನದ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಸಕ್ತ ತತ್‌ಕ್ಷಣದಲ್ಲೇ ಲಭ್ಯವಾಗುವಂತೆ ತಂತ್ರಾಂಶ ಸಿದ್ಧಪಡಿಸಲಾಗಿದೆ. ಚುನಾವಣೆಯ ಪ್ರತಿಯೊಂದು ಪ್ರಕ್ರಿಯೆಗಳು ಬೆಂಗಳೂರಿನಲ್ಲಿ ಮಾನಿಟರಿಂಗ್ ವ್ಯವಸ್ಥೆ ಗೊಳಪಡಿಸಲಾಗುತ್ತದೆ. ಹಿಂದೆ ಫಾರ್ಮ್ ನಂ. 10 ಕೈಯಲ್ಲೆ ಬರೆಯುವ ಪದ್ಧತಿ ಇದ್ದು, ಇದೂ ಈ ಬಾರಿ ತಂತ್ರಾಂಶದಲ್ಲೇ ಬಳಕೆಯಾಗಲಿದೆ.
ಮತಗಟ್ಟೆ ವಿಭಜಿಸಲು ಸೂಚನೆ
ರಾಜ್ಯದಲ್ಲಿ ಈಗ 5,800 ಗ್ರಾ.ಪಂ.ಗಳ 93 ಸಾವಿರಕ್ಕೂ ಹೆಚ್ಚು ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ 10 ಸಾವಿರ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಬೇಕಿದೆ. ಇದಕ್ಕಾಗಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ 1,000 ಮತದಾರರು ಇದ್ದಲ್ಲಿ ಅದನ್ನು ಎರಡು ಬೂತ್‌ಗಳಾಗಿ ತಲಾ 500 ರಂತೆ ವಿಭಜಿಸಲು ಸೂಚಿಸಲಾಗಿದೆ. ಅದರಂತೆ ಉಡುಪಿ ಜಿಲ್ಲೆಯಲ್ಲಿ 890 ಮತಗಟ್ಟೆಗಳನ್ನು ಅಂದಾಜಿಸಲಾಗಿದೆ.
ಪೂರ್ವ ತಯಾರಿ ಆರಂಭ
ಜಿಲ್ಲೆಯ 7 ತಾಲೂಕುಗಳ 154 ಗ್ರಾ.ಪಂ.ಗಳಲ್ಲಿ ಚುನಾವಣೆ ಸಿದ್ಧತೆ ಪ್ರಕ್ರಿಯೆಗಳು ನಡೆಯುತ್ತಿವೆ. ಸರಕಾರ ನೀಡಿದ ಸೂಚನೆಯಂತೆ ಚುನಾವಣಾ ಶಾಖೆ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಚುನಾವಣೆಗೆ ದಿನ ನಿಗದಿಯೊಂದೇ ಬಾಕಿ ಇರುವಂತೆ ಪೂರ್ವತಯಾರಿ ಪ್ರಕ್ರಿಯೆ ನಡೆಯುತ್ತಿದೆ. ಮತ ಪೆಟ್ಟಿಗೆ ಜೋಡಣೆ ಮಾಡಿ, ಬಣ್ಣ ಬಳಿಯುವುದು ಸೇರಿದಂತೆ ಅಗತ್ಯ ಪರಿಕರಗಳ ಜೋಡಣೆಯಲ್ಲಿ ತೊಡಗಿದೆ. ಈಗಾಗಲೇ ಚುನಾವಣಾ ಪಟ್ಟಿಗೆ ಹೊಸ ಮತದಾರರ ಸೇರ್ಪಡೆ, ಹೆಸರು ಬದಲಾವಣೆ, ದಾಖಲಾತಿ ತಿದ್ದುಪಡಿಗೆ ಕಡತಗಳನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತಿದೆ.
ಸಿದ್ಧತೆ ಪ್ರಕ್ರಿಯೆ ಆರಂಭ
ಗ್ರಾ.ಪಂ. ಚುನಾವಣೆ ನಿಮಿತ್ತ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ಪ್ರಕ್ರಿಯೆ ಮಾಡಲಾಗುತ್ತಿದೆ. ಮತದಾರರು ಹಾಗೂ ಮತಗಟ್ಟೆಯ ವಿವರಗಳನ್ನು ಸಂಗ್ರಹಿಸಲಾಗಿದೆ. ಚುನಾವಣೆ ದಿನಾಂಕ ಯಾವುದೇ ಸಂದರ್ಭದಲ್ಲಿ ಘೋಷಣೆಯಾಗಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಸಕಲ ತಯಾರಿ ಮಾಡಲಾಗಿದೆ.
-ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.